Advertisement

ಪಂಚರತ್ನ ಯೋಜನೆಯಿಂದ ಅಭಿವೃದ್ಧಿ ಸಾಧ್ಯ

01:05 PM Mar 21, 2023 | Team Udayavani |

ಮಂಡ್ಯ: ಪಂಚರತ್ನ ಯೋಜನೆ ರಾಜ್ಯಕ್ಕೆ ಮಾದರಿ ಯಾಗಿದ್ದು, ಈ ಯೋಜನೆ ಜಾರಿಗೆ ಜೆಡಿಎಸ್‌ ಬೆಂಬಲಿಸಿ ಎಂದು ಶಾಸಕ ಎಂ.ಶ್ರೀನಿವಾಸ್‌ ಮನವಿ ಮಾಡಿದರು.

Advertisement

ನಗರದ ಕಾಳಿಕಾಂಬ ದೇವಾಲಯದ ಆವರಣದಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ನಗರದ ವಾರ್ಡ್ ಗಳಲ್ಲಿ ಪ್ರಚಾರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಉಚಿತ ಆರೋಗ್ಯ, ಉಚಿತ ಶಿಕ್ಷಣ, ಯುವಕರಿಗೆ ಉದ್ಯೋಗ, ಮಹಿಳಾ ಸಬಲೀಕರಣ, ಕೃಷಿಗೆ ಉತ್ತೇಜನ ನೀಡುವ ಅಂಶಗಳು ಈ ಪಂಚರತ್ನ ಯೋಜನೆಯಲ್ಲಿದೆ. ಪಂಚರತ್ನ ಯೋಜನೆ ಜಾರಿ ಯಾಗಬೇಕಾದರೆ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮರಸ್ವಾಮಿ ಅವರ ಕೈ ಬಲಪಡಿಸಬೇಕು ಎಂದರು. ‌

ರಾಜ್ಯದ ಸರ್ವಾಂಗೀಣ ಅಭಿವೃದ್ಧಿ: ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ಜೆಡಿಎಸ್‌ ಬಂಬಲಿಸಿ, ಅಭಿವೃದ್ಧಿಯ ದೂರದೃಷ್ಟಿ ಇಟ್ಟುಕೊಂಡು ಕುಮಾರಸ್ವಾಮಿ ಅವರು ಪಂಚರತ್ನ ಯೋಜನೆ ರೂಪಿಸಿದ್ದಾರೆ. ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಕುಮಾರಸ್ವಾಮಿ ಮುಖ್ಯಮಂತ್ರಿ ಆಗುವುದು ಖಚಿತ ಎಂದು ಭರವಸೆ ನೀಡಿದರು.

ಜೆಡಿಎಸ್‌ ಬೆಂಬಲಿಸಿ: ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದ ವೇಳೆ ರೈತರ ಸಾಲಮನ್ನಾ ಮಾಡಿ, ರೈತರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಿದ್ದಾರೆ. ಜೆಡಿಎಸ್‌ಗೆ ಬಹುಮತ ನೀಡಿದರೆ ಪಂಚರತ್ನ ಯೋಜನೆ ಜಾರಿ ಮಾಡುವ ಮೂಲಕ ಜನರಿಗೆ ಅನುಕೂಲ ಕಲ್ಪಿಸಿಕೊಡಲಿದ್ದಾರೆ ಎಂದರು.

ಎಚ್‌ಡಿಕೆ ಮತ್ತೂಮ್ಮೆ ಸಿಎಂ ಆಗಲಿ: ಪ್ರಾದೇಶಿಕ ಪಕ್ಷ ಅಧಿಕಾರಕ್ಕೆ ಬಂದರೆ ಮಾತ್ರ ರಾಜ್ಯದ ಅಭಿವೃದ್ಧಿ ಸಾಧ್ಯ. ಹೀಗಾಗಿ, ಪ್ರಾದೇಶಿಕ ಪಕ್ಷ ಜೆಡಿಎಸ್‌ಗೆ ಬಹುಮತ ನೀಡುವ ಮೂಲಕ ಮಾಜಿ ಮುಖ್ಯಮಂತ್ರಿ ಎಚ್‌ .ಡಿ.ಕುಮಾರಸ್ವಾಮಿ ಅವರನ್ನು ಮತ್ತೂಮ್ಮೆ ಮುಖ್ಯಮಂತ್ರಿ ಆಗಿ ನೋಡಬೇಕೆಂಬುದೇ ನಮ್ಮೆಲ್ಲರ ಆಶಯ ಎಂದರು.

Advertisement

ಕೆಲವರಿಂದ ಗೊಂದಲ: ಮಂಡ್ಯ ಟಿಕೆಟ್‌ ಸಂಬಂಧ ಜೆಡಿಎಸ್‌ ವರಿಷ್ಠರು ಈಗಾಗಲೇ ಮಂಡ್ಯಕ್ಕೆ ಶ್ರೀನಿವಾಸ್‌ ಅಧಿಕೃತ ಅಭ್ಯರ್ಥಿ ಎಂದು ಘೋಷಿಸಿದ್ದಾರೆ. ಆದರೆ, ಕೆಲವರು ಕ್ಷೇತ್ರದಲ್ಲಿ ಗೊಂದಲ ಸೃಷ್ಟಿಸುವ ಕೆಲಸ ಮಾಡುತ್ತಿದ್ದಾರೆ. ಈ ಸಂಬಂಧ ವರಿಷ್ಠರ ಗಮನಕ್ಕೂ ತಂದಿದ್ದೇನೆ. ಟಿಕೆಟ್‌ ಹಂಚಿಕೆಯಲ್ಲಿ ಯಾವುದೇ ಬದಲಾವಣೆಗಳಿಲ್ಲ ಎಂದು ತಿಳಿಸಿದ್ದಾರೆ ಎಂದು ಭರವಸೆ ನೀಡಿದ್ದಾರೆ ಎಂದರು.

ಪಂಚರತ್ನ ಯೋಜನೆ ಸಂಬಂಧ ಈಗಾಗಲೇ ಮಂಡ್ಯ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಸರಾಳು ಕೆರಗೋಡು ಭಾಗದಲ್ಲಿ ಮನೆಮನೆಗೆ ಕರಪತ್ರ ಹಂಚುವ ಮೂಲಕ ಪಂಚರತ್ನ ಯೋಜನೆಗಳ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡುತ್ತಿದ್ದೇವೆ. ಗ್ರಾಮೀಣ ಭಾಗ ದಲ್ಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದರು.

ಎಚ್‌ಡಿಡಿ ರೋಡ್‌ ಶೋ ರದ್ದು: ಪಂಚರತ್ನ ಯೋಜನೆ ಸಮಾರೋಪ ಸಮಾರಂಭದ ಅಂಗವಾಗಿ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ಬೆಂಗಳೂರಿ ನಿಂದ ಮೈಸೂರಿಗೆ ರೋಡ್‌ ಶೋ ಆಯೋಜನೆ ಮಾಡಲಾಗಿತ್ತು. ದೇವೇಗೌಡರಿಗೆ ಆರೋಗ್ಯ ಸರಿ ಇಲ್ಲದ ಕಾರಣ ರೋಡ್‌ ಶೋ ಅನ್ನು ಸ್ಥಗಿತಗೊಳಿಸಲಾಗಿದೆ. ಮೈಸೂರಿನಲ್ಲಿ ನಡೆಯುವ ಸಮಾರೋಪ ಸಮಾರಂಭದಲ್ಲಿ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಭಾಗವಹಿಸಲಿದ್ದಾರೆ. ಹಾಗಾಗಿ ಮಂಡ್ಯದಿಂದ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ತಿಳಿಸಿದರು.

ಊಟದ ವ್ಯವಸ್ಥೆ: ಮೈಸೂರಿನಲ್ಲಿ ನಡೆಯುವ ಸಮಾರೋಪ ಸಮಾರಂಭಕ್ಕೆ ಸುಮಾರು 10 ಲಕ್ಷ ಮಂದಿ ಭಾಗವಹಿಸುವ ನಿರೀಕ್ಷೆ ಇದ್ದು, ಅಂದು ಸಮಾರೋಪಕ್ಕೆ ಬರುವ ಕಾರ್ಯಕರ್ತರು ಹಾಗೂ ಮುಖಂಡರಿಗೆ ಉಪಹಾರ ಹಾಗೂ ಊಟದ ವ್ಯವಸ್ಥೆಯನ್ನು ಮಾಡಲಾಗಿದೆ ಎಂದರು.

ತೆರೆದ ವಾಹನದಲ್ಲಿ ಶಾಸಕ ಎಂ.ಶ್ರೀನಿವಾಸ್‌ ನೇತೃತ್ವದಲ್ಲಿ ಒಂದರಿಂದ 3ನೇ ವಾರ್ಡ್‌ವರೆಗೆ ಪಂಚರತ್ನ ಯೋಜನೆ ಬಗ್ಗೆ ಕರಪತ್ರ ಹಂಚುವ ಮೂಲಕ ಪ್ರಚಾರ ನಡೆಸಿದರು.

ಜೆಡಿಎಸ್‌ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಜಫ್ರುಲ್ಲಾಖಾನ್‌, ನಗರಸಭೆ ಅಧ್ಯಕ್ಷ ಎಚ್‌.ಎಸ್‌. ಮಂಜು, ಜೆಡಿಎಸ್‌ ಜಿಲ್ಲಾಧ್ಯಕ್ಷ ಡಿ.ರಮೇಶ್‌, ನಗರಘಟಕ ಅಧ್ಯಕ್ಷ ಎಚ್‌.ಪಿ.ಗೌರೀಶ್‌, ಮಹಿಳಾ ಘಟಕದ ಅಧ್ಯಕ್ಷೆ ಮಂಜುಳಾ ಉದಯ ಶಂಕರ್‌, ನಗರಸಭೆ ಉಪಾಧ್ಯಕ್ಷೆ ಇಶ್ರತ್‌ ಫತಿಮಾ, ಸ್ಥಾಯಿ ಸಮಿತಿ ಅಧ್ಯಕ್ಷೆ ಮೀನಾಕ್ಷಿ ಪುಟ್ಟಸ್ವಾಮಿ, ನಗರಸಭೆ ಮಾಜಿ ಅಧ್ಯಕ್ಷೆ ಕೆ.ಸಿ.ನಾಗಮ್ಮ, ಸದಸ್ಯರಾದ ನಾಗೇಶ್‌, ರವಿ, ತಾಲೂಕು ಜೆಡಿಎಸ್‌ ಅಧ್ಯಕ್ಷ ತಿಮ್ಮೇಗೌಡ, ಜೆಡಿಎಸ್‌ ಕಾರ್ಯಾಧ್ಯಕ್ಷ ಲೋಕೇಶ್‌ ಸೇರಿದಂತೆ ಮತ್ತಿತರರು ಹಾಜರಿದ್ದರು.

26ಕ್ಕೆ ಪಂಚರತ್ನ ಯಾತ್ರೆ ಸಮಾರೋಪ : ಕಳೆದೆರೆಡು ತಿಂಗಳಿಂದ ನಡೆಯುತ್ತಿರುವ ಪಂಚ ರತ್ನ ಯೋಜನೆ ರಥಯಾತ್ರೆ ಕಾರ್ಯಕ್ರಮದ ಸಮಾರೋಪ ಸಮಾರಂಭ ಮಾ.26ರಂದು ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ನಡೆಯಲಿದೆ. ಜಿಲ್ಲೆಯ 35 ವಾರ್ಡ್‌ಗಳು ಹಾಗೂ ಮಂಡ್ಯ ವಿಧಾನಸಭಾ ಕ್ಷೇತ್ರದಿಂದ ಕಾರ್ಯಕರ್ತರು ಹಾಗೂ ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು ಎಂದು ಶಾಸಕ ಎಂ.ಶ್ರೀನಿವಾಸ್‌ ಮನವಿ ಮಾಡಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next