ಬೆಳಗಾವಿ: ರಾಜಕೀಯ ಭಾಷಣದಿಂದ ಅಭಿವೃದ್ಧಿ ಸಾಧ್ಯವಿಲ್ಲ. ಸರ್ಕಾರ ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡಬೇಕು. ಸರ್ಕಾರಿ ಆಸ್ಪತ್ರೆಗಳು ಜನತೆಗೆ ಗುಣಮಟ್ಟದ ಸೇವೆ ನೀಡಬೇಕು. ಎಲ್ಲಾ ಮಕ್ಕಳಿಗೆ ಖಾಸಗಿ ಶಾಲೆಯಲ್ಲಿ ಕಲಿಯಲು ಶಕ್ತಿ ಇರಲ್ಲ. ಇವೆಲ್ಲವೂ ದೊರೆಯಬೇಕಾದರೆ ನಾವು ಎಚ್ಚರಗೊಳ್ಳಬೇಕು. ಗುಣಮಟ್ಟದ ಶಿಕ್ಷಣ ಸಿಕ್ಕಾಗ ಮಕ್ಕಳ ಭವಿಷ್ಯ ಉಜ್ವಲವಾಗಲು ಸಾಧ್ಯವಿದೆ ಎಂದು ಶಾಸಕ ಸತೀಶ ಜಾರಕಿಹೊಳಿ ಹೇಳಿದರು.
ಯಮಕನಮರಡಿ ಮತಕ್ಷೇತ್ರದ ಮುಚ್ಚಂಡಿ ಗ್ರಾಮದ ಸರ್ಕಾರಿ ಮಾದರಿ ಕನ್ನಡ ಶಾಲೆಯಲ್ಲಿ ಒಂದು ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿದ ಆರು ಕೊಠಡಿಗಳನ್ನು ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಣ ಕ್ಷೇತ್ರ ಸುಧಾರಣೆ ಆಗಲು ಹೋರಾಟ ನಡೆಸಬೇಕು. ಆದರೆ ಇವತ್ತು ಗುಡಿಗಳನ್ನು ಕಟ್ಟದಿದ್ದರೆ ವೋಟ್ ಹಾಕುವುದಿಲ್ಲ ಎನ್ನುವ ಕೂಗು ಕೇಳುತ್ತದೆ. ಇಂತಹ ವ್ಯವಸ್ಥೆ ಸರಿಯಲ್ಲ ಎಂದು ವಿಷಾದಿಸಿದರು.
ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರು ಕ್ಷೇತ್ರದಲ್ಲಿ ಪ್ರಚಾರಕ್ಕೆ ಹೋಗದೆ ಆಯ್ಕೆಯಾಗುತ್ತಿದ್ದರು. ಅವರ ಶಿಷ್ಯನಾದ ನಾನು ಸಹ ಅವರಂತೆ ಆಯ್ಕೆಯಾಗಬೇಕೆಂದು ಹಠ ಇತ್ತು. ಹೀಗಾಗಿ ಕಳೆದ ಬಾರಿ ನನ್ನ ಮತಕ್ಷೇತ್ರದಲ್ಲಿ ಪ್ರಚಾರ ಮಾಡದೇ ಆಯ್ಕೆಯಾದೆ. ನನ್ನನ್ನು ಆಯ್ಕೆ ಮಾಡಿದ ನಿಮ್ಮೆಲ್ಲರಿಗೂ ಚಿರಋಣಿ. ಅಭಿವೃದ್ಧಿಗೆ ಹೆಚ್ಚು ಒತ್ತು ನೀಡುವ ನನ್ನನ್ನು ಮುಂದೆಯೂ ಬೆಂಬಲಿಸುತ್ತೀರಿ ಎಂಬ ನಂಬಿಕೆ ಇದೆ ಎಂದರು.
2019-20 ಹಾಗೂ 2021-2022ನೇ ಸಾಲಿನ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ 28 ಲಕ್ಷ ರೂ. ವೆಚ್ಚದಲ್ಲಿ ಅಂಗವಿಕಲರಿಗೆ 28 ತ್ರಿಚಕ್ರ ವಾಹನ ಮತ್ತು ಕೊರೊನಾ ಸಮಯದಲ್ಲಿ ಆತ್ಮಹತ್ಯೆ ಮಾಡಿಕೊಂಡ ಮೂವರು ನೇಕಾರರ ಕುಟುಂಬಸ್ಥರಿಗೆ ತಲಾ 3 ಲಕ್ಷ ರೂ. ಚೆಕ್ ವಿತರಿಸಿದರು.
ಬಿಇಒ ಎಸ್.ಪಿ. ದಾಸಪ್ಪನವರ್, ಎಸ್ ಡಿಎಂಸಿ ಅಧ್ಯಕ್ಷ ಸಿದ್ರಾಯಿ ಹುಲಕಾಯಿ, ಲಕ್ಷ್ಮಣ ಮೇಗಿನಮನಿ, ಸಂಜಯ ಭದ್ರಶೆಟ್ಟಿ, ಗಂಗಾಧರ ಹಿರೇಮಠ, ಬಾಬು ಗುಡ್ಡದೈಗೋಳ, ಉಮೇಶ್ ಅಸ್ಟಗಿ, ರಮೇಶ ನಾವಲಗಿ, ರೇಣುಕಾ ಬಂಡಿಹೊಳಿ, ಶಂಕರಮ್ಮ ಮೈಲಾಪ್ಪಗೋಳ, ಲಕ್ಷ್ಮೀ ಹುಲಕಾಯಿ, ರೇಷ್ಮಾ ಮೊಕಾಶಿ, ಯಲ್ಲವ್ವಾ ಬಸರಿಮರದ, ಗೌರಮ್ಮ ಕೊರಶೆಟ್ಟಿ, ಪ್ರಿಯಾ ಕೊಲಕಾರ್ ಇನ್ನಿತರರಿದ್ದರು.
ನನ್ನ ಮೊದಲ ಆದ್ಯತೆ ಶಿಕ್ಷಣಕ್ಕೆ. ಹೀಗಾಗಿ 30 ವರ್ಷದ ಹಿಂದೆಯೇ ಎನ್‌ಎಸ್‌ಎಫ್ ಸ್ಕೂಲ್ ಪ್ರಾರಂಭಿಸಿ ಮೂರು ಸಾವಿರ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡಿದ್ದೇನೆ. ನಂತರ ಶಾಸಕನಾದ ಮೇಲೆ ಶೈಕ್ಷಣಿಕ ಕಾಂತ್ರಿಗೆ ಪ್ರಾಮುಖ್ಯತೆ ನೀಡುತ್ತಿದ್ದೇನೆ. ಕ್ಷೇತ್ರದ ಸರ್ಕಾರಿ, ಖಾಸಗಿ ಶಾಲಾ-ಕಾಲೇಜುಗಳಿಗೆ 5 ಸಾವಿರ ಡೆಸ್ಕ್ ವಿತರಿಸಿದ್ದೇನೆ.
ಸತೀಶ ಜಾರಕಿಹೊಳಿ,
ಯಮಕನಮರಡಿ ಶಾಸಕ