ಶಿರಹಟ್ಟಿ: ಕೇಂದ್ರ ಮತ್ತು ರಾಜ್ಯ ಸರಕಾರಗಳು ಗ್ರಾಮಗಳ ಅಭಿವೃದ್ಧಿಗಾಗಿ ಸಾಕಷ್ಟು ರೀತಿಯ ಯೋಜನೆ ಜಾರಿಗೆ ತರುತ್ತಿದೆ. ಆದರೂ ಕೆಲ ಹಳ್ಳಿಗಳ ಅಭಿವೃದ್ಧಿ ಇನ್ನೂ ಆಗಿಲ್ಲ. ಇಲ್ಲಿ ಮೂಲಭೂತ ಸೌಕರ್ಯವೇ ಇಲ್ಲ. ಇದಕ್ಕೆ ತಾಲೂಕಿನ ಕುಸಲಾಪುರ ಗ್ರಾಮವೇ ಸಾಕ್ಷಿ.
ಈ ಗ್ರಾಮದಲ್ಲಿ 200ಕ್ಕೂ ಹೆಚ್ಚು ಕುಟುಂಬಗಳು ವಾಸ ಮಾಡುತ್ತಿವೆ. ತಾಲೂಕಿನ ಕಡಕೋಳ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಇದು ಒಳಪಟ್ಟಿದೆ. ಗ್ರಾಪಂನವರು ಗ್ರಾಮದಲ್ಲಿ ರಸ್ತೆ, ಚರಂಡಿಗಳನ್ನು ನಿರ್ಮಿಸದೇ ನಿರ್ಲಕ್ಷ್ಯ ವಹಿಸಿದ್ದಾರೆ. ಗ್ರಾಮದಲ್ಲಿ ರಸ್ತೆ ಹಾಗೂ ಗಟಾರ ಎಲ್ಲಿದೆಯೆಂದು ಹುಡಕುವ ಪರಿಸ್ಥಿತಿಯಿದೆ. ಗ್ರಾಮದಲ್ಲಿ ಬಹುತೇಕ ರಸ್ತೆಗಳ ಮೇಲೆಯೇ ಚರಂಡಿ ನೀರು ಹರಿಯುತ್ತಿದೆ. ಇದರಿಂದ ಸಾರ್ವಜನಿಕರಿಗೆ ರಸ್ತೆ ಮೇಲೆ ಓಡಾಡುವುದು ದುಸ್ತರವಾಗಿದೆ. ಅಲ್ಲದೇ ಮಕ್ಕಳು, ಮಹಿಳೆಯರು, ವಯೋವೃದ್ಧರು ಪಾಡಂತು ಹೇಳತೀರದಾಗಿದೆ. ಚರಂಡಿ ನೀರಿನ ದುರ್ವಾಸನೆಯಿಂದ ಗ್ರಾಮದ ಜನತೆಗೆ ಹಲವು ರೋಗಗಳಿಂದ ಬಳಲುವಂತಾಗಿದೆ. ಅಚ್ಚು ಕಟ್ಟಾದ ರಸ್ತೆಗಳು ಇಲ್ಲದೇ ಮಳೆ ಬಂದಾಗ ಕೆಸರಿನ ಗದ್ದೆಯಂತಾಗುತ್ತಿದೆ. ಬೇಸಿಗೆಯಲ್ಲಿ ಧೂಳಿನ ಮಜ್ಜನವಾದರೆ, ಮಳೆಗಾಲದಲ್ಲಿ ಎಲ್ಲೆಡೆ ಕೆಸರುಮಯ ವಾತಾವರಣ ಇರುತ್ತಿದೆ. ಇದರಿಂದ ಸಾರ್ವಜನಿಕರು ನಿತ್ಯ ನರಕಯಾತನೆ ಅನುಭವಿಸುವಂತಾಗಿದೆ.
ಕುಡಿವ ನೀರಿಗೆ ಪರದಾಟ: ಕುಸಲಾಪುರ ಗ್ರಾಮದ ವ್ಯಾಪ್ತಿಯಲ್ಲಿ ಕಳೆದ ಮೂರ್‍ನಾಲ್ಕು ವರ್ಷಗಳಿಂದ ಮಳೆ ಬಾರದೆ ಇರುವುದರಿಂದ ಅಂತರ್ಜಲ ಮಟ್ಟ ಸಂಪೂರ್ಣ ಕುಸಿದಿವೆ. ಇದರಿಂದ ಬೋರ್ ವೆಲ್‌ಗಳು ಸಂಪೂರ್ಣ ಬಂದ್ ಆಗಿವೆ. ಮಳೆಗಾಲದಲ್ಲೂ ಗ್ರಾಮದ ಜನತೆ ಕುಡಿಯುವ ನೀರಿಗಾಗಿ ನಿತ್ಯ ಪರದಾಡುವಂತ ಪರಿಸ್ಥಿತಿಯಿದೆ. ಗ್ರಾಮದ ಜನರು ತುಂಗಭದ್ರಾ ನದಿ ನೀರನ್ನು ಅವಲಂಬಿಸಿರುವುದರಿಂದ ಅದು ಕೂಡಾ ಸಮರ್ಪಕವಾಗಿ ಪೂರೈಕೆಯಾಗುತ್ತಿಲ್ಲ. ಇದರಿಂದಾಗಿ ಊರಿನ ಅಕ್ಕ ಪಕ್ಕದ ತೋಟದ ಮನೆಗಳಿಂದ ಪ್ರತಿನಿತ್ಯ ನೀರು ತಂದು ಜೀವನ ಸಾಗಿಸುವಂತಾಗಿದೆ.
ನಮ್ಮೂರನ್ಯಾಗ ಕುಡ್ಯಾಕ್ ನೀರಿನ ಸಮಸ್ಯೆ ಬಾಳ ಐತ್ರಿ. ನಾವು ನೀರ ತರಬೇಕೆಂದ್ರ ಅರ್ಧ ಕಿ.ಮೀ. ದೂರ ಹೋಗಿಬೇಕ್ರಿ. ಅಲ್ದ ನಮ್ಮ ದನಕರುಗಳಿಗೂ ಅಲ್ಲಿಂದ ನೀರ ತರಬೇಕಂದ್ರ ಬಾಳಕಷ್ಟ ಆಗತೈತ್ರಿ. ಅಲ್ದ ನಮ್ಮೂರಿನ ತಳಗಿನ ಪ್ಲಾಟ್‌ನ್ಯಾಗ ಚರಂಡಿ ವ್ಯವಸ್ಥೆ ಇಲ್ದಾ ರಸ್ತೆಗಳು ಮೇಲೆ ಕೊಳಚಿ ನೀರ ಹರಿತೈತ್ರಿ. ಇದ್ರಿಂದ ಸಣ್ಣ ಮಕ್ಕಳಿಗೆ, ಮಹಿಳೆಯರಿಗೆ ಇಲ್ಲದ ರೋಗಾ ಬರಾಕ್ ಹತೈತಿ. ಇಷ್ಟಾದ್ರು ಯಾರು ಈ ಕಡೆ ಬಂದಿರ್ಲಿ. ಚುನಾವಣೆ ಸಂದರ್ಭದಲ್ಲಿ ಮಾತ್ರ ಜನಪ್ರತಿನಿಧಿಗಳಿಗೆ ಮತ್ತು ಅಧಿಕಾರಿಗಳಿಗೆ ನಮ್ಮ ನೆನಪು ಆಗತೈತ್ರಿ ಎಂದು ಕುಸಲಾಪುರ ಗ್ರಾಮಸ್ಥ ನಿಂಗಪ್ಪ ಭಂಡಾರಿ ಅಳಲನ್ನು ತೋಡಿಕೊಂಡರು.
ಗ್ರಾಮದಲ್ಲಿ ಎಂಟು ಬೋರ್‌ವೆಲ್‌ಗಳು ಇದ್ದರೂ ಯಾವುದರಲ್ಲೂ ನೀರು ಬರುತ್ತಿಲ್ಲ. ಇದರಿಂದ ತೋಟದ ನೀರನ್ನು ಪೂರೈಸಲಾಗುತ್ತದೆ. ಅಲ್ಲದೇ ರಸ್ತೆಗಳನ್ನು ಅಭಿವೃದ್ಧಿ ಪಡಿಸಲು ಅನುದಾನ ಈಗಾಗಲೇ ತಾಪಂಗೆ ಬಂದಿದ್ದು, ಶೀಘ್ರದಲ್ಲೆ ಕಾಮಗಾರಿ ಪ್ರಾರಂಭಿಸಲಾಗುವುದು.
ಹಾಲನಗೌಡ ಪಾಟೀಲ, ಗ್ರಾಪಂ ಸದಸ್ಯ
ಪ್ರಕಾಶ ಶಿ. ಮೇಟಿ