ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು, ಮಂಗಳೂರು ನಗರ ದಕ್ಷಿಣ, ಮಂಗಳೂರು ನಗರ ಉತ್ತರ ಹಾಗೂ ಪುತ್ತೂರು ಶಾಸಕ ರೊಂದಿಗೆ ಕ್ಷೇತ್ರದ ಅಭ್ಯು ದಯಕ್ಕೆ ಸಂಬಂಧಿಸಿದ ಸಂವಾದ ಮಂಗಳವಾರ ಉದಯವಾಣಿ ಮಂಗಳೂರು ಕಚೇರಿಯಲ್ಲಿ ನಡೆಯಿತು.
ಶಾಸಕರಾದ ವೇದವ್ಯಾಸ ಕಾಮತ್, ಡಾ| ಭರತ್ ಶೆಟ್ಟಿ ವೈ., ಅಶೋಕ್ ರೈ ಸಂವಾದದಲ್ಲಿ ಭಾಗಿಯಾಗಿ ತಮ್ಮ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ತಾವು ಹಾಕಿಕೊಂಡಿರುವ ಯೋಜನೆಗಳನ್ನು ಮುಂದಿಟ್ಟರು.
ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವುದು, ಜನರಿಗೆ ಸುಗಮ ಆಡಳಿತ ಕಲ್ಪಿಸುವುದು, ಉದ್ಯೋಗಾವಕಾಶ ಹೆಚ್ಚಿಸುವ ಬಗ್ಗೆ ಮೂವರೂ ಶಾಸಕರೂ ಒಮ್ಮತದಿಂದ ಇಂಗಿತ ವ್ಯಕ್ತಪಡಿಸಿದರು
ವೇದವ್ಯಾಸ ಕಾಮತ್ ಮಾತನಾಡಿ, ಕಳೆದ ಐದು ವರ್ಷಗಳಲ್ಲಿ ಸಾಕಷ್ಟು ಯೋಜನೆಗಳನ್ನು ಕೈಗೆತ್ತಿಕೊಂಡು ಪೂರ್ಣಗೊಳಿಸಿದೆ. ಆದರೆ ಇನ್ನಷ್ಟು ಯೋಜನೆಗಳು ಅನು ಷ್ಠಾನಗೊಳ್ಳಬೇಕಿವೆ. ಪಂಪ್‌ವೆಲ್‌ನಲ್ಲಿ ಬಸ್ ನಿಲ್ದಾಣ, ಶಕ್ತಿನಗರದಲ್ಲಿ ವಸತಿ ಸಮುಚ್ಚಯ ನಿರ್ಮಾಣ, ಹಂಪನ ಕಟ್ಟೆಯ ಮಲ್ಟಿಲೆವೆಲ್ ಕಾರ್‌ಪಾರ್ಕಿಂಗ್‌ನಂತಹ ಯೋಜನೆಗಳನ್ನು ಪಿಪಿಪಿ ಆಧಾರದಲ್ಲಿ ಕೈಗೊಳ್ಳುವುದಕ್ಕೆ ಬೇಕಾದ ಅನುಮೋದನೆ ಪಡೆದುಕೊಳ್ಳಲಾಗುವುದು ಎಂದರು.
ಡಾ| ಭರತ್ ಶೆಟ್ಟಿ ಮಾತನಾಡಿ, ತಮ್ಮ ವ್ಯಾಪ್ತಿಯ ಸುರತ್ಕಲ್ ಭಾಗದಲ್ಲಿ ಕಡಲ್ಕೊರೆತ ತಡೆಗೆ ಮರವಂತೆ ಮಾದರಿಯಲ್ಲಿ ಟಿ-ಗ್ರೋಯಿನ್ ರಚನೆ, ಸುರತ್ಕಲ್ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವಾಗಿ ಮೇಲ್ದರ್ಜೆಗೇರಿಸುವುದು, ಪ್ರವಾಸೋದ್ಯಮಕ್ಕೆ ಹೊಸ ದಿಶೆಯನ್ನು ನೀಡಲು ಕ್ರಮ ಕೈಗೊಳ್ಳುವ ತಮ್ಮ ಯೋಚನೆಗಳನ್ನು ಹಂಚಿಕೊಂಡರು.
ಅಶೋಕ್ ರೈ ಮಾತನಾಡಿ, ಕೊಯಿಲ ಫಾರ್ಮ್ನಲ್ಲಿ ಎನಿಮಲ್ ಹಬ್ ಸ್ಥಾಪಿಸುವ ಮೂಲಕ ಬಳಕೆಯಾಗದೆ ಉಳಿದಿರುವ 680 ಎಕ್ರೆ ಜಮೀನನ್ನು ಸದುಪಯೋಗ ಮಾಡುವ ಯೋಜನೆ, ಪುತ್ತೂರಿನಲ್ಲಿ ವೈದ್ಯಕೀಯ ಕಾಲೇಜು ಸ್ಥಾಪನೆಯ ಅಗತ್ಯ, ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯನ್ನು ಮಂಗಳೂರಿನಿಂದ ಪುತ್ತೂರಿಗೆ ಸ್ಥಳಾಂತರಿಸುವ ವಿಚಾರ ಹಾಗೂ ಪುತ್ತೂರು ಜಿಲ್ಲೆ ಸ್ಥಾಪನೆ ಕುರಿತು ವಿವರವಾದ ತಮ್ಮ ಯೋಜನೆಗಳನ್ನು ತೆರೆದಿಟ್ಟರು.