Advertisement

ರೈತರ ಆದಾಯ ಹೆಚ್ಚಳದಿಂದ ಅಭಿವೃದ್ಧಿ

12:01 PM Jan 16, 2018 | |

ಕಲಬುರಗಿ: ದೇಶದ ಜನಸಂಖ್ಯೆಯ ಶೇ. 65ರಷ್ಟು ಜನರ ಕಸಬು ಕೃಷಿ ಆಗಿದೆ. ಸರ್ಕಾರ ದೇಶದ ರೈತರ ಆರ್ಥಿಕ ಅಭಿವೃದ್ಧಿಗೆ ವಿವಿಧ ಯೋಜನೆ ತಂದು ಹೆಚ್ಚಿನ ಒತ್ತು ನೀಡಿದೆ. ರೈತರ ಆದಾಯ ಹೆಚ್ಚಾದಾಗ ಮಾತ್ರ ದೇಶದ ಸಮಗ್ರ ಅಭಿವೃದ್ಧಿ ಸಾಧ್ಯ ಎಂದು ಸಂಸದ ಡಾ| ಮಲ್ಲಿಕಾರ್ಜುನ ಖರ್ಗೆ ಹೇಳಿದರು.

Advertisement

ಜಿಲ್ಲೆಯ ಮೇಳಕುಂದಾ (ಬಿ) ಗ್ರಾಮದಲ್ಲಿ ರಾಯಚೂರು ಕೃಷಿ ವಿಶ್ವವಿದ್ಯಾಲಯ, ಕಲಬುರಗಿ ಕೃಷಿ ವಿಜ್ಞಾನ ಕೇಂದ್ರ ಕೇಂದ್ರೀಯ ಒಣ ಬೇಸಾಯ ಸಂಶೋಧನಾ ಸಂಸ್ಥೆ (ಸಿ.ಆರ್‌.ಐ.ಡಿ.ಎ.) ಮತ್ತು ನೇಗಿಲಯೋಗಿ ರೈತ ಸಂಘ ಮೇಳಕುಂದಾ (ಬಿ) ಇವುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ಹವಾಮಾನ ವೈಪರೀತ್ಯ ಸೈರಣಾ ಕೃಷಿ ಯೋಜನೆ ಅಡಿಯಲ್ಲಿ ಬಾಡಿಗೆ ಆಧಾರಿತ ಯಂತ್ರೋಪಕರಣಗಳ ಕೇಂದ್ರ ಕಟ್ಟಡ ಹಾಗೂ ಮಣ್ಣು ಆರೋಗ್ಯ ಅರಿವು ಮೂಡಿಸುವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಈ ಹಿಂದೆ ರೈತರನ್ನು ಸಂಕಷ್ಟದಿಂದ ಪಾರು ಮಾಡಲು ಯುಪಿಎ ಸರ್ಕಾರ ಸುಮಾರು 70 ಸಾವಿರ ಕೋಟಿ ರೂ. ಬೆಳೆ ಸಾಲಮನ್ನಾ ಮಾಡಿದೆ. ಈಗಿನ ರಾಜ್ಯ ಸರ್ಕಾರ 8 ಸಾವಿರ ಕೋಟಿ ರೂ. ಸಾಲ ಮನ್ನಾ ಮಾಡಿದೆ. ಆಗ ಜವಾಹರಲಾಲ್‌ ನೆಹರೂ ಮತ್ತು ಇಂದಿರಾ ಗಾಂಧಿ ಅವರು ದೇಶದಾದ್ಯಂತ ದೊಡ್ಡ ದೊಡ್ಡ ಡ್ಯಾಂ ನಿರ್ಮಾಣ ಮಾಡಿ ನೀರಾವರಿಯಿಂದ ದೇಶದಲ್ಲಿ ಅನ್ನದ ಭಂಡಾರ ತುಂಬಿ 3 ರೂ. ದರದಲ್ಲಿ ಪಡಿತರ ಅಹಾರ ಧಾನ್ಯ ವಿತರಿಸಲಾಯಿತು ಎಂದು ಹೇಳಿದರು.

ಜಿಲ್ಲಾ ಉಸ್ತುವಾರಿ ಸಚಿವ ಡಾ| ಶರಣಪ್ರಕಾಶ ಪಾಟೀಲ ಮಾತನಾಡಿ, ಹೋಬಳಿಗೆ ಒಂದರಂತೆ ಬಾಡಿಗೆ ಯಂತ್ರೋಪಕರಣ ಕೇಂದ್ರ ಇರಬೇಕು ಎಂಬುದು ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ. ಸಣ್ಣ ಸಣ್ಣ ಹಾಗೂ ಬಡ
ರೈತರಿಗಾಗಿ ಈ ಸೌಲಭ್ಯವನ್ನು ಸರ್ಕಾರ ನೀಡುತ್ತಿದ್ದು, ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.

ಕೇಂದ್ರ ಸರ್ಕಾರ 16 ಲಕ್ಷ ಕ್ವಿಂಟಲ್‌ ಮಾತ್ರ ತೊಗರಿ ಖರೀಸಬೇಕು ಎಂದು ಆದೇಶಿಸಿದೆ. ಆದರೆ ಜಿಲ್ಲೆಯಿಂದಲೇ 70 ಸಾವಿರ ರೈತರು ಹೆಸರು ನೋಂದಾಯಿಸಿಕೊಂಡಿದ್ದಾರೆ. ಆದ್ದರಿಂದ ಮಿತಿ ಹೆಚ್ಚಿಸಬೇಕು ಹಾಗೂ ನೋಂದಣಿ
ದಿನಾಂಕ ವಿಸ್ತರಿಸುವಂತೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಎಂದು ಹೇಳಿದರು. 

Advertisement

ನವದೆಹಲಿ ಐಎಆರ್‌ಐ ವಿಶ್ರಾಂತ ನಿರ್ದೇಶಕ ಡಾ| ಎಸ್‌.ಎ. ಪಾಟೀಲ ಮಾತನಾಡಿ, ದೇಶದಲ್ಲಿ ಒಟ್ಟು 11 ಕೃಷಿ
ಕೇಂದ್ರಗಳಿದ್ದರೂ ರೈತರ ಮೇಲೆ ಪ್ರಭಾವ ಬೀರಿ ನೂತನ ತಳಿ ನೀಡುವಲ್ಲಿ ಕಲಬುರಗಿ ಸಂಶೋಧನಾ ಕೇಂದ್ರ ಮೊದಲನೇ ಸ್ಥಾನದಲ್ಲಿದೆ. ಹೊಸತಳಿ, ತಂತ್ರಜ್ಞಾನ, ರಸಗೊಬ್ಬರ ಸೇರಿಸಿ ಬೆಳೆ ಬೆಳೆದಾಗ 1 ಎಕರೆಗೆ ಹೆಚ್ಚು ಇಳುವರಿ ಪಡೆದು ಹತ್ತಾರು ಲಕ್ಷ ರೂ. ಗಳ ಲಾಭ ಗಳಿಸಬಹುದು. ಆದರೆ ಬೆರಣಿಯಷ್ಟೇ ರೈತರು ಮಾತ್ರ ಇಂತಹ ಉಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು. ಮೇಳಕುಂದಾ (ಬಿ) ಪ್ರಗತಿಪರ ರೈತರನ್ನು ಡಾ| ಶರಣಪ್ರಕಾಶ ಪಾಟೀಲ ಸನ್ಮಾನಿಸಿದರು.

ಚಿಣಮಗೇರಾ ಮಹಾಂತೇಶ್ವರ ಮಠದ ಸಿದ್ದರಾಮ ಮಹಾಸ್ವಾಮೀಜಿ, ರಾಯಚೂರು ಕೃ.ವಿ.ವಿ ಆಡಳಿತ ಮಂಡಳಿ
ಸದಸ್ಯ ವೀರನಗೌಡ ಪರಸರೆಡ್ಡಿ, ಕಲಬುರಗಿ ಕೃಷಿಕ ಸಮಾಜ ಅಧ್ಯಕ್ಷ ಸಿದ್ರಾಮಪ್ಪ ಪಾಟೀಲ ಧಂಗಾಪುರ, ಜಿಪಂ ಸದಸ್ಯ ಸಂತೋಷ ಪಾಟೀಲ ದಣ್ಣೂರು, ರಾಯಚೂರು ಕೃ.ವಿ.ವಿ ವಿಸ್ತರಣಾ ನಿರ್ದೇಶಕ ಡಾ| ಎಸ್‌.ಕೆ. ಮೇಟಿ, ಕಲಬುರಗಿ ಕೃಷಿ ಮಹಾವಿದ್ಯಾಲಯ ಡೀನ್‌ ಡಾ| ಜೆ.ಆರ್‌. ಪಾಟೀಲ, ಮೇಳಕುಂದಾ (ಬಿ) ನೇಗಿಲ ಯೋಗಿ ರೈತ ಸಂಘ ಅಧ್ಯಕ್ಷ ಮಲ್ಲಿನಾಥ ಕೊಳ್ಳೂರ, ಕಲಬುರಗಿ ಕೃವಿ ಕೇಂದ್ರದ ಮುಖ್ಯಸ್ಥ ಡಾ| ರಾಜು ಜಿ. ತೆಗ್ಗಳ್ಳಿ ಇದ್ದರು. ಕೃಷಿ ಸಂಶೋಧಕ ಮುನಿಸ್ವಾಮಿ ನಿರೂಪಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next