ಬೆಂಗಳೂರು: ಎಡ ಅಥವಾ ಬಲ ಪಂಥೀಯ ಚಿಂತನೆಗಳಿಂದ ಹೊರಬಂದು ಸ್ವಂತ ಆಲೋಚನಾ ಕ್ರಮ ಬೆಳಸಿಕೊಳ್ಳಬೇಕಾದ ಅಗತ್ಯವಿದೆ ಎಂದು ಚಿತ್ರ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಹೇಳಿದ್ದಾರೆ. ವಸಂತನಗರದ ಅಲಿಯನ್ಸ್ ಫ್ರಾನ್ಸಿಸೆಯಲ್ಲಿ ಇಂಡಿಕ್ ಅಕಾಡೆಮಿ ಹಾಗೂ ಕೆಂಚಾಂಬ ಚಾರಿಟಬಲ್ ಟ್ರಸ್ಟ್ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಅರ್ಬನ್ ನಕ್ಸಲ್ಸ್ ಪುಸ್ತಕ ಕುರಿತ ವಿಚಾರಗೋಷ್ಠಿಯಲ್ಲಿ ಮಾತನಾಡಿದರು.
ವಿದೇಶದಲ್ಲಿ ಯಾರೋ ಅಲ್ಲಿನ ಪ್ರಾದೇಶಿಕತೆ ಹಿನ್ನೆಲೆಯಿಂದ ಹುಟ್ಟುಹಾಕಿದ ಸಿದ್ಧಾಂತಗಳನ್ನು ಅಳವಡಿಸಿಕೊಳ್ಳುವುದಕ್ಕಿಂತ ನಮ್ಮ ಪರಂಪರೆ ಹಾಗೂ ನಾಗರಿಕತೆಯ ಆಧಾರಿತ ಚಿಂತನೆಗಳನ್ನು ಅನುಸರಿಸಬೇಕು. ಅಂದಾಗ ಮಾತ್ರ ಸಾಮಾಜಿಕ ಜೀವನ ಉತ್ತಮವಾಗಿರುತ್ತದೆ.
ನಮ್ಮ ಸಮಾಜ ಹಿಂದೂ ನಾಗರೀಕತೆ ಮೂಲವನ್ನು ಹೊಂದಿದ್ದು, ಅದರಂತೆಯೆ ಇಲ್ಲಿನ ಜನರು ಕೂಡ ಉತ್ತಮ ಜೀವನ ನಡೆಸುತ್ತಿದ್ದರು. ಆದರೆ, ಇಲ್ಲಿಗೆ ಬಂದ ವಸಹಾತು ಶಾಹಿಗಳು ತಮ್ಮ ಸಿದ್ಧಾಂತಗಳನ್ನು ಇಲ್ಲಿನ ಜನರ ಮೇಲೆ ಹೇರಿ ಸಮಾಜದ ಸ್ವಾಸ್ಥ್ಯವನ್ನು ಹಾಳುಮಾಡಿದರು ಎಂದರು.
ಇಂದು ಜ್ಯಾತ್ಯಾತೀತ ಪದವು ಸಾಮಾಜಿಕ ಪರಿಕಲ್ಪನೆ ಮೀರಿ ಒಂದು ರಾಜಕೀಯ ತಂತ್ರಗಾರಿಕೆಯ ಸಾಧನವಾಗಿ ಮಾರ್ಪಾಡಾಗಿದೆ. ಅದಕ್ಕೆ ಬಲಿಯಾಗದೆ ಸತ್ಯವನ್ನು ಅರಿತು ನಡೆಯಬೇಕು. ಮುಖ್ಯವಾಗಿ ನಮ್ಮ ಮೂಲಭೂತ ಹಕ್ಕುಗಳಲ್ಲಿ ನಮಗೆ ಮೊದಲು ಸತ್ಯವನ್ನು ತಿಳಿಸುಕೊಳ್ಳುವ ಹಕ್ಕನ್ನು ನೀಡಬೇಕಿತ್ತು. ಆಗ ಇತಿಹಾಸದಲ್ಲಿ ಮರೆಯಾಗಿಹೋಗಿರುವ ಅದೆಷ್ಟೋ ಸತ್ಯಗಳು ಹೊರ ಬರುತ್ತಿದ್ದವು ಎಂದು ತಿಳಿಸಿದರು.
ಅರ್ಬನ್ ನಕ್ಸಲ್ಸ್ ಪುಸ್ತಕದಲ್ಲಿ ನಮ್ಮ ಪ್ರಾದೇಶಿಕ ಸಂಸ್ಕೃತಿ ಹಾಗೂ ವಿಚಾರಗಳನ್ನು ಅಲ್ಲಗೆಳೆದು ತಮ್ಮ ದೇಶವನ್ನೇ ಸ್ವಯಂ ಪ್ರೇರಿತವಾಗಿ ನಾಶಮಾಡುತ್ತಿರುವ ವ್ಯಕ್ತಿಗಳ ಕುರಿತು ಬರೆಯಲಾಗಿದೆ. ಅವರನ್ನು ಗುರುತಿಸುವುದು ಹೇಗೆ ಹಾಗೂ ಅವರು ಹೇಗೆ ಸಮಾಜಕ್ಕೆ ಮಾರಕ ಎಂಬ ಅಂಶಗಳನ್ನು ಸುವಿಸ್ತಾರವಾಗಿ ವಿವರಿಸಲಾಗಿದೆ ಎಂದು ಮಾಹಿತಿ ನೀಡಿದರು.
ಜೀವನದಲ್ಲಿ ಯುವಕರು ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಿ. ಯಾರಿಗಾದರೂ ಉಡುಗೊರೆ ಕೊಡುವಾಗ ಪುಸ್ತಕ ಕೊಡಿ ಹಾಗೂ ಪ್ರತಿನಿತ್ಯ ಧ್ಯಾನ್ಯ ಮಾಡುವುದನ್ನು ರೂಢಿಸಿಕೊಳ್ಳಿ ಎಂದು ಸಲಹೆ ನೀಡಿದರು. ಕಾರ್ಯಕ್ರಮದಲ್ಲಿ ಹೆಚ್ಚುವರಿ ಸ್ಯಾಲಿಸೆಟರ್ ಜನರಲ್ ಪ್ರಭುಲಿಂಗ ಕೆ. ನಾವಡಗಿ ಉಪಸ್ಥಿತರಿದ್ದರು.