Advertisement

ಮಕ್ಕಳಲ್ಲಿ ನೈತಿಕ ಮೌಲ್ಯ ಬೆಳೆಸಿ

12:14 PM May 26, 2018 | |

ಚಿಕ್ಕಮಗಳೂರು: ಮಕ್ಕಳಲ್ಲಿ ನೈತಿಕ ಮೌಲ್ಯಗಳನ್ನು ಬೆಳೆಸಿ ಅವರನ್ನು ಉತ್ತಮ ನಾಗರಿಕರನ್ನಾಗಿ ರೂಪಿಸಲು ಶಿಕ್ಷಕರಿಂದ ಮಾತ್ರ ಸಾಧ್ಯ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಡಾ|ಆರ್‌. ನಾಗಪ್ಪಗೌಡ ಹೇಳಿದರು.

Advertisement

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ನಗರದ ಸುವರ್ಣ ಕನ್ನಡ ಭವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಅಭಿನಂದನೆ ಮತ್ತು ಮನ್ನಾನ್‌ ಸಿದ್ಧಿಕ್‌ ಹುಸೇನ್‌, ಜೈಬುನ್ನೀಸಾ ಹಾಗೂ ದಿ|ಕಾಳಮ್ಮ ಡಿ.ಎ. ರಾಮೇಗೌಡ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ದೇಶದಲ್ಲಿಂದು ವಿದ್ಯಾವಂತರ ಸಂಖ್ಯೆ ಹೆಚ್ಚುತ್ತಿದೆ.

ಆದರೆ, ವಿದ್ಯಾವಂತರೇ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ನಿರತರಾಗಿರುವುದು. ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗುತ್ತಿರುವುದು ಆತಂಕ ತರುವಂತಿದೆ ಎಂದು ವಿಷಾದ ವ್ಯಕ್ತಪಡಿಸಿದರು. ಸಮಾಜದಲ್ಲಿ ನಡೆಯುತ್ತಿರುವ ಕ್ರೌರ್ಯ, ಹಿಂಸೆಗಳನ್ನು ನೋಡಿದರೆ ನಮ್ಮ ಶಿಕ್ಷಣ ಯಾವ ರೀತಿಯ ಮೌಲ್ಯಗಳನ್ನು ಮಕ್ಕಳಲ್ಲಿ ಬಿತ್ತುತ್ತಿದೆ ಎಂದು ಯೋಚಿಸುವಂತಾಗಿದೆ ಎಂದರು. 

ದೇಶ ಸರಿಯಾಗಬೇಕಾದರೆ ಜನತೆ ಸರಿಯಾಗಬೇಕು. ದೇಶದ ಜನ ಸತ್ಪ್ರಜೆಗಳಾದರೆ ರಾಷ್ಟ್ರದ ಭವಿಷ್ಯ ಉಜ್ವಲವಾಗುತ್ತದೆ. ದೇಶದ ಭವಿಷ್ಯವಿರುವುದು ಶಾಲೆಯ ಕೊಠಡಿಗಳಲ್ಲಿ. ಅಲ್ಲಿ ಶಿಕ್ಷಕರು ಮಕ್ಕಳಲ್ಲಿ ಮಾನವೀಯ ಮೌಲ್ಯಗಳನ್ನು, ಕರುಣೆ, ಅನುಕಂಪ, ಮಾನವೀಯತೆ ಬೆಳೆಸಿದರೆ ರಾಷ್ಟ್ರ ಸುಸಂಸ್ಕೃತವಾಗುತ್ತದೆ ಎಂದರು.

ಶಿಕ್ಷಕರು ಮತ್ತು ಪೋಷಕರು ಇಂದು ಮಕ್ಕಳನ್ನು ಬರೀ ಓದುವ ಯಂತ್ರಗಳನ್ನಾಗಿ ಮಾಡುತ್ತಿದ್ದಾರೆಯೇ ಹೊರತು ಅವರಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸುತ್ತಿಲ್ಲ. ಇಂದಿನ ಶಿಕ್ಷಣ ಬರೀ ಮಾಹಿತಿ ನೀಡುತ್ತಿದೆಯೇ ಹೊರೆತು ಜ್ಞಾನವನ್ನು ನೀಡುತ್ತಿಲ್ಲ ಎಂದು ವಿಷಾದಿಸಿದರು. ಪೋಷಕರು ಇಂದು ತಮ್ಮ ಮಕ್ಕಳನ್ನು ಡಾಕ್ಟರ್‌, ಇಂಜಿನಿಯರ್‌ಗಳನ್ನಾಗಿ ಮಾಡುತ್ತಿದ್ದಾರೆ. ಆದರೆ, ಅವರನ್ನು ಮನುಷ್ಯರನ್ನಾಗಿ ರೂಪಿಸುತ್ತಿಲ್ಲ. ಇದರಿಂದಾಗಿ ಸಮಾಜದಲ್ಲಿ ವಿದ್ಯಾವಂತ ಅಪರಾಧಿಗಳ ಸಂಖ್ಯೆ ಹೆಚ್ಚುತ್ತಿದೆ ಎಂದರು.

Advertisement

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಸಿ. ಪ್ರಸನ್ನಕುಮಾರ್‌, ಬರೀ ಹೋರಾಟಗಳಿಂದ ನಾಡಿನಲ್ಲಿ ಕನ್ನಡ ಭಾಷೆ ಉಳಿಸಲು ಸಾಧ್ಯವಿಲ್ಲ, ಕನ್ನಡ ಉಳಿಯಬೇಕಾದರೆ ಕನ್ನಡಿಗರು ಜಾಗೃತರಾಗಬೇಕು, ತಾವು ಮಾತೃಭಾಷೆಯಲ್ಲಿ ವ್ಯವಹರಿಸುವುದರ ಜೊತೆಗೆ ತಮ್ಮ ಮಕ್ಕಳಿಗೆ ಹಾಗೂ ರಾಜ್ಯದಲ್ಲಿ ನೆಲೆಸಿರುವ ಅನ್ಯಭಾಷಿಗರಿಗೆ ಕನ್ನಡ ಕಲಿಸಲು ಮುಂದಾಗಬೇಕು ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಕಸಾಪ ಅಧ್ಯಕ್ಷ ಕುಂದೂರು ಅಶೋಕ್‌, ಮಕ್ಕಳಿಗೆ ಕನ್ನಡ ಕಲಿಯುವಂತೆ ಪ್ರೇರೇಪಿಸುವ ಉದ್ದೇಶದಿಂದ ಪ್ರತಿ ವರ್ಷ ಕನ್ನಡ ಮಾಧ್ಯಮದಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು
ಅಭಿನಂದಿಸಲಾಗುತ್ತಿದೆ ಎಂದು ತಿಳಿಸಿದರು.

ಗ್ರಾಮೀಣ ಮಕ್ಕಳ ಶೈಕ್ಷಣಿಕ ಸವಾಲುಗಳು ಮತ್ತು ಪರಿಹಾರ ವಿಷಯ ಕುರಿತು ಶಿಕ್ಷಕ ವಿರೂಪಾಕ್ಷಪ್ಪ ಅಣ್ಣೀಗೆರೆ ಉಪನ್ಯಾಸ ನೀಡಿದರು, 10ನೇ ತರಗತಿ ಕನ್ನಡ ಮಾಧ್ಯಮದಲ್ಲಿ ಜಿಲ್ಲೆಗೆ ಪ್ರಥಮ ಗಳಿಸಿದ ಕಳಸಾದ ಧೃತಿ ಎಸ್‌.ಜೈನ್‌, ದ್ವಿತೀಯ ಸ್ಥಾನ ಪಡೆದ ವೈ. ಮಲ್ಲಾಪುರದ ಎಸ್‌.ಎನ್‌. ವಿವೇಕ್‌ ಸೇರಿದಂತೆ ಅತಿಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಸಮಾರಂಭದಲ್ಲಿ ಸನ್ಮಾನಿಸಿ ಪ್ರೋತ್ಸಾಹಧನ ನೀಡಲಾಯಿತು. ಲೇಖಕ ಪ್ರದೀಪ್‌ ಕೆಂಜಿಗೆ, ಜಿಲ್ಲಾ ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಕೆ.ಆರ್‌. ಪ್ರಭಾಕರ್‌, ದತ್ತಿದಾನಿ ಮಹಮದ್‌ ಹಿದಾಯತ್‌ ಉಲ್ಲಾ, ಅಬಕಾರಿ ಇಲಾಖೆ ಉಪಅಧೀಕ್ಷಕ ಜನಾಯಿ ಇದ್ದರು.

ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಡಿ.ಎಂ. ಮಂಜುನಾಥ ಸ್ವಾಮಿ ನಿರೂಪಿಸಿದರು. ತಾಲೂಕು ಕಸಾಪ ಅಧ್ಯಕ್ಷ ಹಿರೇಮಗಳೂರು ಪುಟ್ಟಸ್ವಾಮಿ ಸ್ವಾಗತಿಸಿದರು. ಶಿಕ್ಷಕಿ ಸುಜಾತಾ ವಂದಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next