Advertisement

ಬಾಲ ವಿಕಾಸ ಅಕಾಡೆಮಿ ಮಾದರಿ ಮಾಡುವೆ: ಜೊಲ್ಲೆ

07:34 PM Nov 20, 2020 | Suhan S |

ಧಾರವಾಡ: ಮಕ್ಕಳಿಗೆ ಅಗತ್ಯವಿರುವ ಸಂಸ್ಕಾರ, ಶಿಕ್ಷಣ, ಕೌಶಲ್ಯ ಕಲೆಗಳನ್ನು ಬೆಳೆಸಿ ರಾಜ್ಯ ಬಾಲವಿಕಾಸ ಅಕಾಡೆಮಿಯನ್ನು ರಾಜ್ಯಕ್ಕೆ ಮಾದರಿ ಸಂಸ್ಥೆಯನ್ನಾಗಿ ರೂಪಿಸಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.

Advertisement

ಅಂತಾರಾಷ್ಟ್ರೀಯ ಮಕ್ಕಳ ಹಕ್ಕುಗಳ ದಿನಾಚರಣೆ ಅಂಗವಾಗಿ ಅಕಾಡೆಮಿ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಸಂಯುಕ್ತವಾಗಿ ಕರ್ನಾಟಕ ಬಾಲವಿಕಾಸ ಅಕಾಡೆಮಿ ಆವರಣದಲ್ಲಿ ಗುರುವಾರ ಆಯೋಜಿಸಿದ್ದ ಬಣ್ಣಗಳಲ್ಲಿ ಮಕ್ಕಳ ವಿಕಾಸ ಚಿತ್ರಕಲಾ ಕಾರ್ಯಾಗಾರ ಹಾಗೂ ಅಕಾಡೆಮಿ ವೆಬ್‌ ಸೈಟ್‌, ಫೇಸ್‌ಬುಕ್‌ ಖಾತೆಗೆ ಚಾಲನೆ ನೀಡುವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಬಾಲವಿಕಾಸ ಅಕಾಡೆಮಿಗೆ ಅಗತ್ಯ ಸಿಬ್ಬಂದಿ, ಅನುದಾನ ಹಾಗೂ ತಜ್ಞರ ನೆರವು ನೀಡಲು ಇಲಾಖೆಯಿಂದ ಕ್ರಮ ಕೈಗೊಳ್ಳಲಾಗುವುದು ಎಂದರು.

ಮಕ್ಕಳಲ್ಲಿ ಮನೋಸ್ಥೈರ್ಯ ತುಂಬಲು, ಸ್ಪರ್ಧಾತ್ಮಕತೆ ಬೆಳೆಸಲು ಮತ್ತು ಉತ್ತಮ ಪ್ರಜೆಗಳನ್ನಾಗಿ ರೂಪಿಸಲುಇಲಾಖೆಯಿಂದ ಬಾಲಮಂದಿರ, ಬಾಲವಿಕಾಸ ಅಕಾಡೆಮಿ ಮೂಲಕ ಪ್ರೋತ್ಸಾಹ ನೀಡಲಾಗುತ್ತಿದೆ. ದಿವ್ಯಾಂಗರಿಗೆ ಇಲಾಖೆ ಮಾತೃಸ್ವರೂಪಿಣಿಯಾಗಿ ಅವರ ಬೇಕುಗಳನ್ನು ಪೂರೈಸುತ್ತಿದೆ ಎಂದರು.

ವೆಬ್‌ಸೈಟ್‌ಗೆ ಚಾಲನೆ : ಸಚಿವೆ ಶಶಿಕಲಾ ಜೊಲ್ಲೆ ಅವರು ಅಕಾಡೆಮಿ ವೆಬ್‌ಸೈಟ್‌ಗೆ ಹಾಗೂ ಕವಿವಿ ಕುಲಪತಿ ಪ್ರೋ|ಕೆ.ಬಿ. ಗುಡಸಿ ಅಕಾಡೆಮಿ ಫೇಸ್‌ಬುಕ್‌ ಖಾತೆಗೆ ಚಾಲನೆ ನೀಡಿದರು. ಸಾರ್ವಜನಿಕ ಶಿಕ್ಷಣ ಇಲಾಖೆ ಅಪರ ಆಯುಕ್ತ ಮೇಜರ್‌ ಸಿದ್ಧಲಿಂಗಯ್ಯ ಹಿರೇಮಠ ಹಾಗೂ ಸಚಿವರು ಚಿತ್ರ ಬಿಡಿಸುವ ಮೂಲಕ ಬಣ್ಣಗಳಲ್ಲಿ ಮಕ್ಕಳ ವಿಕಾಸ ಚಿತ್ರಕಲಾ ಕಾರ್ಯಾಗಾರಕ್ಕೆ ಚಾಲನೆ ನೀಡಿದರು. ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ ವೇದಿಕೆಯಲ್ಲಿದ್ದರು. ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಈರಣ್ಣ ಜಡಿ ಅಧ್ಯಕ್ಷತೆ ವಹಿಸಿದ್ದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಭಾರತಿ ಶೆಟ್ಟರ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು.

ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಡಿ.ಎಚ್‌. ಲಲಿತಾ, ಕಚೇರಿ ಅಧಿಧೀಕ್ಷಕ ಸಿ.ಎ. ಮುತ್ತಣ್ಣ ಸೇರಿದಂತೆ ಇತರರು ಭಾಗವಹಿಸಿದ್ದರು. ಬಣ್ಣಗಳಲ್ಲಿ ಮಕ್ಕಳ ವಿಕಾಸ ಚಿತ್ರಕಲಾ ಕಾರ್ಯಾಗಾರದಲ್ಲಿ ಧಾರವಾಡ, ಹಾವೇರಿ, ಗದಗ, ಬೆಳಗಾವಿ ಮತ್ತು ಉತ್ತರ ಕನ್ನಡ ಜಿಲ್ಲೆಯ 50ಕ್ಕೂ ಹೆಚ್ಚು ಜನ ಚಿತ್ರಕಲಾ ಶಿಕ್ಷಕರು ಪಾಲ್ಗೊಂಡಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next