ಹಾಸನ: ಆನಂದ ಅಸ್ನೋಟಿಕರ್, ಶಶಿಭೂಷಣ ಹೆಗಡೆ, ಜಿ.ಟಿ. ದೇವೇಗೌಡ ಸಹಿತ ಯಾವ ಮುಖಂಡರೂ ಪಕ್ಷ ಬಿಡುವುದಿಲ್ಲ ಎಂದು ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಸ್ಪಷ್ಟಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಸ್ನೋಟಿಕರ್ ಪಕ್ಷ ಬಿಡುವುದಾಗಿ ಹೇಳಿಲ್ಲ. ಶಶಿಭೂಷಣ ಹೆಗಡೆ ಅವರು ಮಧು ಬಂಗಾರಪ್ಪ ಜತೆಯಲ್ಲಿ ಕಾಂಗ್ರೆಸ್ ಸೇರುತ್ತಾರೆಂಬ ಸುದ್ದಿ ತಿರುಳಿಲ್ಲದ್ದು. ಜಿ.ಟಿ.ದೇವೇಗೌಡರು ಎರಡು ವರ್ಷ ಜೆಡಿಎಸ್ ಶಾಸಕರಾಗಿಯೇ ಇರುತ್ತಾರೆ. ಅನಂತರವೂ ಜೆಡಿಎಸ್‌ನಲ್ಲಿ ಇರುತ್ತಾರೆ ಎಂದರು.
ಇದನ್ನೂ ಓದಿ: ಕಡಿಮೆ ದರದಲ್ಲಿ 4G ಮೊಬೈಲ್,ಎರಡು ವರ್ಷ ಉಚಿತ ಕರೆ … ‘ಜಿಯೋ’ ಹೊಸ ಆಫರ್ ಘೋಷಣೆ
ಮಧು ಬಂಗಾರಪ್ಪ ಅವರು ವಿಧಾನಸಭಾ ಚುನಾವಣೆಯಲ್ಲಿ ಸೋತ ಬಳಿಕ ಪಕ್ಷದ ಕಚೇರಿಗೇ ಬಂದಿಲ್ಲ. ಪದೇಪದೆ ಅವರನ್ನು ಕರೆದರೂ ಬರದಿದ್ದರೆ ಏನು ಮಾಡಲು ಸಾಧ್ಯ? ಅವರನ್ನು ಎಂಎಲ್‌ಎ ಮಾಡಲು ಕುಮಾರಸ್ವಾಮಿ ಎಷ್ಟು ಕಷ್ಟಪಟ್ಟಿದ್ದರು ಎಂಬುದು ನನಗೆ ಗೊತ್ತಿದೆ ಎಂದರು.
ವಿಜಯಪುರ, ಯಾದಗಿರಿಯಲ್ಲಿ ಸಮಾವೇಶ ಕಲ್ಯಾಣ ಕರ್ನಾಟಕದಲ್ಲಿ ಜೆಡಿಎಸ್‌ಗೆ ಶಕ್ತಿ ಇದೆ. ಪಕ್ಷವನ್ನು ಆ ಭಾಗದಲ್ಲಿ ಸಂಘಟಿಸುವ ಕಾರ್ಯಕ್ರಮ ಹಾಕಿಕೊಳ್ಳುತ್ತಿದ್ದು, ವಿಜಯಪುರ ಮತ್ತು ಯಾದಗಿರಿಯಲ್ಲಿ ಕಾರ್ಯಕರ್ತರ ಬೃಹತ್ ಸಮಾವೇಶ ನಡೆಸಲು ನಿರ್ಧರಿಸಿದ್ದೇವೆ. ಜೆಡಿಎಸ್ ಪಕ್ಷವೇ ಅಲ್ಲ, ಮುಂದಿನ ಚುನಾವಣೆ ವೇಳೆಗೆ ಆ ಪಕ್ಷ ಇರುವುದೇ ಇಲ್ಲ ಎನ್ನುವವರಿಗೆ ಸಂಘಟನೆಯ ಮೂಲಕವೇ ಉತ್ತರ ನೀಡುತ್ತೇವೆ ಎಂದು ಮಾಜಿ ಸಿಎಂ ಸಿದ್ದರಾಯಮಯ್ಯ ಅವರ ಟೀಕೆಗೆ ಪರೋಕ್ಷವಾಗಿ ತಿರುಗೇಟು ನೀಡಿದರು.