ಬೆಂಗಳೂರು: ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಕಂಚಿನ ಪ್ರತಿಮೆ ಲೋಕಾರ್ಪಣೆ ಸಮಾರಂಭಕ್ಕೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರನ್ನು ಸ್ವತಃ ಮುಖ್ಯಮಂತ್ರಿಗಳೇ ಕರೆ ಮಾಡಿ ಮತ್ತು ಪತ್ರ ಬರೆದು ಆಹ್ವಾನಿಸಿದ್ದರು. ಇದರಲ್ಲಿ ತಪ್ಪು ಹುಡುಕುವಂಥದ್ದು ಏನೂ ಇಲ್ಲ ಎಂದು ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರದ ಉಪಾಧ್ಯಕ್ಷರೂ ಆದ ಸಚಿವ ಡಾ. ಸಿ.ಎನ್.ಅಶ್ವತ್ಥನಾರಾಯಣ ಹೇಳಿದ್ದಾರೆ.
ಶನಿವಾರ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿ, ನಿನ್ನೆ ಬೆಂಗಳೂರಿನಲ್ಲಿ ನಡೆದಿರುವುದು ಕೆಂಪೇಗೌಡರಿಗೆ ಸಂಬಂಧಿಸಿದ ಕಾರ್ಯಕ್ರಮ. ನಮಗೆ ಕೆಂಪೇಗೌಡರು ಮುಖ್ಯವಾಗಬೇಕಷ್ಟೆ. ಇಷ್ಟಕ್ಕೂ ಈ ಕಾರ್ಯಕ್ರಮಕ್ಕೆ ಆಹ್ವಾನ ಪತ್ರಿಕೆಯನ್ನು ಹಚ್ಚು ಹಾಕಿರಲಿಲ್ಲ. ಸ್ವತಃ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ದೇವೇಗೌಡರು ಸೇರಿದಂತೆ ಮಾಜಿ ಮುಖ್ಯಮಂತ್ರಿಗಳನ್ನೆಲ್ಲ ಆಮಂತ್ರಿಸಿದ್ದಾರೆ ಎಂದರು.
ಮಾಜಿ ಮುಖ್ಯಮಂತ್ರಿಗಳಾದ ಎಸ್.ಎಂ.ಕೃಷ್ಣ, ಸಿದ್ದರಾಮಯ್ಯ, ಎಚ್ .ಡಿ. ಕುಮಾರಸ್ವಾಮಿ ಎಲ್ಲರನ್ನೂ ಬೊಮ್ಮಾಯಿ ಅವರೇ ಖುದ್ದಾಗಿ ಸಮಾರಂಭಕ್ಕೆ ಕರೆದಿದ್ದಾರೆ. ಅದರಲ್ಲೂ ಮಾಜಿ ಪ್ರಧಾನಿಗಳಾದ ದೇವೇಗೌಡರನ್ನು ಕಂಡರೆ ನಮಗೆಲ್ಲ ಅಪಾರ ಗೌರವವಿದೆ ಎಂದರು.
ಪ್ರತಿಮೆಯ ಶಂಕುಸ್ಥಾಪನೆ ಮತ್ತು ಪವಿತ್ರ ಮೃತ್ತಿಕೆ ಸಂಗ್ರಹ ಅಭಿಯಾನಕ್ಕೆ ಸ್ವತಃ ನಾನೇ ದೇವೇಗೌಡರನ್ನು ಆಹ್ವಾನಿಸಿದ್ದೆ. ಈಗ ನಡೆದಿದ್ದು ಪ್ರಧಾನಿಗಳ ಕಾರ್ಯಕ್ರಮವಾದ್ದರಿಂದ ಮುಖ್ಯಮಂತ್ರಿ ಕರೆದಿದ್ದಾರೆ ಎಂದು ತಿಳಿಸಿದರು.