ಬೆಂಗಳೂರು:ಮಾಜಿ ಮುಖ್ಯಮಂತ್ರಿ ದಿವಂಗತ ಡಿ. ದೇವರಾಜ ಅರಸು ಅವರ 38 ನೇ ಪುಣ್ಯತಿಥಿ ಅಂಗವಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ವಿಧಾನಸೌಧ ಆವರಣದ ಅರಸು ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಎಂಟು ವರ್ಷ ರಾಜ್ಯದ ಮುಖ್ಯಮಂತ್ರಿಯಾಗಿ ದೂರದೃಷ್ಟಿವುಳ್ಳ ನಾಯಕರಾಗಿ ಮಾನವೀಯ ತುಡಿತವುಳ್ಳ ಆಡಳಿತಗಾರರಾಗಿ ದೇವರಾಜ ಅರಸು ಅವರು ಕೈಗೊಂಡ ಕಾರ್ಯಕ್ರಮಗಳು ಜನಪರವಾಗಿದ್ದವು ಎಂದು ಹೇಳಿದರು.
ಇಂದಿರಾಗಾಂಧಿಯವರು ಪ್ರಧಾನಿಯಾಗಿದ್ದಾಗ ರೂಪಿಸಿದ್ದ 20 ಅಂಶಗಳ ಕಾರ್ಯಕ್ರಮವನ್ನು ದೇವರಾಜ ಅರಸು ಅವರು ರಾಜ್ಯದಲ್ಲಿ ಸಮರ್ಪಕವಾಗಿ ಅನುಷ್ಟಾನಗೊಳಿಸಿದ್ದರು. ಮೈಸೂರು ಹೆಸರು ಕರ್ನಾಟಕ ಎಂದು ನಾಮಕರಣ ಮಾಡಿದ್ದು ಕನ್ನಡ ಆಡಳಿತ ಭಾಷೆ ಮಾಡಿದ್ದು ಅವರೇ. ಭೂ ಸುಧಾರಣೆ ಕಾಯ್ದೆ, ಋಣ ಪರಿಹಾರ ಕಾಯ್ದೆ, ಜೀತ ವಿಮುಕ್ತಿ ಕಾಯ್ದೆ, ಹಿಂದುಳಿದ ವರ್ಗಗಳಿಗೆ ಮೀಸಲಾತಿ ಸೇರಿ ಅರಸು ಅವರು ಕೈಗೊಂಡ ದಿಟ್ಟ ಹಾಗೂ ಚರಿತ್ರಾರ್ಹ ತೀರ್ಮಾನಗಳು ಬಡವರು ತಳ ಸಮುದಾಯದವು, ಕೃಷಿ ಕಾರ್ಮಿಕರು ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ನೆರವಾದವು. ಸಾಮಾಜಿಕ ನ್ಯಾಯದ ಹರಿಕಾರ ಖ್ಯಾತಿಗೆ ಪಾತ್ರರಾದ ಅರಸು ಅವರು ಧ್ವನಿ ಇಲ್ಲದ ಅಸಂಖ್ಯಾತ ಸಮುದಾಯಕ್ಕೆ ನ್ಯಾಯ ಕಲ್ಪಿಸಿದ್ದರು ಎಂದು ಸ್ಮರಿಸಿದರು.
ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ, ಸಚಿವರಾದ ಶ್ರೀರಾಮಲು, ಬೈರತಿ ಬಸವರಾಜ್ ಉಪಸ್ಥಿತರಿದ್ದರು.