Advertisement

ದೇವರಾಜ ಅರಸು ಸಾಮಾಜಿಕ ಕಳಕಳಿ ಹರಿಕಾರ

11:54 AM Aug 21, 2022 | Team Udayavani |

ಬಾಗಲಕೋಟೆ: ಜಿಲ್ಲೆಯಲ್ಲಿ ಹಿಂದುಳಿದ ಸಮುದಾದ ಅಭಿವೃದ್ಧಿಗಾಗಿ ಸೇವೆ ಸಲ್ಲಿಸಿದ ಸಂಸ್ಥೆ ಅಥವಾ ವ್ಯಕ್ತಿಗೆ ಇದೇ ಮೊದಲ ಬಾರಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ನೀಡುವ ಪ್ರಶಸ್ತಿಯನ್ನು ನಗರದ ಹಳಪೇಟೆಯ 95 ವರ್ಷದ ಹಿರಿಯ ಸಮಾಜ ಸೇವಕ ಮರಿಯಪ್ಪ ದುರಗಪ್ಪ ಕಟ್ಟಿಮನಿ ಅವರಿಗೆ ನೀಡಿ ಪ್ರದಾನ ಮಾಡಲಾಯಿತು.

Advertisement

ನವನಗರದ ಡಾ|ಅಂಬೇಡ್ಕರ ಭವನದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಹಮ್ಮಿಕೊಂಡಿದ್ದ ಡಿ. ದೇವರಾಜ ಅರಸು 107ನೇ ಜನ್ಮದಿನಾಚರಣೆಯಲ್ಲಿ ಸಂಸದ ಪಿ.ಸಿ. ಗದ್ದಿಗೌಡರ ಹಾಗೂ ಇತರ ಗಣ್ಯರು ಪ್ರದಾನ ಮಾಡಿದರು.

ಸಂಸದ ಗದ್ದಿಗೌಡರ ಅವರು ಈ ವೇಳೆ ಮಾತನಾಡಿ, ಕಟ್ಟಿಮನಿ ಅವರು ಹಿಂದುಳಿದ ವರ್ಗದ ಸಮುದಾಯದ ಧ್ವನಿಯಾಗಿ ಹಲವು ರೀತಿಯ ಕೆಲಸ ಮಾಡಿದ್ದಾರೆ. ಇಲಾಖೆಯಿಂದ ಇದೇ ಮೊದಲ ಬಾರಿ ಪ್ರತಿ ಜಿಲ್ಲೆಯಲ್ಲಿ ಹಿಂದುಳಿದ ವರ್ಗದವರಿಗಾಗಿ ದುಡಿದ ಸಾಮಾಜಿಕ ಸಂಸ್ಥೆಗಳು ಅಥವಾ ವ್ಯಕ್ತಿಗೆ ರಾಜ್ಯ ಸರ್ಕಾರ ಪ್ರಶಸ್ತಿ ಘೋಷಿಸಿದೆ. ಜಿಲ್ಲೆಯಲ್ಲಿ ಹಿಂದುಳಿದವರಿಗಾಗಿ ದುಡಿದ ಕಟ್ಟಿಮನಿ ಅವರಿಗೆ ಮೊದಲ ಬಾರಿಗೆ ಘೋಷಿಸಿದ ಪ್ರಶಸ್ತಿ ನೀಡುತ್ತಿರುವುದು ಶ್ಲಾಘನೀಯ. ಹಿಂದುಳಿದವರ ಧ್ವನಿಯಾಗಿ ಕಟ್ಟಿಮನಿ ಅವರು ದುಡಿದಿದ್ದಾರೆ. ಅವರಿಗೆ ಇಲಾಖೆಯಿಂದ 50 ಸಾವಿರ ನಗದು ಸಹಿತ ಪ್ರಶಸ್ತಿ ನೀಡಿ ಗೌರವಿಸುವ ಕೆಲಸವನ್ನು ಸರ್ಕಾರ ಮಾಡಿದೆ ಎಂದರು.

ಡಿ.ದೇವರಾಜ ಅರಸು ಪ್ರಶಸ್ತಿಯನ್ನು ಮೊದಲ ಬಾರಿಗೆ ಜಿಲ್ಲಾ ಮಟ್ಟದಲ್ಲಿ ನೀಡುತ್ತಿರುವುದು ಸಂತಸ ತಂದಿದೆ. ಶಿಕ್ಷಣ ಸಾಮಾಜಿಕ ಹಾಗೂ ಆರ್ಥಿಕ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆ ತಂದು ಸಾಮಾಜಿಕ ಹರಿಕಾರರಾದವರು ದೇವರಾಜ ಅರಸರು ಆಗಿದ್ದಾರೆ. ಮೈಸೂರು ರಾಜ್ಯವನ್ನು ಕರ್ನಾಟಕವೆಂದು ಪುನರ್‌ನಾಮಕರಣ ಮಾಡಿದ್ದು ಅವರ ಪ್ರಮುಖ ಸಾಧನೆಗಳಲ್ಲಿ ಒಂದಾಗಿದೆ. ಅವರ ಆಡಳಿತದಲ್ಲಿ ಹತ್ತಾರು, ಬದಲಾವಣೆಗಳಾಗಿವೆ. ಭೂ ಸುಧಾರಣೆ ಕಾಯಿದೆ ಜಾರಿಗೊಳಿಸಿದ್ದು ಮಹತ್ವದ ಕಾರ್ಯ ಎಂದು ಹೇಳಿದರು.

ಎಲ್ಲ ಶೋಷಿತ ವರ್ಗದವರನ್ನು ಮೇಲಕ್ಕೆ ತರಬೇಕೆಂಬುದು ಅವರ ಆಸೆಯಾಗಿತ್ತು. ಅರಸು ಅವರು ರಾಜಕೀಯ ಕ್ಷೇತ್ರದಲ್ಲಿ ಜನ ನಾಯಕರನ್ನು ಮನವೊಲಿಸಿ, ಬಡ ಜನರನ್ನು ಋಣ ಮುಕ್ತರನ್ನಾಗಿ ಮಾಡಿದರು. ಸಮಾಜದಲ್ಲಿ ಎಲ್ಲರಲ್ಲೂ ಸಮಾನತೆ ತರಲು ಶ್ರಮಿಸಿದರು. ಅವರು ಹಾಕಿಕೊಟ್ಟಿರುವ ಮಾರ್ಗದರ್ಶನದಲ್ಲಿ ನಡೆದು ಅವರ ಕರ್ನಾಟಕ ನಾಡನ್ನು ಬೆಳೆಸೋಣ ಎಂದರು.

Advertisement

ಜಿ.ಪಂ. ಸಿಇಒ ಟಿ.ಭೂಬಾಲನ ಮಾತನಾಡಿ, ದೇವರಾಜ ಅರಸರು ಮಹಾನ ನಾಯಕರಾಗಿದ್ದಾರೆ. ಅವರ ಸಾಮಾಜಿಕ ಕಳಕಳಿಯ ಕಾರ್ಯಗಳು ದೇಶಕ್ಕೆ ಮಾದರಿಯಾಗುವಂತವುಗಳಾಗಿವೆ. ನಾಯಕರಾದವರು ಸಮಾಜದಲ್ಲಿ ಹೇಗೆ ಇರಬೇಕೆಂಬುದನ್ನು ತೋರಿಸಿ ಕೊಟ್ಟಿದ್ದಾರೆ. ವಿದ್ಯಾರ್ಥಿಗಳು ಅವರ ಸಂದೇಶ ಪಾಲಿಸಿ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.

ಮುಗಳೊಳ್ಳಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಬಸನಗೌಡ ಬಿರಾದಾರ ಅವರು ದೇವರಾಜ ಅರಸು ಜೀವನ ಸಾಧನೆ ಕುರಿತು ವಿಶೇಷ ಉಪನ್ಯಾಸ ನೀಡಿದರು. ಕಲಾದಗಿಯ ಮೊರಾರ್ಜಿ ವಸತಿ ಶಾಲೆಯ ವಿದ್ಯಾರ್ಥಿಗಳಿಂದ ಪ್ರಾರ್ಥನೆ ಹಾಗೂ ನಾಡಗೀತೆ ಹಾಡಿದರು. ಜಿಲ್ಲಾ ಹಿಂದುಳಿತ ವರ್ಗಗಳ ಕಲ್ಯಾಣಾಧಿ ಕಾರಿ ರಮೇಶ ಚೌವ್ಹಾಣ ಸ್ವಾಗತಿಸಿದರು.

ಶಿಕ್ಷಕ ಸಂಜಯ ನಡುವಿನಮನಿ ಕಾರ್ಯಕ್ರಮ ನಿರೂಪಿಸಿದರು. ನಿಲಯದ ಮೇಲ್ವಿಚಾರಕ ಬಸಯ್ಯ ಗೋಳಮಠ ವಂದಿಸಿದರು. ಅಪರ ಜಿಲ್ಲಾಕಾರಿ ಮಹಾದೇವ ಮುರಗಿ, ಹಿಂದುಳಿದ ವರ್ಗಗಳ ಸಮುದಾಯದ ಮುಖಂಡರು ಮತ್ತು ಇಲಾಖೆಯ ಅಧಿಕಾರಿಗಳು ಮುಂತಾದವರು ಉಪಸ್ಥಿತರಿದ್ದರು.

ವೇದಿಕೆಯ ಕಾರ್ಯಕ್ರಮಕ್ಕೂ ಮುನ್ನ ಜಿಲ್ಲಾಧಿಕಾರಿ ಪಿ.ಸುನೀಲಕುಮಾರ ಅವರು ದೇವರಾಜ ಅರಸು ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಕಲಾ ತಂಡಗಳ ಮೇರವಣಿಗೆಗೆ ಚಾಲನೆ ನೀಡಿದರು.

ಡಿ.ದೇವರಾಜ ಅರಸು ಜನ್ಮದಿನದ ಅಂಗವಾಗಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಇದೇ ಮೊದಲ ಬಾರಿಗೆ ಮೂರು ದಿನ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಹಿಂದುಳಿದ ವರ್ಗಗಳ ಕರಕುಶಲ ವಸ್ತುಗಳ ತಯಾರಿಸುವ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ನಡೆಯಲಿದೆ. ಗುಳೇದಗುಡ್ಡದ ಖಣ, ಇಳಕಲ್ಲ ಸೀರೆ, ಕುಂಬಾರ ಮಡಿಕೆ, ಗೊಂಬೆಗಳು, ಬಡಗಿತನದ ವಸ್ತುಗಳು ಪ್ರದರ್ಶನಗೊಳ್ಳಲಿವೆ. ಜನರು ಇದರ ಪ್ರಯೋಜನ ಪಡೆಯಬಹುದು. ಅಲ್ಲದೇ ಇಲಾಖೆ ಅಧೀನದಲ್ಲಿ ಬರುವ 82 ವಸತಿ ನಿಲಯಗಳಲ್ಲಿ ಅರಣ್ಯ ಇಲಾಖೆಯ ಆಶ್ರಯದಲ್ಲಿ ಸಸಿ ನೆಡುವ ಕಾರ್ಯಕ್ರಮ ನಡೆಯುತ್ತಿದೆ. –ರಮೇಶ ಚವ್ಹಾಣ, ಜಿಲ್ಲಾ ಅಧಿಕಾರಿ, ಬಿಸಿಎಂ ಇಲಾಖೆ

Advertisement

Udayavani is now on Telegram. Click here to join our channel and stay updated with the latest news.

Next