Advertisement

Karnataka: ಸುವರ್ಣ ಸಂಭ್ರಮದಲ್ಲಿ “ದೇವರಾಜ ಅರಸು ವೈಭವ”- ಸಚಿವ ಶಿವರಾಜ್‌ ತಂಗಡಗಿ

11:49 PM Oct 12, 2023 | Team Udayavani |

ಬೆಂಗಳೂರು: ರಾಜ್ಯಕ್ಕೆ “ಕರ್ನಾಟಕ’ ಎಂದು ನಾಮಕರಣ ಮಾಡಿದ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರ ಪರಿಕಲ್ಪನೆಯಲ್ಲಿ ಮೂಡಿ ಬಂದ ಸಾಂಸ್ಕೃತಿಕ ವೈಭವದ ಮಾದರಿಯಲ್ಲೇ ವರ್ಷಪೂರ್ತಿ ನಡೆಯುವ “ಸುವರ್ಣ ಸಂಭ್ರಮ’ ಕಾರ್ಯಕ್ರಮವನ್ನು ರೂಪಿಸಲು ರಾಜ್ಯ ಸರಕಾರ ಭರದ ಸಿದ್ಧತೆ ನಡೆಸಿದೆ.

Advertisement

“ಉದಯವಾಣಿ’ಯ ಬೆಂಗಳೂರು ಕಚೇರಿಯಲ್ಲಿ ನಡೆದ ಸಂವಾದ ಕಾರ್ಯ ಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್‌ ತಂಗಡಗಿ ಈ ವಿಷಯ ತಿಳಿಸಿದ್ದಾರೆ. ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣ ಮಾಡಿ 50 ವರ್ಷ ತುಂಬುತ್ತಿರುವ ಸಂಭ್ರಮ ಆಚರಣೆಗಾಗಿ ಸರಕಾರ ರೂಪುರೇಷೆಗಳನ್ನು ಸಿದ್ಧಪಡಿಸಿದೆ. ನ.1ರಂದು ಹಂಪಿಯಿಂದ ಜ್ಯೋತಿ ಹೊರಡಲಿದೆ. ಭಿನ್ನ ಕಲ್ಪನೆಗಳಲ್ಲಿ ಕಾರ್ಯಕ್ರಮ ನಡೆಯಲಿದ್ದು, ಕಲೆ-ಸಂಸ್ಕೃತಿ ಮೇಳೈಕೆಯೊಂದಿಗೆ ದಿ| ದೇವರಾಜ ಅರಸು ಕಾಲದಲ್ಲಿ ನಡೆದಿದ್ದ ಸಾಂಸ್ಕೃತಿಕ ಸೊಬಗು ಮರುಸೃಷ್ಟಿಯಾಗಲಿದೆ ಎಂದರು.

“ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ’ ಎಂಬ ಘೋಷವಾಕ್ಯದ ಮೂಲಕ ವರ್ಷವಿಡೀ ಕಾರ್ಯಕ್ರಮ ನಡೆಯಲಿವೆ. ಗ್ರಾಮ ಪಂಚಾಯತ್‌ ಮಟ್ಟದಿಂದ ರಾಜ್ಯ ಮಟ್ಟದವರೆಗೂ ಕನ್ನಡ ಹಬ್ಬದ ಸಂಭ್ರಮ ವಿರಲಿದೆ. ನ.1ರಂದು ನಾಡಿನ ವಿವಿಧ ಕ್ಷೇತ್ರ ಗಳಲ್ಲಿ ಸಾಧನೆ ಮಾಡಿರುವ 68 ಮಂದಿಯ ಜತೆಗೆ ಸುವರ್ಣ ಸಂಭ್ರಮದ ಹಿನ್ನೆಲೆಯಲ್ಲಿ ಹೆಚ್ಚುವರಿಯಾಗಿ ಹತ್ತು ಮಂದಿಗೆ ರಾಜ್ಯೋತ್ಸವ ಪ್ರಶಸ್ತಿ ಪ್ರದಾನಿಸಲಾಗುವುದು ಎಂದರು.

ಅ. 17ರಂದು ಲೋಗೋ ಬಿಡುಗಡೆ
ಕಾರ್ಯಕ್ರಮ ರೂಪುರೇಷೆ ಸಂಬಂಧ ಇದೇ 15ರಂದು ಮೈಸೂರಿನಲ್ಲಿ ಸಿಎಂ ಜತೆಗೆ ಚರ್ಚಿಸಲಾಗುವುದು. ಅ. 17ರಂದು “ಕರ್ನಾಟಕ ಸುವರ್ಣ ಸಂಭ್ರಮ-50ರ ಲೋಗೋ ಬಿಡುಗಡೆ ಮಾಡಲಾಗುವುದು ಎಂದರು. ಸುವರ್ಣ ಸಂಭ್ರಮ ಅಧಿಕಾರಿಗಳ ಸಮಾರಂಭವಾಗಿರಬಾರದು. ಜನರ ಕಾರ್ಯಕ್ರಮ ಆಗಿರಬೇಕು ಎಂಬ ನಿಟ್ಟಿನಲ್ಲಿ ಹೆಜ್ಜೆಯಿರಿಸಲಾಗಿದೆ ಎಂದು ಹೇಳಿ ದ ರು.

ಹಲ್ಮಿಡಿ ಶಾಸನದ ಕನ್ನಡ ಪ್ರದರ್ಶನ
ರಾಜ್ಯದ ಪ್ರತಿಯೊಂದು ಜಿಲ್ಲಾ ಕೇಂದ್ರಗಳಲ್ಲಿ ಕನ್ನಡ ಭಾಷೆಯಲ್ಲಿ ಹಲಿ¾ಡಿ ಶಾಸನ ಪ್ರದರ್ಶನ ನಡೆಯಲಿದೆ. ಜಾತ್ರೆ ಮಾಡಿದರಷ್ಟೇ ಸಾಲದು ಅದು ನೆನಪಿನಲ್ಲಿರಬೇಕು. ಈ ಹಿನ್ನೆಲೆಯಲ್ಲಿ ಕನ್ನಡದ ಹಬ್ಬ ಜನರ ನೆನಪಿನಲ್ಲಿಡುವ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸಲಾಗಿದೆ ಎಂದರು.

Advertisement

ರಾಜ್ಯೋತ್ಸವದ ಬಳಿಕ ಅಧ್ಯಕ್ಷರ ನೇಮಕ
ಬಿಜೆಪಿ ಆಡಳಿತ ಅವಧಿಯ 20 ತಿಂಗಳಿಂದ ಈವರೆಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವ್ಯಾಪ್ತಿಯ ಅಕಾಡೆಮಿ, ಪ್ರಾಧಿಕಾರದ ಅಧ್ಯಕ್ಷರ ಆಯ್ಕೆ ಆಗಿಲ್ಲ. ರಾಜ್ಯೋತ್ಸವದ ಬಳಿಕ ವಿವಿಧ ಅಕಾಡೆಮಿ, ಪ್ರಾಧಿಕಾರಗಳ ಅಧ್ಯಕ್ಷರನ್ನು ನೇಮಿಸಲಾಗುವುದು ಎಂದರು.

ಬಿಜೆಪಿ ಆಡಳಿತ ಅವಧಿಯಲ್ಲಿ ನಡೆದ “ಬೆಂಗಳೂರು ಹಬ್ಬ’ದಲ್ಲಿ ಅವ್ಯವಹಾರ ನಡೆದಿದೆ ಎಂಬ ಮಾತುಗಳಿವೆ. ಈ ಹಿನ್ನೆಲೆಯಲ್ಲಿ ಸತ್ಯಾಸತ್ಯತೆ ತಿಳಿಯಲು ಅಧಿಕಾರಿಗಳನ್ನು ನೇಮಿಸಲಾಗಿದೆ. ಆದರೆ ಕಲಾವಿದರಿಗೆ ಹಣ ಕೊಡುವ ವಿಚಾರದಲ್ಲಿ ಅನ್ಯಾಯ ಮಾಡುವುದಿಲ್ಲ. ಕೆಲವು ಸಂಘ- ಸಂಸ್ಥೆಗಳು ಕಾರ್ಯಕ್ರಮ ಮಾಡದೆ ಅನುದಾನ ಪಡೆಯುತ್ತಿವೆ. ಅವುಗಳ ಬಗ್ಗೆ ಸರಕಾರ ನಿಗಾ ಇಟ್ಟಿದೆ ಎಂದು ಹೇಳಿದರು.

ವಿಧಾನಸೌಧದಲ್ಲಿ ಭುವನೇಶ್ವರಿ ಪ್ರತಿಮೆ
ನಾಡದೇವಿ ಭುವನೇಶ್ವರಿ ಪ್ರತಿಮೆ ಸ್ಥಾಪನೆ ಬಗ್ಗೆ ಚರ್ಚೆ ಆಗಿದೆ. ಮುಖ್ಯಮಂತ್ರಿಗಳು ಎಲ್ಲಿ ಹೇಳುತ್ತಾರೋ ಅಲ್ಲಿ ಪ್ರತಿಮೆ ನಿರ್ಮಾಣ ಕಾರ್ಯ ನಡೆಯಲಿದೆ ಎಂದು ಸಚಿವರು ತಿಳಿಸಿದರು.

ಜಾತಿಗೆ ಸೀಮಿತ ಗಣತಿ ಅಲ್ಲ
ಹಿಂದುಳಿದ ವರ್ಗಗಳ ಶಾಶ್ವತ ಆಯೋಗವು ನಡೆಸಿರುವುದು ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷೆಯೇ ಹೊರತು ಜಾತಿ ಜನಗಣತಿ ಅಲ್ಲ ಎಂದು ತಂಗಡಗಿ ಸ್ಪಷ್ಟಪಡಿಸಿದ್ದಾರೆ. ಜಾತಿಗೆ ಸೀಮಿತವಾಗಿ ಸಮೀಕ್ಷೆ ನಡೆಸಿಯೇ ಇಲ್ಲ. ರಾಜ್ಯದ ಜನರ ಸಾಮಾಜಿಕ ಸ್ಥಿತಿಗತಿ, ಶೈಕ್ಷಣಿಕ ಗುಣಮಟ್ಟ ಹಾಗೂ ಆರ್ಥಿಕ ಸ್ಥಾನಮಾನ ಸಹಿತ ಸುಮಾರು 40 ಅಂಶ ಗಳನ್ನೊಳಗೊಂಡ ಸಮೀಕ್ಷೆ ಇದಾಗಿದೆ, ಇದುವರೆಗೂ ವರದಿ ಸರಕಾರದ ಕೈ ಸೇರಿಲ್ಲ. ಈಗಲೇ ಆತಂಕ ಯಾಕೆ? ಯಾವ ಸಮುದಾಯವೂ ಈ ವರದಿ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ ಎಂದು ಪ್ರತಿಪಾದಿಸಿದರು.

ಸಂಸ್ಕೃತಿ ಇಲಾಖೆ ಖುಷಿ ಕೊಟ್ಟಿದೆ
ಈ ಹಿಂದೆ ಸಿಎಂ ಮತ್ತು ಡಿಸಿಎಂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜವಾಬ್ದಾರಿ ಕೊಡಲು ಮುಂದಾಗ ನಾನು ಬಹಳಷ್ಟು ಹೆದರಿದ್ದೆ. ಈ ಇಲಾಖೆ ಬೇಡ ಎಂದು ಮುಖ್ಯಮಂತ್ರಿ ಮತ್ತು ಡಿಸಿಎಂ ಅವರಲ್ಲಿ ಮನವಿ ಮಾಡಿದ್ದೆ. ದೊಡ್ಡ ದೊಡ್ಡ ಸಾಹಿತಿಗಳು ಇರುವ ಹಿನ್ನೆಲೆಯಲ್ಲಿ ದೊಡ್ಡವರಿಗೆ ಯಾರಿಗಾದರೂ ಕೊಡಿ ಎಂದಿದ್ದೆ. ಆದರೆ ಮುಖ್ಯಮಂತ್ರಿಗಳು ನೀನೇ ಈ ಖಾತೆ ತೆಗೆದುಕೊಳ್ಳಬೇಕು ಎಂದು ಪಟ್ಟು ಹಿಡಿದರು. ಆ ಹಿನ್ನೆಲೆಯಲ್ಲಿ ಈ ಖಾತೆಯನ್ನು ವಹಿಸಿಕೊಂಡೆ. ಈಗ ತುಂಬಾ ಖುಷಿಯಾಗುತ್ತಿದೆ ಎಂದು ಸಚಿವರು ಹೇಳಿದರು. ಈ ಖಾತೆಯಿಂದ ಹೊಸದನ್ನು ಕಲಿಯುತ್ತಿದ್ದೇನೆ. ಬರೀ ರಸ್ತೆ, ಎಪಿಎಂಸಿ, ಸಕ್ಕರೆ, ಸಣ್ಣ ಕೈಗಾರಿಕೆ ಇಲಾಖೆ ಜವಾಬ್ದಾರಿ ನಿರ್ವಹಿಸಿದ್ದ ನನಗೆ ಈಗ ಭಾವನಾತ್ಮಕ ಸಂಬಂಧ ಮೂಡಿದೆ ಎಂದರು.

ರಾಜ್ಯೋತ್ಸವ ಪ್ರಶಸ್ತಿಗೆ 10 ಸಾವಿರ ಅರ್ಜಿ
ಕನ್ನಡ ರಾಜ್ಯೋತ್ಸವ ಪ್ರಶಸ್ತಿಗಾಗಿ ಸುಮಾರು 10 ಸಾವಿರ ಅರ್ಜಿಗಳು ಬಂದಿದ್ದು, ಈ ಸಂಖ್ಯೆ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ. ಆದರೆ ಕೇವಲ 68 ಮಂದಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಬೇಕಾಗಿದ್ದು, ಅರ್ಜಿಗಳನ್ನು ಜರಡಿ ಹಿಡಿಯಬೇಕಾಗಿದೆ. ಪ್ರಶಸ್ತಿ ವಿಚಾರದಲ್ಲಿ ಪ್ರಾದೇಶಿಕತೆ ಜತೆಗೆ ಸಾಮಾಜಿಕ ನ್ಯಾಯಕ್ಕೆ ಆದ್ಯತೆ ನೀಡಲಾಗುವುದು. ಸಣ್ಣ ಸಣ್ಣ ಸಮುದಾಯದ ಸಾಧಕರನ್ನು ಹುಡುಕಿ ಪ್ರಶಸ್ತಿ ನೀಡುವ ಕೆಲಸ ನಡೆಯಲಿದೆ. ಸಿಎಂ ಸಲಹೆಯಂತೆ ಅರ್ಹರನ್ನು ಗುರುತಿಸಿ ಪ್ರಶಸ್ತಿಯ ಘನತೆಯನ್ನು ಹೆಚ್ಚಿಸುವ ಕಾರ್ಯ ನಡೆಯಲಿದೆ. ಪ್ರಶಸ್ತಿಗೆ ಅರ್ಹರಿದ್ದೂ ರಾಜ್ಯೋತ್ಸವ ಪ್ರಶಸ್ತಿಗೆ ಅರ್ಜಿ ಹಾಕದೇ ಇರುವ ಸಾಧಕರನ್ನು ಆಯ್ಕೆ ಮಾಡುವ ಕೆಲಸ ನಡೆಯಲಿದೆ ಎಂದು ಸಚಿವ ಶಿವರಾಜ ತಂಗಡಗಿ ಹೇಳಿದರು.

 

Advertisement

Udayavani is now on Telegram. Click here to join our channel and stay updated with the latest news.

Next