Advertisement

ಮಹಾಪುರುಷರ ವಿಚಾರಧಾರೆ ಜೀವನಕ್ಕೆ ದಾರಿದೀಪ: ಶಿವಾನಂದ ಸ್ವಾಮಿ

02:51 PM Mar 23, 2018 | Team Udayavani |

ಮಹಾನಗರ: ಮಹಾ ಪುರುಷರು, ಸಂತರು ಪ್ರತಿಪಾದಿಸಿದ ವಿಚಾರಧಾರೆಗಳು, ಸಿದ್ಧಾಂತಗಳು ಜೀವನಕ್ಕೆ ದಾರಿದೀಪವಾಗಿರುತ್ತವೆ. ಇವುಗಳ ಪಾಲನೆಯಿಂದ ಬದುಕಿನಲ್ಲಿ ಉನ್ನತಿಯನ್ನು ಕಂಡುಕೊಳ್ಳಲು ಸಾಧ್ಯವಾಗುತ್ತದೆ ಎಂದು ಹರಿಕಥಾ ವಿದ್ವಾಂಸರು ಹಾಗೂ ನಂದಿ ಪ್ರಶಸ್ತಿ ಪುರಸ್ಕೃತ ಎಸ್‌. ಎಸ್‌. ಶಿವಾನಂದ ಸ್ವಾಮಿ ಅವರು ಹೇಳಿದರು.

Advertisement

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕರ್ನಾಟಕ ರಾಜ್ಯ ನೇಕಾರ ಸಮುದಾಯಗಳ ಒಕ್ಕೂಟ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಸಂಯುಕ್ತ ಆಶ್ರಯದಲ್ಲಿ ಜಿ.ಪಂ. ನೇತ್ರಾವತಿ ಸಭಾಂಗಣದಲ್ಲಿ ಗುರುವಾರ ಜರಗಿದ ದೇವರ ದಾಸಿಮಯ್ಯ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು.

ನೇಕಾರ ವೃತ್ತಿ ಮಾಡುತ್ತಾ ಜೀವನ ಸಾಗಿಸುತ್ತಿದ್ದ ದೇವರ ದಾಸಿಮಯ್ಯ ರಾಮನಾಥ ಎನ್ನುವ ನಾಮಾಂಕಿತವನ್ನು ನೀಡಿ ಅನೇಕ ವಚನಗಳನ್ನು ರಚಿಸಿದ್ದು, ವಚನಕಾರರು ಇವರನ್ನು ಗುರು ಎಂದು ಪರಿಗಣಿಸಿದ್ದಾರೆ. ಜೀವನದಲ್ಲಿ ಭಕ್ತಿಮಾರ್ಗವೇ ಶ್ರೇಷ್ಠ ಎಂದು ಸಾರಿದವರು. ವಚನಗಳನ್ನು ಸರಳವಾಗಿ ರಚಿಸಿ ಜನಸಾಮಾನ್ಯರಿಗೆ ಅರ್ಥವಾಗುವ ರೀತಿಯಲ್ಲಿ ಜೀವನ ಮೌಲ್ಯಗಳನ್ನು ಬೋಧಿಸಿದ್ದಾರೆ ಎಂದು ವಿವರಿಸಿದರು.

ಜನರಿಗೆ ಪ್ರೇರಣೆ
ಇನ್ನೋರ್ವ ಮುಖ್ಯ ಅತಿಥಿ, ತಾ.ಪಂ. ಅಧ್ಯಕ್ಷ ಮಹಮದ್‌ ಮೋನು ಅವರು, ಮಹಾ ಪುರುಷರ ಜಯಂತಿಗಳ ಆಚರಣೆಯ ಮುಖ್ಯ ಉದ್ದೇಶ ಅವರು ಸಮಾಜಕ್ಕೆ ನೀಡಿರುವ ಕೊಡುಗೆಗಳು, ಸಂದೇಶಗಳನ್ನು ಸ್ಮರಿಸುತ್ತಾ ಆ ಹಾದಿಯಲ್ಲಿ ಮುನ್ನಡೆಯಲು ಜನರಿಗೆ ಪ್ರೇರಣೆ ನೀಡುವುದಾಗಿದೆ. ಅವರ ಸಂದೇಶಗಳಲ್ಲಿ ಸ್ವಲ್ಪಭಾಗವನ್ನಾದರೂ ಬದುಕಿನಲ್ಲಿ ಪಾಲನೆ ಮಾಡಿದಾಗ ಸಾರ್ಥಕ್ಯ ಪಡೆಯಲು ಸಾಧ್ಯ ಎಂದರು.

ಜಿ.ಪಂ. ಉಪಾಧ್ಯಕ್ಷೆ ಕಸ್ತೂರಿ ಪಂಜ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ದೇವಾಂಗ ಸಮಾಜ ಮಂಗಳೂರು ಇದರ ಅಧ್ಯಕ್ಷ ರಾಮ ಮಾಯಿಪ್ಪಾಡಿ, ವೆಂಕಟೇಶ್‌, ಚೀರುಂಭಾ ಕ್ರೆಡಿಟ್‌ ಸೊಸೈಟಿ ಅಧ್ಯಕ್ಷೆ ಶಾಂತಾ ಉಪಸ್ಥಿತರಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಚಂದ್ರಹಾಸ ರೈ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಸ್ವೀಪ್‌ ಸಮಿತಿಯ ಸುಧಾಕರ್‌ ಅವರು ಮತದಾನದ ಮಹತ್ವವನ್ನು ವಿವರಿಸಿದರು.

Advertisement

ಸಮಾಜಕ್ಕೆ ಮಾರ್ಗದರ್ಶನ 
ಮುಖ್ಯ ಅತಿಥಿಯಾಗಿದ್ದ ಜಿಲ್ಲಾ ಕಸಾಪ ಅಧ್ಯಕ್ಷ ಪ್ರದೀಪ್‌ ಕುಮಾರ್‌ ಕಲ್ಕೂರ ಅವರು ಮಾತನಾಡಿ, ದೇವರ ದಾಸಿಮಯ್ಯ ಜಯಂತಿ ಆಚರಣೆ, ಅವರ ಸತ್‌ಚಿಂತನೆಗಳು, ವಚನಗಳಲ್ಲಿ ನ ಬೋಧನೆಗಳನ್ನು ನಮ್ಮದಾಗಿಸಿಕೊಳ್ಳುವುದು ಪವಿತ್ರ ಕಾರ್ಯ. ದೇವರ ದಾಸಿಮಯ್ಯ ಅವರು ತನ್ನ ಕುಲವೃತ್ತಿಯನ್ನು ಮಾಡುತ್ತಾ ಜ್ಞಾನ ಪ್ರಸಾರ ಕಾರ್ಯದಲ್ಲೂ ತೊಡಗಿಸಿಕೊಂಡು ಸಮಾಜಕ್ಕೆ ಮಾರ್ಗದರ್ಶನ ನೀಡಿದ ಮಹಾ ಪುರುಷರು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next