ದೇವನಹಳ್ಳಿ: ತಾಲೂಕಿನ ಚನ್ನರಾಯಪಟ್ಟಣ ಹೋಬಳಿಯಲ್ಲಿ ರೈತರ ಕೃಷಿ ಭೂಮಿಯನ್ನು ಕೆ.ಐ.ಎ.ಡಿ.ಬಿ ಮೂಲಕ ಭೂ ಸ್ವಾಧೀನಪಡಿಸಿಕೊಳ್ಳುತ್ತಿರುವುದನ್ನು ವಿರೋಧಿಸಿ ಜೂ.17ರ ಶುಕ್ರವಾರ ನಡೆಯುವ ದೇವನಹಳ್ಳಿ ಸ್ವಯಂ ಘೋಷಿತ ಬಂದ್ ಗೆ ಆಮ್ ಆದ್ಮಿ ಪಕ್ಷದ ಸಂಪೂರ್ಣ ಬೆಂಬಲವಿದೆ ಎಂದು ಎಎಪಿ ಪಕ್ಷದ ಬೆಂ.ಗ್ರಾ ಜಿಲ್ಲಾ ಉಸ್ತುವಾರಿ ಬಿ.ಕೆ.ಶಿವಪ್ಪ ತಿಳಿಸಿದರು.
ಪಟ್ಟಣದಲ್ಲಿನ ಎಎಪಿ ಕಚೇರಿಯಲ್ಲಿ ನಡೆದ ಪಕ್ಷದ ಕೋರ್ ಕಮಿಟಿ ಸಭೆಯಲ್ಲಿ ಮಾತನಾಡಿ, ಈಗಾಗಲೇ ವಿಮಾನ ನಿಲ್ದಾಣ, ಹರಳೂರು ಕೈಗಾರಿಕಾ ಪ್ರದೇಶ ಸೇರಿದಂತೆ ವಿವಿಧ ಅಭಿವೃದ್ಧಿ ಯೋಜನೆಗೆ ಹೋಬಳಿಯ 7000 ಎಕರೆಗೂ ಹೆಚ್ಚು ಕೃಷಿ ಭೂಮಿಯನ್ನು ಕಳೆದುಕೊಂಡಿರುವ ರೈತರಿಗೆ ಗಾಯದ ಮೇಲೆ ಬರೆ ಎಳೆದಂತೆ, ಹರಳೂರು ಕೈಗಾರಿಕಾ ಪ್ರದೇಶದ ಎರಡನೇ ಹಂತದಲ್ಲಿ 1777 ಎಕರೆ ರೈತರ ಫಲವತ್ತಾದ ಕೃಷಿ ಭೂಮಿ ಭೂಸ್ವಾಧೀನ ಮಾಡಲು ಕೆಐಎಡಿಬಿ ಮುಂದಾಗಿರುವುದು ಶೋಚನೀಯ ಸಂಗತಿ.
ಕೃಷಿ ನಂಬಿ ಬದುಕುತ್ತಿರುವ 13 ಹಳ್ಳಿಗಳ ರೈತರು ಭೂಮಿ ಕಳೆದುಕೊಳ್ಳುವ ಆತಂಕದಲ್ಲಿ ತಮ್ಮ ನೆಲವನ್ನು ಸ್ವಾಧೀನದಿಂದ ಕೈಬಿಡುವಂತೆ ಡೀಸಿ, ಸಚಿವರು, ವಿವಿಧ ಮಂತ್ರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿ, ವಿವಿಧ ರೀತಿಯ ಪ್ರತಿಭಟನೆ ಮಾಡಿದ್ದರೂ ಭೂ ಸ್ವಾಧೀನ ಕೈ ಬಿಡುವ ತೀರ್ಮಾನಕ್ಕೆ ಬಾರದಿದ್ದಾಗ, ಏ.4ರಿಂದ ತಮ್ಮ ಕೃಷಿ ಭೂಮಿ ಉಳಿವಿಗಾಗಿ ಚನ್ನರಾಯಪಟ್ಟಣ ನಾಡ ಕಚೇರಿ ಮುಂದೆ ಧರಣಿ ಕುಳಿತಿದ್ದರೂ, ಸರ್ಕಾರ ಗಮನ ಹರಿಸದೆ ಅನ್ನದಾತರಿಗೆ ಅವಮಾನ ಮಾಡುತ್ತಿದೆ ಎಂದು ಆರೋಪಿಸಿದರು.
ಸರ್ಕಾರದ ಗಮನ ಸೆಳೆಯಲು ಬಂದ್:
ಬೆಂಗಳೂರು ವಾಸಿಗಳಿಗೆ ಆಹಾರ, ಸೊಪ್ಪು, ತರಕಾರಿ, ಹಾಲು, ಹಣ್ಣುಗಳನ್ನು ಬೆಳೆದು ಕೊಟ್ಟ ತಪ್ಪಿಗೆ ಇಂದು ಸರ್ಕಾರಗಳೇ ಮುಂದೆ ನಿಂತು, ರೈತರನ್ನು ಬೀದಿಯಲ್ಲಿ ಬೀಳುವಂತೆ ಮಾಡುತ್ತಿವೆ. ಇದು ಯಾವುದೇ ನಾಗರಿಕ ಸಮಾಜ ಸಹಿಸಬಹುದಾದ ಬೆಳವಣಿಗೆಯಲ್ಲ. ಭೂ ಸ್ವಾಧೀನ ವಿರೋಧಿಸಿ ಚನ್ನರಾಯಪಟ್ಟಣದಲ್ಲಿ ರೈತರು ನಡೆಸುತ್ತಿರುವ ಧರಣಿಗೆ ಜೂ.17ಕ್ಕೆ 75 ದಿನಗಳಾಗುತ್ತಿದ್ದರೂ ಶಾಸಕರು ಸೇರಿದಂತೆ ಸರ್ಕಾರ ಗಮನಹರಿಸದ ಹಿನ್ನೆಲೆಯಲ್ಲಿ ಸರ್ಕಾರದ ಗಮನ ಸೆಳೆಯಲು ಜೂ.17ರ ಬೆಳಗ್ಗೆ 6ರಿಂದ ಸಂಜೆ 6ರವರೆಗೂ ಎಲ್ಲ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ, ಎಲ್ಲಾ ರೀತಿಯ ವಾಹನ ಸಂಚಾರ ಸ್ಥಗಿತಗೊಳಿಸಿ, ಸ್ವಯಂ ಪ್ರೇರಿತವಾಗಿ, ಶಾಂತಿ ಸುವ್ಯವಸ್ಥೆ ಪಾಲಿಸುವ ಮೂಲಕ ದೇವನಹಳ್ಳಿ ಪಟ್ಟಣವನ್ನು ಸಂಪೂರ್ಣವಾಗಿ ಸ್ವಯಂ ಘೋಷಿತ ಬಂದ್ ನಡೆಸಿ, ರೈತರ ಭೂಮಿ ಉಳಿಸಲು ಅನ್ನದಾತರ ಹೋರಾಟವನ್ನು ಬೆಂಬಲಿಸಿ, ನಾವೆಲ್ಲರೂ ರೈತರ ಪರವಾಗಿ ನಿಲ್ಲಬೇಕಾಗಿದೆ ಎಂದರು.
Related Articles
ದೇವನಹಳ್ಳಿ ಟೌನ್ ಎಎಪಿ ಅಧ್ಯಕ್ಷ ಬಿ.ಕೆ. ಲೋಕೇಶ್‌ಕುಮಾರ್, ವಿಜಯಪುರ ಟೌನ್ ಅಧ್ಯಕ್ಷ ಮಂಜುನಾಥ್, ಮಾಧ್ಯಮ ಘಟಕದ ಅಧ್ಯಕ್ಷ ಗೋವಿಂದಸ್ವಾಮಿ, ಕುಂದಾಣ ಹೋಬಳಿ ಅಧ್ಯಕ್ಷ ಜಯಕುಮಾರ್, ದೇವನಹಳ್ಳಿ ಟೌನ್ ಮಹಿಳಾ ಘಟಕದ ಅಧ್ಯಕ್ಷೆ ರತ್ನಮ್ಮ, ಸಾಮಾಜಿಕ ಜಾಲತಾಣ ಘಟಕದ ಅಧ್ಯಕ್ಷೆ ರೂಪ, ಅಲ್ಪ ಸಂಖ್ಯಾತರ ಮಹಿಳಾ ಘಟಕದ ಅಧ್ಯಕ್ಷೆ ನಸ್ರತ್, ವಿಜಯಪುರ ಟೌನ್ ಅಧ್ಯಕ್ಷೆ ನಗೀನ, ದೇವನಹಳ್ಳಿ ಟೌನ್ ಅಧ್ಯಕ್ಷೆ ಸಲ್ಮಾ, ಕ್ರೀಡಾ ವಿಭಾಗದ ಅಧ್ಯಕ್ಷ ಇಮ್ರಾನ್ ಹಾಜರಿದ್ದರು.