Advertisement

Devanahalli; ಚಿಕ್ಕಬಳ್ಳಾಪುರದವರೆಗೆ ಹೆಚ್ಚುವರಿ 4 ರೈಲು ಸಂಚಾರ

06:03 PM Dec 07, 2023 | Team Udayavani |

ದೇವನಹಳ್ಳಿ: ಸಾರ್ವಜನಿಕರಿಗೆ ಅನುಕೂಲವಾಗುವ ದೃಷ್ಟಿಯಿಂದ ಬೆಂಗಳೂರಿನಿಂದ ದೇವನಹಳ್ಳಿ ತಾಲೂಕಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಕಡೆಯಿಂದ ಚಲಿಸುವ 4 ರೈಲುಗಳು ಡಿ.11 ರಿಂದ ಚಿಕ್ಕಬಳ್ಳಾಪುರದವರೆಗೆ ಹೆಚ್ಚುವರಿ ಸೇವೆ ಆರಂಭಿಸಲಿವೆ.

Advertisement

ಒತ್ತಡವಿತ್ತು: ವಿಮಾನ ನಿಲ್ದಾಣದ ಕಡೆಗೆ ಹೋಗಲು ರೈಲುಗಳು ಅಷ್ಟೊಂದು ಇಲ್ಲದಿದ್ದರಿಂದ ವ್ಯಾಪಾರಸ್ಥರು,
ಕಾಲೇಜು ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಚಿಕ್ಕಬಳ್ಳಾಪುರದವರೆಗೆ ವಿಸ್ತರಿಸಲು ಪ್ರಯಾಣಿಕರಿಂದ ಸಾಕಷ್ಟು ಒತ್ತಡ ಕೇಳಿ ಬಂದಿತ್ತು. ಅದರಂತೆ ರೈಲ್ವೆ ಇಲಾಖೆ ಚಿಕ್ಕಬಳ್ಳಾಪುರದವರೆಗೆ ಸಂಚಾರ ವಿಸ್ತರಿಸಿದೆ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸೇರಿ ಪ್ರಮುಖ ಸ್ಥಳಗಳಿಗೆ ಹೋಗಲು ಬಳ್ಳಾರಿ ರಸ್ತೆಯನ್ನು ಅವಲಂಬಿಸಬೇಕಿದೆ. ಈ ರಸ್ತೆಯಲ್ಲಿ ವಾಹನ ದಟ್ಟಣೆ ಹೆಚ್ಚಾಗುತ್ತದೆ. ಆದರೆ, ಡಿ.11 ರಿಂದ 6 ರೈಲು ಪ್ರತಿನಿತ್ಯ ಪ್ರತಿ ಗಂಟೆಗೊಮ್ಮೆ ರಾಜಧಾನಿಗೆ ಸಂಚರಿಸುವ ಹಿನ್ನೆಲೆ ಬೆಂಗಳೂರಿಗೆ ಹೋಗುವ ಮತ್ತು
ಬರುವ ಪ್ರಯಾಣಿಕರಿಗೆ ಹೆಚ್ಚು ಅನುಕೂಲವಾಗಲಿದೆ.

ಮನವಿ ಮಾಡಿದ್ದರು: ದೇವನಹಳ್ಳಿಯಿಂದ ಬೆಂಗಳೂರಿಗೆ ವಿವಿಧ ಕೆಲಸಗಳಿಗೆ ದಿನನಿತ್ಯ ಸಂಚರಿಸುವ ಪ್ರಯಾಣಿಕರಿಗಾಗಿ ಈಗಾಗಲೇ 2 ರೈಲು ತಲಾ ಒಂದು ಬಾರಿ ಚಿಕ್ಕಬಳ್ಳಾಪುರಕ್ಕೆ ಬಂದು ಕೋಲಾರದವರೆಗೆ ಹೋಗಿ ವಾಪಸ್‌ ಬೆಂಗಳೂರಿಗೆ ಸಂಚರಿಸುತ್ತವೆ. ಹೆಚ್ಚು ರೈಲುಗಳ ಸಂಚಾರಕ್ಕೆ ಚಿಕ್ಕಬಳ್ಳಾಪುರದ ಮಂಜುನಾಥ ಮನವಿ ಮಾಡಿದ್ದರು. ರೈಲು ಸಂಖ್ಯೆ 06531ನ್ನು ಬೆಂಗಳೂರು ಕಂಟೋನ್ಮೆಂಟ್‌ನಿಂದ ಚಿಕ್ಕಬಳ್ಳಾಪುರಕ್ಕೆ ಅದರ ಜೋಡಿ ರೈಲು ಸಂಖ್ಯೆ 06532 ಸಹ ಚಿಕ್ಕಬಳ್ಳಾಪುರದಲ್ಲಿ ಪ್ರಾರಂಭವಾಗಿ ಕಂಟೋನ್ಮೆಂಟ್‌ ನಲ್ಲಿ ಪ್ರಯಾಣ ಮುಗಿಸಲಿದೆ ಎಂದು ನೈರುತ್ಯ ರೈಲ್ವೆ ಪ್ರಕಟಣೆ ತಿಳಿಸಿದೆ.

ಆರಂಭ: ಸದ್ಯಕ್ಕೆ ರೈಲು ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲಿ ಸಂಚಾರ ಪ್ರಾರಂಭಿಸಿ ದೇವನಹಳ್ಳಿಯಲ್ಲಿ ಕೊನೆಗೊಳ್ಳುತ್ತದೆ. ರೈಲು ಸಂಖ್ಯೆ 06593 ಯಶವಂತಪುರದಲ್ಲಿ ಪ್ರಾರಂಭಗೊಂಡು ಚಿಕ್ಕಬಳ್ಳಾಪುರದಲ್ಲಿ ಕೊನೆಗೊಳ್ಳುತ್ತದೆ. ಅದರ ಜೋಡಿ ರೈಲು 06594 ಚಿಕ್ಕಬಳ್ಳಾಪುರದಲ್ಲಿ ಸಂಚಾರ ಪ್ರಾರಂಭಿಸುತ್ತದೆ.ಪ್ರಸ್ತುತ ಇರಲು ದೇವನಹಳ್ಳಿಯಲ್ಲಿ ಕೊನೆ ಆಗುತ್ತದೆ. ರೈಲು ಸಂಖ್ಯೆ 06538 ಬೆಂಗಳೂರು ಕಂಟೈನ್ಮೆಂಟ್‌ನಲ್ಲಿ ಸಂಚಾರ ಪ್ರಾರಂಭಿಸಿ ಚಿಕ್ಕಬಳ್ಳಾಪುರದಲ್ಲಿ ಕೊನೆಗೊಳ್ಳುತ್ತದೆ. ರೈಲು ಸಂಖ್ಯೆ 06535 ಚಿಕ್ಕಬಳ್ಳಾಪುರದಲ್ಲಿ ಸಂಚಾರ ಪ್ರಾರಂಭಿಸಿ ಕಂಟೋನ್ಮೆಂಟ್‌ನಲ್ಲಿ ಕೊನೆಗೊಳ್ಳುತ್ತದೆ.

ಮುಂದಿನ ದಿನಗಳಲ್ಲಿ ಕೋಲಾರದವರೆಗೂ ರೈಲು
ಚಿಕ್ಕಬಳ್ಳಾಪುರಕ್ಕೆ ಈವರೆಗೂ ಇದ್ದ ಎರಡು ರೈಲುಗಳ ಜತೆ ಹೆಚ್ಚುವರಿ ಆಗಿ 4ರೈಲುಗಳು ಬೆಂಗಳೂರಿನಿಂದ ಸಂಪರ್ಕ ಕಲ್ಪಿಸಲಿವೆ. ಪ್ರಸ್ತುತ ಹೆಚ್ಚುವರಿ ಮಂಜೂರು ಮಾಡಿರುವ ನಾಲ್ಕು ರೈಲು ಚಿಕ್ಕಬಳ್ಳಾಪುರದಿಂದಲೇ ವಾಪಸ್‌ ಆಗಲಿದ್ದು ಬಾಕಿ ಇರುವ ವಿದ್ಯುತ್‌ ಸಂಪರ್ಕ ಕಲ್ಪಿಸಿದ ನಂತರ ಎರಡು ರೈಲು ಮುಂದಿನ ದಿನಗಳಲ್ಲಿ ಕೋಲಾರದವರೆಗೂ ವಿಸ್ತರಣೆ ಆಗುವ ಸಾಧ್ಯತೆ ಇದೆ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬಂದ ನಂತರ ದೇವನಹಳ್ಳಿ ಸಾಕಷ್ಟು ಅಭಿವೃದ್ಧಿ ಆಗುತ್ತಿದ್ದು ಬೆಂಗಳೂರಿಗೆ ಸಮೀಪವೇ ಇದೆ. ಹೀಗಾಗಿ ರೈತರು, ವಿದ್ಯಾರ್ಥಿಗಳು, ನಾಗರಿಕರಿಗೆ ಹೆಚ್ಚು ಅನುಕೂಲ ಆಗಲಿದೆ.

Advertisement

ವಾಹನ ದಟ್ಟಣೆಯಿಂದ ಸಂಚಾರಕ್ಕೆ ಸಮಸ್ಯೆ ಹೆಚ್ಚಾಗುತ್ತಿತ್ತು. ಬೆಳಗ್ಗೆ 8.30ಕ್ಕೆ ರೈಲು ಬರುತ್ತಿತ್ತು. ಸಂಜೆ 7.30ಕ್ಕೆ ಬೆಂಗಳೂರಿನಿಂದ ದೇವನಹಳ್ಳಿಗೆ ಬರುತ್ತದೆ. ರೈಲು ವಿಸ್ತರಣೆಯಿಂದ ಬೆಂಗಳೂರಿಗೆ ಹೋಗುವ ಉದ್ಯೋಗಿಗಳಿಗೆ, ಕೂಲಿ
ಕಾರ್ಮಿಕರಿಗೆ, ರೈತರಿಗೆ, ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ.
●ಗಿರೀಶ್‌, ರೈಲ್ವೆ ಪ್ರಯಾಣಿಕ

ಕೇಂದ್ರ ಸರ್ಕಾರದ ರೈಲ್ವೆ ಇಲಾಖೆಯಿಂದ ಸಬ್‌ ಅರ್ಬನ್‌ ರೈಲುಗಳ ಅಭಿವೃದ್ಧಿಗೆ ಮೋದಿ ಸರ್ಕಾರ ಹೆಚ್ಚಿನ ಒತ್ತು ನೀಡಿದೆ.
ಹೆಚ್ಚುವರಿ ರೈಲು ಸಂಚಾರದಿಂದ ಸುತ್ತಮುತ್ತಲಿನ ಪ್ರದೇಶ ಅಭಿವೃದ್ಧಿಗೊಳ್ಳಲಿವೆ. ರಾಜ್ಯ ಸರ್ಕಾರ ರೈಲ್ವೆ ನಿಲ್ದಾಣಗಳಿಗೆ ಬಸ್‌ಗಳನ್ನು ನಿಯೋಜಿಸಿದರೆ ಹೆಚ್ಚು ಅನುಕೂಲ ಆಗುತ್ತದೆ.
●ಎ.ವಿ.ನಾರಾಯಣಸ್ವಾಮಿ, ಜಿಲ್ಲಾ ಬಿಜೆಪಿ ಅಧ್ಯಕ್ಷ

*ಮಹೇಶ್‌ ಎಸ್.

Advertisement

Udayavani is now on Telegram. Click here to join our channel and stay updated with the latest news.

Next