Advertisement

Siddaramaiah Journey; ಸಿದ್ದರಾಮಯ್ಯಗೆ ಅಮೃತ ಘಳಿಗೆ ತಂದ ದೇವನಗರಿ

10:39 AM May 19, 2023 | Team Udayavani |

ದಾವಣಗೆರೆ: ಅಹಿಂದ ವರ್ಗದ ಪರಮೋಚ್ಚ ನಾಯಕ ಸಿದ್ದರಾಮಯ್ಯ ಅವರು ಎರಡನೇ ಬಾರಿಗೆ ಮುಖ್ಯಮಂತ್ರಿ ಆಗುವಲ್ಲಿ ರಾಜಕೀಯ ಪಕ್ಷಗಳ ಅದೃಷ್ಟದ ತಾಣ ಖ್ಯಾತಿಯ ದಾವಣಗೆರೆ ಪ್ರಮುಖ ಪಾತ್ರ ವಹಿಸಿದೆ.

Advertisement

ಸಿದ್ದರಾಮಯ್ಯ ಮೊದಲ ಬಾರಿ 2013ರಲ್ಲಿ ಮುಖ್ಯಮಂತ್ರಿಯಾಗುವ ಮುನ್ನ 2012ರಲ್ಲಿ ದಾವಣಗೆರೆಯಲ್ಲೇ ಹಾಲುಮತ ಮಹೋತ್ಸವ ನಡೆಸಿ ಗಮನ ಸೆಳೆದಿದ್ದರು. ಬರೋಬ್ಬರಿ 10 ವರ್ಷದ ಬಳಿಕ 2022 ರಲ್ಲಿ ದಾವಣಗೆರೆಯಲ್ಲೇ ಸಿದ್ದರಾಮಯ್ಯ 75ನೇ ಜನ್ಮದಿನದ ಅಂಗ ವಾಗಿ ನಡೆದ ಅಮೃತ ಮಹೋತ್ಸ ವದ ಅತ್ಯದ್ಭುತ ಯಶಸ್ಸಿನ ಮೂಲಕ ಕಾಂಗ್ರೆಸ್‌ ಮರುಜನ್ಮ ಪಡೆಯಲು ಸಹಕಾರಿಯಾಗಿದ್ದರು. ದಾವಣಗೆರೆಯಲ್ಲಿನ ಕಾರ್ಯಕ್ರಮಗಳು ಸಿದ್ದರಾಮಯ್ಯ ಅವರ ರಾಜಕೀಯ ಜೀವನದಲ್ಲಿ ಮಹತ್ತರ ಪಾತ್ರ ವಹಿಸಿವೆ ಎನ್ನಬಹುದು.

ಹಾಲುಮತ ಮಹೋತ್ಸವ ಮಾಡಿದ್ದರು
ಜನತಾ ಪರಿವಾರದಿಂದ ಕಾಂಗ್ರೆಸ್‌ ಸೇರಿದ್ದ ಸಿದ್ದರಾಮಯ್ಯ ಕೆಲವೇ ದಿನಗಳಲ್ಲಿ ಪ್ರಬಲ ನಾಯಕರಾಗಿ ಹೊರ ಹೊಮ್ಮಿದ್ದರು. ಮುಖ್ಯಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ಅವರು 2012ರಲ್ಲಿ ಮಧ್ಯ ಕರ್ನಾಟಕದ ಕೇಂದ್ರ ಬಿಂದು ದಾವಣಗೆರೆಯಲ್ಲೇ ಹಾಲುಮತ ಮಹೋತ್ಸವ ನಡೆಸಿದ್ದರು. ಲಕ್ಷಾಂತರ ಜನರನ್ನು ಸೇರಿಸಿದ್ದಲ್ಲದೆ ಇಡೀ ಸಮಾವೇಶವನ್ನು ಯಶಸ್ವಿಯಾಗಿಸುವ ಮೂಲಕ ತಾವು ಮುಖ್ಯಮಂತ್ರಿ ಸ್ಥಾನಕ್ಕೆ ಪ್ರಬಲ ಆಕಾಂಕ್ಷಿ ಎಂಬ ಸಂದೇಶವನ್ನು ಹೈಕಮಾಂಡ್‌ಗೆ ರವಾನಿಸಿದ್ದರು. 2013ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಅತ್ಯ ಧಿಕ ಸ್ಥಾನ ಗಳಿಸಿದ ಕಾಂಗ್ರೆಸ್‌, ಸಿದ್ದರಾಮಯ್ಯ ಅವರನ್ನೇ ಮುಖ್ಯಮಂತ್ರಿಯನ್ನಾಗಿಸಿತ್ತು.

ಅಮೃತ ಮಹೋತ್ಸವ ಸಂಭ್ರಮ
ಈಗ ಮುಖ್ಯಮಂತ್ರಿ ಆಗಲು ಸಿದ್ದರಾಮಯ್ಯ ಅವರಿಗೆ ಬೂಸ್ಟ್‌ ನೀಡಿದ್ದು ಮತ್ತದೇ ದಾವಣಗೆರೆ. 2022ರ ಆ.3ರಂದು ದಾವಣಗೆರೆಯಲ್ಲೇ ನಡೆದ ಸಿದ್ದರಾಮಯ್ಯ 75ನೇ ಜನ್ಮದಿನದ ಅಂಗವಾಗಿ ನಡೆದ ಅಮೃತ ಮಹೋತ್ಸವ, ಬಿಜೆಪಿ ಅಬ್ಬರದ ಮಧ್ಯದಲ್ಲಿ ಮಂಕಾಗಿದ್ದ ರಾಜ್ಯ ಕಾಂಗ್ರೆಸ್‌ಗೆ ನವಚೈತನ್ಯ ನೀಡಿದ್ದಲ್ಲದೆ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನಕ್ಕೂ ಏರಿಸಿದೆ.

ದಾವಣಗೆರೆ ಹೊರ ವಲಯದ ಶಾಮನೂರು ಪ್ಯಾಲೇಸ್‌ ಆವರಣದಲ್ಲಿ ನಡೆದ ಸಿದ್ದರಾಮಯ್ಯ ಅವರ ಜನ್ಮದಿನದ ಕಾರ್ಯಕ್ರಮಕ್ಕೆ ಹರಿದು ಬಂದ ಜನಸಾಗರ ಕಂಡು ರಾಜ್ಯದಲ್ಲಿ ಕಾಂಗ್ರೆಸ್‌ ಅಲೆ ಎದ್ದಿದೆ ಎಂಬುದು ಪಕ್ಷದ ನಾಯಕರಲ್ಲಿ ಹೊಸ ನಿರೀಕ್ಷೆ ಹುಟ್ಟು ಹಾಕಿತ್ತು. ಸಿದ್ದರಾಮಯ್ಯ ಅವರ ಜನ್ಮದಿನ ಸಮಾರಂಭದ ಅಭೂತಪೂರ್ವ ಯಶಸ್ಸು ಕಾಂಗ್ರೆಸ್‌ ಇಡೀ ರಾಜ್ಯದಲ್ಲಿ ಫಿನಿಕ್ಸ್‌ನಂತೆ ಮೈಕೊಡವಿ ಎದ್ದು ನಿಲ್ಲಲು ಪ್ರೇರಣೆಯಾಯಿತು.

Advertisement

ದಂಗಾಗಿದ್ದ ರಾಹುಲ್‌
ಜನ್ಮದಿನೋತ್ಸವ ಕಾರ್ಯಕ್ರಮಕ್ಕೆ ಆಗಮಿಸಿದ್ದ ಜನಸ್ತೋಮ ಕಂಡು ಸ್ವತಃ ರಾಹುಲ್‌ ಗಾಂಧಿಯವರೇ ಆಶ್ಚರ್ಯಗೊಂಡಿದ್ದರು. ಸಿದ್ದರಾಮಯ್ಯ ಅವರ ಜನ್ಮದಿನೋತ್ಸವ ಕಾರ್ಯಕ್ರಮದ ಯಶಸ್ಸು, ಕಾಂಗ್ರೆಸ್‌ನಲ್ಲಿ ಸಂಚಲನ ಮೂಡಿಸಿತು. ದಾವಣಗೆರೆ ರಾಜಕೀಯ ಪಕ್ಷಗಳ ಅದೃಷ್ಟದ ತಾಣ ಎಂಬ ಖ್ಯಾತಿಗೆ ತಕ್ಕಂತೆ ಸಿದ್ದರಾಮಯ್ಯ ಅವರ ಜನ್ಮದಿನದ ಕಾರ್ಯಕ್ರಮ ಕಾಂಗ್ರೆಸ್‌ನ ಹೊಸ ಶಕೆಯನ್ನೇ ಪ್ರಾರಂಭಿಸಲು ವೇದಿಕೆಯಾಯಿತು. ಲಕ್ಷಾಂತರ ಜನರ ಸುನಾಮಿ ನೋಡಿ ಉತ್ತೇಜಿತರಾದ ರಾಹುಲ್‌ ಗಾಂಧಿ ಅವರು  ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್‌ ಅವರನ್ನು ಪರಸ್ಪರ ಆಲಿಂಗಿಸಿಕೊಳ್ಳಲು ಸೂಚಿಸಿದ್ದರು. ಈ ಮೂಲಕ ಇಬ್ಬರೂ ಒಗ್ಗಟ್ಟಾಗಿರಿ ಎಂಬ ಪ್ರಬಲ ಸಂದೇಶ ರವಾನಿಸಿದ್ದರು. ಇದು ವಿಧಾನಸಭಾ ಚುನಾವಣೆಯಲ್ಲಿ ತಕ್ಕ ಪ್ರತಿಫಲ ನೀಡಿದೆ.

ಅದೃಷ್ಟದ ಸೆಲೆಯೋ ಒಟ್ಟಾರೆ ಸಿದ್ದರಾಮಯ್ಯ ಎರಡು ಬಾರಿ ಮುಖ್ಯಮಂತ್ರಿ ಆಗಿರುವುದರ ಹಿಂದೆ ದಾವಣಗೆರೆಯಲ್ಲಿನ ಕಾರ್ಯಕ್ರಮಗಳ ಅಭೂತಪೂರ್ವ ಯಶಸ್ಸು ಸಹ ಕಾರಣ ಎಂಬುದನ್ನು ಅಲ್ಲಗೆಳೆಯುವಂತಿಲ್ಲ.

ಸಿದ್ದು ಜನಪ್ರಿಯತೆಗೆ ಸೋನಿಯಾ, ರಾಹುಲ್‌ ಬೆರಗು
2004ರ ಲೋಕಸಭಾ ಚುನಾವಣ ಪ್ರಚಾರಕ್ಕೆ ದಾವಣಗೆರೆಯಲ್ಲಿ ಚಾಲನೆ ನೀಡಿದ್ದ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯನವರು ಅಂದಿನ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಗಮನ ಸೆಳೆದಿದ್ದರು. ಸಿದ್ದರಾಮಯ್ಯ ಅವರ ಹೆಸರು ಹೇಳುತ್ತಿದ್ದಂತೆಯೇ ಜನರ ಹರ್ಷೋದ್ಗಾರ, ಅವರ ಭಾಷಣಕ್ಕೆ ವ್ಯಕ್ತವಾದ ಪ್ರತಿಕ್ರಿಯೆ ನೋಡಿ ಸೋನಿಯಾ ಗಾಂಧಿ  ಫುಲ್‌ ಖುಷ್‌ ಆಗಿದ್ದರು. ಆಗ ಡಿ.ಕೆ. ಶಿವಕುಮಾರ್‌ ಕಾರ್ಯಾಧ್ಯಕ್ಷರಾಗಿ ಹಾಗೂ ಆರ್‌.ವಿ. ದೇಶಪಾಂಡೆ ಅಧ್ಯಕ್ಷರಾಗಿದ್ದರು. 2012ರ ಜೂ. 3ರಂದು ದಾವಣಗೆರೆಯಲ್ಲಿ ರಾಹುಲ್‌ ಗಾಂಧಿ  ಗ್ರಾಮ ಪಂಚಾಯತ್‌ ಸದಸ್ಯರೊಂದಿಗೆ ನಡೆಸಿದ ಸಂವಾದ ಕಾರ್ಯಕ್ರಮದಲ್ಲೂ ಸಿದ್ದರಾಮಯ್ಯ ಭರ್ಜರಿ ಭಾಷಣದ ಮೂಲಕ ಗಮನ ಸೆಳೆದಿದ್ದರು.

ಅಹಿಂದಕ್ಕೂ ಪ್ರೇರಣೆ
ಜಾತ್ಯತೀತ ಜನತಾದಳದ ಮುಖಂಡ, ಉಪಮುಖ್ಯಮಂತ್ರಿ ಆಗಿದ್ದರೂ ಸಿದ್ದರಾಮಯ್ಯ ಪ್ರಾರಂಭಿಸಿದ್ದ ಅಹಿಂದ ಚಳವಳಿಗೂ ದಾವಣಗೆರೆ ಅಭೂತಪೂರ್ವ ವೇದಿಕೆ ಒದಗಿಸಿತ್ತು. ಹುಬ್ಬಳ್ಳಿಯಲ್ಲಿ ಚಾಲನೆ ನೀಡಲಾಗಿದ್ದ ಅಹಿಂದ ಸಮಾವೇಶದ ಎರಡನೇ ಕಾರ್ಯಕ್ರಮ ದಾವಣಗೆರೆಯಲ್ಲಿ ನಡೆದಾಗ ನಿರೀಕ್ಷೆಗೂ ಮೀರಿ ಯಶಸ್ವಿಯಾಗಿತ್ತು. ದಾವಣಗೆರೆಯಲ್ಲಿ ಸರಣಿ ಸಭೆಗಳ ಮೂಲಕ ಯಶಸ್ವಿಯಾಗಿ ಅಹಿಂದ ಸಮಾವೇಶ ನಡೆಸುವ ಮೂಲಕ ಸಿದ್ದರಾಮಯ್ಯ ಅಹಿಂದ ವರ್ಗಗಳ ಪ್ರಮುಖ ನಾಯಕರಾಗಿ ರೂಪುಗೊಳ್ಳಲು ಹೋರಾಟದ ನೆಲ ದಾವಣಗೆರೆ ಪ್ರಮುಖ ಪಾತ್ರ ವಹಿಸಿದ್ದು ಇತಿಹಾಸ.

Advertisement

Udayavani is now on Telegram. Click here to join our channel and stay updated with the latest news.

Next