ದೇವದುರ್ಗ: ಗಂಟಲುಮಾರಿ, ನಾಯಿಕೆಮ್ಮು, ಧನುರ್ವಾಯ ರೋಗ ತಡೆಗಟ್ಟಲು ಆರೋಗ್ಯ ಇಲಾಖೆ ಡಿಪಿಟಿ, ಟಿಡಿ, ಚುಚ್ಚುಮದ್ದು ಲಸಿಕೆ ಕಾರ್ಯಕ್ರಮ ಚುರುಕಾಗಿ ಸಾಗಿದೆ. ಸರಕಾರಿ-ಖಾಸಗಿ ಶಾಲೆಯಲ್ಲಿರುವ 1ನೇ ತರಗತಿಯಿಂದ 10ನೇ ತರಗತಿ ಮಕ್ಕಳಿಗೆ ಲಸಿಕೆ ಹಾಕಲಾಗುತ್ತಿದೆ. ಈ ಕುರಿತು 16 ಪ್ರಕರಣಗಳು ಪತ್ತೆಯಾಗಿದ್ದು, ರೋಗ ತಡೆಗಟ್ಟುವ ಬಗ್ಗೆ ಆರೋಗ್ಯ ಇಲಾಖೆ ದಾಪುಗಾಲು ಇಟ್ಟಿದೆ.
ಮಕ್ಕಳ ಗುರಿ: ತಾಲೂಕಿನಾದ್ಯಂತ 67,197 ಮಕ್ಕಳಿದ್ದು, ಅದರಲ್ಲಿ 1ನೇ ತರಗತಿ 11,763 ಮಕ್ಕಳಿಗೆ ಡಿಪಿಟಿ ಲಸಿಕೆ. 2ನೇ ತರಗತಿಯಿಂದ 10ನೇ ತರಗತಿ 55,434 ಮಕ್ಕಳಿಗೆ ಟಿಡಿ ಚುಚ್ಚುಮುದ್ದು ಹಾಕುವ ಗುರಿ ಹೊಂದಲಾಗಿದೆ. ಡಿ.11ರಿಂದ ಆರಂಭವಾದ ಕಾರ್ಯಕ್ರಮ 31ರ ವರೆಗೆ ನಡೆಯಲಿದ್ದು, 5 ವರ್ಷದಿಂದ 16 ವರ್ಷದ ಮಕ್ಕಳಿಗೆ ಲಸಿಕೆ ನೀಡಲಾಗುತ್ತಿದೆ.
ಲಸಿಕೆ ತಂಡಗಳು: ತಾಲೂಕಿನಾದ್ಯಂತ ಸರಕಾರಿ ಮತ್ತು ಖಾಸಗಿ ಶಾಲೆಗಳು ಹಾಗೂ ಶಾಲೆಯಿಂದ ಹೊರಗುಳಿದ ಮಕ್ಕಳಿಗೆ ಅಂಗನವಾಡಿ ಕೇಂದ್ರದಲ್ಲಿ ಲಸಿಕೆ ಹಾಕಲಾಗುತ್ತಿದೆ. ಕಾರ್ಯಕ್ರಮ ಯಶಸ್ವಿಯಾಗಲು ಆರೋಗ್ಯ ಇಲಾಖೆಯಿಂದ 60 ರಿಂದ 65 ತಂಡ ರಚಿಸಲಾಗಿದೆ. ಒಂದು ತಂಡದಲ್ಲಿ ಒಬ್ಬ ಕಿರಿಯ ಆರೋಗ್ಯ ಸಹಾಯಕಿ, ಸ್ಟಾಫ್ ನರ್ಸ್ ಇದ್ದಾರೆ. ಒಂದೊಂದು ಶಾಲೆಗಳಿಗೆ ಒಂದು ತಂಡ ಬೀಡು ಬಿಟ್ಟಿದೆ. ಆರೋಗ್ಯ ಇಲಾಖೆ ಹೊಂದಿದ ಗುರಿ ತಲುಪಲು ಅಧಿಕಾರಿಗಳು ಸಿಬ್ಬಂದಿಗೆ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ.
ತುರ್ತು ಚಿಕಿತ್ಸೆ: ಸರಕಾರಿ-ಖಾಸಗಿ ಸೇರಿ 1ರಿಂದ 10ನೇ ತರಗತಿ 364 ಶಾಲೆಯಲ್ಲಿರುವ ಮಕ್ಕಳಿಗೆ ಡಿಪಿಟಿ, ಟಿಡಿ ಚುಚ್ಚುಮದ್ದು ಲಸಿಕೆ ಹಾಕುವ ಸಂದರ್ಭದಲ್ಲಿ ಆರೋಗ್ಯದಲ್ಲಿ ಅಡ್ಡ ಪರಿಣಾಮ ಉಂಟಾದಲ್ಲಿ ಸ್ಥಳದಲ್ಲಿ ತುರ್ತಾಗಾಗಿ ಪ್ರಾಥಮಿಕ ಹಂತದ ಚಿಕಿತ್ಸೆ ನೀಡಲು ಕಿಟ್ ಸೌಲಭ್ಯ ಕಲ್ಪಿಸಲಾಗಿದೆ. ಕಳೆದ ಮೂರು ದಿನಗಳಿಂದ ಯಾವುದೇ ಪ್ರಕರಣಗಳು ಕಂಡು ಬಂದಿಲ್ಲ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಇದಕ್ಕಾಗಿ ಪ್ರತ್ಯೇಕ ನುರಿತ ವೈದ್ಯರ ತಂಡ ರಚಿಸಲಾಗಿದೆ. ತಂಡಕ್ಕೆ ತರಬೇತಿ: ಕಾರ್ಯಕ್ರಮ ಆರಂಭವಾಗುವ ಮೊದಲೇ ಆರೋಗ್ಯ ಇಲಾಖೆ ಸಿಬ್ಬಂದಿಗೆ, ಶಾಲಾ ಶಿಕ್ಷಕರಿಗೆ ಒಂದು ದಿನದ ತರಬೇತಿ ನೀಡಲಾಗಿದೆ. ನುರಿತ ವೈದ್ಯರಿಂದ ಈಗಾಗಲೇ ತರಬೇತಿ ನೀಡಲಾಗಿದೆ. ಮಕ್ಕಳಿಗೆ ಲಸಿಕೆ ಹಾಕುವ ಮುನ್ನವೇ ಶಾಲಾ ಹಂತದಲ್ಲಿ ಶಿಕ್ಷಕರು ಮಕ್ಕಳ ಪಾಲಕರ ಸಭೆ ಕರೆದು ಜಾಗೃತಿ ಮೂಡಿಸಲಾಗಿದೆ.
ಕಡ್ಡಾಯವಾಗಿ ಪ್ರತಿಯೊಂದು ಮಕ್ಕಳಿಗೆ ಡಿಪಿಟಿ, ಟಿಡಿ ಲಸಿಕೆ ಹಾಕಬೇಕು. ರೋಗ ಬರದಂತೆ ತಡೆಗಟ್ಟುವ ನಿಟ್ಟಿನಲ್ಲಿ ಪಾಲಕರು ಸಹಕಾರ ನೀಡಬೇಕು ಎಂದು ಜಾಗೃತಿ ಮೂಡಿಸಲಾಗಿದೆ.