Advertisement

ಘನತ್ಯಾಜ್ಯ ವಿಲೇವಾರಿಯದ್ದೇ ಚಿಂತೆ

10:47 AM Aug 03, 2019 | Naveen |

ನಾಗರಾಜ ತೇಲ್ಕರ್‌
ದೇವದುರ್ಗ:
ಪಟ್ಟಣದ 23 ವಾರ್ಡ್‌ಗಳಿಂದ ಸಂಗ್ರಹವಾಗುವ ಒಣ, ಹಸಿ ಕಸ ವಿಲೇವಾರಿಯದ್ದೇ ಚಿಂತೆಯಾಗಿದೆ. ಘಟಕದಲ್ಲಿ ಜಾಲಿಗಿಡ ಬೆಳೆದ ಹಿನ್ನೆಲೆಯಲ್ಲಿ ಅಸ್ವಚ್ಛತೆ ವಾತಾವರಣ ನಿರ್ಮಾಣವಾಗಿದೆ. ಎಲ್ಲೆಂದರಲ್ಲಿ ಘನತ್ಯಾಜ್ಯ ಕಸ ಎಸೆಯುವುದರಿಂದ ರೋಗರುಜಿನಿಗಳ ಭೀತಿ ಕಾಡುತ್ತಿದೆ. ಸಮಸ್ಯೆಗೆ ಪುರಸಭೆ ಅಧಿಕಾರಿಗಳೇ ಕಾರಣ ಎನ್ನಲಾಗುತ್ತಿದೆ.

Advertisement

ಪಟ್ಟಣದ ಹೊರವಲಯದ ಕೊಪ್ಪರ ಗ್ರಾಮಕ್ಕೆ ಹೋಗುವ ಮಾರ್ಗ ಮಧ್ಯೆ ಘನತ್ಯಾಜ್ಯ ವಸ್ತು ವಿಲೇವಾರಿ ಘಟಕ ನಿರ್ಮಿಸಲಾಗಿದೆ. ಪುರಸಭೆ ಎಸ್‌ಎಫ್‌ಸಿ ಯೋಜನೆ ಅಡಿ 10 ಲಕ್ಷ ರೂ. ವೆಚ್ಚದಲ್ಲಿ ಕಾಂಪೌಡ್‌ ನಿರ್ಮಿಸಿದೆ. ಘಟಕ ಒಳಗೆ ಜಾಲಿಗಿಡಗಳು ಬೆಳೆದು ಅಸ್ವಚ್ಛತೆ ನಿರ್ಮಾಣವಾಗಿದೆ. ಅಧಿಕಾರಿಗಳು ಮತ್ತು ಸಿಬ್ಬಂದಿ ಸ್ವಚ್ಛತೆಗೆ ಗಮನಹರಿಸಲು ಹಿಂದೇಟು ಹಾಕಿದ ಪರಿಣಾಮ ಇದೀಗ ಕಸ ವಿಲೇವಾರಿ ಸಮಸ್ಯೆಯಾಗಿ ಕಾಡುತ್ತಿದೆ.

ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿ 2 ಲಕ್ಷ ರೂ. ವೆಚ್ಚದಲ್ಲಿ ಕಾವಲುಗಾರ ಕೋಣೆ ನಿರ್ಮಿಸಲಾಗಿದೆ. ಸಿಬ್ಬಂದಿ ನೇಮಕವಿಲ್ಲದೇ ಕಾವಲುಗಾರ ಕೋಣೆ ನಿರುಪಯುಕ್ತವಾಗಿದೆ. ಸರಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಬಳಸಿದ ಔಷಧಿ ಬಾಟಲ್ ಸೇರಿ ಇತರೆ ವಸ್ತುಗಳನ್ನು ವಾಹನದಲ್ಲಿ ತಂದು ಘಟಕದಲ್ಲಿ ಹಾಕಲಾಗುತ್ತಿದೆ.

ಪಟ್ಟಣದ 23 ವಾರ್ಡ್‌ಗಳಲ್ಲಿ ಸಂಗ್ರಹವಾಗುವ ಒಣ, ಹಸಿ ಕಸ ವಿಲೇವಾರಿ ಘನತ್ಯಾಜ್ಯ ವಸ್ತು ಘಟಕಕ್ಕೆ ಕಸ ಒಯ್ಯದೇ ಎಲ್ಲೆಂದರಲ್ಲಿ ಎಸೆಯಲಾಗುತ್ತಿದೆ. ಡಾನ್‌ ಬಾಸ್ಕೋ ವಿದ್ಯಾ ಸಂಸ್ಥೆ ಹತ್ತಿರ, ವೆಂಗಳಾಪುರಕ್ಕೆ ಹೋಗುವ ಮಾರ್ಗದ ಪೊಲೀಸ್‌ ಠಾಣೆ ಹತ್ತಿರ ಬೆಟ್ಟದಲ್ಲಿ ಕಸ ಎಸೆಯಲಾಗುತ್ತಿದೆ. ಪ್ಲಾಸ್ಟಿಕ್‌ ಸೇರಿ ಇತರೆ ವಸ್ತುಗಳನ್ನುವಾರಕ್ಕೊಂದು ಬಾರಿ ಬೆಂಕಿ ಹಚ್ಚಿ ಸುಟ್ಟು ಹಾಕಬೇಕು. ಪುರಸಭೆ ಸಿಬ್ಬಂದಿ ನಿರ್ಲಕ್ಷ್ಯ ವಹಿಸಿದ ಹಿನ್ನೆಲೆ ಇದೀಗ ಸಾಂಕ್ರಮಿಕ ರೋಗರುಜಿನಿಗಳ ಭೀತಿಯಲ್ಲಿ ನಿವಾಸಿಗಳು ತತ್ತರಿಸಿದ್ದಾರೆ.

ಒಣ, ಹಸಿ ಕಸ ವಿಲೇವಾರಿ ಮಾಡುವ ಉದ್ದೇಶದಿಂದ ಲಕ್ಷಾಂತರ ರೂ. ವೆಚ್ಚದಲ್ಲಿ ಆರು ಟಂಟಂ ವಾಹನಗಳನ್ನು ಖರೀದಿಸಲಾಗಿದೆ. ವಾಹನಕ್ಕೆ ವಿಮೆ ಮಾಡಿಸಲು ಹಣವಿಲ್ಲದೇ ಕಾರಣ ಕಳೆದ ಆರೇಳು ತಿಂಗಳಿಂದ ನೈರ್ಮಲ್ಯ ಕಚೇರಿ ಆವರಣದಲ್ಲಿ ವಾಹನಗಳನ್ನು ನಿಲ್ಲಿಸಲಾಗಿದೆ. ಪಟ್ಟಣದಲ್ಲಿ ದಿನೇ ದಿನೇ ಘನತ್ಯಾಜ್ಯ ಅತಿ ಪ್ರಮಾಣದಲ್ಲಿ ಸಂಗ್ರಹವಾಗುತ್ತಿದೆ. ಆದರೆ ವಿಲೇವಾರಿ ಮಾಡಲು ಸಿಬ್ಬಂದಿ ಹೈರಾಣಾಗಿದ್ದಾರೆ.

Advertisement

ಪುರಸಭೆಯಲ್ಲಿ ದಿನಗೂಲಿ ಕೆಲಸ ಮಾಡುವ 45 ಸಿಬ್ಬಂದಿಗೆ ಕಳೆದ 15 ತಿಂಗಳಿಂದ ವೇತನ ಪಾವತಿ ಮಾಡಿಲ್ಲ. ಇದರಿಂದ ಕುಟುಂಬ ನಿರ್ವಹಣೆ ತೀರ ಸಂಕಷ್ಟವಾಗಿದೆ. ಇಂದೋ ನಾಳೆ ಪಾವತಿಸುವುದಾಗಿ ಅಧಿಕಾರಿಗಳ ಹುಸಿ ಭರವಸೆ ಸಿಬ್ಬಂದಿ ಪರದಾಡುವಂತಾಗಿದೆ. ಹಲವು ಬಾರಿ ಹೋರಾಟ ಮಾಡಿದರೂ ಸಿಬ್ಬಂದಿ ಸಮಸ್ಯೆ ಕೇಳುವವರು ಯಾರು ಇಲ್ಲದಂತಾಗಿದೆ ಎಂದು ಹೆಸರು ಹೇಳಲು ಇಚ್ಛಿಸದ ಸಿಬ್ಬಂದಿ ಅಳಲು ತೊಡಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next