ದೇವದುರ್ಗ: ಪಟ್ಟಣ ಸೇರಿ ಜಾಲಹಳ್ಳಿ ಪರಿಹಾರ ಕೇಂದ್ರದಲ್ಲಿದ್ದ 5 ಗ್ರಾಮಗಳ ಸಂತ್ರಸ್ತರನ್ನು ಗುರುವಾರ ಸ್ವಗ್ರಾಮಕ್ಕೆ ಕಳುಹಿಸಿಕೊಡಲಾಯಿತು.
ದೇವದುರ್ಗ ಪಟ್ಟಣ ಹಾಗೂ ಜಾಲಹಳ್ಳಿ ಗ್ರಾಮದ ಪರಿಹಾರ ಕೇಂದ್ರಗಳಲ್ಲಿದ್ದ ತಾಲೂಕಿನ ಅಂಚೆಸುಗೂರು, ಹೇರುಂಡಿ, ಲಿಂಗದಹಳ್ಳಿ, ಗೋಪಳಾಪುರು, ಮುದುಗೋಟ ಗ್ರಾಮಗಳ ನೆರೆ ಸಂತ್ರಸ್ತರನ್ನು ಗುರುವಾರ ಮಧ್ಯಾಹ್ನ ಬಸ್ ಮೂಲಕ ಸ್ವಗ್ರಾಮಕ್ಕೆ ಕಳುಹಿಸಿಕೊಡಲಾಯಿತು. ಇನ್ನೂ ಪ್ರವಾಹ ಕಡಿಮೆಯಾಗದ 10ಕ್ಕೂ ಹೆಚ್ಚು ಗ್ರಾಮಗಳ ಸಂತ್ರಸ್ತರು ಪರಿಹಾರ ಕೇಂದ್ರದಲ್ಲೇ ಇದ್ದಾರೆ. ಅವರಿಗೆ ಊಟ, ಕುಡಿಯುವ ನೀರು ಅಗತ್ಯ ಸೌಲಭ್ಯ ಕಲ್ಪಿಸಲಾಗಿದೆ. ಜತೆಗೆ ವಿವಿಧೆಡೆಯಿಂದ ದಾನಿಗಳು ನೀಡಿದ ಬಟ್ಟೆ, ಹಾಸಿಗೆ, ಹೊದಿಕೆ, ಹಣ್ಣು ಇತರೆ ವಸ್ತುಗಳನ್ನು ನೆರೆ ಸಂತ್ರಸ್ತರಿಗೆ ವಿತರಿಸಲಾಗಿದೆ.
12 ಪರಿಹಾರ ಕೇಂದ್ರಗಳು: ನಾರಾಯಣಪುರ ಬಸವಸಾಗರ ಜಲಾಶಯ ಭರ್ತಿಯಾಗಿದ್ದರಿಂದ ಕೃಷ್ಣಾನದಿಗೆ ಒಂದು ವಾರದಿಂದ ಭಾರೀ ಪ್ರಮಾಣದಲ್ಲಿ ನೀರು ಹರಿಬಿಟ್ಟ ಹಿನ್ನೆಲೆಯಲ್ಲಿ 34 ಗ್ರಾಮಗಳು ಪ್ರವಾಹ ಭೀತಿಗೆ ತತ್ತರಿಸಿದ್ದವು. ಈ ಪೈಕಿ 16 ಗ್ರಾಮಗಳ ಸಾವಿರಾರು ಜನ ಸಂತ್ರಸ್ತರನ್ನು 12 ಪರಿಹಾರ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿತ್ತು. ಶಾವಂತಗೇರಾ, ಕೊಪ್ಪರ, ಜಾಲಹಳ್ಳಿ, ಪಟ್ಟಣದ ಬಾಲಕಿಯರ ಪ್ರೌಢ ಶಾಲೆ, ಮೊರಾರ್ಜಿ ದೇಸಾಯಿ ವಸತಿ ನಿಲಯ ಸೇರಿ 12 ಪರಿಹಾರ ಕೇಂದ್ರಗಳನ್ನು ತೆರೆಯಲಾಗಿದೆ.
800 ಫುಡ್ ಕಿಟ್ ವಿತರಣೆ: ಸ್ವಗ್ರಾಮಕ್ಕೆ ಮರಳಿದ ಐದು ಗ್ರಾಮಗಳ ಸಂತ್ರಸ್ತರಿಗೆ ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತದಿಂದ 800 ಆಹಾರ ಕಿಟ್‌ಗಳನ್ನು ವಿತರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಅಕ್ಕಿ, ಬೇಳೆ, ಸಕ್ಕರೆ, ಎಣ್ಣೆ, ಸೋಪು ಸೇರಿ ಆಹಾರಧಾನ್ಯ, ಜೀವನಾವಶ್ಯಕ ಸಾಮಗ್ರಿಗಳು ಫುಡ್ ಕಿಟ್‌ನಲ್ಲಿ ಇರಲಿವೆ. ಸರಕಾರಿ ಶಾಲೆಯೊಂದರಲ್ಲಿ ಫುಡ್ ಕಿಟ್‌ಗಳ ತಯಾರಿ ನಡೆದಿದೆ.
ಬೆಳೆ ನಷ್ಟ: ಪ್ರವಾಹಕ್ಕೆ ತಾಲೂಕಿನ ನದಿ ತೀರದ ಗ್ರಾಮಗಳಲ್ಲಿ ಸುಮಾರು 30 ಸಾವಿರ ಎಕರೆ ಪ್ರದೇಶದಲ್ಲಿ ಬೆಳೆ ಹಾನಿಯಾಗಿದ್ದು, ತಾಲೂಕು ಆಡಳಿತ ಸಮೀಕ್ಷೆಗೆ ಸಿದ್ಧತೆ ನಡೆಸಿದೆ. ಸಮೀಕ್ಷೆ ನಂತರ ನಿಖರ ಬೆಳೆ ಹಾನಿ ತಿಳಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹರಿದು ಬರುತ್ತಿದೆ ನೆರವು: ಪಟ್ಟಣ, ಜಾಲಹಳ್ಳಿ, ಶಾವಂತಗೇರಾ ಸೇರಿ ಇತರೆ ಗ್ರಾಮಗಳಲ್ಲಿ ತೆರೆದ ಪರಿಹಾರ ಕೇಂದ್ರಗಳಿಗೆ ರಾಯಚೂರು, ಸಿಂಧನೂರು, ಲಿಂಗಸುಗೂರು, ಸಿರವಾರ, ಬಾಗಲಕೋಟೆ ಸೇರಿ ಇತರೆ ಜಿಲ್ಲೆಗಳ ದಾನಿಗಳು ನೀಡಿದ ಆಹಾರಧಾನ್ಯ, ಬಟ್ಟೆ, ಹಾಸಿಗೆ ಇತರೆ ವಸ್ತುಗಳು ಬರುತ್ತಿವೆ ಎಂದು ಕಂದಾಯ ಅಧಿಕಾರಿ ತಿಳಿಸಿದ್ದಾರೆ.