Advertisement

ಕಾಮಗಾರಿಗೆ ಕಡ್ಡಾಯ ನಾಮಫಲಕ ಹಾಕಿ

01:11 PM Jul 07, 2019 | Naveen |

ದೇವದುರ್ಗ: ತಾಲೂಕಿನಾದ್ಯಂತ ಶಾಸಕರ ಅನುದಾನದಲ್ಲಿ ಕೈಗೊಂಡ ಕಾಮಗಾರಿಗಳಿಗೆ ಕಡ್ಡಾಯವಾಗಿ ನಾಮಫಲಕ ಹಾಕುವಂತೆ ಶಾಸಕ ಕೆ.ಶಿವನಗೌಡ ನಾಯಕ ಅಧಿಕಾರಿಗಳಿಗೆ ತಾಕೀತು ಮಾಡಿದರು.

Advertisement

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶಾಸಕರ ಅಧ್ಯಕ್ಷತೆಯಲ್ಲಿ ನಡೆದ ಕೆಲ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು. ಅವಧಿಗೂ ಮುನ್ನವೇ ಕಾಮಗಾರಿ ಮುಗಿಸಿ ಜನರಿಗೆ ಅನುಕೂಲ ಕಲ್ಪಿಸಬೇಕು. ನಿಯಮದ ಪ್ರಕಾರವೇ ಕಾಮಗಾರಿಗಳನ್ನು ಮಾಡಬೇಕು ಎಂದರು.

ರಾಜ್ಯ ಹೆದ್ದಾರಿ ಪಕ್ಕದಲ್ಲಿ ಜಂಗಲ್ ಕಟಿಂಗ್‌, ರಸ್ತೆ ದುರಸ್ತಿ ಕಾಮಗಾರಿಯ 80 ಲಕ್ಷ ರೂ.ಗಳನ್ನು ಶಾಸಕರ ಗಮನಕ್ಕೆ ತಾರದೇ ಗುತ್ತಿಗೆದಾರರಿಗೆ ಪಾವತಿಸಿದ ಪಿಡಬ್ಲ್ಯೂಡಿ ಜೆಇ ಉಮಾಪತಿ ಅವರನ್ನು ತರಾಟೆಗೆ ತೆಗೆದುಕೊಂಡರು. ಅಧಿಕಾರಿಗಳೇ ನಿರ್ಣಯ ಮಾಡುವುದಾದರೇ ಶಾಸಕರು ಏಕೆ ಬೇಕು ಎಂದು ಪ್ರಶ್ನಿಸಿದರು.

ಹೊಸೂರು ಗ್ರಾಮದಲ್ಲಿ ಕೋಟ್ಯಂತರ ರೂ. ವೆಚ್ಚದಲ್ಲಿ ನಡೆಯುತ್ತಿರುವ ಸಿಸಿ ರಸ್ತೆ ಕಾಮಗಾರಿಯಲ್ಲಿ ಕೇವಲ ನೂರು ಮೀಟರ್‌ ರಸ್ತೆ ನಿರ್ಮಿಸಿದ ಗುತ್ತಿಗೆದಾರರಿಗೆ 30 ಲಕ್ಷ ಹಣ ನೀಡಿದ್ದಕ್ಕೆ ಎಇಇ ಬಿ.ಬಿ. ಪಾಟೀಲಗೆ ಮುಂದೆ ಇಂತಹ ತಪ್ಪು ಆಗದಂತೆ ನೋಡಿಕೊಳ್ಳಬೇಕು ಸೂಚಿಸಿದ ಅವರು,1 ಕೋಟಿ 50 ಲಕ್ಷ ರೂ. ವೆಚ್ಚದಲ್ಲಿ ಸರ್ಕಿಟ್ ಹೌಸ್‌, ಹೆಲಿಪ್ಯಾಡ್‌ನ್ನು ಶಾಸಕರ ಸೂಚನೆಯಂತೆ ಕಾಮಗಾರಿ ಮಾಡುವಂತೆ ಸಂಬಂಧಿಸಿದ ಅಧಿಕಾರಿಗೆ ಸೂಚಿಸಿದರು.

ಹೈದರಾಬಾದ್‌ ಕರ್ನಾಟಕ ಪ್ರದೇಶ ಅಭಿವೃದ್ಧಿ ಯೋಜನೆಯಡಿ ಕೈಗೊಂಡ ಸರಕಾರಿ ಶಾಲೆಗಳ ಕಟ್ಟಡ ಕಾಮಗಾರಿ ಬೇಗನೆ ಮುಗಿಸುವಂತೆ ಜೆಇ ಬಸವರಾಜ ಅವರಿಗೆ ಸೂಚನೆ ನೀಡಿದರು.

Advertisement

ಎರಡು ದಿನದಲ್ಲಿ ಇಲಾಖೆಯಿಂದ ಕೈಗೊಂಡ ಕಾಮಗಾರಿ ವಿವರ ನೀಡುವಂತೆ ಸೂಚನೆ ನೀಡಿದರು. ಶುದ್ಧ ಕುಡಿಯುವ ನೀರಿನ ಘಟಕಗಳು ನನೆಗುದಿಗೆ ಬಿದ್ದಿವೆ. ಕೂಡಲೇ ದುರಸ್ತಿಗೆ ಮತ್ತು ಕಾಮಾಗಾರಿ ಪೂರ್ಣಗೊಳಿಸುವಂತೆ ಅಧಿಕಾರಿಗೆ ಸೂಚಿಸಿದರು.

ಜಾಲಹಳ್ಳಿ ಗ್ರಾಮದಲ್ಲಿ ಕೋಟ್ಯಂತರ ರೂ. ವೆಚ್ಚದ ಕಾಮಗಾರಿಗೆ ಅನುದಾನ ನೀಡಲಾಗಿದೆ. ಸಂಬಂಧಪಟ್ಟ ಜೆಇಗಳು ಕೂಡಲೇ ಕೆಲಸ ಆರಂಭಿಸಿ ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಬೇಕು. ತಾಲೂಕಿನಾದ್ಯಂತ ನಡೆಯುತ್ತಿರುವ ವಿವಿಧ ಕಾಮಗಾರಿಗಳನ್ನು ಜು.15ರಂದು ಪರಿಶೀಲಿಸಲಾಗುವುದು. ಅರೆಬರೆ ಕೆಲಸ ಕಂಡುಬಂದಲ್ಲಿ ಅಂತಹ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಭೆಯಲ್ಲಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಪಟ್ಟಣ ಸೇರಿ ತಾಲೂಕಿನಾದ್ಯಂತ ವಿದ್ಯುತ್‌ ಸಮಸ್ಯೆ ತೀವ್ರಗೊಂಡಿದೆ. ಏಕಾಏಕಿ ವಿದ್ಯುತ್‌ ಸ್ಥಗಿತವಾಗುವುದರಿಂದ ಜನರಿಗೆ ಬಹಳ ತೊಂದರೆ ಆಗುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ವಿದ್ಯುತ್‌ ಪರಿವರ್ತಕ ಸುಟ್ಟು ಹೋದಲ್ಲಿ ಕೂಡಲೇ ದುರಸ್ತಿಗೆ ಗಮನಹರಿಸಬೇಕು. ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುವಂತೆ ಜೆಸ್ಕಾಂ ಎಇಇ ಬಸವರಾಜ ಚೌವ್ಹಾಣ ಅವರಿಗೆ ಸೂಚಿಸಿದರು.

ತಹಶೀಲ್ದಾರ್‌ ಮಂಜುನಾಥ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಮೊರಾರ್ಜಿ ವಸತಿ ಶಾಲೆ, ಕೃಷಿ ಇಲಾಖೆ ಕಂದಾಯ ಸೇರಿ ಇತರೆ ಇಲಾಖೆ ಅಧಿಕಾರಿಗಳು, ತಾಪಂ ಅಧ್ಯಕ್ಷ ಹನುಮಂತ ಕಟ್ಟಿಮನಿ, ಪ್ರಕಾಶ ಪಾಟೀಲ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next