ದೇವದುರ್ಗ: ನಾರಾಯಣಪುರ ಬಸವಸಾಗರ ಜಲಾಶಯದಿಂದ ಕೃಷ್ಣಾ ನದಿಗೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಬರುತ್ತಿರುವುದರಿಂದ ನದಿ ತೀರದ ಗ್ರಾಮಗಳಲ್ಲಿ ಅಧಿಕಾರಿಗಳು ಕಟ್ಟೆಚ್ಚರ ವಹಿಸಬೇಕು. ಯಾವುದೇ ಅಧಿಕಾರಿಗಳು, ಸಿಬ್ಬಂದಿ ರಜೆ ಹಾಕದೇ ಕರ್ತವ್ಯ ನಿರ್ವಹಿಸಬೇಕೆಂದು ರಾಯಚೂರು ಸಹಾಯಕ ಆಯುಕ್ತ ಸಂತೋಷ ಕಮಗೌಡ ಸೂಚಿಸಿದರು.
ಪಟ್ಟಣದ ಮಿನಿ ವಿಧಾನಸೌಧ ಸಭಾಂಗಣದಲ್ಲಿ ಗುರುವಾರ ನಡೆದ ಕಂದಾಯ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.
ನದಿ ತೀರದ ಗ್ರಾಮಗಳಲ್ಲಿ ಪ್ರವಾಹ ಭೀತಿ ಎದುರಾಗಿದೆ. ರಜೆ ದಿನದಂದೂ ಅಧಿಕಾರಿಗಳು ಕರ್ತವ್ಯ ನಿರ್ವಹಿಸಬೇಕು. ತಮಗೆ ವಹಿಸಿದ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು. ನದಿ ತೀರದ ಗ್ರಾಮಸ್ಥರಿಗೆ ಅಗತ್ಯ ಸೌಲಭ್ಯ ಕಲ್ಪಿಸಬೇಕು. ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಬೇಕು. ಕುಡಿಯುವ ನೀರಿನ ತೊಂದರೆ ಆಗಿದ್ದಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಸಬೇಕೆಂದು ಸೂಚಿಸಿದರು.
ನದಿ ತೀರದ ಗ್ರಾಮಗಳಿಗೆ ನೀರು ನುಗ್ಗುವ ಭೀತಿ ಇದೆ. ತೀರ ಸಮಸ್ಯೆ ಇರುವ ಗ್ರಾಮಗಳ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲು, ಗಂಜಿ ಕೇಂದ್ರ ತೆರೆಯಲು ಶಾಲಾ-ಕಾಲೇಜು ಕಟ್ಟಡ, ವಸತಿ ನಿಲಯ, ಸರ್ಕಾರಿ ಕಟ್ಟಡ, ಮೊರಾರ್ಜಿ ದೇಸಾಯಿ ವಸತಿ ಶಾಲೆ, ಕೃಷಿ ಮಾರುಕಟ್ಟೆ ಗೋದಾಮುಗಳನ್ನು ಪರಿಶೀಲಿಸಿ ವರದಿ ನೀಡುವಂತೆ ಸೂಚಿಸಿದರು. ಈಗಲೇ ನೋಡಿಟ್ಟುಕೊಳ್ಳಬೇಕು. ಅಗತ್ಯ ಬಿದ್ದರೆ ಗಂಜಿ ಕೇಂದ್ರಗಳನ್ನು ತೆರೆದು ಗ್ರಾಮಸ್ಥರಿಗೆ ಸೌಲಭ್ಯ ಕಲ್ಪಿಸಬೇಕು. ಮೊರಾರ್ಜಿ ವಸತಿ ಶಾಲೆ, ಕೃಷಿ ಮಾರುಕಟ್ಟೆ ಗೋದಾಮಗಳು ಸೇರಿ ಇತರೆ ಕಟ್ಟಡಗಳು ಪರಿಶೀಲಿಸಿ ವರದಿ ನೀಡುವಂತೆ ಹೇಳಿದರು.
ನದಿ ತೀರದ ಗ್ರಾಮಗಳಲ್ಲಿ ಕಟ್ಟೆಚ್ಚರ ವಹಿಸಲು ತಾಲೂಕು ಮಟ್ಟದ ಅಧಿಕಾರಿಗಳ ತಂಡ ರಚಿಸಲಾಗಿದೆ. ಅಧಿಕಾರಿಗಳು ತಮಗೆ ವಹಿಸಿದ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಬೇಕು. ಮುಂಜಾಗ್ರತೆ ವಹಿಸಬೇಕು. ಅಲಕ್ಷ್ಯ ತೋರುವ ಅಧಿಕಾರಿಗಳು ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು. ತಹಶೀಲ್ದಾರ್ ಮಂಜುನಾಥ, ಕಂದಾಯ ಇಲಾಖೆ ಅಧಿಕಾರಿಗಳು ಸೇರಿ ಇತರೆ ಇಲಾಖೆ ಅಧಿಕಾರಿಗಳು ಇದ್ದರು.