ದೇವದುರ್ಗ: ಕಿತ್ತು ಹೋದ ಬಾಗಿಲು, ಕಿಟಕಿ, ಎಲ್ಲೆಂದರಲ್ಲಿ ಬೆಳೆದ ಜಾಲಿಗಿಡಗಳು, ಹಾವು, ಚೇಳಿಗೆ ಆಶ್ರಯ ತಾಣವಾದ ಮನೆಗಳು, ನೀರು, ಶೌಚಾಲಯ-ಚರಂಡಿ ಸೌಲಭ್ಯಗಳ ಕೊರತೆ ಇದು 2009ರಲ್ಲಿ ನೆರೆಹಾವಳಿಗೆ ತತ್ತರಿಸಿದ ತಾಲೂಕಿನ ಕೃಷ್ಣಾ ನದಿ ತೀರದ ಗ್ರಾಮಗಳ ಸಂತ್ರಸ್ತರಿಗಾಗಿ ನಿರ್ಮಿಸಿದ ಮನೆಗಳಲ್ಲಿನ ಸ್ಥಿತಿ.
Advertisement
2009ರಲ್ಲಿ ನೆರೆ ಹಾವಳಿಗೆ ನಲುಗಿದ ಕೃಷ್ಣಾ ನದಿ ತೀರದ 11 ಗ್ರಾಮಗಳು ಅಕ್ಷರಶಃ ನಲುಗಿದ್ದವು. ಈ ಪೈಕಿ ತೀರ ಸಮಸ್ಯೆ ಎದುರಿಸಿದ ಹೇರುಂಡಿ, ಕರ್ಕಿಹಳ್ಳಿ, ಮೇದರಗೋಳ, ವೀರಗೋಟ ಗ್ರಾಮಸ್ಥರನ್ನು ಸ್ಥಳಾಂತರಿಸಲು ಜಿಲ್ಲಾಡಳಿತ ನಿರ್ಧರಿಸಿತ್ತು. ಆಗ ಹಟ್ಟಿ ಚಿನ್ನದ ಗಣಿ ಕಂಪನಿ ಮತ್ತು ವಿವಿಧ ಸಂಘ-ಸಂಸ್ಥೆಗಳ ನೆರವಿನೊಂದಿಗೆ ಆಯಾ ಗ್ರಾಮಗಳ ಕುಟುಂಬಗಳ ಸಂಖ್ಯೆಗೆ ಅನುಗುಣವಾಗಿ ಮನೆಗಳನ್ನು ನಿರ್ಮಿಸಿತ್ತು. ಆದರೆ ಈ ಬಡಾವಣೆಗಳಲ್ಲಿ ನೀರು, ಶೌಚಾಲಯ, ವಿದ್ಯುತ್ ದೀಪ, ರಸ್ತೆ, ಚರಂಡಿಯಂತಹ ಮೂಲ ಸೌಕರ್ಯಗಳನ್ನು ಕಲ್ಪಿಸಲು ಜಿಲ್ಲಾ ಮತ್ತು ತಾಲೂಕು ಆಡಳಿತ ವಿಫಲವಾದ ಪರಿಣಾಮ ಸಂತ್ರಸ್ತರು ಈ ಮನೆಗಳಿಗೆ ಹೋಗಲು ನಿರಾಕರಿಸಿದರು. ಆದರೂ ಕೆಲ ಗ್ರಾಮಗಳಲ್ಲಿ ತೀರ ಅನಿವಾರ್ಯವಿರುವ ಕುಟುಂಬಗಳು ಸೌಲಭ್ಯಗಳ ಕೊರತೆ ಮಧ್ಯೆಯೂ ಆಶ್ರಯ ಮನೆಗಳಲ್ಲಿ ವಾಸಿಸುತ್ತಿದ್ದಾರೆ.
Related Articles
Advertisement
ಕರ್ಕಿಹಳ್ಳಿ: ಕರ್ಕಿಹಳ್ಳಿ ನೆರೆ ಸಂತ್ರಸ್ತರಿಗಾಗಿ ಗ್ರಾಮದ ಹೊರವಲಯದಲ್ಲಿ 117 ಆಶ್ರಯ ಮನೆಗಳನ್ನು ನಿರ್ಮಿಸಲಾಗಿದೆ. ಆದರೆ ತೀರ ಸಮಸ್ಯೆ ಇರುವ 25 ಕುಟುಂಬಗಳು ಮಾತ್ರ ಅಲ್ಲಿ ವಾಸಿಸುತ್ತಿವೆ. ಉಳಿದ ದೊಡ್ಡ ಕುಟುಂಬಗಳಿಗೆ ಈ ಮನೆಗಳು ಚಿಕ್ಕದಾಗಿದ್ದರಿಂದ ಮತ್ತು ಸೌಲಭ್ಯ ಕೊರತೆಯಿಂದ ವಾಸಕ್ಕೆ ಹಿಂದೇಟು ಹಾಕಿವೆ. ಈ ಮನೆಗಳ ಸುತ್ತಲೂ ಜಾಲಿಗಿಡಗಳು ಬೆಳೆದಿವೆ. ಬಾಗಿಲು, ಕಿಟಕಿ ಕಿತ್ತಿವೆ. ಹಾವು, ಚೇಳುಗಳಂತಹ ವಿಷಜಂತುಗಳ ತಾಣವಾಗಿವೆ. ಮನೆ ನಿರ್ಮಿಸಿ ಹಲವು ವರ್ಷಗಳೇ ಕಳೆದರೂ ಜಿಲ್ಲಾಡಳಿತವಾಗಲಿ, ತಾಲೂಕು ಆಡಳಿತವಾಗಲಿ ಇತ್ತ ಕಣ್ಣೆತ್ತಿ ನೋಡಿಲ್ಲ. ಈಗ ಪ್ರವಾಹ ಭೀತಿ ಹಿನ್ನೆಲೆಯಲ್ಲಿ ಕರ್ಕಿಹಳ್ಳಿ ಗ್ರಾಮದ ಜನರ ಸ್ಥಳಾಂತರಕ್ಕೆ ಚಿಂತನೆ ನಡೆದಿದೆ. ಕರ್ಕಿಹಳ್ಳಿ ಗ್ರಾಮದಲ್ಲಿ ವಾರದಿಂದ ಕುಡಿಯುವ ನೀರಿನ ಅಭಾವ ಎದುರಾಗಿದೆ.
ವೀರಗೋಟ: ನೆರೆ ಹಾವಳಿಗೆ ತತ್ತರಿಸಿದ ವೀರಗೋಟ ಗ್ರಾಮಸ್ಥರಿಗಾಗಿ ತಿಂಥಣಿ ಬ್ರಿಜ್ ರಾಜ್ಯ ಹೆದ್ದಾರಿ ರಸ್ತೆ ಪಕ್ಕದಲ್ಲಿ 103 ಮನೆಗಳನ್ನು ನಿರ್ಮಿಸಿ ಗ್ರಾಮಸ್ಥರನ್ನು ಸ್ಥಳಾಂತರಿಸಲಾಗಿದೆ. 18 ಕುಟುಂಬಕ್ಕೆ ಮನೆ ಹಂಚಿಕೆಯಲ್ಲಿ ತಾರತಮ್ಯ ಅನುಸರಿಸಿದ್ದರಿಂದ ಸ್ಥಳಾಂತರ ಆಗದೇ ನದಿ ತೀರದಲ್ಲಿ ವಾಸಿಸುತ್ತಿದ್ದಾರೆ. ಪ್ರವಾಹ ಭೀತಿ ಹಿನ್ನೆಲೆ ಉಳಿದ ಕುಟುಂಬಗಳನ್ನು ಸ್ಥಳಾಂತರಿಸಿ ಹಕ್ಕುಪತ್ರಗಳನ್ನು ನೀಡಬೇಕು ಎಂದು ಕರವೇ ಅಧ್ಯಕ್ಷ ಬಸವರಾಜ ಗೋಪಳಾಪುರ ಆಗ್ರಹಿಸಿದ್ದಾರೆ.
ಹೇರುಂಡಿ ಗ್ರಾಮದ ಸಂತ್ರಸ್ತರಿಗೆ ಮನೆಗಳ ಹಂಚಿಕೆಯಲ್ಲಿ ರಾಜಕೀಯ ಲಾಭಿ ಶುರುವಾಗಿದೆ. ಪ್ರವಾಹ ಭೀತಿ ಶುರುವಾಗಿದ್ದು, ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತ ಕೂಡಲೇ ಮನೆಗಳ ಹಕ್ಕು ಪತ್ರಗಳು ವಿತರಣೆ ಮಾಡಬೇಕು.•ಬೂತಪ್ಪ, ಹೇರುಂಡಿ ಗ್ರಾಮಸ್ಥ ಮೇದರಗೋಳ ಗ್ರಾಮದ ಉಳಿದ ಕುಟುಂಬಗಳು ಸ್ಥಳಾಂತರ ಮಾಡಲಾಗಿದೆ. ಹೇರುಂಡಿ ನೆರೆ ಸಂತ್ರಸ್ತರಿಗೆ ಮನೆಗಳು ಹಂಚಿಕೆ ವಿಳಂಬ ಕುರಿತು ಮಾಹಿತಿ ಪಡೆಯುತ್ತೇನೆ.
•ಮಂಜುನಾಥ, ತಹಶೀಲ್ದಾರ್