ದೇವದುರ್ಗ: ಪಟ್ಟಣದಲ್ಲಿ ಬಾಲ ಕಾರ್ಮಿಕ ಪದ್ಧತಿ ಮತ್ತು ಭಿಕ್ಷಾಟನೆ ಜೀವಂತವಾಗಿದೆ. ಸಂಬಂಧಿಸಿದ ಅಧಿಕಾರಿಗಳ ಕಚೇರಿ ಮಾನ್ವಿ ತಾಲೂಕಿನಲ್ಲಿ ಇರುವುದರಿಂದ ಇಂತಹ ಅನಿಷ್ಠ ಪದ್ಧತಿಗೆ ಕಡಿವಾಣ ಇಲ್ಲದಂತಾಗಿದೆ.
ಹೋಟೆಲ್, ಮಟನ್ ಖಾನಾವಾಳಿ, ಬಾರ್‌ಶಾಪ್, ಗ್ಯಾರೇಜ್ ಸೇರಿ ಇತರೆ ಅಂಗಡಿಗಳಲ್ಲಿ ಬಾಲ ಕಾರ್ಮಿಕರೇ ಹೆಚ್ಚಾಗಿ ಕೆಲಸ ಮಾಡುತ್ತಿದ್ದಾರೆ. ತಾಲೂಕು ಕೇಂದ್ರಕ್ಕೆ ಅಧಿಕಾರಿಗಳು ಬರುತ್ತಾರೆ ಎಂಬ ಮಾಹಿತಿ ತಿಳಿದುಕೊಂಡ ಅಂಗಡಿಗಳ ಮಾಲೀಕರು ಮಕ್ಕಳನ್ನು ವಾಪಸ್ ಕಳುಹಿಸುತ್ತಾರೆ. ತಾಲೂಕಿಗೆ ಅಧಿಕಾರಿಗಳ ಭೇಟಿ ವಿಶೇಷ ಜತೆ ಅಪರೂಪ. ನೆಪಕ್ಕೆ ಮಾತ್ರ ಆಗಾಗ ದಾಳಿ ಮಾಡುವುದು ಬಿಟ್ಟರೇ ಶಾಶ್ವತ ಪರಿಹಾರಕ್ಕೆ ಆಲೋಚನೆ ಕಮರಿ ಹೋಗಿದೆ. ರಾಜ್ಯ ಹೆದ್ದಾರಿ ಪಕ್ಕದ ಬಹುತೇಕ ಫುಟ್ಪಾತ್ ವ್ಯಾಪಾರಿಗಳಲ್ಲಿ ಬಾಲ ಕಾರ್ಮಿಕರ ಸಂಖ್ಯೆ ಹೆಚ್ಚಿದೆ. ಇಂಥ ಮಕ್ಕಳಲ್ಲಿ ಶಿಕ್ಷಣದ ಬೇರು ಬಾಡಿ ಹೋಗಿದೆ. ಪ್ರತಿ ವರ್ಷ ಶಾಲೆಯಿಂದ ಹೊರ ಉಳಿಯುವ ಮಕ್ಕಳ ಸಂಖ್ಯೆ ಹೆಚ್ಚಾಗುತ್ತಿದೆ. ಮಕ್ಕಳ ಭವಿಷ್ಯ ರೂಪಿಸಬೇಕಾದ ಪಾಲಕರೇ ಇಂಥ ಅನಿಷ್ಠ ಪದ್ದತಿಗೆ ತಳ್ಳುತ್ತಿರುವುದು ದುರಂತವೇ ಸರಿ. ಕೂಲಿ ಅರಸಿ ಹೊಲಗದ್ದೆಗಳಿಗೆ ದುಡಿಯಲು ಹೋಗುವ ಬಾಲಕಾರ್ಮಿಕರೇ ಹೆಚ್ಚಾಗಿ ಕಾಣುತ್ತಿದೆ. ವಿವಿಧ ಅಂಗಡಿಗಳಲ್ಲಿರುವ ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಇಲ್ಲಿವರೆಗೆ ಅಧಿಕಾರಿಗಳಿಂದ ಕಡಿವಾಣ ಬಿದ್ದಿಲ್ಲ. ಬೇರೆ ಬೇರೆ ತಾಲೂಕಿನಿಂದ ಪಟ್ಟಣಕ್ಕೆ ಬಂದು ತಳ್ಳು ಬಂಡಿಯಲ್ಲಿ ಹಣ್ಣುಮಾರಾಟ ಮಾಡುವ ಬಾಲಕಾರ್ಮಿಕರು ಇದ್ದಾರೆ.
ಭಿಕ್ಷಾಟನೆ ಜೋರು: ಭಿಕ್ಷೆ ಬೇಡುವುದು ಮತ್ತು ಹಾಕುವುದು ಅಪರಾಧವಾಗಿದ್ದರೂ ಪಟ್ಟಣದಲ್ಲಿ ತಟ್ಟೆಯಲ್ಲಿ ದೇವರ ಭಾವಚಿತ್ರ ಇಟ್ಟಿಕೊಂಡು ಭಿಕ್ಷಾಟನೆ ಬೇಡುವ ಮಕ್ಕಳು ದಿನೇ ದಿನೇ ಹೆಚ್ಚಾಗುತ್ತಿದ್ದಾರೆ. ರಾಜ್ಯ ಹೆದ್ದಾರಿ, ಪ್ರಮುಖ ರಸ್ತೆ ಅಂಗಡಿಗಳಲ್ಲಿ ಭಿಕ್ಷಾಟನೆಯಲ್ಲಿ ತೊಡುಗುತ್ತಿದ್ದಾರೆ. ವಾರದ ಶನಿವಾರ ಸಂತೆಯಲ್ಲಿ ಬಹುತೇಕರು ತರಕಾರಿ ಜತೆ ಹಣವನ್ನೂ ಭಿಕ್ಷೆ ಬೇಡುತ್ತಾರೆ. ಬಸ್ ನಿಲ್ದಾಣದಲ್ಲಿ ಭಿಕ್ಷಾಟನೆ ನಡೆಯುತ್ತಿತ್ತು. ಆದರೆ ಕಾಮಗಾರಿ ನಡೆಯುತ್ತಿರುವುದರಿಂದ ಇಲ್ಲಿ ಸ್ವಲ್ಪ ಕಡಿಮೆಯಾಗಿದೆ. ಸರಕಾರಿ ಶಾಲೆಯಲ್ಲಿ ಉಚಿತ ಶಿಕ್ಷಣ, ಮಧ್ಯಾಹ್ನ ಬಿಸಿಊಟ ಸೇರಿ ಇತರೆ ಸೌಲಭ್ಯಗಳ ನೀಡಲಾಗುತ್ತಿದ್ದು, ಶಾಲೆಗೆ ಸೇರಿಸಬೇಕು ಎಂಬ ಮಾತು ವಿಚಾರವಾದಿಗಳಿಂದ ಕೇಳಿ ಬಂದರೂ ಇಲ್ಲಿವರೆಗೆ ಕಾರ್ಯರೂಪಕ್ಕೆ ಬಂದಿಲ್ಲ. ಇನ್ನೂ ವಿವಿಧ ಸಂಘಟನೆಗಳು ವಸತಿ ನಿಲಯ, ಸರಕಾರಿ ಶಾಲೆಗಳ ಸಮಸ್ಯೆ ಬಗ್ಗೆ ಕಾಳಜಿ ಬಿಟ್ಟರೇ ಇಂಥ ಬಾಲ ಕಾರ್ಮಿಕರನ್ನು ಗುರುತಿಸಿ ಶಿಕ್ಷಣದ ಚಿಂತನೆ ಮಂಕಾಗಿದೆ ಎನ್ನುತ್ತಾರೆ ಶಿಕ್ಷಣ ಪ್ರೇಮಿ ವೀರಭದ್ರಪ್ಪ ಆಗ್ರಹಿಸಿದರು.
ಆಗ್ರಹ: ಭಿಕ್ಷಾಟನೆ, ಹೋಟೆಲ್ ಸೇರಿ ಇತರೆ ಅಂಗಡಿಗಳಲ್ಲಿ ದುಡಿಯುವ ಬಾಲ ಕಾರ್ಮಿಕರಿಗೆ ಗುಣಮಟ್ಟದ ಶಿಕ್ಷಣ ವ್ಯವಸ್ಥೆ ಕಲ್ಪಿಸಬೇಕು. ಸಂಬಂಧಿಸಿದ ಇಲಾಖೆ ಜತೆ ಸಾರ್ವಜನಿಕರು ಕೈಜೋಡಿಸಿ ಇಂಥ ಮಕ್ಕಳನ್ನು ಮುಖ್ಯವಾಹಿನಿಗೆ ಸೇರಿಸುವಲ್ಲಿ ಕಾಳಜಿ ವಹಿಸಬೇಕಾಗಿದೆ ಎಂದು ನಿವೃತ ಅಧಿಕಾರಿ ಬಸಲಿಂಗಪ್ಪ ಆಗ್ರಹಿಸಿದ್ದಾರೆ.
ಹೋಟೆಲ್, ಗ್ಯಾರೇಜ್ ಇತರೆ ಅಂಗಡಿಗಳಲ್ಲಿ ಮಕ್ಕಳು ದುಡಿಯುತ್ತಿರುವುದು ಗಮನಕ್ಕೆ ಬಂದಿಲ್ಲ. ಮಾಹಿತಿ ಬಂದರೆ ಅಂತಹ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳುತ್ತೇನೆ.
•
ಮಲ್ಲಿಕಾರ್ಜುನ ಅರಕೇರಿ,
ತಹಶೀಲ್ದಾರ್
ನಾಗರಾಜ ತೇಲ್ಕರ್