ದೇವದುರ್ಗ: ಸಾಕಷ್ಟು ಪ್ರಮಾಣದಲ್ಲಿ ಹಾನಿ ಮಾಡಿರುವ ಕೃಷ್ಣಾ ನದಿ ಪ್ರವಾಹ ಈಗ ಜೆಸ್ಕಾಂಗೂ ಶಾಕ್ ನೀಡಿದೆ.
ನಾರಾಯಣಪುರ ಬಸವಸಾಗರ ಜಲಾಶಯ ಭರ್ತಿಯಾಗಿ 6 ಲಕ್ಷಕ್ಕೂ ಹೆಚ್ಚು ಕ್ಯೂಸೆಕ್ ನೀರು ಹರಿಬಿಟ್ಟ ಹಿನ್ನೆಲೆಯಲ್ಲಿ ಕೃಷ್ಣಾ ನದಿ ತೀರದ 22 ಗ್ರಾಮಗಳಲ್ಲಿ 480 ವಿದ್ಯುತ್ ಪರಿವರ್ತಕಗಳು ಮುಳುಗಡೆಯಾಗಿದ್ದು, 2 ಸಾವಿರ ಕಂಬಗಳು ಬಿದ್ದಿವೆ. 800 ಕಂಬಗಳು ನೀರಿನಲ್ಲಿ ಮುರಿದು ಹೋಗಿವೆ ಎಂಬ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ.
ಪ್ರವಾಹದಿಂದಾಗಿ ಜೆಸ್ಕಾಗೆ 12 ಕೋಟಿ ರೂ. ನಷ್ಟ ಉಂಟಾಗಿದೆ. ನೆರೆ ಹಾವಳಿಯಿಂದ ಹಾನಿಯಾದ ವರದಿ ಈಗಾಗಲೇ ಜೆಸ್ಕಾ ಮೇಲಾಧಿಕಾರಿಗಳಿಗೆ ನೀಡಲಾಗಿದೆ. ಪರಿಹಾರ ಕೇಂದ್ರಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಹಿನ್ನೆಲೆಯಲ್ಲಿ 16 ಕಂಬಗಳು ಮತ್ತು 2 ವಿದ್ಯುತ್ ಪರಿವರ್ತಕಗಳನ್ನು ಅಳವಡಿಸಲಾಗಿದೆ. ಅಂಜಳ, ಮೇದಿನಾಪುರಕ್ಕೆ ಟಿಸಿ ಅಳವಡಿಸಿ ವಿದ್ಯುತ್ ಅನುಕೂಲ ಮಾಡಿಕೊಡಲಾಗಿದೆ.
ನಾರಾಯಣಪುರ ಬಸವಸಾಗರ ಜಲಾಶಯದಿಂದ ಅಪಾರ ಪ್ರಮಾಣದಲ್ಲಿ ನೀರು ಹರಿಬಿಟ್ಟಿದ್ದರಿಂದ ಕೃಷ್ಣಾ ನದಿ ಉಕ್ಕಿ ಹರಿದ ಪರಿಣಾಮ ನದಿ ತೀರದಲ್ಲಿರುವ 450 ಟಿಸಿಗಳು ಜಲಾವೃತವಾಗಿವೆ. 2 ಸಾವಿರ ಕಂಬಗಳು ನೀರಿನಲ್ಲಿ ಮುಳುಗಡೆಯಾಗಿದ್ದು, 800 ಕಂಬಗಳು ನೀರಿನ ಒಳಗೆ ಮುರಿದಿವೆ ಎಂದು ಜೆಸ್ಕಾಂ ಅಧಿಕಾರಿಗಳು ಅಂದಾಜಿಸಿದ್ದಾರೆ. ಒಟ್ಟಾರೆ ಜೆಸ್ಕಾಂಗೆ 12 ಕೋಟಿ ರೂ. ನಷ್ಟ ಉಂಟಾಗಿದೆ ಎಂದು ಸರಕಾರಕ್ಕೆ ವರದಿ ಸಲ್ಲಿಸಲಾಗಿದೆ.
ಪ್ರವಾಹದಿಂದ ಮುಳುಗಡೆಯಾದ ಗ್ರಾಮಗಳಿಗೆ ಇದೀಗ ತಾತ್ಕಾಲಿಕ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ನೀರಿನ ಪ್ರಮಾಣ ಕಡಿಮೆಯಾದ ನಂತರ ಸಮರ್ಪಕವಾಗಿ ವಿದ್ಯುತ್ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ 100 ವಿದ್ಯುತ್ ಪರಿವರ್ತಕಗಳು, 250 ಕಂಬಗಳು ತುರ್ತಾಗಿ ಬೇಕು ಎಂದು ಮೇಲಾಧಿಕಾರಿಗಳಿಗೆ ಪ್ರಸ್ತಾವನೆ ಕಳುಹಿಸಲಾಗಿತ್ತು. ಬೇಡಿಕೆ ತಕ್ಕಂತೆ ಇದೀಗ ಪೂರೈಸಲಾಗಿದೆ. ಕಚೇರಿ ಆವರಣದಲ್ಲಿ ಸಂಗ್ರಹಿಸಲಾಗಿದ್ದು, ನೀರಿನ ಪ್ರಮಾಣ ತಗ್ಗಿದಾಗ ಮುಳುಗಡೆಯಾದ ಟಿಸಿ ಮತ್ತು ಕಂಬಗಳನ್ನು ತೆಗೆಯಲು ತಡವಾಗಬಹುದು. ಆದರೂ ತಾತ್ಕಾಲಿಕ ವಿದ್ಯುತ್ ಸಂಪರ್ಕ ಕಲ್ಪಿಸುವ ಮುಂದಾಲೋಚನೆ ಹಿನ್ನೆಲೆಯಲ್ಲಿ ಅಗತ್ಯ ಟಿಸಿ ಕಂಬಗಳನ್ನು ತರಿಸಲಾಗಿದೆ.
ಪ್ರವಾಹದಿಂದ 22 ಗ್ರಾಮಗಳಲ್ಲಿ ವಿದ್ಯುತ್ ಪರಿವರ್ತಕಗಳು ಮತ್ತು ಕಂಬಗಳು ನೀರಿನಲ್ಲಿ ಮುಳುಗಡೆಯಾದ್ದರಿಂದ ಗ್ರಾಮಗಳಲ್ಲಿ ಕುಡಿಯುವ ನೀರಿನ ತೊಂದರೆ ಉಂಟಾಗದಂತೆ ಮತ್ತು ರೈತರ ಪಂಪ್‌ಸೆಟ್‌ಗಳಿಗೆ ಐಪಿಎಸ್‌ಟಿ ಮಾರ್ಗದ ಮೂಲಕ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಈ ಮಾರ್ಗದಲ್ಲಿ 24 ತಾಸು ವಿದ್ಯುತ್ ಸೌಲಭ್ಯವಿರುತ್ತದೆ. ಹೀಗಾಗಿ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಜೆಸ್ಕಾಂ ತಾತ್ಕಾಲಿಕವಾಗಿ ವಿದ್ಯುತ್ ಪೂರೈಸಿದೆ ಎಂದು ಜೆಸ್ಕಾಂ ಮೂಲಗಳು ತಿಳಿಸಿವೆ.
ಪ್ರವಾಹದಿಂದ ತತ್ತರಿಸಿದ 22 ಗ್ರಾಮಗಳ ನೆರೆ ಸಂತ್ರಸ್ತರಿಗೆ ಶಾಶ್ವತವಾಗಿ ವಿದ್ಯುತ್ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಜೆಸ್ಕಾಂ
ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮ ವಹಿಸಬೇಕಾಗಿದೆ. ನದಿ ನೀರಿನಲ್ಲಿ ಮುಳುಗಡೆಯಾದ ಟಿಸಿಗಳು ಮತ್ತು ಕಂಬಗಳನ್ನು ಆದಷ್ಟು ಬೇಗನೆ ದುರಸ್ತಿ ಮಾಡಿಸಲು ಜೆಸ್ಕಾಂ ಅಧಿಕಾರಿಗಳು ಮುಂದಾಗಬೇಕು ಎಂದು ನೆರೆ ಸಂತ್ರಸ್ತರಾದ ಹನುಮಗೌಡ, ಶಿವನಗೌಡ ಆಗ್ರಹಿಸಿದರು.