ಮಂಡ್ಯ: ನನ್ನ ವಿರುದ್ಧ ಗೋ-ಬ್ಯಾಕ್ ನಿಖಿಲ್ ಎಂಬ ಕೂಗು ಕೇಳಿಬರುತ್ತಿದೆ. ಆದರೆ, ನಾನು ಚುನಾವಣೆಯಲ್ಲಿ ಗೆಲ್ಲಬೇಕೋ ಅಥವಾ ಸೋಲಬೇಕೋ ಎನ್ನುವುದನ್ನು ನೀವೇ ನಿರ್ಧರಿಸಿ ಎಂದು ಮಂಡ್ಯ ಲೋಕಸಭಾ ಕ್ಷೇತ್ರದ ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟದ ಅಭ್ಯರ್ಥಿ ನಿಖಿಲ್‌ಕುಮಾರಸ್ವಾಮಿ ಹೇಳಿದರು.
ನಗರದ ಸಿಲ್ವರ್ ಜ್ಯೂಬಿಲಿ ಪಾರ್ಕ್‌ನಲ್ಲಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿಯಾಗಿ ಅಧಿಕೃತವಾಗಿ ಘೋಷಣೆ ಮಾಡಿದ ಬಳಿಕ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದರು. ನಾನು ಹಿಂದೆ ಹೋಗಬೇಕೋ ಅಥವಾ ಮುಂದೆ ಹೋಗ್ಬೇಕೋ ಅನ್ನೋದನ್ನ ನಿಮ್ಮ ಮುಂದೆ ಇಟ್ಟಿದ್ದೇನೆ. ಅದನ್ನು ನೀವೇ ನಿರ್ಧರಿಸಬೇಕು ಎಂದ ನಿಖಿಲ್,
ಜಿಲ್ಲೆಯ ಶಾಸಕರು, ಮುಖಂಡರು ಕಾರ್ಯಕರ್ತರ ಜೊತೆ ಚರ್ಚೆ ಮಾಡಿದ ಬಳಿಕವೇ ಪಕ್ಷ ನನಗೆ ಟಿಕೆಟ್ ಕೊಟ್ಟಿದೆ. ನನ್ನ ತಂದೆಯನ್ನು ನಿಮ್ಮ ಮನೆ ಮಗನಾಗಿ ಮೆರೆಸಿದ್ದೀರಿ. ಮುಖ್ಯಮಂತ್ರಿಯಾಗಲು ಶಕ್ತಿ ತುಂಬಿದ್ದೀರಿ. ಏಳು ಜನ್ಮ ಎತ್ತಿದರೂ ನಮ್ಮ ಕುಟುಂಬ ನಿಮ್ಮ ಋಣ ತೀರಿಸಲಾಗದು. ನಿಮ್ಮ ಸೇವೆ ಮಾಡದಿದ್ದರೆ ಭಗವಂತ ನಮ್ಮನ್ನು ಕ್ಷಮಿಸುವುದಿಲ್ಲ ಎಂದು ಹೇಳಿದರು.
ನಿಮ್ಮ ಮನೆ ಮಗನಾಗಿ, ಗುಲಾಮನಾಗಿ ಸೇವೆ ಮಾಡೋಕೆ ನಾನು ಸಿದ್ಧನಿದ್ದೇನೆ. ನನಗೊಂದು ಅವಕಾಶ ಕೊಡಿ. ನಾನೇನೇ ತಪ್ಪು ಮಾಡಿದ್ದರೂ ನನ್ನ ಕಿವಿ ಹಿಂಡಿ ಸರಿದಾರಿಗೆ ತರುವ ಹಕ್ಕು ನಿಮಗಿರುತ್ತದೆ. ಒಮ್ಮೆ ನಿಮ್ಮ ಸೇವೆ ಮಾಡಲು ನನಗೊಂದು ಅವಕಾಶ ಕೊಡಿ. ಜಿಲ್ಲೆಯನ್ನು ಅಭಿವೃದ್ಧಿ ಪಡಿಸಿ ನಿಮ್ಮ ಋಣ ತೀರಿಸುತ್ತೇನೆ ಎಂದು ಹೇಳಿದರು.
ಮೈತ್ರಿಕೂಟ ಅಭ್ಯರ್ಥಿ ಘೋಷಣೆ ವೇಳೆ ಕಾಂಗ್ರೆಸ್ಸಿಗರ ಗೈರು
ಮಂಡ್ಯ: ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿಯಾಗಿ ನಿಖಿಲ್‌ಕುಮಾರಸ್ವಾಮಿ ಘೋಷಣೆ ಮಾಡುವ ಕಾರ್ಯಕ್ರಮಕ್ಕೆ ಕಾಂಗ್ರೆಸ್‌ನ ಪ್ರಮುಖ ನಾಯಕರೆಲ್ಲರೂ ಗೈರು ಹಾಜರಾಗಿದ್ದರು. ಕಾಂಗ್ರೆಸ್ ಪಕ್ಷದ ಯಾವೊಬ್ಬ ಸ್ಥಳೀಯ ಮುಖಂಡರು, ಕಾರ್ಯಕರ್ತರು ಕಾಣಿಸಿಕೊಳ್ಳದಿರುವುದು ಮೈತ್ರಿಗೆ ಅಪಸ್ವರವಿರುವುದು ಕಂಡುಬಂದಿತು.
ಸಿಲ್ವರ್ ಜ್ಯೂಬಿಲಿ ಪಾರ್ಕ್‌ನಲ್ಲಿ ನಡೆದ ಕಾರ್ಯಕ್ರಮ ಸ್ಥಳದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ಬಾವುಟಗಳನ್ನು ಕಟ್ಟಲಾಗಿತ್ತು. ಆದರೆ, ಕಾಂಗ್ರೆಸ್ ಪಕ್ಷದ ಜಿಲ್ಲಾ ಮಟ್ಟದ ನಾಯಕರು, ಮುಖಂಡರು, ಕಾರ್ಯಕರ್ತರು ಕಂಡುಬರಲಿಲ್ಲ. ಜೆಡಿಎಸ್ ವರಿಷ್ಠರು ಹಾಗೂ ನಾಯಕರೇ ವೇದಿಕೆ ಮೇಲೆ ತುಂಬಿಹೋಗಿದ್ದರು. ಮೈತ್ರಿಗೆ ಮೇಲ್ಮಟ್ಟದ ನಾಯಕರಲ್ಲಷ್ಟೇ ಒಲವಿದ್ದು, ಸ್ಥಳೀಯ ಮಟ್ಟದಲ್ಲಿ ಅದು ನಿರೀಕ್ಷಿತ ಫಲ ಕೊಡುತ್ತಿಲ್ಲದಿರುವುದು ಕಂಡು ಬಂದಿತು.