Advertisement

ಉಡುಪಿಯನ್ನು ರಾಜ್ಯದ 3ನೇ ಆರ್ಥಿಕ ನಗರಿಯಾಗಿಸುವ ಸಂಕಲ್ಪ: ಯಶ್‌ಪಾಲ್‌ ಸುವರ್ಣ

04:19 PM May 09, 2023 | Team Udayavani |

ಉಡುಪಿ: ಮುಂದಿನ 5 ವರ್ಷಗಳಲ್ಲಿ ಕ್ಷೇತ್ರದ ಆರ್ಥಿಕ ಅಭಿವೃದ್ಧಿಗೆ ಪೂರಕ ಯೋಜನೆಗಳನ್ನು ರಾಜ್ಯ ಹಾಗೂ ಕೇಂದ್ರ ಸರಕಾರದ ಮೂಲಕ ಅನುಷ್ಠಾನಗೊಳಿಸಿ ರಾಜ್ಯದಲ್ಲಿ ಬೆಂಗಳೂರು, ಮಂಗಳೂರು ನಗರದಂತೆಯೇ ಉಡುಪಿಯನ್ನು ರಾಜ್ಯದ ಆರ್ಥಿಕ ನಗರಿಯಾಗಿಸುವ ಸಂಕಲ್ಪದೊಂದಿಗೆ ಕಾರ್ಯನಿರ್ವಹಿಸಲು ಬದ್ಧರಾಗಿರುವುದಾಗಿ ಉಡುಪಿ ಬಿಜೆಪಿ ಅಭ್ಯರ್ಥಿ ಯಶ್‌ಪಾಲ್‌ ಸುವರ್ಣ ಹೇಳಿದರು.

Advertisement

ಉಡುಪಿ ನಗರ ವ್ಯಾಪ್ತಿಯ ವಿವಿಧ ವಾರ್ಡ್‌ ಹಾಗೂ ಗ್ರಾಮಾಂತರ ಭಾಗದ ವಿವಿಧೆಡೆ ಕಾರ್ಯಕರ್ತರೊಂದಿಗೆ ಮನೆ ಮನೆ ಭೇಟಿ ನೀಡುವ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.

ಉಡುಪಿ ಕ್ಷೇತ್ರ ಈಗಾಗಲೇ ಮೀನುಗಾರಿಕೆ, ಮೂರ್ತೆದಾರಿಕೆ, ಕೃಷಿ, ವೈದ್ಯಕೀಯ, ಬ್ಯಾಂಕಿಂಗ್‌, ಶಿಕ್ಷಣ, ಪ್ರವಾಸೋದ್ಯಮ, ಐಟಿ ಹಾಗೂ ಕೈಗಾರಿಕೆಗಳ ಮೂಲಕ ಜಿಲ್ಲೆಯ ಆರ್ಥಿಕ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರವಹಿಸಿದೆ.

ದೇಶದಲ್ಲಿಯೇ ಪ್ರಸಿದ್ಧವಾದ ಮಲ್ಪೆಯ ಸರ್ವಋತು ಬಂದರಿನ ಮೂಲಕ ಸಹಸ್ರಾರು ಮಂದಿ ಉದ್ಯೋಗ, ವ್ಯವಹಾರದ ಮೂಲಕ ಜೀವನ ನಡೆಸಿಕೊಂಡು ಬರುತ್ತಿದ್ದು, ಮಲ್ಪೆ ಬಂದರಿನ ಸಮಗ್ರ ಅಭಿವೃದ್ಧಿಗೆ ನೀಲ ನಕಾಶೆ ರೂಪಿಸಿ, ಅಂತರಾಷ್ಟ್ರೀಯ ದರ್ಜೆಯ ರಫು¤ ವಲಯ ಹಾಗೂ ಪ್ರತ್ಯೇಕ ಮೀನುಗಾರಿಕಾ ಕೈಗಾರಿಕಾ ವಲಯ ಸ್ಥಾಪಿಸಿ ಮೀನುಗಾರಿಕೆಗೆ ಸಂಬಂಧಿಸಿದ ಕೈಗಾರಿಕೆಯ ಮೂಲಕ ಯುವ ಜನತೆಗೆ ಉದ್ಯೋಗ ಸೃಷ್ಟಿಸುವ ನಿಟ್ಟಿನಲ್ಲಿ ಆದ್ಯತೆಯೊಂದಿಗೆ ಯೋಜನೆಗಳನ್ನು ರೂಪಿಸಲಾಗುವುದು ಎಂದರು.

ಶಿಕ್ಷಣ, ವೈದ್ಯಕೀಯ, ಬ್ಯಾಂಕಿಂಗ್‌ ವ್ಯವಸ್ಥೆಯಲ್ಲಿ ವಿಶ್ವಮಟ್ಟದಲ್ಲಿ ಗುರುತಿಸಿಕೊಂಡಿರುವ ಮಣಿಪಾಲದಲ್ಲಿ ಮೂಲ ಸೌಕರ್ಯಗಳನ್ನು ಅಭಿವೃದ್ಧಿಗೊಳಿಸಿ ಆರ್ಥಿಕತೆಯ ಉತ್ತೇಜನಕ್ಕೆ ಪೂರಕ ಕ್ರಮ, ಬೀಚ್‌ ಹಾಗೂ ಟೆಂಪಲ್‌ ಟೂರಿಸಂ ಅಭಿವೃದ್ಧಿಗೆ ವಿಫುಲ ಅವಕಾಶಗಳಿದ್ದು ಪ್ರವಾಸೋದ್ಯಮದ ಮೂಲಕ ಸ್ಥಳೀಯರಿಗೆ ಸ್ವದ್ಯೋಗಕ್ಕೆ ಅವಕಾಶ ಕಲ್ಪಿಸುವ ಜತೆಜತೆಗೆ ಶೈಕ್ಷಣಿಕವಾಗಿ ಪ್ರತಿಭಾವಂತ ಯುವ ಜನತೆಗೆ ಐಟಿ ಕಂಪೆನಿಗಳ ಸ್ಥಾಪನೆಗಾಗಿ ಪೂರಕ ಸೌಲಭ್ಯಗಳನ್ನು ಒಳಗೊಂಡ ಐಟಿ ಪಾರ್ಕ್‌ ನಿರ್ಮಾಣದ ಮೂಲಕ ತಮ್ಮ ಜಿಲ್ಲೆಯಲ್ಲಿಯೇ ಉದ್ಯೋಗ ಸೃಷ್ಟಿಸಿ ಉಡುಪಿಯನ್ನು ಕರಾವಳಿ ಭಾಗದ ಐಟಿ ಹಬ್‌ ಆಗಿ ರೂಪಿಸುವ ಕನಸು ಹೊಂದಿದೆ ಎಂದರು.

Advertisement

ಮೀನುಗಾರಿಕೆ ಮತ್ತು ಕೃಷಿ ಕ್ಷೇತ್ರದಂತೆಯೇ ಹೈನುಗಾರಿಕೆ, ನೇಕಾರರು, ಮೂರ್ತೆದಾರರು, ಕರಕುಶಲಕರ್ಮಿಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರದ ವತಿಯಿಂದ ಶೂನ್ಯ ಬಡ್ಡಿದರದಲ್ಲಿ ಸಾಲ ಸೌಲಭ್ಯ ಒದಗಿಸಿ ಆರ್ಥಿಕ ಚೈತನ್ಯ ತುಂಬುವ ಮೂಲಕ ಸ್ವಾವಲಂಬಿ ಬದುಕಿಗೆ ಅವಕಾಶ ಕಲ್ಪಿಸುವುದು.

ವೀರ ಸಾವರ್ಕರ್‌ ಪುತ್ಥಳಿ ನಿರ್ಮಾಣ:
ಸ್ವಾತಂತ್ರ್ಯಕ್ಕಾಗಿ ಕೆಚ್ಚೆದೆಯ ಹೋರಾಟ ನಡೆಸಿ ಇಂದಿಗೂ ಯುವಜನತೆಗೆ ಸ್ಪೂರ್ತಿಯಾಗಿರುವ ವೀರ ಸಾವರ್ಕರ್‌ ಪುತ್ಥಳಿ ನಿರ್ಮಾಣ, ದ್ವೈತ ಮತ ಪ್ರತಿಪಾದಕ ಮಧ್ವಾಚಾರ್ಯ, ಮಾಧವ ಮಂಗಲ ಪೂಜಾರ್ಯರು, ಬ್ರಹ್ಮಶ್ರೀ ನಾರಾಯಣಗುರು, ಅಂಬೇಡ್ಕರ್‌, ವಾಲ್ಮೀಕಿ, ವೇದವ್ಯಾಸರು, ಜಕಣಾಚಾರ್ಯ, ವಿಶ್ವೇಶತೀರ್ಥ ಶ್ರೀಪಾದರು, ಮಲ್ಪೆ ಮಧ್ವರಾಜ್‌, ಟಿ. ಎಂ. ಎ. ಪೈ, ಸಹಕಾರಿ ಪಿತಾಮಹಾ ಮೊಳಹಳ್ಳಿ ಶಿವರಾಯ, ಕರಂಬಳ್ಳಿ ಸಂಜೀವ ಶೆಟ್ಟಿ, ಡಾ| ವಿ. ಎಸ್‌. ಆಚಾರ್ಯ ಮೊದಲಾದ ಮಹನೀಯರ ಜೀವನದ ಯಶೋಗಾಥೆಯ ಅಧ್ಯಯನ ಕೇಂದ್ರವಾಗಿ ಕರಾವಳಿ ಥೀಂ ಪಾರ್ಕ್‌ ನಿರ್ಮಾಣ ಹಾಗೂ ಜಿಲ್ಲೆಯ ಸಹಕಾರಿ ಕ್ಷೇತ್ರದ ಬಲವರ್ಧನೆಗಾಗಿ ಜಿಲ್ಲಾಧಿಕಾರಿ ಕಚೇರಿ ಮಾದರಿಯಲ್ಲಿ ಸಹಕಾರಿ ಇಲಾಖೆಗೆ ಸಂಬಂಧಿಸಿದ ಎಲ್ಲಾ ಕಚೇರಿಗಳನ್ನೊಳಗೊಂಡ ಸಹಕಾರಿ ಸೌಧ ನಿರ್ಮಾಣದ ಯೋಜನೆಯನ್ನು ಕೇಂದ್ರ ಹಾಗೂ ರಾಜ್ಯದ ಡಬಲ್‌ ಇಂಜಿನ್‌ ಸರಕಾರದ ಮೂಲಕ ಕಾರ್ಯಗತಗೊಳಿಸುವ ಸಂಪೂರ್ಣ ವಿಶ್ವಾಸ ಇದೆ ಎಂದರು.

ಗರೋಡಿ ಮಂದಿರಗಳ ಅಭಿವೃದ್ಧಿಗೆ ವಿಶೇಷ ಅನುದಾನ:
ಪ್ರಧಾನಿ ನರೇಂದ್ರ ಮೋದಿ ಅವರ ಕೇಂದ್ರ ಹಾಗೂ ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಸರಕಾರ ಡಬಲ್‌ ಇಂಜಿನ್‌ ಮಾದರಿಯಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ ಕಟ್ಟಿಬದ್ಧವಾಗಿದೆ. ಬಿಲ್ಲವ, ಈಡಿಗ ಸಹಿತ 26 ಉಪಜಾತಿಗಳ ಶ್ರೇಯೋಭಿವೃದ್ಧಿಗಾಗಿ ಬಹುದಶಕಗಳ ಬೇಡಿಕೆಯಾಗಿದ್ದ ಬ್ರಹ್ಮಶ್ರೀ ನಾರಾಯಣ ಗುರು ನಿಗಮ ಆರಂಭಿಸುವ ಮೂಲಕ ನುಡಿದಂತೆ ನಡೆವ ಬಿಜೆಪಿ ಸರಕಾರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ನಾರಾಯಣಗುರು ವಸತಿ ಶಾಲೆ, ಕೇಂದ್ರ ಸರಕಾರದ ಅಗ್ನಿವೀರ್‌ ಯೋಜನೆಗಾಗಿ ಸೈನಿಕ ಪೂರ್ವ ತರಬೇತಿ ನೀಡಲು ಉಡುಪಿಯಲ್ಲಿ ಕೋಟಿ ಚೆನ್ನಯ ತರಬೇತಿ ಶಾಲೆ ಹಾಗೂ ಗರೋಡಿ ಮಂದಿರಗಳ ಅಭಿವೃದ್ಧಿಗೆ ವಿಶೇಷ ಅನುದಾನ ಮಂಜೂರು ಮಾಡಿ ಹಿಂದುಳಿದ ವರ್ಗಗಳ ಪರ ಸರಕಾರ ಬದ್ಧತೆ ಮೆರೆದಿದೆ. ಸರಕಾರದ ಈ ಅಭಿವೃದ್ಧಿ ಕಾರ್ಯಗಳನ್ನು ಸಹಿಸದ ಹತಾಶ ಕಾಂಗ್ರೆಸಿಗರ ಅಪಪ್ರಚಾರಕ್ಕೆ ಕಿವಿ ಕೊಡದೇ ಪ್ರಜ್ಞಾವಂತ ಬಿಲ್ಲವ ಸಮುದಾಯ ಬಿಜೆಪಿ ಸರಕಾರದಿಂದಾದ ಲಾಭಗಳ ಬಗ್ಗೆ ಅರಿತುಕೊಂಡಿದ್ದಾರೆ ರಾಜ್ಯ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಎಲ್ಲ ಕ್ಷೇತ್ರದ ಅನುಭವಿ ಯುವ ನಾಯಕ:
ಯಶ್‌ಪಾಲ್‌ ಸುವರ್ಣ ಅವರು ವಿವಿಧ ಸಂಘ ಸಂಸ್ಥೆಗಳಲ್ಲಿ ಪದಾಧಿಕಾರಿಯಾಗಿ ಕಾರ್ಯನಿರ್ವಹಿಸಿ ಇದೀಗ ಉಡುಪಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಹಂತ ಹಂತವಾಗಿ ಬೆಳದು ಬಂದ ಅನುಭವಿ ಯುವ ನಾಯಕ.

ಅವರ ನಾಯಕತ್ವ ಗುಣ, ದಕ್ಷತೆಯನ್ನು ಅವರು ನೇತೃತ್ವ ವಹಿಸಿದ ಮೀನು ಮಾರಾಟ ಫೆಡರೇಷನ್‌ ಮತ್ತು ಮಹಾಲಕ್ಷ್ಮೀ ಕೋ. ಆಪರೇಟಿವ್‌ ಬ್ಯಾಂಕ್‌ನ ಸಾಧನೆಗಳ ಮೂಲಕ ಸಾಬೀತು ಮಾಡಿದ್ದಾರೆ. ಮನೆಯ ಹಿರಿಯರ ಸಂಘ ಪರಿವಾರ ಮತ್ತು ಹಿಂದೂ ಸಂಘಟನೆಗಳ ಒಡನಾಟದಲ್ಲಿ ದೊರೆತ ಉತ್ತಮ ಸಂಸ್ಕಾರದಿಂದ ರಾಷ್ಟ್ರೀಯ ವಿಚಾರಗಳಿಗೆ ಬದ್ಧರಾಗಿ ಗೋಹತ್ಯೆ ವಿರುದ್ಧ ಗಟ್ಟಿ ಧ್ವನಿಯಾಗಿ ಹೋರಾಟ ನಡೆಸಿದ್ದಾರೆ. ಉಡುಪಿ ಕೃಷ್ಣ ಮಠ, ಅಷ್ಟ ಮಠಗಳೂ ಸೇರಿದಂತೆ ಎಲ್ಲಾ ಜಾತಿ ಸಮುದಾಯದೊಂದಿಗೆ ಒಡನಾಟ ಹೊಂದಿರುವ ಯಶ್‌ಪಾಲ್‌ ಸುವರ್ಣ ಅವರು ಈ ಬಾರಿ ಶಾಸಕರಾಗಿ ಕ್ಷೇತ್ರದ ಸಮಗ್ರ ಏಳಿಗೆಗೆ ಕರ್ತವ್ಯ ನಿರ್ವಹಿಸುವಲ್ಲಿ ಯಶಸ್ವಿಯಾಗುವುದರಲ್ಲಿ ಸಂಶಯವಿಲ್ಲ ಎಂಬುದು ಸಾಮಾಜಿಕ ಕಾರ್ಯಕರ್ತ ಜಿ. ವಾಸುದೇವ ಭಟ್‌ ಪೆರಂಪಳ್ಳಿ ಅಭಿಪ್ರಾಯ.

ಹೋರಾಟ ಮನೋಭಾವದಿಂದ ಬದುಕು ರೂಪಿಸಿಕೊಂಡಿರುವ ಯಶ್‌ಪಾಲ್‌ ಸುವರ್ಣ ಈ ಬಾರಿ ಬಿಜೆಪಿ ಪಕ್ಷದ ಸಮರ್ಥ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವುದು ಮತದಾರರಲ್ಲಿ ನಿರೀಕ್ಷೆ ಮೂಡಿಸಿದೆ. ರಾಜಕೀಯ, ಸಹಕಾರ ಕ್ಷೇತ್ರದ ಜೊತೆ ಜೊತೆಗೆ ಧಾರ್ಮಿಕ ಮುಖಂಡರಾಗಿ ಕರಾವಳಿ ಜಿಲ್ಲೆಯ ಆರಾಧ್ಯ ವೀರ ಪುರುಷರಾದ ಕೋಟಿ ಚೆನ್ನಯ ಹಾಗೂ ಬ್ರಹ್ಮಶ್ರೀ ನಾರಾಯಣಗುರುಗಳ ಭಕ್ತರಾಗಿ ಜಿಲ್ಲೆಯ ಹಲವು ಗರಡಿ, ಗುರು ಮಂದಿರ, ಭಜನಾ ಮಂದಿರ, ದೇವಸ್ಥಾನಗಳ ಜೀರ್ಣೋದ್ಧಾರ ಸಂದರ್ಭದಲ್ಲಿ ಓರ್ವ ದಾನಿಯಾಗಿ ಫಲಾಪೇಕ್ಷೆ ಇಲ್ಲದೇ ಸಹಕಾರ ನೀಡಿರುವ ವ್ಯಕ್ತಿ.

ನಮ್ಮ ಆಶೋತ್ತರಗಳಿಗೆ ಸ್ಪಂದಿಸುವ ನಾಯಕ:
ಬ್ರಹ್ಮಶ್ರೀ ನಾರಾಯಣ ಗುರುಗಳ ಸಂದೇಶದಂತೆ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವ ಸಂಕಲ್ಪದೊಂದಿಗೆ ಮೀನು ಮಾರಾಟ ಫೆಡರೇಷನ್‌, ಮಹಾಲಕ್ಷ್ಮೀ ಬ್ಯಾಂಕ್‌ ಹಾಗೂ ತನ್ನ ಪುಷ್ಪಾನಂದ ಫೌಂಡೇಶನ್‌ ವತಿಯಿಂದ ಜಿಲ್ಲೆಯ ಸಾವಿರಾರು ವಿದ್ಯಾರ್ಥಿಗಳಿಗೆ ಜಾತಿ ಮತ ಭೇದವಿಲ್ಲದೆ ಪ್ರತಿಭಾ ಪುರಸ್ಕಾರ ನೀಡಿದ ಓರ್ವ ಶಿಕ್ಷಣ ಪ್ರೇಮಿ. ಮರಳು ಹೋರಾಟ ಸಂದರ್ಭದಲ್ಲೂ ನಮ್ಮ ಎಲ್ಲಾ ಹೋರಾಟಗಳಿಗೆ ಜೊತೆ ನಿಂತ ಯಶ್‌ಪಾಲ್‌ ಸುವರ್ಣ ಮುಂದಿನ ದಿನಗಳಲ್ಲಿ ಶಾಸಕರಾಗಿ ಕ್ಷೇತ್ರದ ಜನತೆಯ ಆಶೋತ್ತರಗಳಿಗೆ ಸ್ಪಂದಿಸುವ ನಾಯಕರಾಗಿ ಬರಲಿದ್ದಾರೆ ಎಂದು ಪಾಂಗಾಳ ಗುಡ್ಡೆ ಗರಡಿ ಮನೆಯ ಸುಧಾಕರ ಡಿ. ಅಮೀನ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next