Advertisement
ಪಂಚಾಯತ್ ಸಾಮಾನ್ಯ ಸಭೆಯು ಕೆರೆಮೂಲೆ ಅಬ್ದುಲ್ ರಹಿಮಾನ್ ಅಧ್ಯಕ್ಷತೆಯಲ್ಲಿ ಪಂಚಾಯತ್ ಸಭಾಂಗಣದಲ್ಲಿ ಜರಗಿತು.
Related Articles
Advertisement
ಮೂರನೇ ವಾರ್ಡ್ ಸದಸ್ಯ ಚಂದ್ರಶೇಖರ ಮಡಿವಾಳ ಮಾತನಾಡಿ, ಅಲುಗುರಿ ಮಜಲು ಕಡುಬಡವ ನಿವಾಸಿಗಳು ಕೊಳವೆ ಬಾವಿ ಪಂಪು ಕೆಟ್ಟು ಹೋಗಿ ನೀರಿಗಾಗಿ ಪರದಾಡುತ್ತಿದ್ದಾರೆ. ಅಂಥವರಿಗೆ ಮೂಲ ಸೌಕರ್ಯ ಒದಗಿಸಬೇಕು ಹಾಗೂ ಗ್ರಾಮದ ಒಳಚರಂಡಿಗಳನ್ನು ಮಳೆಗಾಲಕ್ಕೆ ಮುನ್ನವೇ ದುರಸ್ತಿಪಡಿಸಬೇಕು ಎಂದು ಆಗ್ರಹಿಸಿದರು. ಸದಸ್ಯ ಗೋಪಾಲ ಹೆಗ್ಡೆ ಮಾತನಾಡಿ, ಬ್ಯಾಂಕ್ ರಸ್ತೆಯ ಅಂಚೆ ಕಚೇರಿ ಬಳಿ ತಳ್ಳುಗಾಡಿಗಳು ಸಹಿತ ಕೆಲವು ವ್ಯಾಪಾರಿಗಳು ರಸ್ತೆಯನ್ನು ಅತಿಕ್ರಮಿಸಿದ್ದು, ತೆರವುಗೊಳಿಸುವಂತೆ ಕೇಳಿಕೊಂಡರು. ಅವುಗಳನ್ನು ತೆರವುಗೊಳಿಸಲು ಕೂಡಲೇ ಸ್ಥಳದಲ್ಲಿದ್ದ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಲಾಯಿತು.
ಹಳೆ ಬಸ್ ನಿಲ್ದಾಣದ ಬಳಿಯಿಂದ ನಟ್ಟಿಬೈಲ್‌ಗೆ ತೆರಳುವ ಪಂಚಾಯತ್ ಕಾಲುದಾರಿಯನ್ನು ಖಾಸಗಿಯವರು ಅತಿಕ್ರಮಿಸುತ್ತಿರುವ ಬಗ್ಗೆಯೂ ಸದಸ್ಯರು ಸಭೆಯ ಗಮನಕ್ಕೆ ತಂದರು.
ಗ್ರಾಮ ಪಂಚಾಯತ್ 15ನೇ ಹಣಕಾಸು ಯೋಜನೆಗೆ ಸಂಬಂಧಿಸಿದಂತೆ 45 ಲ.ರೂ. ಮತ್ತು ವರ್ಗ-2ರಂತೆ ತುರ್ತು ಕೆಲಸಗಳಿಗೆ ಸಂಬಂಧಿಸಿ 15 ಲ.ರೂ.ಗೆ ಸರಕಾರದ ಮಾರ್ಗಸೂಚಿಯಂತೆ ಗ್ರಾಮ ಪಂಚಾಯತ್ ತುರ್ತು ಕ್ರಿಯಾ ಯೋಜನೆ ಮಾಡಿ ನಿರ್ಣಯ ಅಂಗೀಕರಿಸಿತು.
ಗ್ರಾ.ಪಂ. ಉಪಾಧ್ಯಕ್ಷೆ ಹೇಮಲತಾ ಶೆಟ್ಟಿ, ತಾ. ಪಂ. ಸದಸ್ಯೆ ಸುಜಾತಾಕೃಷ್ಣ ಆಚಾರ್ಯ, ಗ್ರಾಮ ಪಂಚಾಯತ್ ಸದಸ್ಯರಾದ ಯು.ಕೆ. ಇಬ್ರಾಹಿಂ, ಸುರೇಶ್ ಅತ್ರಮಜಲು, ಗೋಪಾಲ ಹೆಗ್ಡೆ, ಚಂದ್ರಶೇಖರ ಮಡಿವಾಳ, ಸುನಿಲ್ ಕುಮಾರ್, ಯು.ಟಿ. ತೌಸೀಫ್, ರಮೇಶ್ ಭಂಡಾರಿ ಮಾತನಾಡಿದರು. ಉಮೇಶ್ ಗೌಡ, ವಿನಾಯಕ ಪೈ, ಚಂದ್ರಾವತಿ ಹೆಗ್ಡೆ, ಸುಂದರಿ, ಭಾರತಿ, ಚಂದ್ರಾವತಿ, ಯೋಗಿನಿ, ಸುಶೀಲಾ, ಜಮೀಲಾ ಉಪಸ್ಥಿತರಿದ್ದರು.
ಪಿಡಿಒ ವಿಲ್ಫೆಡ್ ರೋಡ್ರಿಗಸ್ ಸ್ವಾಗತಿಸಿ, ಕಾರ್ಯದರ್ಶಿ ಉಸ್ಮಾನ್ ವಂದಿಸಿದರು. ಲೆಕ್ಕಾಧಿಕಾರಿ ರವಿಚಂದ್ರ ಕಾರ್ಯಕ್ರಮ ನಿರೂಪಿಸಿದರು.
ಅನಧಿಕೃತ ಅಂಗಡಿ ತೆರವಿಗೆ ನಿರ್ಣಯಪೇಟೆಯಲ್ಲಿ ಮತ್ತಷ್ಟು ಅನಧಿಕೃತ ಅಂಗಡಿಗಳು, ವಾಹನವನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿ ಹಣ್ಣು ಮಾರಾಟ, ಮೀನು ಮಾರಾಟ ಮಾಡುವಂಥದ್ದು ನಡೆಯುತ್ತಿದ್ದು, ಇದರಿಂದಾಗಿ ವಾಹನ ಸಂಚಾರಕ್ಕೂ ತೊಂದರೆ ಆಗುತ್ತಿದೆ. ತೆರಿಗೆ ಪಾವತಿಸಿ ವ್ಯಾಪಾರ ಮಾಡುವವರಿಗೂ ನಷ್ಟವಾಗುತ್ತಿದೆ. ಈ ನಿಟ್ಟಿನಲ್ಲಿ ಅನಧಿಕೃತ ವ್ಯಾಪಾರಿಗಳ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳುವ ಬಗ್ಗೆ ನಿರ್ಣಯ ವನ್ನು ಅಂಗೀಕರಿಸಲಾಯಿತು.