Advertisement

ಹದಗೆಟ್ಟ ರಸ್ತೆ; ವಾಹನ ಸವಾರರ ಪರದಾಟ

12:40 PM Dec 23, 2019 | Team Udayavani |

ಗಜೇಂದ್ರಗಡ: ಪಟ್ಟಣದಿಂದ ದಿಂಡೂರ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಒಳ ರಸ್ತೆ ಸಂಪೂರ್ಣವಾಗಿ ನಿರ್ಲಕ್ಷ್ಯಕ್ಕೆ ಒಳಗಾಗಿದ್ದು, ರಸ್ತೆ ಹದಗೆಟ್ಟು ಹಲವಾರು ವರ್ಷಗಳೇ ಕಳೆದರೂ ಆಡಳಿತ ಯಂತ್ರ ಇತ್ತ ಕಣ್ತೆರೆಯದೆ ಇರುವುದರಿಂದ ವಾಹನ ಸವಾರರು ನಿತ್ಯ ನರಕಯಾತನೆ ಅನುಭವಿಸುವಂತಾಗಿದೆ.

Advertisement

ಪಟ್ಟಣದ ಪಂಪ್‌ಹೌಸ್‌ ಬಳಿಯಿಂದ ದಿಂಡೂರ ಗ್ರಾಮಕ್ಕೆ ತೆರಳುವ 8 ಕಿಮೀ ಒಳರಸ್ತೆ ಇದ್ದೂ ಇಲ್ಲದಂತಾಗಿ ಪಾದಚಾರಿಗಳೂ ಸಹಿತ ಸಂಚರಿಸದಷ್ಟು ಹದಗೆಟ್ಟಿದೆ. ಈ ರಸ್ತೆ ದುರಸ್ತಿಗೊಂಡು ಹಲವು ವರ್ಷಗಳೇ ಗತಿಸಿವೆ. 8 ಕಿಮೀ ಸಂಚರಿಸಲು ಕನಿಷ್ಠ ಅರ್ಧ ಗಂಟೆ ಕಾಲಾವಧಿಯೇ ಬೇಕಿದೆ.

ಲಕ್ಕಲಕಟ್ಟಿ, ನಾಗೇಂದ್ರಗಡ, ಅಮರಗಟ್ಟಿ ಗ್ರಾಮಕ್ಕೆ ತೆರಳಲು ಬಹುತೇಕ ಜನರು ದಿಂಡೂರಿನ ಒಳರಸ್ತೆಯನ್ನೇ ಬಳಸುತ್ತಾರೆ. ಆದರೆ ರಸ್ತೆ ತುಂಬೆಲ್ಲಾ ಆವರಿಸಿಕೊಂಡಿರುವ ಜಲ್ಲಿಕಲ್ಲುಗಳು, ಎಲ್ಲೆಂದರಲ್ಲಿ ರಾರಾಜಿಸುವ ಗುಂಡಿಗಳಿಂದ ವಾಹನ ಸವಾರರು ತೀರಾ ಕಷ್ಟ ಅನುಭವಿಸುತ್ತಿದ್ದಾರೆ. ಇಷ್ಟಾದರೂ ಸ್ಥಳೀಯ ಜನಪ್ರತಿನಿಧಿಗಳ, ಸಂಬಂಧಪಟ್ಟ ಅಧಿಕಾರಿಗಳ ಕಣ್ಣಿಗೆ ಸಮಸ್ಯೆ ಬೀಳದಿರುವುದು ವಿಪರ್ಯಾಸವಾಗಿದೆ.

ಕೂಡಲೇ ರಾಜೂರ ಗ್ರಾಪಂ ಮತ್ತು ತಾಪಂ ಕ್ಷೇತ್ರವನ್ನು ಪ್ರತಿನಿಧಿ ಸುವ ಜನಪ್ರತಿನಿಧಿಗಳು ಎಚ್ಚೆತ್ತು ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳಬೇಕಿದೆ. ಇಲ್ಲವಾದರೆ ಸಾರ್ವಜನಿಕರ ಪ್ರತಿಭಟನೆ ಎದುರಿಸುವ ಸಾಧ್ಯತೆ ದಟ್ಟವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next