ಮಲೇಬೆನ್ನೂರ: ಎಕ್ಕೆಗೊಂದಿ-ನಂದಿಗುಡಿ ರಸ್ತೆಯ ಪರಿಸ್ಥಿತಿ ಹೇಗಿದೆ ಗೊತ್ತಿದೆಯಾ, ವೃದ್ಧರು, ಗರ್ಭಿಣಿಯರು ಈ ರಸ್ತೆಯಲ್ಲಿ ಸಂಚರಿಸಲಿಕ್ಕೆ ಸಾಧ್ಯವಿದೆಯೇ ಎಂದು ರೈತ ಸಂಘ ಮತ್ತು ಹಸಿರುಸೇನೆ ಮುಖಂಡ ಹಾಳೂರು ನಾಗರಾಜ್, ಲೋಕೋಪಯೋಗಿ ಇಲಾಖೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಎಕ್ಕೆಗೊಂದಿ-ನಂದಿಗುಡಿ ರಸ್ತೆ ಪಕ್ಕದಲ್ಲಿರುವ ಕಾಲುವೆಯನ್ನು ದುರಸ್ತಿ ಮಾಡಿಸಬೇಕು, ರಸ್ತೆಯ ಪಕ್ಕದಲ್ಲಿ ಹಾಕಿರುವ ಘನ ತ್ಯಾಜ್ಯವನ್ನು ವಿಲೇವಾರಿ ಮಾಡಿಸಬೇಕು, ರಸ್ತೆಯನ್ನು ಉತ್ತಮ ಗುಣಮಟ್ಟದಲ್ಲಿ ಡಾಂಬರೀಕರಣ ಮಾಡಿಸಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರೈತ ಸಂಘ ಮತ್ತು ಹಸಿರುಸೇನೆಯ ಗ್ರಾಮ ಘಟಕ ಹಾಗೂ ಭಾನುವಳ್ಳಿ ಗ್ರಾಸ್ಥರು ಗುರುವಾರ ಶಿವಮೊಗ್ಗ-ಹರಿಹರ ರಸ್ತೆ ತಡೆ ಮಾಡಿ ಪ್ರತಿಭಟಿಸಿದ ಸಂದರ್ಭದಲ್ಲಿ ಅವರು ಮಾತನಾಡಿದರು.
ಬೆಳ್ಳೂಡಿ-ರಾಮತೀರ್ಥ ರಸ್ತೆಯಲ್ಲಿರುವ ಸೇತುವೆ ಕಳಪೆ ಕಾಮಗಾರಿಯಿಂದಾಗಿ ಹಾಳಾಗಿದೆ. ಮಲೇಬೆನ್ನೂರು-ಧೂಳೆಹೊಳೆ ರಸ್ತೆ, ರಾಜನಹಳ್ಳಿ-ಎಳೆಹೊಳೆ ರಸ್ತೆ ಕೂಡ ದುಸ್ಥಿತಿಯಲ್ಲಿದೆ. ಈಗ ಎಕ್ಕೆಗೊಂದಿ-ನಂದಿಗುಡಿ ರಸ್ತೆಯೂ ಹಾಳಾಗಿದೆ. ಹರಿಹರ ತಾಲೂಕಿನ ಎಲ್ಲಾ ಗ್ರಾಮಗಳ ಸಂಪರ್ಕ ರಸ್ತೆಗಳು ಹಾಳಾಗಿ ಗುಂಡಿಗಳೇ ತುಂಬಿ ಹೋಗಿವೆ. ಎಂದಾದರೂ ಈ ರಸ್ತೆಯಲ್ಲಿ ಸಂಚರಿಸಿದ್ದೀರಾ ಎಂದು ಪ್ರಶ್ನಿಸಿದರು.
ಯಾವ ಮಾನದಂಡದ ಮೇಲೆ ರಸ್ತೆ ಕಾಮಗಾರಿ ಕೈಗೊಂಡಿದ್ದೀರಿ, ಕಳಪೆ ಕಾಮಗಾರಿಗೆ ಹೇಗೆ ರೀತಿ ಹಣ ಮಂಜೂರು ಮಾಡಿದ್ದೀರಿ, ಪ್ಯಾಚ್ ವರ್ಕ್‌ಗೆ ಹಣ ಹೇಗೆ ಬಂತು ಎಂದು ವಾಗ್ಧಾಳಿ ನಡೆಸಿದ ಪ್ರತಿಭಟನಾಕಾರರು, ಮಾಹಿತಿ ಹಕ್ಕು ಕಾಯ್ದೆಯಡಿ ಮಾಹಿತಿ ಪಡೆದು ನಿಮ್ಮ ಮೇಲೆ ಪ್ರಕರಣ ದಾಖಲಿಸುತ್ತೇವೆ ಎಂದು ತಹಶೀಲ್ದಾರ್ ಕೆ.ಬಿ. ರಾಮಚಂದ್ರಪ್ಪನವರ ಸಮ್ಮುಖದಲ್ಲಿ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ರೈತ ಸಂಘದ ಜಿಲ್ಲಾಧ್ಯಕ್ಷ ಪ್ರಭು ಗೌಡ, ಉಪಾಧ್ಯಕ್ಷ ಎಂ. ಪಾಲಾಕ್ಷಪ್ಪ, ಗರಡಿ ಮನೆ ಬಸಣ್ಣ, ಭಾನುವಳ್ಳಿ ಕೊಟ್ರೇಶ್, ಷಣ್ಮುಖಯ್ಯ, ನಂದ್ಯಪ್ಪ, ಕೆ.ವಿ. ರುದ್ರಮುನಿ, ಎನ್. ಶಿವಕುಮಾರ್, ಪ್ರಕಾಶ್, ನಾಗರಾಜ್, ಮಣಿಕುಮಾರ್, ಬಸವನಗೌಡ, ಕುಮಾರ್, ಹನಗವಾಡಿ ರುದ್ರೇಶ್ ಮತ್ತಿತರರು ಇದ್ದರು.
ಪ್ಯಾಚ್ ವರ್ಕ್ ಕಾಮಗಾರಿಗೆ 5 ಕೋಟಿ ರೂ. ಮಂಜೂರಾಗಿದೆ. ಸಚಿವರ ಜೊತೆ ಚರ್ಚಿಸಿದ ನಂತರ ರಸ್ತೆ ಕಾಮಗಾರಿಗೆ 13 ಕೋಟಿ ರೂ.ಮಂಜೂರು ಮಾಡುವುದಾಗಿ ಭರವಸೆ ನೀಡಿದ್ದಾರೆ. 5 ಕೋಟಿ ರೂ. ವೆಚ್ಚದಲ್ಲಿ ರಸ್ತೆ ಗುಂಡಿ ಮುಚ್ಚಿಸಲು ಟೆಂಡರ್ ಆಗಿದೆ. ರಸ್ತೆ ಗುಂಡಿ ಮುಚ್ಚುವ ಕಾರ್ಯ ನಾಳೆಯಿಂದಲೇ ಆರಂಭವಾಗಲಿದೆ.
-ನಾಗರಾಜ್, ಲೋಕೋಪಯೋಗಿ ಇಲಾಖೆ ಸಹಾಯಕ ಅಭಿಯಂತರ