ನರೇಗಲ್ಲ : ರೋಣ ತಾಲೂಕಿನ ಕೊನೆಯ ಹಳ್ಳಿ ನಾಗರಾಳ ಗ್ರಾಮದಿಂದ ನೀರಲಗಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮೂರು ಕಿ.ಮೀ ರಸ್ತೆ ಹಾಗೂ ಮಧ್ಯದಲ್ಲಿರುವ ಸೇತುವೆ ಸಂಪೂರ್ಣವಾಗಿ ಕಿತ್ತು ಹೋಗಿದ್ದರಿಂದ ವಾಹನ ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ.
ರಸ್ತೆ ಹದಗೆಟ್ಟಿರುವುದರ ಜತೆಗೆ ಅಲ್ಲಲ್ಲಿ ತಗ್ಗು-ದಿನ್ನೆಗಳು ಬಿದ್ದು ಬೈಕ್ ಸವಾರರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ರಸ್ತೆ ಸುಧಾರಣೆ ಹಾಗೂ ಸೇತುವೆ ಕಾಮಗಾರಿಗೆ ಕೋಟಿ ಹಣ ವ್ಯರ್ಥ ಮಾಡಿದರೂ ರಸ್ತೆ ಕಾಮಗಾರಿ ಮಾತ್ರ ಮುಗಿಯುತ್ತಿಲ್ಲ.
ಈ ರಸ್ತೆಯ ಮೇಲೆ ಮಳೆಗಾಲದ ಸಮಯದಲ್ಲಿ ಸದಾ ಕೆಸರಿನಿಂದ ಕೂಡಿರುತ್ತದೆ. ಅಲ್ಲದೆ ತೆಗ್ಗಿನಲ್ಲಿ ನೀರು ತುಂಬಿಕೊಂಡಿರುವುದರಿಂದ ಸ್ವಲ್ಪ ನಿಷ್ಕಾಳಜಿಯಿಂದ ಪ್ರಯಾಣ ಮಾಡಿದರೆ ಅಪಾಯ ಕಟ್ಟಿಟ್ಟ ಬುತ್ತಿ. ರಸ್ತೆ ದಶಕಗಳಿಂದ ಹದೆಗಟ್ಟಿರುವುದನ್ನು ಗಮನಸಿದ ಆಗಿನ ಶಾಸಕ ಬಿ.ಆರ್. ಯಾವಗಲ್ಲ ಅವರು ಜಿ.ಪಂನ ನರ್ಬಾಡ್ ಯೋಜನೆಯ 1 ಕೋಟಿ ರೂ. ಅನುದಾನದಲ್ಲಿ ಈ ರಸ್ತೆ ಸುಧಾರಣೆ ಕಾಮಗಾರಿಗೆ ಚಾಲನೆ ನೀಡಿದ್ದರು. ಆದರೆ, ಕಳೆದ ಎರಡು ವರ್ಷಗಳಿಂದ ಈ ಕಾಮಗಾರಿ ಮಾತ್ರ ಆಮೆವೇಗದಲ್ಲಿ ಸಾಗಿದೆ. ಗುತ್ತಿಗೆದಾರ ಹಾಗೂ ಜಿ.ಪಂನ ಅಧಿಕಾರಿಗಳ ನಿರ್ಲಕ್ಷ್ಯದಿಂದ ವಾಹನ ಸವಾರರು ಜೀವವನ್ನು ಕಳೆದುಕೊಳ್ಳುವ ಭೀತಿಯಲ್ಲಿ ಸಂಚಾರ ಮಾಡುತ್ತಿದ್ದಾರೆ.
ರಸ್ತೆ ಹದಗೆಟ್ಟಿರುವುದರಿಂದ ದೊಡ್ಡ ಪ್ರಮಾಣದ ವಾಹನಗಳು ಹೆಚ್ಚಾಗಿ ರಸ್ತೆಯಿಂದ ಬರಲು ಹಿಂದೇಟು ಹಾಕುತ್ತಿವೆ. ಕೇವಲ ಗ್ರಾಮಕ್ಕೆ ದಿನಕ್ಕೆ ಒಂದೇ ಬಸ್ ಓಡಾಡುತ್ತಿದೆ. ಹೀಗಾಗಿ ಗ್ರಾಮದ ಸಾರ್ವಜನಿಕರು, ವಿದ್ಯಾರ್ಥಿಗಳು, ವ್ಯಪಾರಸ್ಥರು, ಕೂಲಿ, ಕಾರ್ಮಿಕರು ನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ. ಇದ್ದ ಅಲ್ಲ ಪ್ರಮಾಣದ ರಸ್ತೆಯಲ್ಲಿಯೂ ಕಾಮಗಾರಿ ಪ್ರಾರಂಭವಾಗಿರುವದರಿಂದ ಸಂಪೂರ್ಣವಾಗಿ ಜಲ್ಲಿ ಕಲ್ಲುಗಳು ತುಂಬಿಕೊಂಡಿವೆ. ಅಲ್ಲದೇ ಕೇಲ ಭಾಗದಲ್ಲಿ ದೊಡ್ಡ ಪ್ರಮಾಣದ ತಗ್ಗುಗಳು ಬಿದ್ದಿದ್ದು ಸಮಸ್ಯೆ ಇಷ್ಟು ಜಟಿಲ್‌ವಾಗಿದೆ. ರಸ್ತೆ ಮೇಲೆ ಖಡಿಗಳು ಹಾಗೂ ಗರಸು ಹಾಕಿರುವುದರಿಂದ ವಾಹನಗಳಿಗೆ ತೊಂದರೆಯಾಗುತ್ತದೆ. ಈ ರಸ್ತೆಯ ಮಧ್ಯದಲ್ಲಿ ಸಂಚರಿಸುವಾಗ ಸ್ವಲ್ಪ ಎಚ್ಚರಿಕೆಯಿಂದ ಸಂಚರಿಸಬೇಕಾಗುತ್ತದೆ.
ಗುತ್ತಿಗೆದಾರನ ನಿರ್ಲಕ್ಷ್ಯ: ಜಿ.ಪಂ ನರ್ಬಾಡ್ ಯೋಜನೆಯ 1 ಕೋಟಿ ರೂ.ಅನುದಾನದಲ್ಲಿ ನಾಗರಾಳ ಗ್ರಾಮದಿಂದ ನೀರಲಗಿ ವರೆಗೆ ರಸ್ತೆ ಹಾಗೂ ಸೇತುವೆ ನಿರ್ಮಾಣ ಕಾಮಗಾರಿಯನ್ನು ಗುತ್ತಿಗೆ ಪಡೆದ ಗುತ್ತಿಗೆದಾರು ಕಾಮಗಾರಿಯನ್ನು ವಿಳಂಬ ಮಾಡುತ್ತಿರುವುದರಿಂದ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಇದರಿಂದ ಗ್ರಾಮಸ್ಥರು ಗುತ್ತಿಗಾರರ ವಿರುದ್ಧ ಜಿ.ಪಂ ಅಧಿಕಾರಿಗಳಿಗೆ ಹತ್ತು ಹಲವಾರು ಬಾರಿ ಮೌಖೀಕ ಹಾಗೂ ಲಿಖೀತ ಅರ್ಜಿಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ.
ಕಳಪೆ ಕಾಮಗಾರಿ ಆರೋಪ: 1 ಕೋಟಿ ಅನುದಾನದಲ್ಲಿ ನಿರ್ಮಿಸುತ್ತಿರುವ 3 ಕಿ.ಮೀ ರಸ್ತೆ ಹಾಗೂ ಸಣ್ಣ ಹಳ್ಳದ ಸೇತುವೆಗೆ ಎತ್ತರದ ತಡಗೋಡೆ ನಿರ್ಮಾಣದಲ್ಲಿ ಕಳಪೆ ಗುಣಮಟ್ಟದ ಹಳ್ಳ ಮರಳು, ಖಡಿ, ಕಬ್ಬಿಣ, ಸಿಮೆಂಟ್, ಡಾಂಬರ್ ಸೇರಿದಂತೆ ಕಾಮಗಾರಿಗೆ ಬಳಕೆ ಮಾಡುತ್ತಿರುವ ವಸ್ತುಗಳು ಸಂಪೂರ್ಣವಾಗಿ ಕಳಪೆ ಗುಣಮಟ್ಟದಿಂದ ಕೂಡಿವೆ. ಹೀಗಾಗಿ ಗ್ರಾಮಸ್ಥರು ಕಾಮಗಾರಿಯನ್ನು ಕಳೆದ ಮೂರ್‍ನಾಲ್ಕು ತಿಂಗಳಗಳಿಂದ ಸ್ಥಗಿತಗೊಳಿಸಿದ್ದಾರೆ. ಅಲ್ಲದೇ ಗುತ್ತಿಗೆದಾರನ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಜಿ.ಪಂ ಅ ಧಿಕಾರಿಗಳಿಗೆ ಅರ್ಜಿ ಕೂಡ ಸಲ್ಲಿಸಿದ್ದಾರೆ.
ನಾಗರಾಳ ಗ್ರಾಮದಿಂದ ನೀರಲಗಿ ಸಂಪರ್ಕ ಕಲ್ಪಿಸುವ ರಸ್ತೆ ಸುಧಾರಣೆಗೆ ಈಗಾಗಲೇ 1 ಕೋಟಿ ರೂ. ಅನುದಾನ ನರ್ಬಾಡ್ ಯೋಜನೆಯಡಿ ನೀಡಲಾಗಿದೆ. ಆದರೆ, ಗುತ್ತಿಗೆ ಪಡೆದ ಗುತ್ತಿಗೆದಾರ ಕಾಮಗಾರಿಯನ್ನು ವಿಳಂಬ ಮಾಡಿರುವ ಬಗ್ಗೆ ಇಲಾಖೆ ಗಮನಕ್ಕೆ ಬಂದಿದೆ. ಕೂಡಲೇ ಗುತ್ತಿಗೆದಾರನ ಮೇಲೆ ಕ್ರಮ ಕೈಗೊಳ್ಳಲಾಗುವುದು. ರಸ್ತೆ ಸುಧಾರಣೆ ಹಾಗೂ ಸೇತುವೆ ಕಾಮಗಾರಿಯನ್ನು ಕೂಡಲೇ ಮುಗಿಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಲಾಗುವುದು.
–ಉಮೇಶ ಮಂಡಸೊಪ್ಪಿ, ಜಿ.ಪಂ ಅಭಿಯಂತರ
ಸಿಕಂದರ ಎಂ. ಆರಿ