ಚಿತ್ತಾಪುರ: ಪಟ್ಟಣದ ಲಾಡ್ಜಿಂಗ್ ಕ್ರಾಸ್‌ನಿಂದ ಇಟಗಾ, ಮೋಗಲಾ, ಮೋಗಲಾ ತಾಂಡಾ, ದಿಗ್ಗಾಂವಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆ ಸಂಪೂರ್ಣ ಹದಗೆಟ್ಟಿದ್ದು, ರಸ್ತೆಯುದ್ದಕ್ಕೂ ತಗ್ಗು, ಗುಂಡಿಗಳುಬಿದ್ದಿವೆ.
ರಸ್ತೆಯಲ್ಲಿ ಕೆಲವೆಡೆ ದೊಡ್ಡ ಹೊಂಡಗಳೇ ನಿರ್ಮಾಣವಾಗಿವೆ. ಅಲ್ಲದೇ ಅಲ್ಲಲ್ಲಿ ಜಲ್ಲಿಕಲ್ಲು ಎದ್ದಿದ್ದರಿಂದ ರಸ್ತೆಯ ಮೇಲೆ ಧೂಳು ಆವರಿಸಿಕೊಂಡಿದೆ. ಹೀಗಾಗಿ ಇಲ್ಲಿ ಸಂಚರಿಸುವ ವಾಹನಗಳ ಸವಾರರು, ಜನ-ಜಾನುವಾರುಗಳು ಧೂಳಿನಿಂದ ಕಂಗೆಟ್ಟಿವೆ.
ಕಳೆದ ನಾಲ್ಕೈದು ವರ್ಷಗಳಿಂದ ರಸ್ತೆ ಹಾಳಾಗಿದ್ದರೂ ದುರಸ್ತಿ ಕಾರ್ಯ ಕೈಗೊಂಡಿಲ್ಲ. ಇದೇ ರಸ್ತೆ ಬದಿಯಲ್ಲಿ ಓರಿಯಂಟ್ ಸಿಮೆಂಟ್ ಕಂಪೆನಿ ನಿರ್ಮಾಣವಾಗಿದೆ. ನೂರಾರು ಲಾರಿಗಳು ಲೋಡ್ ತುಂಬಿಕೊಂಡು ನಿತ್ಯ ಸಂಚರಿಸುತ್ತವೆ. ಇದರಿಂದ ರಸ್ತೆಯಲ್ಲಿ ದೊಡ್ಡ ಹೊಂಡಗಳೇ ನಿರ್ಮಾಣವಾಗಿವೆ. ಸುಮಾರು 10 ಕಿ.ಮೀ. ಉದ್ದದ ರಸ್ತೆ ಸಂಪೂರ್ಣ ಹಾಳಾಗಿ ಧೂಳು ಮಯವಾಗಿದೆ. ಈ ಮಾರ್ಗದಲ್ಲಿ ಸಂಚರಿಸುವ ವಾಹನಗಳ ಸವಾರರಿಗೆ ಧೂಳಿನ ಸ್ನಾನ ಹಾಗೂ ಕಣ್ಣಲ್ಲಿ ಕಸ, ಕಡ್ಡಿ ಬಿದ್ದು ಅಪಘಾತಗಳು ಸಂಭವಿಸಿವೆ ಎಂದು ಸ್ಥಳೀಯರು ದೂರಿದ್ದಾರೆ.
ದ್ವಿಚಕ್ರ ವಾಹನ, ಆಟೋ ಸೇರಿದಂತೆ ಇತರೆ ವಾಹನಗಳಲ್ಲಿ ಕುಳಿತು ಇಟಗಾ, ದಿಗ್ಗಾಂವ, ಮೋಗಲಾ, ಮೋಗಲಾ ತಾಂಡಾದ ಜನರು ಚಿತ್ತಾಪುರಕ್ಕೆ ಬರಬೇಕಾದರೆ ನಿತ್ಯ ಧೂಳಿನಿಂದ ಮೂಗು ಮುಚ್ಚಿಕೊಂಡು ಸಂಚರಿಸುವಂತಾಗಿದೆ. ಪಟ್ಟಣದ ಲಾಡ್ಗಿಂಗ್ ಕ್ರಾಸ್‌ಯಿಂದ ಬಸ್ ಡಿಪೋವರೆಗೆ ಧೂಳು ಮೇಲೆ ಏಳುತ್ತಿರುವುದರಿಂದ ಅಕ್ಕ-ಪಕ್ಕದ ಹೋಟೆಲ್, ದಾಬಾಗಳಲ್ಲಿ ಧೂಳು ಸೇರಿಕೊಳ್ಳುತ್ತಿದೆ. ರಸ್ತೆ ಬದಿಯ ವ್ಯಾಪಾರಿಗಳಿಗೂ ತೊಂದರೆಯಾಗಿದ್ದು, ಅವರು ತಯಾರಿಸಿದ ಆಹಾರ ಪದಾರ್ಥಗಳ ಮೇಲೂ ಧೂಳು ಬೀಳುತ್ತಿದೆ. ಇದನ್ನೇ ತಿಂದ ಗ್ರಾಹಕರಿಗೆ ಅಸ್ತಮಾ, ಕೆಮ್ಮು, ದಮ್ಮು, ಜ್ವರ ಸೇರಿದಂತೆ ಇತರೆ ಕಾಯಿಲೆ ಬರುತ್ತಿವೆ ಎಂದು ಸ್ಥಳೀಯ ನಿವಾಸಿ ಲಕ್ಷಿŒàಕಾಂತ ಅಸಮಾಧಾನ ವ್ಯಕ್ತಪಡಿಸುತ್ತಾರೆ.
ಮಳೆ ಬಂದರಂತೂ ಪಟ್ಟಣದ ರಸ್ತೆ ಸಂಪೂರ್ಣ ಕೆಸರುಮಯವಾಗಿ ಬೀಡುತ್ತದೆ. ಎಲ್ಲಿ ತಗ್ಗು ಇದೆ ಅನ್ನುವುದೇ ಸವಾರರಿಗೆ ಕಾಣಲ್ಲ. ರಸ್ತೆ ಮೇಲೆ ಹಾಕಿದಕಟ್ಟಿಂಗ್ ಚಿಂಪ್ ಹಾಗೂ ಮುರಮ್‌ನಿಂದ ಏಳುತ್ತಿರುವ ಧೂಳಿನಿಂದ ಬೈಕ್‌ಗಳು ಸ್ಕೀಡ್ ಆಗಿ ಬಿದ್ದು ಸವಾರರು ಕೈ-ಕಾಲು ಮುರಿದುಕೊಂಡ ಘಟನೆಗಳು ನಡೆದಿವೆ. ಧೂಳಿನಿಂದ ಜಮೀನಿನಲ್ಲಿ ಬೆಳೆದ ಮೇವನ್ನುಜಾನುವಾರುಗಳು ತಿನ್ನುತ್ತಿಲ್ಲ. ಧೂಳು ಏಳದಂತೆ ಪ್ರತಿದಿನ ನೀರು ಸಿಂಪಡಿಸಬೇಕು ಎಂದು ಓರಿಯಂಟ್ ಕಂಪೆನಿ ಅಧಿಕಾರಿಗಳಿಗೆ ಸಾಕಷ್ಟು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಈಗಲಾದರೂ ಸಂಬಂಧಪಟ್ಟ ಅಧಿ ಕಾರಿಗಳು ಕೂಡಲೇ ರಸ್ತೆ ದುರಸ್ತಿ ಮಾಡಿ ಬೆಳೆಗಳನ್ನು ರಕ್ಷಿಸಿ, ರೈತರಿಗೆ ಹಾಗೂ ಜನ ಸಾಮಾನ್ಯರಿಗೆ ಆಗುತ್ತಿರುವ ತೊಂದರೆ ದೂರ ಮಾಡಬೇಕು ಎಂದು ಸಾರ್ವಜನಿಕರು ಮತ್ತು ಈ ಭಾಗದ ರೈತರು ಆಗ್ರಹಿಸಿದ್ದಾರೆ.
ಹದಗೆಟ್ಟ ರಸ್ತೆಯನ್ನು ದುರಸ್ತಿ ಮಾಡಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನ ಆಗಿಲ್ಲ. ಈ ರಸ್ತೆ ಮೂಲಕವೇ ಓರಿಯಂಟ್ ಕಂಪೆನಿಗೆ 10-14 ಚಕ್ರದ ಲಾರಿ, ಬಂಕರ್‌ಗಳಲ್ಲಿ ಟನ್‌ಗಟ್ಟಲೇ ಲೋಡ್ ತುಂಬಿಕೊಂಡು ಸಂಚರಿಸುತ್ತವೆ. ಹೀಗಾಗಿ ರಸ್ತೆಯಲ್ಲಿ ತಗ್ಗು-ಗುಂಡಿಗಳು ಬಿದ್ದಿದ್ದರಿಂದ ಲಾರಿ ಹಾಗೂ ಬಂಕರ್‌ಗಳ ಟೈರ್‌ಗಳು ಸ್ಫೋಟಗೊಂಡು, ಪಾಟಾಗಳು ಮುರಿದು ವಾರಗಟ್ಟಲೇ ರಸ್ತೆಯಲ್ಲಿಯೇ ನಿಲ್ಲುವುದರಿಂದ ಬೇರೆ ವಾಹನಗಳು ಸಂಚರಿಸಲು ತೊಂದರೆ ಉಂಟಾಗುತ್ತಿದೆ.
– ಮಲ್ಲೇಶಿ ಮಾಕಾ ನಾಗಾವಿ, ಲಾರಿ ಯುನಿಯನ್ ಸಂಘದ ಅಧ್ಯಕ್ಷ
ಓರಿಯಂಟ್ ಕಂಪೆನಿ ಸ್ಥಾಪನೆ ಆದಾಗಿನಿಂದ ಇಲ್ಲಿ ಬಾರಿ ವಾಹನಗಳು ಸಂಚರಿಸುತ್ತಿವೆ. ಇದರಿಂದ ತಗ್ಗು ಗುಂಡಿಗಳು ಬಿದ್ದಿವೆ. ಜತೆಗೆ ಧೂಳಿನಲ್ಲಿವಾಹನಗಳು ಸಂಚರಿಸುವಂತಾಗಿದೆ. ಸಂಬಂಧಪಟ್ಟವರು ಇತ್ತ ಗಮನ ಹರಿಸಿ ಧೂಳು ಬಾರದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು.
-ಜಾವೀದ್, ಸ್ಥಳೀಯ ನಿವಾಸಿ
-ಎಂ.ಡಿ ಮಶಾಖ