Advertisement

ಗುಂಡಿಗೆ ಇಧ್ದೋರು ಈ ಗುಂಡಿ ರಸ್ತೆಗೆ ಬನ್ನಿ

03:41 PM Oct 12, 2020 | Suhan S |

ಸಕಲೇಶಪುರ: ಮೂರು ವರ್ಷಗಳಿಂದ ಸಕಲೇಶಪುರ-ಹಾಸನ-ವರನಹಳ್ಳಿ ವರೆಗಿನ ರಾಷ್ಟ್ರೀಯ ಹೆದ್ದಾರಿ 75ರ ಚತುಷ್ಪಥಕಾಮಗಾರಿ ನಡೆಯುತ್ತಿದೆ. ಇತ್ತ ಕಾಮಗಾರಿಯೂ ಪೂರ್ಣಗೊಳ್ಳುತ್ತಿಲ್ಲ, ಅತ್ತ ಇದ್ದ ರಸ್ತೆಯೂ ಗುಂಡಿ ಬಿದ್ದು ಸಂಪೂರ್ಣ ಹದಗೆಟ್ಟು ವಾಹನ ಸವಾರರ ಗೋಳುಕೇಳುವವರೇ ಇಲ್ಲದಂತಾಗಿದೆ.

Advertisement

ರಾಜ್ಯರಾಜಧಾನಿ ಬೆಂಗಳೂರಿನಿಂದ ಕಡಲ ಕಿನಾರೆ ಮಂಗಳೂರಿಗೆ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ-75 ರಾಜ್ಯದ ಪ್ರಮುಖ ಹೆದ್ದಾರಿಗಳಲ್ಲಿ ಒಂದಾಗಿದೆ.ಇಂತಹ ಹೆದ್ದಾರಿ ಯುದ್ದಕ್ಕೂ ಗುಂಡಿಗಳೇ ತುಂಬಿದ್ದು, ವಾಹನ ಸಂಚಾರ ದುಸ್ತರವಾಗಿದೆ. ಗುಂಡಿಗಳಲ್ಲಿ ನೀರು ತುಂಬಿರುವುದರಿಂದ ವಾಹನ ಸವಾರರಿಗೆ ರಸ್ತೆ ಯಾವುದು, ಗುಂಡಿ ಯಾವುದೋ ಗೊತ್ತಾಗುವುದೇ ಇಲ್ಲ. ಯಾಮಾರಿ ನಾಲ್ಕು ಚಕ್ರದ ವಾಹನ ನೀರಿಗೆ ಇಳಿಸಿದರೆ, ಪರದಾಡುವುದಂತೂ ಗ್ಯಾರಂಟಿ. ಗುಂಡಿ ತಪ್ಪಿಸಲು ಹೋಗಿ ಎದುರು ಬರುವ ವಾಹನಕ್ಕೆ ಡಿಕ್ಕಿ ಹೊಡೆದು ಸವಾರರು ಪ್ರಾಣ ಕಳೆದುಕೊಂಡಿರುವ ಘಟನೆಗಳು ನಡೆದಿವೆ.ಮಳೆಗಾಲದಲ್ಲಿಒಂದು ರೀತಿ ಸಮಸ್ಯೆಆದ್ರೆ,ಬೇಸಿಗೆಯಲ್ಲಿ ದೂಳಿನಕಿ ರಿಕಿರಿ. ಇದರಿಂದ ವಾಹನ ಸವಾರರು ಹೈರಾಣಾಗಿದ್ದಾರೆ.

ಸಕಲೇಶಪುರದಿಂದ-ಹಾಸನ 40 ಕಿ.ಮೀ ಅಂತರ ಇದ್ದು, ಈ ಗುಂಡಿಗಳ ಮಧ್ಯೆ ಸಾಗಬೇಕಾದ್ರೆ ಈಗ ಒಂದೂವರೆ ಗಂಟೆ ಬೇಕು. ಅಷ್ಟೇ ಅಲ್ಲ, ರಾಷ್ಟ್ರೀಯ ಹೆದ್ದಾರಿ -75 ಸಕಲೇಶಪುರ ಪಟ್ಟಣದಲ್ಲಿ ಕಿರಿದಾಗಿದ್ದು, ಸಂಚರಿಸಲು ಯಮಯಾತನೆ ಪಡಬೇಕು. ವಾಹನ ದಟ್ಟಣೆಯಿಂದ ಪಟ್ಟಣದ ನಾಗರಿಕರು ತೊಂದರೆ ಅನುಭವಿಸಬೇಕಾಗಿದೆ. ಕರಾವಳಿ ಜಿಲ್ಲೆಗಳ ಸಂಸದರು, ಶಾಸಕರು, ಜನ ಪ್ರತಿನಿಧಿಗಳು ಈ ಹದಗೆಟ್ಟ ಹೆದ್ದಾರಿಯಲ್ಲೇ ಸಂಚರಿಸುತ್ತಾರೆ. ಆದರೆ, ಯಾರೂ ಈ ಬಗ್ಗೆ ತಲೆ ಕೆಡಿಸಿಕೊಳ್ಳುವುದೇ ಇಲ್ಲ. ಸಂಸತ್‌ನಲ್ಲಿ, ಅಧಿವೇಶನದಲ್ಲಿ ಗಟ್ಟಿ ಧ್ವನಿ ಎತ್ತುವುದೂ ಇಲ್ಲ.

2022ಅಂತ್ಯಕಾದ್ರೂ ಮುಗಿಯುತ್ತಾ? :  ಮಾರನಹಳ್ಳಿಯಿಂದ ಸಕಲೇಶಪುರ -ಹಾಸನದವರೆಗಿನ 45 ಕಿ.ಮೀ. ರಾಷ್ಟ್ರೀಯ ಹೆದ್ದಾರಿಯನ್ನು ಚತುಷ್ಪಥ ಮಾಡಲು ಸ್ಪೇನ್‌ ಮೂಲದ ಐಸೋಲೆಕ್ಸ್‌ ಕಂಪನಿ ಕಾಮಗಾರಿ ಟೆಂಡರ್‌ ಪಡೆದಿದೆ. 2019ರ ಮಾರ್ಚ್‌ ಅಂತ್ಯಕ್ಕೆ ಕಾಮಗಾರಿ ಪೂರ್ಣಗೊಳಿಸುವ ಭರವಸೆ ನೀಡಿತ್ತು. ಆದರೆ, ಟೆಂಡರ್‌ ಪ್ರಕ್ರಿಯೆ ನಡೆದ ಹಲವು ತಿಂಗಳು ಕಳೆದರೂ ಕಾಮಗಾರಿ ಕೈಗೆತ್ತಿಕೊಳ್ಳದ ಕಂಪನಿ, ವರ್ಷದ ನಂತರ ಉತ್ತರ ಪ್ರದೇಶ ಮೂಲದ ರಾಜ್‌ಕಮಲ್ ‌ಕಂಪನಿಗೆ ಉಪಗುತ್ತಿಗೆ ನೀಡಿತ್ತು. ರಾಜ್‌ಕಮಲ್‌ ಕಂಪನಿ ಸಹ ತಾಂತ್ರಿಕ ಕಾರಣ ನೀಡಿ ಕಾಮಗಾರಿಯನ್ನು ಅಮೆಗತಿಯಲ್ಲಿ ನಡೆಸುತ್ತಿದೆ.ಇದರ ಪರಿಣಾಮಅವ ಧಿಮುಗಿದರೂ ಕಾಮಗಾರಿ ಶೇ.30 ಮಾತ್ರ ಪೂರ್ಣಗೊಂಡಿದೆ. 2019ರ ಮೇನಲ್ಲಿ ದೆಹಲಿಯಲ್ಲಿ ಕೇಂದ್ರ ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಅವರೊಂದಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಉನ್ನತ ಅಧಿಕಾರಿಗಳು ಹಲವು ಸುತ್ತಿನ ಮಾತುಕತೆ ನಡೆಸಿ, ರಾಜ್‌ಕಮಲ್ ‌ಕಂಪನಿಯೇ ಕಾಮಗಾರಿ ಮುಂದುವರೆಸಿ, 2022ರ ಡಿಸೆಂಬರ್‌ ಅಂತ್ಯಕ್ಕೆಸಂಚಾರಕ್ಕೆ ಮುಕ್ತಗೊಳಿಸಲಿ ಎಂದು ತೀರ್ಮಾನಿಸಿತು. ಆದರೆ, ಸಭೆ ನಡೆದು ವರ್ಷ ಕಳೆದರೂ ಕಾಮಗಾರಿ ವೇಗ ಪಡೆದುಕೊಂಡಿಲ್ಲ.

ಪ್ರತಿಭಟನೆಗೆ ಕರವೇ ನಿರ್ಧಾರ :  ಹದಗೆಟ್ಟಿರುವ ರಾಷ್ಟ್ರೀಯ ಹೆದ್ದಾರಿ ಡಾಂಬರೀಕರಣಕ್ಕೆ ಆಗ್ರಹಿಸಿ ತಾಲೂಕಿನ ಬಾಳ್ಳುಪೇಟೆ ಗ್ರಾಮದಲ್ಲಿ 10 ತಿಂಗಳ ಹಿಂದೆ ಮೂರು ದಿನ ವಿವಿಧ ಸಂಘಟನೆಗಳು ಬೃಹತ್‌ ಪ್ರತಿಭಟನೆ ನಡೆಸಿದ್ದವು. ಈ ವೇಳೆ ಸ್ಥಳಕ್ಕೆ ಬಂದಿದ್ದ ಅಂದಿನ ಜಿಲ್ಲಾ ಉಸ್ತುವಾರಿ ಸಚಿವ ಮಾಧುಸ್ವಾಮಿ, ಪ್ರತಿಭಟನಾಕಾರರೊಂದಿಗೆ ಮಾತನಾಡಿ, ಹೆದ್ದಾರಿಯಲ್ಲಿನ ಗುಂಡಿ ಮುಚ್ಚಿಸುವುದಲ್ಲದೆ, ಪೂರ್ಣ ಡಾಂಬರೀಕರಣ ಮಾಡಿಸುವ ಭರವಸೆ ನೀಡಿದ್ದರು. ಅವರ ಕೊಟ್ಟ ಮಾತಿನಂತೆ 8 ತಿಂಗಳ ಹಿಂದೆ 9 ಕೋಟಿ ರೂ.ನಲ್ಲಿ ಗುಂಡಿಮುಚ್ಚಲಾಯಿತು.ಆದರೆ,ಡಾಂಬರೀಕರಣಮಾಡಲಿಲ್ಲ. ಪರಿಣಾಮ, 9 ಕೋಟಿ ರೂ.ನಲ್ಲಿ ಮುಚ್ಚಿದ್ದ ಗುಂಡಿಗಳುಮಳೆಯಿಂದಾಗಿ ಮತ್ತೆ ಬಾಯೆ¤ರೆದು ಕೊಂಡಿವೆ. ಈ ಹಿನ್ನೆಲೆಯಲ್ಲಿ ಕರವೇ (ನಾರಾಯಣ ಗೌಡ ಬಣ) ವತಿಯಿಂದ ಸೋಮವಾರದಿಂದ ರಸ್ತೆ ಡಾಂಬರೀಕರಣಕ್ಕೆ ಒತ್ತಾಯಿಸಿ ಅನಿರ್ದಿಷ್ಟ ಅವಧಿ ಧರಣಿ, ಬೇಡಿಕೆ ಈಡೇರಿಸುವವರೆಗೂ ಪಾಳ್ಯದಿಂದ ಬಾಳ್ಳುಪೇಟೆವರೆಗೆ ಕಾಲ್ನಡಿಗೆ ಜಾಥಾ ಹಾಗೂ ಬಾಳ್ಳುಪೇಟೆಯಲ್ಲಿ ಬೃಹತ್‌ ಪ್ರತಿಭಟನೆ ಆಯೋಜಿಸಲಾಗಿದೆ.

Advertisement

ಈಗಾಗಲೇ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿರ್ಮಾಣ ಆಗಿರುವ ಗುಂಡಿಗಳನ್ನು ಮುಚ್ಚಲು ಗುತ್ತಿಗೆ ಪಡೆದ ರಾಜ್‌ಕಮಲ್‌ ಕಂಪನಿಗೆ ಆದೇಶಿಸಲಾಗಿದೆ.ಆದರೆ, ಮಳೆಯಿಂದಾಗಿ ಕಾಮಗಾರಿ ಆರಂಭಿಸಲಾಗಿಲ್ಲ. 2022 ನವೆಂಬರ್‌ ವೇಳೆಗೆ ಚತುಷ್ಪಥ ರಸ್ತೆ ಕಾಮಗಾರಿ ಪೂರ್ಣಗೊಳ್ಳಲಿದೆ. ಜಾನ್‌ವಿಜ್‌, ಯೋಜನಾ ನಿರ್ದೇಶಕ.

ರಾಷ್ಟ್ರೀಯ ಹೆದ್ದಾರಿ-75 ಹದಗೆಟ್ಟು ಹಲವು ವರ್ಷ ಕಳೆದಿದೆ. ಕೇವಲ ಗುಂಡಿ ಮುಚ್ಚಲು ನಾವು ಬಿಡುವುದಿಲ್ಲ. ಹೊಸದಾಗಿ ಡಾಂಬರೀಕರಣ ಮಾಡಬೇಕು. ಇದಕ್ಕೆಖಚಿತ ಆದೇಶ ಬರುವವರೆಗೂ ಅನಿರ್ದಿಷ್ಟ ಅವಧಿಗೆಸಂಘಟನೆಯಿಂದ ಪ್ರತಿಭಟನೆ ಮಾಡಲಾಗುವುದು. ದಿನೇಶ್‌, ಕರವೇ ತಾಲೂಕು ಅಧ್ಯಕ್ಷ.

 

ಸುಧೀರ್‌ ಎಸ್‌.ಎಲ್‌

Advertisement

Udayavani is now on Telegram. Click here to join our channel and stay updated with the latest news.

Next