ಉಡುಪಿ, ಅ. 24: ಗುಂಡಿಬೈಲು ಜಂಕ್ಷನ್ ಮಾರ್ಗವಾಗಿ ದೊಡ್ಡಣಗುಡ್ಡೆ ಸಂಪರ್ಕಿಸುವ, ಲಕ್ಷಾಂತರ ರೂ. ವೆಚ್ಚದಲ್ಲಿ ನಿರ್ಮಿಸಲಾದ ರಸ್ತೆ ಇದೀಗ ವಾಹನ ಸವಾರರ ಹಾಗೂ ಸಾರ್ವಜನಿಕರ ಜೀವಕ್ಕೆ ಕಂಟಕವಾಗಿ ಪರಿಣಮಿಸಿದೆ.
2019ರ ಕೊನೆಯಲ್ಲಿ ನಗರಸಭೆ ವತಿಯಿಂದ 40 ಲ.ರೂ. ವೆಚ್ಚದಲ್ಲಿ ಒಳಚರಂಡಿ ಕಾಮಗಾರಿ ನಡೆದಿದ್ದು, 22 ಅಡಿ ಆಳ ಮಾಡಿ, ಹೊಸ ಪೈಪ್ ಅಳವಡಿಸಲಾಗಿತ್ತು. ಆದರೆ ಇದು ನಿಗದಿತ ಸಮಯದಲ್ಲಿ ಮುಗಿದಿರಲಿಲ್ಲ. ಅವಸರವಸರವಾಗಿ ಕಾಮಗಾರಿ ನಡೆದು ಇದರ ಮೇಲೆಯೇ ಡಾಮರು ಹಾಕಲಾಗಿದೆ. ಆದರೆ ಒಳಭಾಗ ಕುಸಿದಿದ್ದರಿಂದ ರಸ್ತೆಯೇ ಗುಂಡಿಬಿದ್ದು ಹಾಳಾಗಿದೆ.
ನಿರ್ಲಕ್ಷ್ಯ ಕಾರಣ : ಒಳಚರಂಡಿ ಕಾಮಗಾರಿ ನಡೆದು ಕನಿಷ್ಠ ಹಾಕಿದ ಮಣ್ಣು ಗಟ್ಟಿಯಾಗಲು ಎರಡು ತಿಂಗಳಾದರೂ ಸಮಯ ಬೇಕಾಗಿತ್ತು. ಈ ಬಗ್ಗೆ ಮುತುವರ್ಜಿ ವಹಿಸದ ಅಧಿಕಾರಿಗಳು ತುರ್ತಾಗಿ ಡಾಮರು ಕಾಮಗಾರಿ ಮಾಡಿರುವುದರಿಂದ ಗುಂಡಿಬೈಲು ರಸ್ತೆಗಳಲ್ಲಿ ಒಳಚರಂಡಿ ಕಾಮಗಾರಿ ಮಾಡಿರುವ ಭಾಗ ಜೂನ್ ತಿಂಗಳ ಅಂತ್ಯಕ್ಕೆ ಸಂಪೂರ್ಣ ಬಿರುಕು ಬಿಟ್ಟು ಕುಸಿದಿತ್ತು.
ಸಮಸ್ಯೆಗಳ ಆಗರ : ಈ ಮಾರ್ಗದಲ್ಲಿ ಮ್ಯಾನ್‌ಹೋಲ್‌ನಲ್ಲಿ ಕೊಳಚೆ ನೀರು ಉಕ್ಕಿ ರಸ್ತೆಯಲ್ಲಿ ಹರಿಯುತ್ತಿರುವ ಕುರಿತು ಸಾರ್ವಜನಿಕರು ದೂರು ನೀಡಿದ ಹಿನ್ನೆಲೆಯಲ್ಲಿ ಮ್ಯಾನ್‌ಹೋಲ್‌ಗೆ ಪೈಪ್ ಲೈನ್ ಅಳವಡಿಸಿ ಕೊಳಚೆ ನೀರನ್ನು ರಸ್ತೆ ಬದಿಯ ನೀರಿನ ಚರಂಡಿಗೆ ಬಿಡಲಾಗಿದೆ.
ಇದೇ ಮಾರ್ಗದಲ್ಲಿ ಕುಡಿಯುವ ನೀರಿನ ಪೈಪ್‌ಲೈನ್ ಒಡೆದು ಹೋಗಿದ್ದು, ಭಾರೀ ಪ್ರಮಾಣದಲ್ಲಿ ನೀರು ಸೋರಿಕೆಯಾಗುತ್ತಿದೆ.
ಅವಸರದ ಕಾಮಗಾರಿ : ಗುಂಡಿಬೈಲು ಜುಮಾದಿಕಟ್ಟೆಯ ಬಳಿ ಒಳಚರಂಡಿ ಬ್ಲಾಕ್ ಆಗಿತ್ತು. ಸುಮಾರು 22 ಅಡಿ ಆಳ ಅಗೆದು, ಹೊಸ ಪೈಪ್‌ಲೈನ್ ಅಳವಡಿಸಲಾಗಿತ್ತು. ಈ ಸಂದರ್ಭದಲ್ಲಿ ಸ್ಥಳೀಯರ ಆಗ್ರಹಕ್ಕೆ ಜುಮಾದಿ ಕೋಲದ ಹಿನ್ನೆಲೆಯಲ್ಲಿ ಅವಸರವಾಗಿ ಡಾಮರು ಕಾಮಗಾರಿ ಮಾಡಲಾಗಿತ್ತು.
–ಪ್ರಭಾಕರ್ ಪೂಜಾರಿ, ನಗರಸಭೆ ಸದಸ್ಯ
ಮತ್ತೆ ಟೆಂಡರ್ : ರಸ್ತೆ ಡಾಮರು ಕಾಮಗಾರಿಯ ಬಳಿಕ 14 ವರ್ಷಗಳ ಯುಜಿಡಿ ಹಾಳಾಗಿದೆ. ಈ ಹಿನ್ನೆಲೆ ರಸ್ತೆ ಅಗೆದು ದುರಸ್ತಿ ಮಾಡಲಾಗಿದೆ. ಇದೀಗ ರಸ್ತೆ ಡಾಮರು ಹಾಕಲು ಮತ್ತೆ ಟೆಂಡರ್ ಆಗಿದ್ದು, ಮಳೆಗಾಲದ ಬಳಿಕ ಕಾಮಗಾರಿ ಆರಂಭವಾಗಲಿದೆ.
–ಮೋಹನ್ ರಾಜ್, ಎಇಇ ನಗರಸಭೆ ಉಡುಪಿ