Advertisement

ಗೆಳೆಯನ ಅಪಹರಿಸಿದವರ ಬಂಧನ

11:16 AM Nov 05, 2017 | Team Udayavani |

ಬೆಂಗಳೂರು: ಹಣಕ್ಕಾಗಿ ಸ್ನೇಹಿತರನ್ನು ಅಪಹರಿಸಿ ಹಣ ವಸೂಲಿ ಮಾಡಿದ್ದ ವಜಾಗೊಂಡಿದ್ದ ಒಬ್ಬ ಸಿಎಆರ್‌ ಪೊಲೀಸ್‌ ಪೇದೆ ಸೇರಿದಂತೆ ಇಬ್ಬರನ್ನು ಸದಾಶಿವನಗರ ಪೊಲೀಸರು ಬಂಧಿಸಿದ್ದಾರೆ. ಚೆನ್ನನಾಯಕನ ಪಾಳ್ಯದ ನವೀನ್‌ (28), ಅರಿಶಿನಕುಂಟೆ ನಿವಾಸಿ ಅರುಣ್‌ ಪ್ರಸಾದ್‌ (28) ಬಂಧಿತರು.

Advertisement

ಆರೋಪಿಗಳಿಂದ ಒಂದು ಕಾರು, 90 ಸಾವಿರ ನಗದು, 65 ಗ್ರಾಂ ಚಿನ್ನಾಭರಣ ಹಾಗೂ ಎಟಿಎಂ ಕಾರ್ಡ್‌ ವಶಪಡಿಸಿಕೊಳ್ಳಲಾಗಿದೆ. ಅ.15ರಂದು ಖಾಸಗಿ ಕಂಪನಿ ಉದ್ಯೋಗಿ ರಾಕೇಶ್‌ ಹಾಗೂ ಈತನ ಸ್ನೇಹಿತ ಶ್ರೀರಾಮ ರವಿತೇಜ ಅಪಹರಣಕ್ಕೊಳಗಾಗಿದ್ದರು. ಈ ಸಂಬಂಧ ದೂರು ದಾಖಲಾದ ಹಿನ್ನೆಲೆಯಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.

ಅರುಣ್‌ಕುಮಾರ್‌ ಸಿಎಆರ್‌ ಪೇದೆಯಾಗಿದ್ದು, ಪ್ರಕರಣದಲ್ಲಿ ಆತನನ್ನು ವಜಾ ಮಾಡಲಾಗಿದೆ.ಆರೋಪಿ ನವೀನ್‌ ಮತ್ತು ಅರುಣ್‌ ಪ್ರಸಾದ್‌ ಸ್ನೇಹಿತರಾಗಿದ್ದು, ಅಪಹರಣಕ್ಕೊಳಗಾಗಿದ್ದ ರಾಕೇಶ್‌ ಖಾಸಗಿ ಕಂಪನಿಯಲ್ಲಿ ಉದ್ಯೋಗದಲ್ಲಿದ್ದು, ಇದೇ ಕಂಪೆನಿಯಲ್ಲಿ ಆರೋಪಿ ನವೀನ್‌ ಕಾರು ಚಾಲಕನಾಗಿದ್ದಾನೆ.

ರಾಕೇಶ್‌ ಕುಟುಂದವರು ಚಿನ್ನಾಭರಣ ಮಳಿಗೆ ನಡೆಸುತ್ತಿದ್ದು, ಶ್ರೀಮಂತರು ಎಂದು ತಿಳಿದುಕೊಂಡಿದ್ದ ನವೀನ್‌, ರಾಕೇಶ್‌ನನ್ನು ಅಪಹರಿಸಿ ಹಣ ವಸೂಲಿ ಮಾಡಲು ತೀರ್ಮಾನಿಸಿದ್ದ. ಇದಕ್ಕೆ ಸ್ನೇಹಿತ ಅರುಣ್‌ ಪ್ರಸಾದ್‌ನ ಸಹಾಯ ಪಡೆದುಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಅದರಂತೆ ನವೀನ್‌ ರಾಕೇಶ್‌ಗೆ ಕರೆ ಮಾಡಿ ನನ್ನ ಬಳಿ ಬೆಲೆಬಾಳುವ ವಜ್ರದ ಹರಳುಗಳಿವೆ. ಅದನ್ನು ಮಾರಾಟ ಮಾಡಬೇಕೆಂದು ಹೇಳಿದ್ದ. ಇದೇ ವಿಚಾರವಾಗಿ ಮಾತುಕತೆ ನಡೆಸಲು ರಾಕೇಶ್‌ ತನ್ನ ಸ್ನೇಹಿತ ಶ್ರೀರಾಮ ರವಿತೇಜ ಜತೆ ಅ.15ರಂದು ಬೆಳಗ್ಗೆ 9 ಗಂಟೆ ಸುಮಾರಿಗೆ ಸದಾಶಿವನಗರದಲ್ಲಿರುವ ಸ್ಯಾಂಕಿ ಟ್ಯಾಂಕ್‌ ಕೆರೆ ಬಂದಿದ್ದರು.

Advertisement

ವ್ಯವಹಾರದ ಕುರಿತು ಮಾತನಾಡುವ ನೆಪದಲ್ಲಿ ಕಾರಿನಲ್ಲಿ ಕೂರಿಸಿಕೊಂಡ ಆರೋಪಿಗಳು ಮಾರಕಾಸ್ತ್ರಗಳನ್ನು ತೋರಿಸಿ 8ನೇ ಮೈಲಿನಯಲ್ಲಿರುವ ನಿರ್ಜನ ಪ್ರದೇಶಕ್ಕೆ ಕರೆದೊಯ್ದಿರು. ಮೊದಲಿಗೆ ರಾಕೇಶ್‌ ಕುಟುಂಬಕ್ಕೆ ಕರೆ ಮಾಡಿದ ಆರೋಪಿಗಳು ಆರು ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು. ಬಳಿಕ ರಾಕೇಶ್‌ನ ಎಟಿಎಂ ಕಾರ್ಡ್‌ನಲ್ಲಿದ್ದ 90 ಸಾವಿರ ಹಣ ಡ್ರಾ ಮಾಡಿಸಿಕೊಂಡಿದ್ದಾರೆ.

ಅಷ್ಟೇ ಅಲ್ಲದೇ, ರಾಕೇಶ್‌ನಿಂದ ಸ್ನೇಹಿತ ಮನ್ಸೂರ್‌ಗೆ ಕರೆ ಮಾಡಿಸಿ ಚಿನ್ನಾಭರಣ ತರುವಂತೆ ಬೇಡಿಕೆ ಇಟ್ಟಿದ್ದರು. ಈ ಹಿನ್ನೆಲೆಯಲ್ಲಿ ಮಂತ್ರಿಮಾಲ್‌ ಬಳಿ ಮನ್ಸೂರ್‌ ಸಹೋದರ 65 ಗ್ರಾಂ ಚಿನ್ನಾಭರಣಗಳನ್ನು ಅಪಹರಣಕಾರಿಗೆ ಕೊಟ್ಟಿದ್ದರು. ನಂತರ ರಾತ್ರಿ 11 ಗಂಟೆ ಸುಮಾರಿಗೆ ಯಶವಂತಪುರ ಬಳಿ ರಾಕೇಶ್‌ ಮತ್ತು ಶ್ರೀರಾಮ ರವಿತೇಜನನ್ನು ಕಾರಿನಲ್ಲಿ ಬಿಟ್ಟು ಪರಾರಿಯಾಗಿದ್ದರು ಎಂದು ಪೊಲೀಸರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next