ಬೆಂಗಳೂರು: ವಿದೇಶಗಳಿಂದ ಮಾದಕವಸ್ತು ತರಿಸಿಕೊಂಡು ಪ್ರತಿಷ್ಠಿತ ಕಾಲೇಜು ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಕಾಮಾಕ್ಷಿಪಾಳ್ಯದ ಸುರೇಶ್ (47), ಬಸವೇಶ್ವರನಗರದ ಕೆ.ಎನ್. ಆದರ್ಶ್ ಬಂಧಿತರು.
ಇಂಜಿನಿಯರಿಂಗ್ ಪದವಿ ಅರ್ಧಕ್ಕೆ ಮೊಟಕುಗೊಳಿಸಿರುವ ಆದರ್ಶ್, ಹಲವು ವರ್ಷಗಳಿಂದ ದಂಧೆಯಲ್ಲಿ ತೊಡಗಿಸಿಕೊಂಡಿದ್ದಾನೆ. ಮತ್ತೂಬ್ಬ ಆರೋಪಿ ಸುರೇಶ್, ತನ್ನ ಪುತ್ರ ಮೋಹಿತ್ ಜತೆಗೂಡಿ ದಂಧೆ ನಡೆಸುತ್ತಿದ್ದ ಸಂಗತಿ ತನಿಖೆಯಲ್ಲಿ ಬಯಲಾಗಿದೆ.
ಎರಡು ಪ್ರಕರಣಗಳಲ್ಲಿ ಬಂಧಿತವಾಗಿರುವ ಆರೋಪಿಗಳಿಂದ ಹೈಡ್ರೋ ಗಾಂಜಾ, 169 ಎಲ್‌ಎಸ್‌ಡಿ ಬ್ಲಾಟಿಂಗ್ ಪೇಪರ್, ವಿವಿಧ ಬಣ್ಣದ 168 ಎಂಡಿಎಂಎ ಮಾತ್ರೆಗಳು, 210 ಗ್ರಾಂ ಹಾಶಿಶ್ ಸೇರಿ 15 ಲಕ್ಷ ರೂ. ಮೌಲ್ಯದ ಮಾದಕವಸ್ತುಗಳನ್ನು ಜಪ್ತಿ ಮಾಡಿದ್ದಾರೆ.
ಆನ್‌ಲೈನ್‌ನಲ್ಲಿ ವ್ಯವಹಾರ!: ನಗರದಲ್ಲಿ ಮಾದಕ ವಸ್ತು ಮಾರಾಟ ದಂಧೆಯಲ್ಲಿ ತೊಡಗಿಸಿಕೊಂಡಿರುವ ನೈಜೀರಿಯಾ ಪ್ರಜೆಗಳು ಸೇರಿದಂತೆ ವಿದೇಶಿ ಆರೋಪಿಗಳ ಜತೆ ಸಂಪರ್ಕ ಹೊಂದಿರುವ ಸುರೇಶ್, ತನ್ನ ಮಗ ಮೋಹಿತ್‌ನನ್ನೂ ಈ ದಂಧೆಗೆ ದೂಡಿದ್ದಾನೆ. ವಿದೇಶಗಳಿಂದ ಆಗಮಿಸುವವರ ಮೂಲಕ ಮಾದಕ ವಸ್ತು ತರಿಸಿಕೊಂಡು ಪ್ರತಿಷ್ಠಿತ ಕಾಲೇಜುಗಳ ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.
ಅದೇ ರೀತಿ ಆದರ್ಶ್, ಮೋಜಿನ ಜೀವನ ನಡೆಸುವುದಕ್ಕಾಗಿ ಈ ದಂಧೆಯಲ್ಲಿ ತೊಡಗಿಸಿಕೊಂಡಿದ್ದಾನೆ. ಇಂಗ್ಲಿಷ್ ಹಾಗೂ ಹಿಂದಿ ಭಾಷೆಯಲ್ಲಿ ನಿರರ್ಗಳವಾಗಿ ಮಾತನಾಡುವ ಆದರ್ಶ್, ವಿದೇಶಗಳಿಂದ ಡ್ರಗ್ಸ್ ತರಿಸುತ್ತಿದ್ದ. ಇವರಿಬ್ಬರ ಹಿಂದೆ ದೊಡ್ಡ ಜಾಲವೇ ಕಾರ್ಯನಿರ್ವಹಿಸುತ್ತಿರುವ ಶಂಕೆಯಿದ್ದು ತನಿಖೆ ಮುಂದುವರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.