ಬೆಂಗಳೂರು: ಕನ್ನಡ ಚಲನಚಿತ್ರ ನಟರೊಬ್ಬರ ಹೆಸರಿನಲ್ಲಿ ಫೇಸ್‌ಬುಕ್ ನಕಲಿ ಖಾತೆ ತೆರೆದು ಅದರ ಮೂಲಕ ಯುವತಿಯರಿಗೆ ಸಿನಿಮಾದಲ್ಲಿ ನಟಿಸಲು ಅವಕಾಶ ಕೊಡಿಸುವುದಾಗಿ, ಜತೆಗೆ ಮದುವೆಯಾಗುವುದಾಗಿ ನಂಬಿಸಿ ಹಣ ಪಡೆದು ವಂಚಿಸುತ್ತಿದ್ದ ಆರೋಪಿಯನ್ನು ನಗರ ಸೈಬರ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಸುಂಕದಕಟ್ಟೆಯ ನಿವಾಸಿ ವೆಂಕಟೇಶ್ ಭಾವಸಾರ್ (22) ಬಂಧಿತ. ಆರೋಪಿ ವಂಚನೆಗೆ ಬಳಸುತ್ತಿದ್ದ ಮೊಬೈಲ್ ಫೋನ್ ಜಪ್ತಿ ಮಾಡಿಕೊಂಡಿದ್ದು ತನಿಖೆ ಮುಂದುವರಿಸಿದ್ದಾರೆ.
ಆರೋಪಿ ವೆಂಕಟೇಶ್, ಚಿತ್ರ ನಟರೊಬ್ಬರ ಫೋಟೋ ಬಳಸಿಕೊಂಡು ಅವರ ಹೆಸರಿನಲ್ಲಿಯೇ ಫೇಸ್‌ಬುಕ್ ನಕಲಿ ಖಾತೆ ಸೃಷ್ಟಿಸಿದ್ದ. ಅದರ ಮೂಲಕ ಯುವತಿಯರಿಗೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿ ಪರಿಚಯ ಮಾಡಿಕೊಳ್ಳುತ್ತಿದ್ದ. ಬಳಿಕ ಅವರಿಗೆ ಸಿನಿಮಾದಲ್ಲಿ ನಟಿಸಲು ಅವಕಾಶ ಕೊಡಿಸುವುದಾಗಿ ನಂಬಿಸಿ ಮೊಬೈಲ್ ನಂಬರ್ ಪಡೆದು ನನ್ನ ಸಹಾಯಕ ವೆಂಕಿರಾವ್ ಎಂಬಾತನ ಜತೆ ಮಾತನಾಡಿ ಎಂದು ಸುಳ್ಳು ಹೇಳುತ್ತಿದ್ದ.
ವೆಂಕಿರಾವ್ ಹೆಸರಿನ ಮೂಲಕ ತಾನೇ ಕರೆ ಸ್ವೀಕರಿಸಿ ಮಾತನಾಡುತ್ತಿದ್ದ ರೋಪಿ, ವ್ಯಾಟ್ಸ್‌ಆ್ಯಪ್‌ನಲ್ಲಿ ಚಾಟಿಂಗ್ ಕೂಡ ಮಾಡುತ್ತಿದ್ದ. ಟ್ರೂ ಕಾಲರ್‌ನಲ್ಲಿ ಕೂಡ ನಟರ ಹೆಸರು ಬರುವಂತೆ ಸೇವ್ ಮಾಡಿಕೊಂಡಿದ್ದ. ಇದೇ ರೀತಿ ಪರಿಚಯವಾದ ಮಹಿಳೆಯೊಬ್ಬರಿಗೆ, “ನಿಮ್ಮ ಮಗಳಿಗೆ ಸಿನಿಮಾದಲ್ಲಿ ನಟಿಸಲು ಅವಕಾಶ ದೊರೆತಿದೆ’ ಎಂದು ನಂಬಿಸಿ, ಖುದ್ದು ಭೇಟಿಯಾಗಿ 25 ಸಾವಿರ ರೂ. ಹಣ ಪಡೆದು ವಂಚಿಸಿದ್ದ. ವಂಚನೆಗೊಳಗಾದ ಮಹಿಳೆ ಒಮ್ಮೆ “ವಿಡಿಯೋ ಕಾಲ್’ ಮಾಡಿದಾಗ ವೆಂಕಿರಾವ್ ರಿಸೀವ್ ಮಾಡಿ ಸಿಕ್ಕಿಬಿದ್ದಿದ್ದ. ಆದರೆ, ನಟರ ದೂರವಾಣಿ ಸಂಖ್ಯೆ ಈ ನಂಬರ್‌ಗೆ ಮರ್ಜ್ ಆಗಿದೆ ಎಂದು ಸುಳ್ಳು ಹೇಳಿದ್ದ ಎಂದು ಪೊಲೀಸರು ತಿಳಿಸಿದರು.
ಟೈಂ ಸರಿ ಇಲ್ಲ ಎಂಬ ಸುಳ್ಳು!: ಆತನಿಗೆ ಹಣ ನೀಡಿ ವಂಚನೆಗೆ ಒಳಗಾದವರು ಆತ ನಟ ಎಂದೇ ನಂಬಿರುತ್ತಿದ್ದರು. ಕೆಲವೊಮ್ಮೆ ಮಾತನಾಡಬೇಕು ಎಂದು ಯತ್ನಿಸಿ ಯುವತಿಯರು ಕರೆ ಮಾಡಿದರೆ ಡಿಸೆಂಬರ್‌ವರೆಗೆ ನನ್ನ ಸಮಯ ಸರಿಯಿಲ್ಲ. ಹೀಗಾಗಿ ಮಾತನಾಡುವುದಿಲ್ಲ ಎಂದು ಮೆಸೇಜ್ ಮಾಡುತ್ತಿದ್ದ. ಅಲ್ಲದೆ, ಯುವತಿಯೊಬ್ಬರಿಗೆ ನಿಮ್ಮನ್ನು ನಟ ಇಷ್ಟ ಪಟ್ಟಿದ್ದು, ಮದುವೆ ಆಗಲು ಇಚ್ಛಿಸಿದ್ದಾರೆ ಎಂದೂ ನಂಬಿಸಿದ್ದ. ಈ ವಿಚಾರ ಚಿತ್ರ ನಟನಿಗೆ ಗೊತ್ತಾಗಿದೆ. ಆ.16ರಂದು ಖುದ್ದು ಪೊಲೀಸ್ ಠಾಣೆಗೆ ತೆರಳಿದ ನಟ ವಂಚಕನ ವಿರುದ್ಧ ದೂರು ನೀಡಿದ್ದರು. ಹೀಗಾಗಿ, ತನಿಖೆ ನಡೆಸಿದಾಗ ಸುಂಕದಕಟ್ಟೆಯಲ್ಲಿ ಆರೋಪಿ ವೆಂಕಟೇಶ್ ಸಿಕ್ಕಿಬಿದ್ದಿದ್ದಾನೆ ಎಂದು ಪೊಲೀಸರು ತಿಳಿಸಿದರು.