Advertisement

ಚಿನ್ನಾಭರಣ ಕದ್ದ ಆರೋಪಿಗಳ ಬಂಧನ

11:51 AM Oct 30, 2018 | Team Udayavani |

ಬೆಂಗಳೂರು: ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಮೋಜಿನ ಜೀವನಕ್ಕಾಗಿ ಮನೆಗಳ್ಳತನ, ದರೋಡೆ ಮಾಡುತ್ತಿದ್ದ ಮೂವರು ಆರೋಪಿಗಳನ್ನು ದಕ್ಷಿಣ ವಿಭಾಗದ ಪೊಲೀಸರು ಬಂಧಿಸಿದ್ದಾರೆ.

Advertisement

ಪರಿಚಿತರ ಮನೆಯಲ್ಲಿ ಚಿನ್ನಾಭರಣ ಕಳವು ಮಾಡಿದ್ದ ಉತ್ತರಪ್ರದೇಶ ಮೂಲದ ಯುವಕನನ್ನು ಜಯನಗರ ಪೊಲೀಸರು ಬಂಧಿಸಿದ್ದಾರೆ. ಉತ್ತರಪ್ರದೇಶ ಮೂಲದ ಚಿಕ್ಕಬಳ್ಳಾಪುರದ ಚಿಂತಾಮಣಿ ನಿವಾಸಿ ಮಹಮದ್‌ ಸಾಜಿದ್‌ (20) ಬಂಧಿತ. ಈತನಿಂದ 10 ಲಕ್ಷ ರೂ. ಮೌಲ್ಯದ ಚಿನ್ನಾಭರಣ, 2.50 ಲಕ್ಷ ರೂ.ನಗದು ವಶಪಡಿಸಿಕೊಳ್ಳಲಾಗಿದೆ ಎಂದು ದಕ್ಷಿಣ ವಲಯ ಡಿಸಿಪಿ ಅಣ್ಣಾಮಲೈ ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಆರೋಪಿ ಸಾಜಿದ್‌ ಬಟ್ಟೆ ವ್ಯಾಪಾರಿಯಾಗಿದ್ದು, ಕೆಲ ತಿಂಗಳಿನಿಂದ ಚಿಕ್ಕಬಳ್ಳಾಪುರದಲ್ಲಿ ಬಟ್ಟೆ ಮಾರಾಟ ಮಳಿಗೆ ನಡೆಸುತ್ತಿದ್ದ. ಈ ವೇಳೆ ದೂರುದಾರ ದಾದಾಪಿರ್‌ ಸಹೋದರನ ಪುತ್ರ ವಲಿಜಾನ್‌ನನ್ನು ಆರೋಪಿ ಪರಿಚಯಿಸಿಕೊಂಡಿದ್ದಾನೆ. ಈ ಹಿನ್ನೆಲೆಯಲ್ಲಿ ಆರೋಪಿಯನ್ನು ವಲಿಜಾನ್‌ ಜಯನಗರದಲ್ಲಿರುವ ದಾದಾಪೀರ್‌ ಮನೆಗೆ ಒಂದೆರಡು ಬಾರಿ ಕರೆ ತಂದಿದ್ದ. ಈ ವೇಳೆ ದಾದಾಪೀರ್‌ ತಮ್ಮ ಮಗಳ ಮದುವೆಗೆಂದು ಚಿನ್ನಾಭರಣಗಳನ್ನು ಮನೆಗೆ ತಂದಿಟ್ಟ ವಿಷಯ ತಿಳಿದುಕೊಂಡಿದ್ದಾನೆ ಎಂದು ಅವರು ಹೇಳಿದರು.

ಕೆಲ ದಿನಗಳ ಹಿಂದೆ ದಾದಾಪೀರ್‌ ಕುಟುಂಬ ಸಮೇತ ಸಂಬಂಧಿಕರ ಮದುವೆ ಕಾರ್ಯಕ್ರಮಕ್ಕೆ ಹೋಗಿದ್ದರು. ಇದನ್ನು ತಿಳಿದುಕೊಂಡ ಆರೋಪಿ, ತಾನೂ ಅದೇ ಸಮಾರಂಭಕ್ಕೆ ಹೋಗಿದ್ದ. ಆ ವೇಳೆ ದಾದಾಪಿರ್‌ನ್ನು ಮಾತನಾಡಿಸುವ ನೆಪದಲ್ಲಿ ಅವರ ಬಳಿಯಿದ್ದ ಮನೆ ಕೀ ಪಡೆದುಕೊಂಡಿದ್ದಾನೆ. ಬಳಿಕ ಕೂಡಲೇ ದಾದಾಪೀರ್‌ ಮನೆಗೆ ಬಂದು ಚಿನ್ನಾಭರಣ ಕಳವು ಮಾಡಿದ್ದ.

ನಂತರ ವಾಪಸ್‌ ಅದೇ ಮದುವೆ ಕಾರ್ಯಕ್ರಮಕ್ಕೆ ಹೋಗಿ ದಾದಾಪಿರ್‌ಗೆ ಮನೆ ಕೀ ಕೊಟ್ಟು ಪರಾರಿಯಾಗಿದ್ದ. ಕಾರ್ಯಕ್ರಮ ಮುಗಿಸಿಕೊಂಡು ರಾತ್ರಿ ಮನೆಗೆ ಬಂದು ನೋಡಿದಾಗ ಕಳ್ಳತನ ಬೆಳಕಿಗೆ ಬಂದಿದೆ. ಈ ಬಗ್ಗೆ ದಾದಾಪಿರ್‌ ಪೊಲೀಸರಿಗೆ ದೂರು ನೀಡಿದ್ದರು. ತನಿಖೆ ನಡೆಸಿದ ಜಯನಗರ ಪೊಲೀಸರು, ಆರೋಪಿಯನ್ನು ಬಂಧಿಸಿದ್ದಾರೆ ಎಂದು ಅವರು ಹೇಳಿದರು.

Advertisement

ಮತ್ತೂಂದು ಪ್ರಕರಣದಲ್ಲಿ ಮೋಜಿನ ಜೀವನಕ್ಕಾಗಿ ಮನೆಗಳವು ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬನಶಂಕರಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬೊಮ್ಮನಹಳ್ಳಿ ನಿವಾಸಿ ಸೈಯದ್‌ ಇಮ್ರಾನ್‌ ಅಲಿಯಾಸ್‌ ಕಾಲು (22) ಮತ್ತು ಸೋಮೇಶ್ವರನಗರ ನಿವಾಸಿ ವಸೀಂ ಅಕ್ರಂ ಅಲಿಯಾಸ್‌ ಬ್ಲೇಡ್‌ (26)ಬಂಧಿತರು. ಆರೋಪಿಗಳಿಂದ 30 ಲಕ್ಷ ರೂ. ಮೌಲ್ಯದ 940 ಗ್ರಾಂ. ಚಿನ್ನಾಭರಣ, 6.5 ಕೆ.ಜಿ. ಬೆಳ್ಳಿ ವಸ್ತು ವಶಕ್ಕೆ ಪಡೆಯಲಾಗಿದೆ ಎಂದು ಅವರು ಹೇಳಿದರು.

ಆರೋಪಿ ಸೈಯದ್‌ ಇಮ್ರಾನ್‌, ಮಂಗಮನಪಾಳ್ಯದಲ್ಲಿ ಅಯೂಬ್‌ ಎಂಬುವರ ಮೀನಿನ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದ. 2011ರಿಂದ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿದ್ದ. ಈತನ ವಿರುದ್ಧ ಮನೆಗಳ್ಳತನ ಪ್ರಕರಣ ಮಾತ್ರವಲ್ಲದೆ, ಮೊಬೈಲ್‌ ಕಳವು, ಕೊಲೆ ಯತ್ನ, ಕೊಲೆ ಪ್ರಕರಣಗಳು ಕೂಡ ದಾಖಲಾಗಿವೆ. ಹಿಂದೆ ಬಿಟಿಎಂ ಲೇಔಟ್‌ನಲ್ಲಿ ಸ್ಯಾಮ್‌ಸಾಂಗ್‌ ಶೋರೂಂನಲ್ಲಿ ಕೆಲಸ ಮಾಡಿಕೊಂಡಿದ್ದ ವಸೀಂ ಅಕ್ರಂ, ಸದ್ಯ ಮಾವ ಕಲೀಂ ಜತೆ ಟೈಲ್ಸ್‌ ಕೆಲಸಕ್ಕೆ ಹೋಗುತ್ತಿದ್ದ. ಈತ ಕೂಡ 2012ರಿಂದ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದಾನೆ ಎಂದು ಡಿಸಿಪಿ ಅಣ್ಣಾಮಲೈ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next