Advertisement

ಗಲಾಟೆಯಲ್ಲಿ ವ್ಯಕ್ತಿಯ ಕೊಂದಿದ್ದವನ ಬಂಧನ

11:23 AM Jul 22, 2017 | Team Udayavani |

ಬೆಂಗಳೂರು: ಬೈಕ್‌ಗೆ ಡಿಕ್ಕಿಹೊಡೆದ ವಿಚಾರಕ್ಕೆ ಕನಕಪುರ ಮುಖ್ಯರಸ್ತೆಯಲ್ಲಿ ಇರ್ಫಾನ್‌ ಷರೀಫ್ ಎಂಬಾತನನ್ನು ಬರ್ಬರವಾಗಿ ಕೊಲೆಗೈದಿದ್ದ ಆರೋಪಿಯನ್ನು ಜಯನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಜಯನಗರ ನಿವಾಸಿ ಪುರುಷೋತ್ತಮ್‌ (24) ಬಂಧಿತ.

Advertisement

ಮೃತ ಇರ್ಫಾನ್‌ ಷರೀಫ್ ಮತ್ತು ಸ್ನೇಹಿತರು ಮದ್ಯ ಸೇವಿಸಿ ಪುರುಷೋತ್ತಮ್‌ ಹಾಗೂ ಸ್ನೇಹಿತರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದರು. ಇದರಿಂದ ಆಕ್ರೋಶಗೊಂಡ ಪುರುಷೋತ್ತಮ್‌ ತನ್ನ ಚಾಕುವಿನಿಂದ ಇರ್ಫಾನ್‌ನನ್ನು ಕೊಲೆಗೈದು ಪರಾರಿಯಾಗಿದ್ದ. ಆರೋಪಿಗೂ ಷರೀಫ್ಗೂ ಯಾವುದೇ ಹಳೇ ದ್ವೇಷವಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಪಂಚರ್‌ ಶಾಪ್‌ನಲ್ಲಿ ಕೆಲಸ ಮಾಡುವ ಇರ್ಫಾನ್‌ ಷರೀಫ್ 19ರಂದು ರಾತ್ರಿ 9 ಗಂಟೆ ಸುಮಾರಿಗೆ ತನ್ನ ಸ್ನೇಹಿತರಾದ ಅನ್ವರ್‌ ಮತ್ತು ಶಬಾದ್‌ ಜತೆ ಬಸನವನಗುಡಿಯ ಬಾರ್‌ವೊಂದರಲ್ಲಿ ಕಂಠಪೂರ್ತಿ ಮದ್ಯ ಸೇವಿಸಿದ್ದಾರೆ. ನಂತರ ನ್ಯಾಷನಲ್‌ ಕಾಲೇಜು ಆವರಣದಲ್ಲಿ ಬೈಕ್‌ ವೀಲಿಂಗ್‌ ಮಾಡಿ, ರಸ್ತೆಯಲ್ಲಿ ಕೂಗಾಡಿಕೊಂಡು ವೇಗವಾಗಿ ಬಂದಿದ್ದಾನೆ.

ಇದೇ ವೇಳೆ ಕನಕಪುರ ಮುಖ್ಯರಸ್ತೆಯ ಬಳಿ ತನ್ನ ಸ್ನೇಹಿತರಾದ ಸ್ಟೀಫ‌ನ್‌ ಮತ್ತು ಹರೀಶ್‌ ಜತೆ ನಿಂತಿದ್ದ ಪುರುಷೋತ್ತಮ್‌ ಬೈಕ್‌ಗೆ ಡಿಕ್ಕಿಯೊಡೆದಿದ್ದಾರೆ. ಇದೇ ವಿಚಾರವಾಗಿ ಆರು ಮಂದಿಯ ನಡುವೆ ಗಲಾಟೆಯಾಗಿದೆ. ಈ ವೇಳೆ ಪುರುಷೋತ್ತಮ್‌ ತನ್ನ ಚಾಕು ಹಿಡಿದು ಇರ್ಫಾನ್‌ ಮತ್ತು ಸ್ನೇಹಿತರಿಗೆ ಹೊಡೆಯದಂತೆ ಎಚ್ಚರಿಸಿದ್ದಾನೆ. ಆದರೂ ಅನ್ವರ್‌, ಶಬಾದ್‌ ಅಲ್ಲೇ ಇದ್ದ ನಾಮಫ‌ಲಕ ಮತ್ತು ಸೈಕಲ್‌ ಹಿಡಿದು ಹಲ್ಲೆಗೆ ಮುಂದಾಗಿದ್ದಾರೆ.

ಈ ವೇಳೆ ಆರೋಪಿ ಪುರುಷೋತ್ತಮ್‌, ಇರ್ಫಾನ್‌ನ ಹೊಟ್ಟೆಗೆ ಇರಿದಿದ್ದಾನೆ. ಆಗ ಅನ್ವರ್‌ ಮತ್ತು ಶಬಾದ್‌ ಪುರುಷೋತ್ತಮ್‌ ಮೇಲೆ ಕಲ್ಲು ತೂರಾಟ ನಡೆಸಿದ್ದು, ಸ್ಥಳದಿಂದ ಪುರುಷೋತ್ತಮ್‌ ಪರಾರಿಯಾಗಿದ್ದಾನೆ. ಇತ್ತ ರಕ್ತಸ್ರಾವದಿಂದ ಕೆಳಗೆ ಬಿದಿದ್ದ ಇರ್ಫಾನ್‌ ಷರೀಫ್ನನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಚಿಕಿತ್ಸೆ ಫ‌ಲಿಸದೆ ಸಾವನ್ನಪ್ಪಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

ಪುರುಷೋತ್ತಮ್‌ ಈ ಮೊದಲು ಅಮೆಜಾನ್‌ ಕಂಪೆನಿಯ ಡೆಲವರಿ ವಾಹನ ಚಾಲಕನಾಗಿದ್ದ. ಇತ್ತೀಗಷ್ಟೇ ಕರ್ತವ್ಯಲೋಪ ಆರೋಪದ ಮೇಲೆ ಆತನನ್ನು ಕೆಲಸದಿಂದ ತೆಗೆದುಹಾಕಲಾಗಿತ್ತು. ಘಟನೆ ದಿನ ಅಮೆಜಾನ್‌ ವಾಹನ ಚಾಲಕ ಚಂದ್ರು ರಜೆ ಹಾಕಿದ್ದು, ಪುರುಷೋತ್ತಮ್‌ಗೆ ವಾಹನ ಕೊಟ್ಟಿದ್ದ.

ಈ ಹಿನ್ನೆಲೆಯಲ್ಲಿ ಚಂದ್ರುನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆರೋಪಿ ಸುಳಿವು ಸಿಕ್ಕಿತ್ತು. ಜತೆಗೆ ಘಟನಾ ಸ್ಥಳದಲ್ಲಿದ್ದ ಸಿಸಿಟಿವಿ ಕ್ಯಾಮೆರಾ ಹಾಗೂ ಆರೋಪಿಯ ಮೊಬೈಲ್‌ ನೆಟ್‌ವರ್ಕ್‌ ಪರಿಶೀಲಿಸಿದಾಗ ಪುರುಷೋತ್ತಮ್‌ ಇರುವ ಸ್ಥಳ ಗೊತ್ತಾಯಿತು ಎಂದು ಅಧಿಕಾರಿಯೊಬ್ಬರು “ಉದಯವಾಣಿ’ಗೆ ತಿಳಿಸಿದ್ದಾರೆ. 

ಟಾಟಾಏಸ್‌ ವಾಹನದಲ್ಲಿ ಮಲಗುತ್ತಿದ್ದ ಆರೋಪಿ: ಇರ್ಫಾನ್‌ ಷರೀಫ್ನನ್ನು ಕೊಲೆಗೈದಿದ್ದ ಆರೋಪಿ ಪುರುಷೋತ್ತಮ್‌ ಕೂಡಲೇ ಸ್ಥಳದಿಂದ ಪರಾರಿಯಾಗಿದ್ದ. ಬಳಿಕ ಉತ್ತರಹಳ್ಳಿಯ ಸ್ನೇಹಿತನ ಮನೆಯಲ್ಲಿ ಉಳಿದುಕೊಂಡಿದ್ದ. ಇತ್ತ ಪೊಲೀಸರು ತನಗಾಗಿ ಹುಡುಕಾಟ ನಡೆಸುತ್ತಿರುವ ಬಗ್ಗೆ ಮಾಹಿತಿ ಪಡೆದ ಆರೋಪಿ ಅದೇ ಸ್ನೇಹಿತನ ಟಾಟಾ ಏಸ್‌ ವಾಹನದಲ್ಲಿ ಮಲಗುತ್ತಿದ್ದ. ಈ ಮಾಹಿತಿ ಪಡೆದು ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next