ಬೆಂಗಳೂರು: ವಾಸ್ತವ್ಯ ಹೂಡುವ ನೆಪದಲ್ಲಿ ಮಹಿಳಾ ಪಿಜಿಗಳಿಗೆ ನುಗ್ಗಿ ಲ್ಯಾಪ್‌ಟಾಪ್ ಕಳವು ಮಾಡಿ ಐಷಾರಾಮಿ ಜೀವನ ನಡೆಸುತ್ತಿದ್ದ ಯುವತಿ ಪೊಲೀಸರ ಬಲೆಗೆ ಬಿದಿದ್ದಾಳೆ. ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿಯ ಶೋಭಾ (23) ಬಂಧಿತೆ. ಆಕೆಯಿಂದ 4 ಲಕ್ಷ ಮೌಲ್ಯದ 10 ಲ್ಯಾಪ್‌ಟಾಪ್‌ಗ್ಳನ್ನು ವಶಕ್ಕೆ ಪಡೆಯಲಾಗಿದ್ದು, ಆಗ್ನೇಯ ವಿಭಾಗದ ವಿವಿಧ ಠಾಣೆಯ 9 ಕಳವು ಪ್ರಕರಣಗಳು ಪತ್ತೆಯಾಗಿವೆ.
ಈ ಸಂಬಂಧ ರಚಿಸಲಾಗಿದ್ದ ತಂಡ ವಿಶೇಷ ಕಾರ್ಯಾಚರಣೆ ನಡೆಸಿ ಬಂಧಿಸುವಲ್ಲಿ ಯಶಸ್ವಿಯಾಗಿದೆ ಎಂದು ಡಿಸಿಪಿ ಡಾ ಬೋರಲಿಂಗಯ್ಯ ತಿಳಿಸಿದ್ದಾರೆ. ಡಿಪ್ಲೊಮಾ ವ್ಯಾಸಂಗ ಮಾಡಿರುವ ಶೋಭಾ, ಚಿಕ್ಕಬಳ್ಳಾಪುರದಲ್ಲಿ ಯುವಕನೊಬ್ಬನನ್ನು ಪ್ರೀತಿಸುತ್ತಿದ್ದಳು. ಆತ ಯಾವುದೇ ಕೆಲಸಕ್ಕೆ ಹೋಗುತ್ತಿರಲಿಲ್ಲ.
ಹೀಗಾಗಿ ಒಂದು ವರ್ಷದ ಹಿಂದೆ ಬೆಂಗಳೂರಿಗೆ ಬಂದಿದ್ದ ಶೋಭಾ ಕೋರಮಂಗಲದ ಪಿಜಿಯೊಂದರಲ್ಲಿ ನೆಲೆಸಿ, ಖಾಸಗಿ ಕಂಪೆನಿಯಲ್ಲಿ ಕಂಪ್ಯೂಟರ್ ಅಪರೇಟರ್ ಆಗಿ ಕೆಲಸ ಮಾಡುತ್ತಿದ್ದಳು. ತನಗೆ ಬರುತ್ತಿದ್ದ ಸಂಬಂಳದಿಂದ ವಿಲಾಸಿ ಜೀವನ ನಡೆಸಲು ಸಾಧ್ಯವಿಲ್ಲ ಎಂದು ಮೂರು ತಿಂಗಳ ಹಿಂದೆ ತಾನೂ ವಾಸವಾಗಿದ್ದ ಪಿಜಿಯೊಂದರಲ್ಲಿ ಲ್ಯಾಪ್‌ಟಾಪ್ ಕಳವು ಮಾಡಿ ಸರ್ವೀಸ್ ಸೆಂಟರ್‌ಗೆ ಮಾರಾಟ ಮಾಡಿದ್ದಳು.
ಇಂಟರ್‌ವ್ಯೂ ಇದೆ!: ಕಳವು ಮಾಡುವುದನ್ನೇ ಅಭ್ಯಾಸ ಮಾಡಿಕೊಂಡ ಶೋಭಾ ಆಗ್ನೇಯ ವಿಭಾಗದ ಹತ್ತಾರು ಪಿಜಿಗಳಿಗೆ ಕೊಠಡಿ ಬಾಡಿಗೆ ಪಡೆಯುವ ನೆಪದಲ್ಲಿ ಹೋಗುತ್ತಿದ್ದಳು. ನಂತರ ಮಾಲೀಕರನ್ನು ನಂಬಿಸಿ ಪಿಜಿಯ ರೂಂಗಳನ್ನು ನೋಡಲು ಒಳ ಹೋಗುತ್ತಿದ್ದು, ಕೊಠಡಿ ಚೆನ್ನಾಗಿದೆ ಇಲ್ಲಿಯೇ ಉಳಿದುಕೊಳ್ಳುತ್ತೇನೆ ಎಂದು ಹೇಳುತ್ತಿದ್ದಳು.
ಬಳಿಕ ನನಗೆ ಈಗ ತುರ್ತಾಗಿ ಒಂದು ಇಂಟರ್‌ವ್ಯೂ ಇದೆ. ನನ್ನ ಲಗೇಜ್ ಇಲ್ಲಿಯೇ ಇರಲಿ. ಸಂಜೆ ಬಂದು ಮುಂಗಡ ಹಣ ಮತ್ತು ನನ್ನ ವೈಯಕ್ತಿಕ ದಾಖಲೆಗಳನ್ನು ಕೊಡುತ್ತೇನೆ ಎಂದು ಹೇಳಿ ಮಾಲೀಕರನ್ನು ನಂಬಿಸುತ್ತಿದ್ದಳು.
ನಂತರ ಶೌಚಾಲಯಕ್ಕೆ ಹೋಗಿ ವಾಪಸ್ ಬರುವಾಗ ತನ್ನ ಮತ್ತೂಂದು ಬ್ಯಾಗ್‌ನಲ್ಲಿ ಲ್ಯಾಪ್‌ಟಾಪ್ ಕಳವು ಮಾಡಿ ಪರಾರಿಯಾಗುತ್ತಿದ್ದಳು. ಮಾಲೀಕರು ಆಕೆಯ ಲಗೇಜ್ ಪರಿಶೀಲಿಸಿದಾಗ, ಖಾಲಿ ಇರುತ್ತಿತ್ತು. ಬಳಿಕ ಕೊಠಡಿ ಪರಿಶೀಲಿಸಿದಾಗ ಲ್ಯಾಪ್‌ಟಾಪ್ ಕಳವುವಾಗಿರುವುದು ಬೆಳಕಿಗೆ ಬರುತ್ತಿತ್ತು ಎಂದು ಡಿಸಿಪಿ ಡಾ ಬೋರಲಿಂಗಯ್ಯ ತಿಳಿಸಿದ್ದಾರೆ.