ಗಂಗಾವತಿ : ನಗರದ ಹಿರೇಜಂತಕಲ್ ಗೆ ಹೋಗುವ ರಸ್ತೆಯ ಪಕ್ಕದಲ್ಲಿರುವ ವಿರುಪಾಪುರ ಸ್ಮಶಾನ ಭೂಮಿಯಲ್ಲಿ ವೀರಮಾಸ್ತಿಗಲ್ಲು ಪತ್ತೆಯಾಗಿದೆ .
ಸ್ಮಶಾನ ಜಾಗವನ್ನು ಸ್ಥಳೀಯರು ಸ್ವಚ್ಛಗೊಳಿಸುವ ಸಂದರ್ಭದಲ್ಲಿ ವೀರ ಮಾಸ್ತಿಗಲ್ಲು ದೊರಕಿದ್ದು ಸ್ಮಾರಕವನ್ನು ವಿರುಪಾಪುರದ ಆಂಜನೇಯ ದೇವಾಲಯದ ಬಳಿ ಇರಿಸಲಾಗಿದೆ .
ವೀರ ಮಾಸ್ತಿಗಲ್ಲಿನ ಶಿಲ್ಪವನ್ನು ಪರಿಶೀಲಿಸಿದ ಇತಿಹಾಸ ಸಂಶೋಧಕ ಡಾ। ಶರಣಬಸಪ್ಪ ಕೋಲ್ಕಾರ್ ಅವರು ಇದು ಹದಿಮೂರನೆಯ ಶತಮಾನಕ್ಕೆ ಸೇರಿದ ವೀರ ಮಾಸ್ತಿಗಲ್ಲು ಕೆಂಪು ಕಣಶಿಲೆಯಲ್ಲಿ ಕೆತ್ತಲಾಗಿದೆ.
ಈ ಶಿಲ್ಪದ ಮೇಲ್ಭಾಗದಲ್ಲಿ ಈಶ್ವರಲಿಂಗ ಅದರ ಎರಡೂ ಬದಿಗೆ ಸೂರ್ಯ ಚಂದ್ರರ ಬಿಂಬಗಳಿವೆ. ಶಿಲ್ಪ ಭಾಗದಲ್ಲಿ ವೀರನ ಶಿಲ್ಪ ಪ್ರಧಾನವಾಗಿದೆ. ಹೋರಾಟದಲ್ಲಿ ತೊಡಗಿದ ಸಂದರ್ಭವನ್ನು ಸೂಚಿಸುತ್ತದೆ. ವೀರನು ಎಡಗೈಯಲ್ಲಿ ಬಿಲ್ಲು ಹಿಡಿದು ಬಲಗೈಯಿಂದ ಬಾಣಗಳನ್ನು ಸೆಳೆಯುತ್ತಿರುವ ರೀತಿಯಲ್ಲಿದೆ ಅವನ ಮುಂಭಾಗದಲ್ಲಿ ಶತ್ರುವೊಬ್ಬ ಎರಡು ಬಾಣಗಳು ತಾಗಿ ನೆಲಕ್ಕೆ ಕುಸಿದಿದ್ದಾನೆ ವೀರನ ಹಿಂಭಾಗದಲ್ಲಿ ಆತನ ಸತಿ ಶಿಲ್ಪವಿದೆ .ಯುದ್ಧದಲ್ಲಿ ಹೋರಾಡಿದ ವೀರ ಹಾಗೂ ವೀರನ ಕಳೇಬರದ ಜೊತೆ ಸತಿ ಹೋದ ಆತನ ಮಡದಿಯ ನೆನಪಿಗಾಗಿ ವೀರಮಾಸ್ತಿ ಕಲ್ಲನ್ನು ಹಾಕಿಸಲಾಗಿದೆ. ಶಿಲ್ಪ ಅಷ್ಟು ಕಲಾತ್ಮಕವಾಗಿಲ್ಲ. ಆದರೆ ಆದರಿಂದ ಗಂಗಾವತಿ ಪ್ರದೇಶದ14ನೇ ಶತಮಾನದ ಸೈನಿಕ ಹಾಗೂ ಸಾಮಾಜಿಕ ಘಟನೆಯೊಂದು ತಿಳಿದುಬರುತ್ತದೆ ಎಂದು ಕೋಲ್ಕಾರ್ ಅಭಿಪ್ರಾಯಪಟ್ಟಿದ್ದಾರೆ.