Advertisement

ಮಾರಾಟದ ಕಬ್ಬಿನ ಜ್ಯೂಸ್‌ನಲ್ಲಿ ವಿಷಕಾರಿ ಐಸ್‌ ಬಳಕೆ ಪತ್ತೆ

12:50 AM Jan 22, 2019 | Harsha Rao |

ಕಾಸರಗೋಡು: ರಸ್ತೆ ಬದಿ ತಳ್ಳುಗಾಡಿಯಲ್ಲಿ ಮಾರಾಟ ಮಾಡುವ ಕಬ್ಬಿನ ಜ್ಯೂಸ್‌ಗೆ ಬಳಸುವ ಐಸ್‌ನಲ್ಲಿ ವಿಷಕಾರಿ ಪದಾರ್ಥಗಳಿವೆ ಎಂದು ಪತ್ತೆಹಚ್ಚಲಾಗಿದೆ. ಆಹಾರ ಪದಾರ್ಥಗಳು ವಿಷಕಾರಿಯಾಗುತ್ತಿರುವ ಕಾಲಘಟ್ಟದಲ್ಲಿ ರಸ್ತೆ ಬದಿ ಮಾರಾಟ ಮಾಡುವ ತಂಪಾದ ಕಬ್ಬಿನ ಜ್ಯೂಸ್‌ ಆರೋಗ್ಯಕ್ಕೆ ಹಾನಿಕಾರಕವಾಗಿದೆ. ತಂಪು ಪಾನೀಯಗಳಲ್ಲಿ ಉಪಯೋಗಿಸುವ ಐಸ್‌ ಸಹಿತ ಜಿಲ್ಲೆಯ ಪ್ರಧಾನ ಹೆದ್ದಾರಿಗಳ ಬದಿಯಲ್ಲಿ ತಳ್ಳುಗಾಡಿಗಳಲ್ಲಿ ಮಾರಾಟಗೈಯುವ ಕಬ್ಬಿನ ಹಾಲಿನಲ್ಲಿ ಬಳಸುವ ಐಸ್‌ನಲ್ಲಿ ಹಾನಿಕಾರಕ ಅಂಶವಿದೆ ಎಂಬ ಸತ್ಯ ಹೊರಬಿದ್ದಿದೆ.

Advertisement

ಜಿಲ್ಲೆಯ ಕಾಂಞಂಗಾಡ್‌ ನಗರಸಭಾ ಆರೋಗ್ಯ ವಿಭಾಗ ಆಹಾರ ಪರಿಶೀಲನಾ ಕಾರ್ಯ ಕೈಗೊಂಡಾಗ ಕಬ್ಬಿನ ಜ್ಯೂಸ್‌ನಲ್ಲಿ ಬಳಸಲ್ಪಡುವ ಐಸ್‌ ಆರೋಗ್ಯಪ್ರದವಾಗಿಲ್ಲ ಎಂದು ಖಾತರಿಪಡಿಸಿದೆ. ಇದರಂತೆ ನಗರಸಭಾ ವ್ಯಾಪ್ತಿಯಲ್ಲಿ ಅನ ಧಿಕೃತ ಕಬ್ಬಿನ ಅಂಗಡಿಗಳನ್ನು ಹುಡುಕಿ ವಿಷಕಾರಿ ಐಸ್‌ ಬಳಕೆಗೆ ತಡೆಯೊಡ್ಡಲಾಗಿದ್ದು, ಜ್ಯೂಸ್‌ನಲ್ಲಿ ಬಳಸುವ ಐಸ್‌ ಬಳಸದಂತೆ ನಿರ್ದೇಶಿಸಲಾಗಿದೆ. 

4ರಷ್ಟು ಪಿ.ಎಚ್‌. ಅಂಶ ಪತ್ತೆ  
ಆರೋಗ್ಯಕ್ಕೆ ಪೂರಕವಾಗಿರುವ ನೀರಿನಲ್ಲಿ ವೈಜ್ಞಾನಿಕವಾದ ಪಿ.ಎಚ್‌. ಮೌಲ್ಯವು 7 ರಷ್ಟಿರುತ್ತದೆ. ಆದರೆ ರಸ್ತೆ ಬದಿ ಬಳಸುವ ಮತ್ತು ಕಬ್ಬಿನ ಹಾಲಿನಲ್ಲಿ ಸೇರ್ಪಡೆಯಾಗುತ್ತಿರುವ ಐಸ್‌ ನೀರಿನ ಪಿ.ಎಚ್‌. ಅಂಶ ನಾಲ್ಕರಷ್ಟಿದೆ  ಎಂದು ಆರೋಗ್ಯ ಅ ಧಿಕಾರಿಗಳು ತಿಳಿಸಿದ್ದಾರೆ.

ಬಳಸದಂತೆ ನಿರ್ದೇಶನ 
ಪಿ.ಎಚ್‌. ಅಂಶವು ಆರೋಗ್ಯಕ್ಕೆ ತೊಡಕಾಗಿರುವ ಕಾರಣ ಕಾಂಞಂಗಾಡ್‌ ನಗರಸಭಾ ವ್ಯಾಪ್ತಿಯಲ್ಲಿರುವ ಜ್ಯೂಸ್‌ ಮಾರಾಟ ಕೇಂದ್ರಗಳಲ್ಲಿ ಪಿ.ಎಚ್‌. ಅಂಶ ಕಡಿಮೆಯಿರುವ ಐಸ್‌ ಬಳಸದಂತೆ ನಿರ್ದೇಶಿಸಲಾಗಿದೆ. ಆದರೂ ಕಬ್ಬಿನ ಹಾಲಿನಲ್ಲಿ ಐಸ್‌ ಬಳಕೆ ನಿರಂತರವಾಗಿದೆ.

ಜ್ಯೂಸ್‌ ಮಾರಾಟ ಮಾಡುವ ಕೆಲಸಗಾರರಿಗೆ ದಿನವೊಂದಕ್ಕೆ 400 ರೂ.ಸಂಬಳವಿದೆ. ಗುಜರಿ ವ್ಯಾಪಾರ ಮಾಡುವ ಅಂಗಡಿಯೊಂದರ ಶೀತಲೀಕರಣ ಘಟಕದಿಂದ ಕಬ್ಬಿನ ಅಂಗಡಿ ಸಹಿತ ತಳ್ಳು ಗಾಡಿಗಳಿಗೆ ಐಸ್‌ ಪೂರೈಕೆಯಾಗುತ್ತದೆ. ವಿದ್ಯುತ್‌ ಸಂಪರ್ಕ ಇಲ್ಲದ ಜ್ಯೂಸ್‌ ತಳ್ಳುಗಾಡಿಗಳಲ್ಲಿ ಶೇಖರಿಸಲ್ಪಡುವ ಐಸ್‌ ನಿಧಾನಗತಿಯಲ್ಲಿ ಕರಗುತ್ತದೆ. ಮಾತ್ರವಲ್ಲದೆ ಹಲವು ದಿನಗಳವರೆಗೆ ಬರುತ್ತದೆ. ಇದಕ್ಕೆ ಮೂಲ ಕಾರಣ ಐಸ್‌ನೊಂದಿಗೆ ಬೆರೆಸಲ್ಪಡುವ ಅಪಾಯಕಾರಿ ಮತ್ತು ಆರೋಗ್ಯಕ್ಕೆ ಹಾನಿಕಾರಕ ವಸ್ತುಗಳಾಗಿವೆ ಎಂದು ತಿಳಿದು ಬಂದಿದೆ. 

Advertisement

ರಸ್ತೆ ಸಮೀಪದ ಜ್ಯೂಸ್‌ ಸೆಂಟರ್‌ಗಳಲ್ಲಿ ತಯಾರಿ ಮಾಡುವ ಅವಿಲ್‌ ಮಿಲ್ಕ್ನಲ್ಲೂ ಇದೇ ತರಹದ ಐಸ್‌ ಬಳಕೆಯಲ್ಲಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಪ್ರತಿನಿತ್ಯ ಬೆಳಗ್ಗಿನಿಂದ ಸಾಯಂಕಾಲದವ ರೆಗೆ ಜ್ಯೂಸ್‌ ತಳ್ಳುಗಾಡಿಗಳಲ್ಲಿ ಬಳಸುವ ಜನ ರೇಟರ್‌ಗಳು  ಪರಿಸರ ಮತ್ತು ಶಬ್ದ ಮಾಲಿನ್ಯ ಮಾಡುತ್ತವೆ. ಜಿಲ್ಲೆಯ ವಿವಿಧ ನಗರಸಭೆ, ಪಂಚಾಯತ್‌ಗಳಲ್ಲಿ ವ್ಯಾಪಕವಾಗಿರುವ ಕಬ್ಬು ಜ್ಯೂಸಿನ ತಳ್ಳುಗಾಡಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕಿದೆ. 

ಸಾರ್ವಜನಿಕ ಆರೋಗ್ಯ ವಿಭಾಗ ಸಹಿತ ಸ್ಥಳೀಯಾಡಳಿತಗಳು ಸೂಕ್ತ ಕ್ರಮ ಕೈಗೊಂಡು ಆರೋಗ್ಯಕ್ಕೆ ಅಪಾಯಕಾರಿಯಾಗಿರುವ ಮತ್ತು ಪರಿಸರಕ್ಕೆ ಹಾನಿಕಾರಕವಾಗಿರುವ ಅಕ್ರಮ ಜ್ಯೂಸ್‌ ಮಾರಾಟ ಕೇಂದ್ರಗಳಿಗೆ ಬ್ರೇಕ್‌ ಹಾಕಬೇಕಿದೆ.

ಗುತ್ತಿಗೆದಾರರ ಮೂಲಕ ಐಸ್‌ ಪೂರೈಕೆ
ಕಾಂಞಂಗಾಡ್‌ ಸನಿಹದ ಮಾವುಂಗಲ್‌ ಪ್ರದೇಶದಲ್ಲಿ  ಹಲವು ಕಬ್ಬಿನ ತಳ್ಳುಗಾಡಿಗಳಿದ್ದು  ಕಡಿಮೆ ಹಣಕ್ಕೆ ಸಿಗುವ ಮತ್ತು ಪಿ.ಎಚ್‌. ಅಂಶ ಕಡಿಮೆಯಿರುವ, ಆರೋಗ್ಯಕ್ಕೆ ಮಾರಕವಾಗಿರುವ ಐಸ್‌ ಬಳಸಲಾಗುತ್ತಿದೆ. ತಳ್ಳುಗಾಡಿಗಳಲ್ಲಿ ಕಬ್ಬಿನ ಹಾಲನ್ನು ತೆಗೆಯುವ ಕೆಲಸಕ್ಕೆ ಉತ್ತರ ಭಾರತದ ಹಲವು ಮಂದಿಯನ್ನು ನೇಮಿಸಲಾಗಿದ್ದು, ಗುತ್ತಿಗೆದಾರರ ಮೂಲಕ ಕಬ್ಬಿನ ತಳ್ಳುಗಾಡಿಗಳಿಗೆ ಐಸ್‌ ಪೂರೈಸಲಾಗುತ್ತದೆ. 

ರಾಷ್ಟ್ರೀಯ ಹೆದ್ದಾರಿ ಬದಿ ನಿರಂತರ ಬಳಕೆ 
ರಾಷ್ಟ್ರೀಯ ಹೆದ್ದಾರಿ ಬದಿಗಳ ಸಹಿತ ಕಾಸರಗೋಡು, ಕುಂಬಳೆ, ಮಂಜೇಶ್ವರ ಪೇಟೆ ಪ್ರದೇಶಗಳಲ್ಲೂ ರಸ್ತೆ ಬದಿಯಲ್ಲಿ ಮಾರಾಟ ಮಾಡುವ ಕಬ್ಬಿನ ಜ್ಯೂಸ್‌ನಲ್ಲಿ ಪಿ.ಎಚ್‌. ಅಂಶ ಕಡಿಮೆ ಇರುವ ಐಸ್‌ ಬಳಕೆ ನಿರಂತರವಾಗಿದೆ ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next