Advertisement
ಕಾಸರಗೋಡಿನ ಹಾರಿಸ್ ಪನಲಂ ಮಹಮದ್ ಕುಂಞಿ (42) ಮತ್ತು ಪಯ್ಯನ್ನೂರಿನ ಫೈಝಲ್ (42) ಬಂಧಿತರು. ದುಬಾೖನಿಂದ ವಿಮಾನ ಮೂಲಕ ಅಕ್ರಮವಾಗಿ ಸಾಗಿಸಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಇಳಿಸಿ ಚಿನ್ನವನ್ನು ಕಾರಿನಲ್ಲಿ ಕಾಸರಗೋಡಿಗೆ ಸಾಗಾಟ ಮಾಡುತ್ತಿದ್ದಾಗ ಪಂಪ್‌ವೆಲ್ ವೃತ್ತದ ಬಳಿ ಡಿಆರ್‌ಐ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದರು.
Related Articles
ಅಕ್ರಮ ಚಿನ್ನ ಹೊಂದಿದ್ದ ಲಗ್ಗೇಜ್ ಕಾರಿನ ಹಿಂಬದಿಯ ಸೀಟಿನಲ್ಲಿ ಇರಿಸಲಾಗಿತ್ತು. ಚಿನ್ನವನ್ನು ಪೋರ್ಟಬಲ್ ವೈರ್‌ಲೆಸ್ ಆ್ಯಂಪ್ಲಿಫೈರ್‌ನಲ್ಲಿ ಅಡಗಿಸಿಡಲಾಗಿತ್ತು. 24 ಕ್ಯಾರೆಟ್‌ನ ಚಿನ್ನವನ್ನು ಕರಗಿಸಿ ತೆಳು ತಗಡುಗಳನ್ನಾಗಿಸಿ ಬಳಿಕ ಅದನ್ನು ಇಂಗ್ಲಿಷ್‌ನ “ಇ’ ಮತ್ತು “ಐ’ ಆಕಾರದಲ್ಲಿ ಕತ್ತರಿಸಿ ಅದಕ್ಕೆ ಪಾದರಸದ ಲೇಪನ ಕೊಟ್ಟು ಬಳಿಕ ಅವುಗಳನ್ನು ಆ್ಯಂಪ್ಲಿಫೈರ್‌ನ ಒಂದು ಭಾಗದಲ್ಲಿರುವ ಟ್ರಾನ್ಸ ಫಾರ್ಮರ್ (ಕಾಯಿಲ್)ನ ಒಳಗೆ ಗಟ್ಟಿಯಾಗಿ ಪ್ಯಾಕ್ ಮಾಡಲಾಗಿತ್ತು.
Advertisement
ಹಣಕ್ಕಾಗಿ ಮತ್ತು ಉಚಿತ ವಿಮಾನ ಟಿಕೆಟ್‌ಗಾಗಿ ತಾನು ಈ ಚಿನ್ನವನ್ನು ಆಂಪ್ಲಿಫೈರ್‌ನ ಒಳಗೆ ಬಚ್ಚಿಟ್ಟು ದುಬಾಯಿನಿಂದ ಮಂಗಳೂರಿಗೆ ತರಲು ಸಮ್ಮತಿಸಿದ್ದೆನು. ವಿಮಾನ ನಿಲ್ದಾಣದಿಂದ ಹೊರಗೆ ಬಂದ ಬಳಿಕ ಅದನ್ನು ಪಂಪ್‌ವೆಲ್‌ನಲ್ಲಿ ಕಾಯುತ್ತಿದ್ದ ಫೈಝಲ್‌ನಿಗೆ ಹಸ್ತಾಂತರಿಸ ಬೇಕು ಎಂದು ತನಗೆ ಸೂಚಿಸಲಾಗಿತ್ತು ಎಂದು ಹಾರಿಸ್ ಪನಲಂ ಮಹಮದ್ ಕುಂಞಿ ತಿಳಿಸಿದ್ದಾನೆ.
ಆರೋಪಿ ಫೈಝಲ್ ತಾನು ಈ ಹಿಂದೆ ಕೂಡ ಇಂತಹ ಕೃತ್ಯ ಎಸಗಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ತಾನು ಕಮಿಷನ್ ಆಧಾರದಲ್ಲಿ ಕೆಲಸ ಮಾಡುತ್ತಿದ್ದೇನೆ. ಚಿನ್ನವನ್ನು ಕಾಸರಗೋಡಿನಲ್ಲಿರುವ ಇನ್ನೋರ್ವ ಏಜಂಟನಿಗೆ ತಾನು ತಲುಪಿಸುತ್ತಿದ್ದು, ಅಲ್ಲಿಂದ ಅದು ಈ ಜಾಲದ ಕಿಂಗ್‌ಪಿನ್‌ಗೆ ತಲಪುತ್ತದೆ ಎಂದು ಆತ ವಿವರಿಸಿದ್ದಾನೆ.
ನ್ಯಾಯಾಂಗ ಬಂಧನ: ಇಬ್ಬರೂ ಆರೋಪಿಗಳನ್ನು ಮಂಗಳೂರಿನ ಮುಖ್ಯ ನ್ಯಾಯಿಕ ದಂಡಾಧಿಕಾರಿ ಸಮಕ್ಷಮ ಹಾಜರು ಪಡಿಸಲಾಗಿದ್ದು, ಇಬ್ಬರಿಗೂ 10 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಈ ಅಕ್ರಮ ಚಿನ್ನ ಸಾಗಾಟದ ಹಿಂದೆ ದೊಡ್ಡ ಜಾಲವೇ ಇದ್ದು, ಅದನ್ನು ಪತ್ತೆ ಹಚ್ಚಲು ತನಿಖೆಯನ್ನು ತೀವ್ರಗೊಳಿಸಲಾಗಿದೆ ಎಂದು ಡಿಆರ್‌ಐ ಅಧಿಕಾರಿಗಳು ತಿಳಿಸಿದ್ದಾರೆ.