Advertisement

ಆಟೊ ಸ್ವೀಪ್‌ ಠೇವಣಿ ಬಗ್ಗೆ ನಿಮಗೆ ಗೊತ್ತಾ?

01:34 AM Jul 04, 2020 | Hari Prasad |

ತಮ್ಮಲ್ಲಿರುವ ಹಣವನ್ನು ಸರಿಯಾದ ಜಾಗದಲ್ಲಿ ಇಡುವುದು ಹೇಗೆ, ತುರ್ತು ಅಗತ್ಯಬಿದ್ದಾಗ ಅದನ್ನು ತಕ್ಷಣ ಪಡೆಯುವುದು ಹೇಗೆ ಎನ್ನುವುದು ಹಲವರಿಗೆ ಗೊತ್ತಿರುವುದಿಲ್ಲ. ಅದಕ್ಕಾಗಿಯೇ ಬ್ಯಾಂಕ್‌ಗಳಲ್ಲಿ ಆಟೊ ಸ್ವೀಪ್‌ ನಿಗದಿತ ಠೇವಣಿಗಳನ್ನು ಶುರು ಮಾಡಲಾಗಿದೆ. ಲಾಭವೂ ಬೇಕು, ತುರ್ತು ಇದ್ದಾಗಸಲೀಸಾಗಿ ಹಣವೂ ಬೇಕೆನ್ನುವವರಿಗೆ ಆಟೊ ಸ್ವೀಪ್‌ ಎಫ್ಡಿ ಉತ್ತಮ ದಾರಿ.

Advertisement

ಆಟೊ ಸ್ವೀಪ್‌ ಠೇವಣಿಗಳೆಂದರೇನು?
ಸಾಮಾನ್ಯವಾಗಿ ಬ್ಯಾಂಕ್‌ಗಳಲ್ಲಿ ನಿಗದಿತ ಅವಧಿಗೆ ಠೇವಣಿ ಇಡಲಾಗುತ್ತದೆ. ಇಂತಹ ಠೇವಣಿಯನ್ನು ಅವಧಿಗೆ ಮುನ್ನ ಹಿಂತೆಗೆದರೆ, ಹೇಳಿದಷ್ಟು ಬಡ್ಡಿ ಸಿಗುವುದಿಲ್ಲ. ಜೊತೆಗೆ ಪೂರ್ಣ ಹಣವನ್ನೇ ಹಿಂಪಡೆಯಬೇಕಾಗುತ್ತದೆ. ದಂಡವೂ ವಿಧಿಸಲ್ಪಡುತ್ತದೆ.

ಆದರೆ ಆಟೊಸ್ವೀಪ್‌ ಠೇವಣಿ ಲೆಕ್ಕಾಚಾರ ಬೇರೆ. ಇಲ್ಲಿ ನಿಮ್ಮ ಉಳಿತಾಯ ಖಾತೆಯನ್ನು ಆಟೊ ಸ್ವೀಪ್‌ಗೆ ಜೋಡಿಸುತ್ತೀರಿ. ಈ ಖಾತೆಯಲ್ಲಿ ಯಾವಾಗ ಹಣ ಹಾಕಿದರೂ, ನಿಗದಿತ ಮಿತಿಯ ನಂತರದ ಹಣ ಠೇವಣಿಯಾಗಿ ಬದಲಾಗುತ್ತದೆ. ಈ ಹಂತಗಳನ್ನು ಗಮನಿಸಿ…

1. ಉಳಿತಾಯ ಖಾತೆಗೆ ಆಟೊ ಸ್ವೀಪ್‌ ಠೇವಣಿಯನ್ನು ಜೋಡಿಸುತ್ತೀರಿ. ಒಂದು ನಿರ್ದಿಷ್ಟ ಮೊತ್ತವನ್ನು ನಿರ್ದಿಷ್ಟ ಅವಧಿಗೆ ಮೊದಲ ಠೇವಣಿಯಾಗಿ ಇಡುತ್ತೀರಿ.

2. ಉಳಿತಾಯ ಖಾತೆಗೊಂದು ಹಣದ ಮಿತಿ ನಿಗದಿ ಮಾಡಲಾಗುತ್ತದೆ. ಮೊತ್ತ ಇಂತಿಷ್ಟು ದಾಟಿದ ನಂತರ, ಹೆಚ್ಚುವರಿ ಹಣ ಇನ್ನೊಂದು ಠೇವಣಿಯಾಗಿ ಪರಿವರ್ತನೆಗೊಳ್ಳಬೇಕು ಅನ್ನುವುದೇ ಈ ಮಿತಿ. ಇದು ಕೆಲವೊಮ್ಮೆ ಬ್ಯಾಂಕ್‌ ಅಧಿಕಾರ, ಇನ್ನು ಕೆಲವೊಮ್ಮೆ ನಿಮ್ಮ ಆಯ್ಕೆ.

Advertisement

ಉದಾಹರಣೆ: ನಿಮ್ಮ ಉಳಿತಾಯ ಖಾತೆಗೆ 90,000 ರೂ. ಸಂದಾಯವಾಗುತ್ತದೆ ಎಂದುಕೊಳ್ಳೋಣ. ಈ ಪೈಕಿ ಖಾತೆಯಲ್ಲಿರಬೇಕಾದ ನಿಗದಿತ ಮಿತಿ 50,000 ರೂ. ಬಾಕಿ 40,000 ರೂ. ಹೊಸ ಠೇವಣಿಯಾಗುತ್ತದೆ. ಇದು ಪುನರಾವರ್ತನೆಗೊಳ್ಳುತ್ತಲೇ ಇರುತ್ತದೆ.

3. ನಿಗದಿತ ಮಿತಿ ಜೊತೆಗೆ ಕನಿಷ್ಠ ಮಿತಿ ಎಂಬುದೊಂದಿರುತ್ತದೆ. ಅಂದರೆ ಉಳಿತಾಯ ಖಾತೆಯಲ್ಲಿ 50,000 ರೂ. ನಿಗದಿತ ಮಿತಿಯಾದರೆ, 5000 ರೂ. ಕನಿಷ್ಠ ಮಿತಿ ಎಂದು ಬ್ಯಾಂಕ್‌ ಸೂಚಿಸಬಹುದು. ಈ ಕನಿಷ್ಠ ಹಣವನ್ನು ನೀವು ತೆಗೆಯಲು ಸಾಧ್ಯವಿಲ್ಲ.

ಹಿಂಪಡೆಯುವ ದಾರಿಗಳು
ಹಲವು ಆಟೊ ಸ್ವೀಪ್‌ ಠೇವಣಿಯನ್ನು ನೀವು ಉಳಿತಾಯ ಖಾತೆಗೆ ಜೋಡಿಸಲು ಅವಕಾಶವಿದೆ. ಆದ್ದರಿಂದ ಯಾವ ಠೇವಣಿಯಿಂದ ಹಣ ಹಿಂಪಡೆಯಬೇಕು ಎನ್ನುವುದಕ್ಕೆ ಲಿಫೊ ಮತ್ತು ಫಿಫೊ ಎಂಬ ಎರಡು ದಾರಿಗಳಿವೆ. ಕೊನೆಗೆ ಇಟ್ಟ ಠೇವಣಿಯನ್ನು ಮೊದಲು ಹಿಂಪಡೆಯುವುದು ಲಿಫೊ (ಲಾಸ್ಟ್‌ ಇನ್‌, ಫ‌ಸ್ಟ್‌ ಔಟ್‌). ಮೊದಲು ಇಟ್ಟ ಹಣವನ್ನು ಮೊದಲು ಹಿಂಪಡೆಯುವುದು ಫಿಫೊ (ಫ‌ಸ್ಟ್‌ ಇನ್‌, ಫ‌ಸ್ಟ್‌ ಔಟ್‌).

ಸಾಮಾನ್ಯವಾಗಿ ಲಿಫೋವನ್ನು ಹಿಂಪಡೆಯಲು ಪರಿಗಣಿಸುತ್ತಾರೆ. ಮೊದಲು ಇಟ್ಟ ಠೇವಣಿಗೆ ದೀರ್ಘ‌ಕಾಲದ ಆಧಾರದಲ್ಲಿ ಜಾಸ್ತಿ ಬಡ್ಡಿ ಬರುವುದರಿಂದ, ಇತ್ತೀಚೆಗೆ ಇಟ್ಟಿದ್ದನ್ನು ತೆಗೆಯುವುದು ಉತ್ತಮ. ಯಾವ ಠೇವಣಿಗೆ ಬಡ್ಡಿ ಜಾಸ್ತಿ ಎನ್ನುವುದನ್ನು ನೋಡಿ ಈ ನಿರ್ಧಾರ ಮಾಡಬೇಕು. ಪದೇ ಪದೇ ಹಣ ಹಿಂತೆಗೆಯುವ ಅಭ್ಯಾಸವಿದ್ದರೆ, ಫಿಫೊ ಉತ್ತಮ ಎನ್ನುತ್ತಾರೆ.

ಲಾಭವೇನು?

1. ನಿಮಗೆ ತುರ್ತಾಗಿ ಹಣ ಅಗತ್ಯವಿದ್ದಾಗ ಸಹಜವಾಗಿ ಉಳಿತಾಯ ಖಾತೆಯಲ್ಲಿ ಇರುವ ಹಣವನ್ನು ತೆಗೆದುಬಿಡುತ್ತೀರಿ. ಇನ್ನೂ ಹೆಚ್ಚು ಹಣ ಬೇಕಿದ್ದರೆ, ಆಟೊಸ್ವೀಪ್‌ ಠೇವಣಿಗೆ ಸುಲಭವಾಗಿ ಕೈಹಾಕಬಹುದು. ಹೀಗೆ ಠೇವಣಿಯಿಂದ ಎಷ್ಟು ಹಣ ತೆಗೆದಿರುತ್ತೀರೋ ಅಷ್ಟಕ್ಕೆ ಮಾತ್ರ ಬಡ್ಡಿ ನಷ್ಟವಾಗುತ್ತದೆ.

2. ಎಟಿಎಂ, ಡೆಬಿಟ್‌ ಕಾರ್ಡ್‌, ನೆಟ್‌ಬ್ಯಾಂಕ್‌, ಯುಪಿಐ ಮಾದರಿಯಲ್ಲೂ ಹಣವನ್ನು ಸುಲಭವಾಗಿ ಪಡೆಯಬಹುದು.

3. ಉಳಿತಾಯ ಖಾತೆಯಲ್ಲಿ ಯಾವುದೇ ಲಾಭವಿಲ್ಲದೇ ಹಣವಿಡುವುದಕ್ಕಿಂತ, ಅದನ್ನೇ ಆಟೋ ಸ್ವೀಪ್‌ಗೆ ಜೋಡಿಸಿದರೆ ಬಡ್ಡಿ ಸಿಗುತ್ತದೆ.

4. ಮನೋನಿಗ್ರಹ ಇದ್ದವರಿಗೆ ಮಾತ್ರ ಈ ದಾರಿ ಯೋಗ್ಯ. ಇಲ್ಲವಾದರೆ ಮಾಮೂಲಿ ಠೇವಣಿಯೇ ಯೋಗ್ಯ!

ತೆರಿಗೆ ಹೇಗಿದೆ?
ಇತರೆ ಮೂಲಗಳಿಂದ ಬಂದ ಆದಾಯ ಎನ್ನುವ ಆಧಾರದಲ್ಲಿ, ಆಟೊ ಸ್ವೀಪ್‌ ಠೇವಣಿಗೆ ಬರುವ ಬಡ್ಡಿ ಮೇಲೆ ತೆರಿಗೆ ಹಾಕಲಾಗುತ್ತದೆ. ನಿಮ್ಮ ಆದಾಯಕ್ಕೆ ತಕ್ಕಂತೆ ಗರಿಷ್ಠ ಶೇ.31.2ರಷ್ಟು ತೆರಿಗೆ ವಿಧಿಸುವ ಅವಕಾಶವೂ ಇದೆ. ಹಿರಿಯರಿಗೆ 50,000 ರೂ.ವರೆಗಿನ ಹಣಕ್ಕೆ ವಿನಾಯ್ತಿಯಿದೆ. 60ಕ್ಕಿಂತ ಕಡಿಮೆ ವಯಸ್ಸಿನವರು 10,000 ರೂ.ವರೆಗೆ ವಿನಾಯ್ತಿ ಪಡೆಯಬಹುದು.

ಬಡ್ಡಿ ವಿಧಿಸುವ ಲೆಕ್ಕಾಚಾರ
ಈ ಲೆಕ್ಕಾಚಾರ ಸಹಜವಾಗಿ ಬ್ಯಾಂಕ್‌ಗಳಿಗೆ ತಕ್ಕಂತೆ ಬೇರೆಬೇರೆಯಾಗಿರುತ್ತದೆ. ಆದರೆ ಅವಧಿಗೆ ಮುನ್ನ ಠೇವಣಿ ಹಿಂತೆಗೆದರೆ, ದಂಡ ಹಾಕುವ ಸಾಧ್ಯತೆಯೂ ಇದೆ. ಹಿಂತೆಗೆಯಲ್ಪಟ್ಟ ಹಣಕ್ಕೆ ಬಡ್ಡಿ ಕಡಿತವಾಗುತ್ತದೆ. ಉಳಿದ ಹಣಕ್ಕೆ ಎಂದಿನಂತೆ ಮಾಮೂಲಿ ಬಡ್ಡಿ ಸಲ್ಲುತ್ತದೆ. ಹೀಗೆ ಹಿಂತೆಗೆಯಲ್ಪಟ್ಟ ಹಣ ಎಷ್ಟು ದಿನ ಇತ್ತು ಎನ್ನುವುದರ ಮೇಲೆ ಬಡ್ಡಿ ನಿರ್ಧರಿಸಲಾಗುತ್ತದೆ.

ಉದಾಹರಣೆ: ನೀವು ಒಂದು ವರ್ಷದ ಅವಧಿಗೆ ಶೇ.5ರ ಬಡ್ಡಿಯಲ್ಲಿ ಹಣ ಇಟ್ಟಿರುತ್ತೀರಿ. ಆದರೆ 30 ದಿನದೊಳಗೆ ಒಂದಷ್ಟು ಹಣ ಹಿಂಪಡೆಯುತ್ತೀರಿ. ಈ ಅವಧಿಗೆ ಸಲ್ಲುವ ಬಡ್ಡಿ ಶೇ.3 ಆಗಿದ್ದರೆ, ಅಷ್ಟು ಮಾತ್ರ ಬಡ್ಡಿಯನ್ನು ಹಿಂಪಡೆದ ಹಣಕ್ಕೆ ನೀಡಲಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next