Advertisement
ಆರಂಭದಲ್ಲಿ ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಈ ಕ್ಷೇತ್ರದಲ್ಲಿ ಬಳಿಕ ಬಿಜೆಪಿ ಪ್ರಾಬಲ್ಯ ಪಡೆದುಕೊಂಡಿತು. 1994ರಿಂದ ನಾಲ್ಕು ಅವಧಿಗಳಲ್ಲಿ ಸತತವಾಗಿ ಬಿಜೆಪಿ ವಶದಲ್ಲಿದ್ದ ಕ್ಷೇತ್ರವನ್ನು 2013ರ ಚುನಾವಣೆಯಲ್ಲಿ ಕಾಂಗ್ರೆಸ್ ಮರಳಿ ತನ್ನ ತೆಕ್ಕೆಗೆ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಗಿತ್ತು. 1957ರಿಂದ 2013ರ ವರೆಗೆ ನಡೆದಿರುವ ಒಟ್ಟು 13 ಚುನಾವಣೆಗಳಲ್ಲಿ ಈ ಕ್ಷೇತ್ರದಲ್ಲಿ 8 ಬಾರಿ ಕಾಂಗ್ರೆಸ್ ಹಾಗೂ 5 ಬಾರಿ ಬಿಜೆಪಿ ಜಯ ಗಳಿಸಿವೆ. ಕುತೂಹಲಕಾರಿ ವಿಷಯವೆಂದರೆ, ಈ ಕ್ಷೇತ್ರದಲ್ಲಿ 12 ಬಾರಿ ಕೊಂಕಣಿ ಭಾಷಿಕರೇ ಶಾಸಕರಾಗಿದ್ದಾರೆ. ಒಂದು ಬಾರಿ ಮಾತ್ರ ಜೈನ ಸಮುದಾಯದವರು ಆಯ್ಕೆಯಾಗಿದ್ದರು. ಮಂಗಳೂರು ದಕ್ಷಿಣದಲ್ಲಿ ಬಿಲ್ಲವ ಮತದಾರರು ಅಧಿಕ ಸಂಖ್ಯೆಯಲ್ಲಿದ್ದಾರೆ. ಅನಂತರದ ಸ್ಥಾನದಲ್ಲಿ ಕ್ರೈಸ್ತರು ಹಾಗೂ ಮುಸ್ಲಿಂ ಮತದಾರರಿದ್ದಾರೆ.
2013ರ ಚುನಾವಣೆಯಂತೆಯೇ ಈ ಬಾರಿಯೂ ಮಂಗಳೂರು ದಕ್ಷಿಣ ಕ್ಷೇತ್ರ ಬಹುಕೋನ ಸ್ಪರ್ಧೆಗೆ ಅಣಿಯಾಗುತ್ತಿದ್ದು, ಕುತೂಹಲದ ಕಣವಾಗಿ ಮಾರ್ಪಡುತ್ತಿದೆ. ಕಾಂಗ್ರೆಸ್‌ನಿಂದ ಹಾಲಿ ಶಾಸಕ ಜೆ.ಆರ್. ಲೋಬೋ ಅವರೇ ಈ ಬಾರಿಯೂ ಅಭ್ಯರ್ಥಿಯಾಗುವುದು ಖಚಿತವಾಗಿದೆ. ಬಿಜೆಪಿಯಲ್ಲಿ ಅಭ್ಯರ್ಥಿ ಆಯ್ಕೆ ಅಂತಿಮ ಘಟ್ಟದಲ್ಲಿದ್ದು, ಶೀಘ್ರ ಘೋಷಣೆಯಾಗಲಿದೆ. ವೇದವ್ಯಾಸ ಕಾಮತ್, ಎಸ್. ಗಣೇಶ್ ರಾವ್, ಬದ್ರಿನಾಥ್ ಕಾಮತ್, ಕ್ಯಾ| ಬೃಜೇಶ್ ಚೌಟ, ಚಂದ್ರಶೇಖರ ಉಚ್ಚಿಲ ಪ್ರಮುಖವಾಗಿ ಕೇಳಿಬರುತ್ತಿರುವ ಹೆಸರುಗಳು. ಜೆಡಿಎಸ್‌ನಲ್ಲಿ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ವಸಂತ ಪೂಜಾರಿ, ಜಿಲ್ಲಾ ಯುವ ಜನತಾದಳ ಅಧ್ಯಕ್ಷ ಅಕ್ಷಿತ್ ಸುವರ್ಣ ಅವರು ಆಕಾಂಕ್ಷಿಯಾಗಿದ್ದಾರೆ. ಜತೆಗೆ ಜೆಡಿಎಸ್‌ನತ್ತ ತೆರಳಿರುವ ಮಾಜಿ ಮೇಯರ್ ಕೆ. ಅಶ್ರಫ್ ಅವರ ಹೆಸರು ಕೇಳಿಬರುತ್ತಿದೆ. ಸಿಪಿಎಂ ನಗರದ. ಕಾರ್ಯದರ್ಶಿ ಸುನೀಲ್ ಕುಮಾರ್ ಬಜಾಲ್ ಅವರನ್ನು ಈಗಾಗಲೇ ಸಿಪಿಎಂ ಅಭ್ಯರ್ಥಿಯಾಗಿ ಪಕ್ಷ ಘೋಷಿಸಿದೆ. ಎಸ್.ಡಿ.ಪಿ.ಐ. ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಸಿದ್ಧತೆ ನಡೆಸುತ್ತಿದೆ. ಇವೆಲ್ಲದರ ನಡುವೆ ಪಕ್ಷೇತರ ಅಭ್ಯರ್ಥಿಗಳು ಕಣಕ್ಕಿಳಿಯುವ ಸೂಚನೆಯೂ ಲಭ್ಯವಾಗಿದೆ. ಶ್ರೀಕರ ಪ್ರಭು ಅವರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಈಗಾಗಲೇ ಘೋಷಿಸಿದ್ದಾರೆ. ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಈವರೆಗಿನ ಚುನಾವಣಾ ಇತಿಹಾಸ ಅವಲೋಕಿಸಿದರೆ ಇಲ್ಲಿ ನಿಕಟ ಸ್ಪರ್ಧೆ ಏರ್ಪಟ್ಟಿದ್ದು ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ. ಇದು ಈ ಬಾರಿಯೂ ಪುನರಾವರ್ತನೆ ಆಗಬಹುದು ಎಂಬುದು ಲೆಕ್ಕಾಚಾರ. ಕ್ಷೇತ್ರದಲ್ಲಿ ಶಾಸಕರಾಗಿ ಜೆ.ಆರ್. ಲೋಬೋ ಕಳೆದ 5 ವರ್ಷಗಳಲ್ಲಿ ಅತೀ ಹೆಚ್ಚು ಅಭಿವೃದ್ಧಿ ಕಾರ್ಯ ಮಾಡಿದ್ದಾರೆ, ಆದುದರಿಂದ ಈ ಬಾರಿಯೂ ಕ್ಷೇತ್ರದ ಮತದಾರರು ಅವರನ್ನು ಬೆಂಬಲಿಸುತ್ತಾರೆ ಎಂಬುದು ಕಾಂಗ್ರೆಸ್ ಪಾಳೆಯದ ದೃಢ ವಿಶ್ವಾಸ. ಕಳೆದ 5 ವರ್ಷಗಳಲ್ಲಿ ಯಾವುದೇ ಹೊಸ ಕಾಮಗಾರಿಗಳು ಆಗಿಲ್ಲ. ಈ ಹಿಂದೆ ಬಿಜೆಪಿ ಆಡಳಿತದ ಅವಧಿಯಲ್ಲಿ ಮಂಜೂರಾಗಿದ್ದ ಕಾಮಗಾರಿಗಳನ್ನು ಕಾಂಗ್ರೆಸ್ ತನ್ನದೆಂದು ಹೇಳಿಕೊಳ್ಳುತ್ತಿದೆ. ಜಿಲ್ಲೆಯಲ್ಲಿ ಬಿಜೆಪಿ ಪರ ಅಲೆ ಇದ್ದು, ಮಂಗಳೂರು ದಕ್ಷಿಣದಲ್ಲೂ ಇದು ಪ್ರತಿಧ್ವನಿಸಲಿದೆ ಎಂಬ ವಿಶ್ವಾಸವನ್ನು ಬಿಜೆಪಿ ಪಾಳೆಯ ಹೊಂದಿದೆ.
Related Articles
ಮಂಗಳೂರು ನಗರ ದಕ್ಷಿಣ ಮಹಿಳಾ ಮತದಾರರ ಪ್ರಾಬಲ್ಯವನ್ನು ಹೊಂದಿದೆ. ಇದರ ಜತೆಗೆ ದಕ್ಷಿಣ ಕನ್ನಡದ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಅತಿ ಹೆಚ್ಚು ಮತದಾರರನ್ನು ಹೊಂದಿರುವ ಹೆಗ್ಗಳಿಕೆಗೂ ಪಾತ್ರವಾಗಿದೆ. ಇಲ್ಲಿ 1,10,318 ಪುರುಷರು ಹಾಗೂ 1,20,033 ಮಹಿಳೆಯರು ಸಹಿತ ಒಟ್ಟು 2,30,351 ಮತದಾರರಿದ್ದಾರೆ.
Advertisement
ಕ್ಷೇತ್ರವನ್ನು ಪ್ರತಿನಿಧಿಸಿದ ಶಾಸಕರು 1957-ಬಿ. ವೈಕುಂಠ ಬಾಳಿಗ (ಕಾಂಗ್ರೆಸ್), 1962- ಮಣೇಲ್ ಶ್ರೀನಿವಾಸ ನಾಯಕ್ (ಕಾಂಗ್ರೆಸ್), 1967- ಮಣೇಲ್ ಶ್ರೀನಿವಾಸ ನಾಯಕ್ (ಕಾಂಗ್ರೆಸ್), 1972- ಅಡ್ಡಿ ಸಲ್ದಾನಾ (ಕಾಂಗ್ರೆಸ್), 1978 -ಪಿ.ಎಫ್. ರೊಡ್ರಿಗಸ್ (ಕಾಂಗ್ರೆಸ್), 1983 – ವಿ. ಧನಂಜಯ ಕುಮಾರ್ (ಬಿಜೆಪಿ), 1985- ಬ್ಲೇಸಿಯಸ್ ಡಿ’ಸೋಜಾ (ಕಾಂಗ್ರೆಸ್), 1989-ಬ್ಲೇಸಿಯಸ್ ಡಿ’ಸೋಜಾ (ಕಾಂಗ್ರೆಸ್), 1994- ಎನ್. ಯೋಗೀಶ್ ಭಟ್ (ಬಿಜೆಪಿ), 1999-ಎನ್. ಯೋಗೀಶ್ ಭಟ್ (ಬಿಜೆಪಿ), 2004-ಎನ್. ಯೋಗೀಶ್ ಭಟ್ (ಬಿಜೆಪಿ), 2008-ಎನ್. ಯೋಗೀಶ್ ಭಟ್(ಬಿಜೆಪಿ), 2013-ಜೆ.ಆರ್. ಲೋಬೋ (ಕಾಂಗ್ರೆಸ್). ಮಂಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಆಯ್ಕೆಯಾದ ಶಾಸಕರಲ್ಲಿ ಅನೇಕ ಮಂದಿ ಉನ್ನತ ರಾಜಕೀಯ ಸ್ಥಾನಮಾನಗಳನ್ನು ಪಡೆದಿರುವುದು ಕ್ಷೇತ್ರದ ಹೆಗ್ಗಳಿಕೆಯಾಗಿದೆ. ಎಂ. ವೈಕುಂಠ ಬಾಳಿಗ ರಾಜ್ಯ ವಿಧಾನಸಭೆಯ ಸ್ಪೀಕರ್, ಸಚಿವರಾಗಿದ್ದರು. ಪಿ.ಎಫ್. ರೊಡ್ರಿಗಸ್, ಬ್ಲೇಸಿಯಸ್ ಎಂ. ಡಿ’ಸೋಜಾ ಸಚಿವರಾಗಿದ್ದರು. ಎನ್. ಯೋಗೀಶ್ ಭಟ್ ಅವರು ವಿಧಾನಸಭೆಯ ಉಪ ಸ್ಪೀಕರ್ ಆಗಿ ಆಯ್ಕೆಯಾಗಿದ್ದರು. 1983ರಲ್ಲಿ ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದ ವಿ. ಧನಂಜಯ ಕುಮಾರ್ ಬಳಿಕ ಸಂಸದರಾಗಿ ಕೇಂದ್ರ ಸಚಿವರಾಗಿದ್ದರು. — ಕೇಶವ ಕುಂದರ್