Advertisement

UV Fusion: ವಿನಾಶ ಕಾಲೇ ವಿಪರೀತ ಬುದ್ಧಿ

02:25 PM Jan 18, 2024 | Team Udayavani |

ಬದುಕು ಪ್ರತಿನಿತ್ಯವು ಹೊಸದೊಂದು ಆಸೆ, ಕನಸುಗಳೊಂದಿಗೆ ಪ್ರಾರಂಭವಾಗುತ್ತದೆ. ಇದರ ಮಧ್ಯೆ ಸಾಕಷ್ಟು ಕಷ್ಟ – ನಷ್ಟ, ಸಾವು – ನೋವು, ಸಂತೋಷ, ಇವೆಲ್ಲವನ್ನು ಎದುರಿಸಿ ಮನುಷ್ಯ ತನ್ನ ಬದುಕನ್ನು ಕಟ್ಟಿಕೊಳ್ಳಲು ಇನ್ನಿಲ್ಲದ ರೀತಿಯಲ್ಲಿ ಹರಸಾಹಸ ಪಡುವುದನ್ನು ಕಾಣಬಹುದು. ಶ್ರೀಮಂತರು ತಮ್ಮ ಸಂಪತ್ತನ್ನು ಹೆಚ್ಚಿಸಲು, ಮಧ್ಯಮ ಹಾಗೂ ಕೆಳವರ್ಗದವರು ಮೂರು ಹೊತ್ತಿನ ಊಟವನ್ನು ಸಂಪಾದಿಸಲು ನಾನಾ ವೇಷಗಳನ್ನು ಧರಿಸಿ, ತಮ್ಮ ಜೀವನವನ್ನು ಕಟ್ಟಿಕೊಳ್ಳಲು ಶ್ರಮಿಸುತ್ತಾರೆ.

Advertisement

ಇದು ತಂತ್ರಜ್ಞಾನದ ಯುಗ. ಪ್ರತಿದಿನವೂ ಹೊಸ-ಹೊಸ ತಂತ್ರಜ್ಞಾನದ ಬೆಳವಣಿಗೆಯಾಗುತ್ತಿರುವುದು ನಮ್ಮ ಅರಿವಿಗೆ ಬರುತ್ತಿದೆ. ಪ್ರಸ್ತುತ ತಂತ್ರಜ್ಞಾನಗಳು ಕಲ್ಪನೆಗೂ ನಿಲುಕದ ಹಂತಕ್ಕೆ ಬೆಳೆದುನಿಂತಿದೆ. ಇದು ಮಾನವನ ಜೀವನದ ಅವಿಭಾಜ್ಯ ಅಂಗವಾಗಿ, ಮನುಷ್ಯನನ್ನು ಅಷ್ಟೇ ವೇಗವಾಗಿ ತನ್ನತ್ತ ಆಕರ್ಷಿಸಿದೆ. ಮಾನವ ತಂತ್ರಜ್ಞಾನದ ಜತೆಗೆ ತನ್ನ ಜೀವನವನ್ನು ಕಟ್ಟಿಕೊಳ್ಳಬೇಕು, ಹಾಗೆಯೇ ಅದರ ಪ್ರತಿಸ್ಪರ್ಧಿಯಾಗಿ, ತಾನು ಬಲಶಾಲಿ ಎಂದು ತೋರಿಸಬೇಕು. ಮಾನವನೇ ಅಭಿವೃದ್ಧಿಪಡಿಸಿದ ಈ ತಂತ್ರಜ್ಞಾನ ಅವನ ಕೈಗೆ ಸಿಗದಷ್ಟು ವೇಗವಾಗಿ ಸಾಗುತ್ತಿದೆ. ಅದನ್ನು ನಿರ್ವಹಿಸುವ ಕಲೆಯನ್ನು ತಿಳಿದುಕೊಳ್ಳುವುದು ಅತ್ಯಗತ್ಯವಾಗಿದೆ.

ಪ್ರಸ್ತುತ ಜಗತ್ತಿಗೆ ಹಾಗೂ ಮಾನವ ಜೀವನ ಸಾಗಿಸಲು ತಂತ್ರಜ್ಞಾನಗಳ ಅರಿವು ಅತ್ಯವಶ್ಯಕ. ಜಗತ್ತು ಜಾಗತೀಕರಣ, ಕೈಗಾರೀಕರಣ, ನಗರೀಕರಣಗಳ ಕಲ್ಪನೆಯನ್ನು ಹೊಂದಿ ಬೆಳೆಯುತ್ತಿದೆ. ಅದಕ್ಕೆ ಪೂರಕವಾಗದ ಯಂತ್ರೋಪಕರಣಗಳು, ಜೈವಿಕ ತಂತ್ರಜ್ಞಾನ, ಮಾನವನ ಬೌದ್ಧಿಕ ಮಟ್ಟದಲ್ಲೂ ಬೆಳವಣಿಗೆ ಕಾಣುತ್ತಿದೆ ಹಾಗೂ ಆತನನ್ನು ಅಷ್ಟೇ ದುರ್ಬಲಗೊಳಿಸುತ್ತಿದೆ. ತಂತ್ರಜ್ಞಾನವು ಮಾನವನನ್ನು ಎಷ್ಟರಮಟ್ಟಿಗೆ ಆವರಿಸಿಕೊಂಡಿದೆ ಎಂದರೆ ಮಾನವನೇ ಅಭಿವೃದ್ಧಿ ಪಡಿಸಿದ ತಂತ್ರಜ್ಞಾನ, ಆತನನ್ನೇ ನಿಯಂತ್ರಿಸುವ ಮಟ್ಟಿಗೆ.

ತಂತ್ರಜ್ಞಾನ ಬೆಳವಣಿಗೆಯಾಗಿದ್ದು, ಅದನ್ನು ಮಾನವ ಬಳಕೆ ಮಾಡುತ್ತಿರುವುದು ತಪ್ಪಲ್ಲ. ಆಧುನಿಕ ಜೀವನದಲ್ಲಿ ತಂತ್ರಜ್ಞಾನ ಬಳಕೆ ಆವಶ್ಯಕ, ಆದರೆ ಅದು ಮಾನವನ ಜೀವನವನ್ನು ಉತ್ತಮಗೊಳಿಸುವಂತಿರಬೇಕು ಹೊರತು ಆತನ ಜೀವನವನ್ನು ಅಪಾಯಕ್ಕೆ ಸಿಲುಕುವಂತೆ ಮಾಡುವುದಲ್ಲ. ಇದಕ್ಕೆ ಉದಾಹರಣೆಯಾಗಿ ನೋಡುವುದಾದರೆ ಜಪಾನಿನ ಹಿರೋಶಿಮ-ನಾಗಸಾಕಿಯ ಮೇಲಿನ ಅಣುಬಾಂಬ್‌ ದಾಳಿ. ಈ ದಾಳಿಯಿಂದ ಉಂಟಾದ ಪರಿಣಾಮ ಅಷ್ಟಿಷ್ಟಲ್ಲ. ಕೆಲವೇ ವರ್ಷದಲ್ಲಿ ಜಪಾನ್‌ ಆರ್ಥಿಕವಾಗಿ ಹಾಗೂ ಪ್ರಾದೇಶಿಕವಾಗಿ ತನ್ನ ಮೂಲ ಸ್ವರೂಪಕ್ಕೆ ಬಂದರೂ, ಇವತ್ತಿಗೂ ಆ ದಾಳಿಯಿಂದ ಉಂಟಾದ ಪರಿಣಾಮವನ್ನು ಜಪಾನ್‌ ಅನುಭವಿಸುತ್ತಿದೆ.

ಇದು ಒಂದೇ ಅಲ್ಲ ಇಂತಹ ಸಾಕಷ್ಟು ಭೀಕರ ಘಟನೆಗಳನ್ನು ಜಗತ್ತು ಎದುರಿಸಿದೆ. ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಮಾನವ ಅಪಾಯಕಾರಿ ಯುದ್ಧ ವಿಮಾನಗಳು, ಮದ್ದು ಗುಂಡುಗಳು, ಕ್ಷಿಪಣಿಗಳು, ಒಂದೇ ಕ್ಷಣದಲ್ಲಿ ಜಗತ್ತನೇ ಸರ್ವನಾಶ ಮಾಡಬಲ್ಲ ಅಣುಬಾಂಬ್‌ಗಳನ್ನು ತಯಾರಿಸುತ್ತಿದ್ದಾನೆ. ಜತೆಗೆ ತಂತ್ರಜ್ಞಾನದ ಸಂಶೋಧನೆಗಳಲ್ಲಿ ದೇಶಗಳು ವ್ಯತಿರಿಕ್ತವಾದ ಪೈಪೋಟಿಯನ್ನು ನಡೆಸುತ್ತಿವೆ.

Advertisement

ಇದು ಜೀವಸಂಕುಲದ ವಿನಾಶಕ್ಕೆ ಅಷ್ಟೇ ಅಲ್ಲದೆ, ಪರಿಸರದ ನಾಶಕ್ಕೂ ಮುನ್ನುಡಿ ಬರೆಯುತ್ತದೆ. ತಂತ್ರಜ್ಞಾನ ಎಷ್ಟೇ ಮುಂದುವರೆದರೂ ಅದು ಮಾನವನ ನಿಯಂತ್ರಣದಲ್ಲಿರಬೇಕು, ನಿಯಂತ್ರಣ ತಪ್ಪಿದರೆ ವಿನಾಶ ಕಟ್ಟಿಟ್ಟ ಬುತ್ತಿ.

ಮನುಷ್ಯ ನಾನು, ನನ್ನಿಂದಲೇ ಎಲ್ಲವೂ ಎಂಬ ಅತಿರೇಖದ ವರ್ತನೆಯಿಂದ ತನ್ನ ಸರ್ವನಾಶವಾಗುತ್ತದೆ ಎಂಬುದನ್ನು ಮರೆತಂತಿದೆ. ಅತಿಯಾದರೆ ಅಮೃತವೂ ವಿಷವಾಗಿ ಪರಿಣಮಿಸುತ್ತದೆ ಎಂಬಂತೆ, ಅತಿಯಾದ ತಂತ್ರಜ್ಞಾನದ ಸಂಶೋಧನೆ ಹಾಗೂ ಅದರ ಬಳಕೆ ಮುಂದೊಂದು ದಿನ ಮನುಕುಲವನ್ನು ಅಪಾಯಕ್ಕೆ ದೂಡುತ್ತದೆ.

ವಿಪರೀತ ತಂತ್ರಜ್ಞಾನದ ಬಳಕೆಯಿಂದ ಅದೆಷ್ಟೋ ಪರಿಸರ ನಾಶವಾಗಿದೆ, ಅದೆಷ್ಟೋ ಪಕ್ಷಿಗಳು ನಶಿಸಿವೆ, ಇನ್ನೂ ಕೆಲವು ಪಕ್ಷಿ ಪ್ರಭೇದಗಳು ಅಳಿವಿನ ಅಂಚಿಗೆ ತಲುಪಿವೆ. ಪ್ರಾಣಿ ಸಂತತಿ ದಿನೇ ದಿನೇ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತಿದೆ. “ವಿನಾಶ ಕಾಲೇ ವಿಪರೀತ ಬುದ್ಧಿ’ ಎಂಬಂತೆ, ಇದೆಲ್ಲಾ ಮನುಷ್ಯನ ಅರಿವಿಗೆ ಬಂದರೂ, ಇದರಿಂದ ಮುಂದೆ ಅಪಾಯ ಇದೆ ಎಂದು ತಿಳಿದಿದ್ದರೂ ಜಾಗೃತನಾಗುತ್ತಿಲ್ಲ. ಇದರಿಂದ ಉಂಟಾಗುವ ಪರಿಣಾಮವನ್ನು ನಾವೇ ಎದುರಿಸಬೇಕು ಎಂಬುದನ್ನು ತಿಳಿದರೆ ಮುಂದೆ ಆಗುವ ಅನಾಹುತಗಳನ್ನು ತಪ್ಪಿಸಬಹುದು.

– ಶಂಕರ ಸನ್ನಟ್ಟಿ

ಬಾಗಲಕೋಟೆ

Advertisement

Udayavani is now on Telegram. Click here to join our channel and stay updated with the latest news.

Next