Advertisement

ಬಲಪಂಥೀಯರಿಂದ ವಿನಾಶ

11:33 AM Aug 25, 2018 | Team Udayavani |

ಮೈಸೂರು: ಉಗ್ರ ಬಲಪಂಥೀಯ ವಾದದಿಂದ ದೇಶಕ್ಕೆ ಗಂಡಾಂತರವಿದೆ. ಎಡಪಂಥೀಯ ವಾದದ ನಕ್ಸಲರಂತೆ, ಬಲಪಂಥೀಯರೂ ಅಪಾಯಕಾರಿ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಹೇಳಿದರು.

Advertisement

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನರೇಂದ್ರಮೋದಿ ಅವರು ಪ್ರಧಾನಿಯಾದ ಮೇಲೆ ಕಳೆದ ನಾಲ್ಕೂವರೆ ವರ್ಷಗಳಲ್ಲಿ ದೇಶದಲ್ಲಿ ವೈಷಮ್ಯದ ವಾತಾವರಣ ನಿರ್ಮಾಣವಾಗಿದೆ. ದೇಶದಲ್ಲಿ ಉದ್ಯೋಗ ಸೃಷ್ಟಿಯಾಗದೇ ಇರುವುದರಿಂದ ಯುವಕರು ನಿರುದ್ಯೋಗಿಗಳಾಗುತ್ತಿದ್ದಾರೆ,

ರೈತರಿಗೆ ಸೂಕ್ತ ಬೆಂಬಲ ಬೆಲೆ ನೀಡುತ್ತಿಲ್ಲ, ಜನರನ್ನು ನಿರುದ್ಯೋಗಿಗಳನ್ನಾಗಿಸಿ ಆರ್ಥಿಕ ಸಂಕಷ್ಟದಲ್ಲಿಟ್ಟು, ಭಾವೋದ್ವೇಗಕ್ಕೆ ಒಳಪಡಿಸುವ ತರಬೇತಿ ನೀಡಲಾಗುತ್ತಿದೆ. ನಿರುದ್ಯೋಗಿ ಯುವಕರು ಭರವಸೆ ಇಲ್ಲದೆ, ದಾರಿತಪ್ಪುವ ಕೆಲಸ ವಾಗುತ್ತಿದೆ ಎಂದು ದೂರಿದರು.

ಮಾಜಿ ಪ್ರಧಾನಿ ವಾಜಪೇಯಿ ಅವರ ಪಾರ್ಥೀವ ಶರೀರದ ಅಂತಿಮ ದರ್ಶನಕ್ಕೆ ಹೋದ ಸ್ವಾಮಿ ಅಗ್ನಿವೇಶ್‌ರನ್ನು ಹೊಡೆಯುತ್ತಾರೆ. ದೇಶದಲ್ಲಿ ಲಿಂಚಿಂಗ್‌ ಎಂಬ ಪದ ಬಳಕೆಯೇ ಇರಲಿಲ್ಲ. ಇವರಿಂದ ಮಾಬ್‌ ಲಿಂಚಿಂಗ್‌ ಪದ ಹುಟ್ಟಿಕೊಂಡಿದೆ ಎಂದು ಆರೋಪಿಸಿದರು.

ಮೂಢನಂಬಿಕೆಯಿಂದ ಜನರನ್ನು ಹೊರತಂದು ಸಮಾಜ ಸುಧಾರಣೆಗೆ ಯತ್ನಿಸಿದ ದಾಭೋಲ್ಕರ್‌, ಕಲುºರ್ಗಿ ಅಂಥವರನ್ನೇ ಮುಗಿಸುತ್ತಾರೆಂದರೆ, ಇವರ ವಿರುದ್ಧ ಮಾತನಾಡುವವರನ್ನು ಮುಗಿಸುವುದೇ ಇವರ ಅಜೆಂಡಾ ಆಗಿದೆ. ನಿಡುಮಾಮಿಡಿ ಸ್ವಾಮೀಜಿ, ಗಿರೀಶ್‌ ಕಾರ್ನಾಡ್‌, ಕೆ.ಎಸ್‌.ಭಗವಾನ್‌ ಅಂಥವರು ಇವರ ಪಟ್ಟಿಯಲ್ಲಿದ್ದರು ಎಂಬುದು ಆತಂಕಕ್ಕೆ ಕಾರಣವಾಗಿದೆ ಎಂದರು.

Advertisement

ಪ್ರಧಾನಿ ಮೌನ: ಎಲ್ಲ ವಿಚಾರವನ್ನೂ ಮಾತನಾಡುವ, ಟ್ವೀಟ್‌ ಮಾಡುವ ಪ್ರಧಾನಿ ಮೋದಿ ಅವರು, ಬಲಪಂಥೀಯರು ಸಂವಿಧಾನ ಸುಟ್ಟಿದ್ದನ್ನು ಖಂಡಿಸುವ ಕೆಲಸ ಮಾಡುವುದಿಲ್ಲ. ತಮ್ಮದೇ ಸಚಿವರು ಸಂವಿಧಾನವನ್ನೂ ಬದಲಾಯಿಸಲೇ ನಾವು ಅಧಿಕಾರಕ್ಕೆ ಬಂದಿರುವುದು ಎಂದು ಹೇಳಿಕೆ ಕೊಟ್ಟರೂ ಮೌನವಹಿಸುತ್ತಾರೆ.

ಕಾಶ್ಮೀರದಲ್ಲಿ ಅತ್ಯಾಚಾರ ಆರೋಪಿಯ ಮೆರವಣಿಗೆಯಲ್ಲಿ ಸಚಿವರು ಪಾಲ್ಗೊಳ್ಳುತ್ತಾರೆ. ಇದ್ಯಾವುದರ ಬಗ್ಗೆಯೂ ಪ್ರಧಾನಿ ಮಾತನಾಡುವುದಿಲ್ಲ, ಖಂಡಿಸುವುದೂ ಇಲ್ಲ. ಪ್ರಧಾನಿ ಅವರದು ಮೌನಂ ಸಮ್ಮತಿ ಲಕ್ಷಣ ಎನ್ನುವಂತಿದೆ ಎಂದು ಟೀಕಿಸಿದರು. ಮೋದಿಯವರ ಸ್ನೇಹಿತರು ಬ್ಯಾಂಕ್‌ಗಳನ್ನು ಲೂಟಿ ಮಾಡಿ ದೇಶ ಬಿಟ್ಟು ಓಡಿ ಹೋಗಿದ್ದಾರೆ,

ಇದೆಲ್ಲಾ ಗೊತ್ತಿದ್ದೂ ಮೋದಿ ಏನೂ ಮಾಡಲಿಲ್ಲ, ನಾಲ್ಕೂವರೆ ವರ್ಷಗಳಿಂದ ಲೋಕಪಾಲ ನೇಮಕ ಮಾಡಲಿಲ್ಲ, ಮಹಾದಾಯಿ ವಿಚಾರದಲ್ಲಿ ರಾಜಕೀಯ ಮಾಡಿದ್ದೂ ಬಿಟ್ಟರೆ, ಸಮಸ್ಯೆಗೆ ಪರಿಹಾರ ಕಲ್ಪಿಸಲಿಲ್ಲ ಬಿಜೆಪಿಯನ್ನು ಟೀಕೆ ಮಾಡುವವರೆಲ್ಲಾ ದೇಶದ್ರೋಹಿಗಳಾ ಎಂದು ಪ್ರಶ್ನಿಸಿದ ಅವರು, ಬಿಜೆಪಿ ಬೊಗಳೆ ದಾಸರ ಪಕ್ಷ ಎಂದು ಜರಿದರು.

ಸುಭದ್ರವಾಗಿದೆ: ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಸುಭದ್ರವಾಗಿದೆ. ಈ ಸರ್ಕಾರ ರಚನೆಯಾದ ಮೊದಲ ದಿನದಿಂದಲೂ ಯಡಿಯೂರಪ್ಪ ಅವರು ಕಾಂಗ್ರೆಸ್‌ನಿಂದ ಇಷ್ಟು ಶಾಸಕರು ಬರುತ್ತಾರೆ ಎಂದು ಹೇಳುತ್ತಲೇ ಬಂದಿದ್ದಾರೆ. ಇದನ್ನು ನೋಡಿದರೆ, ಯಡಿಯೂರಪ್ಪ ಅವರು ಶಾಸಕರನ್ನು ಖರೀದಿ ಮಾಡಲು ತಯಾರಾಗಿದ್ದಾರೆ ಎಂಬುದನ್ನು ತೋರಿಸುತ್ತದೆ ಎಂದು ಟೀಕಿಸಿದರು.

ಸಂಸದ ಆರ್‌.ಧ್ರುವನಾರಾಯಣ, ಶಾಸಕರಾದ ತನ್ವೀರ್‌, ಡಾ.ಯತೀಂದ್ರ ಸಿದ್ದರಾಮಯ್ಯ, ಅನಿಲ್‌ ಚಿಕ್ಕಮಾದು, ಮಾಜಿ ಸಚಿವ ಸಿ.ಎಚ್‌.ವಿಜಯಶಂಕರ್‌, ಎಐಸಿಸಿ ಮಾಜಿ ಕಾರ್ಯದರ್ಶಿ ಸೂರಜ್‌ ಹೆಗಡೆ, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್‌, ನಗರ ಅಧ್ಯಕ್ಷ ಆರ್‌.ಮೂರ್ತಿ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next