ಟೇಕಲ್: ಮಾಲೂರು ತಾಲೂಕಿನಲ್ಲಿ ಕಳೆದ ನಾಲ್ಕು ದಿನಗಳಿಂದ 6 ಕಾಡಾನೆಗಳ ಹಿಂಡು ಬೀಡು ಬಿಟ್ಟಿದ್ದು, ಅರಣ್ಯ ಇಲಾಖೆ ಸಿಬ್ಬಂದಿ ಕಾಡಿಗೆ ಓಡಿಸಲು ಎಷ್ಟೇ ಹರಸಾಹಸ ಪಟ್ಟರೂ ಆಗುತ್ತಿಲ್ಲ. ಇದರಿಂದ ಜನತೆ ಆತಂಕಗೊಂಡಿದ್ದಾರೆ.
ರೈತರು ಭಯಭೀತ: ಮುಂಜಾನೆ 7 ಗಂಟೆಗೆ ಕಾಡಾನೆಗಳ ಹಿಂಡು ಯಲುವಗುಳಿ, ದೊಡ್ಡಮಲ್ಲೆಯ ತೋಟ ಗಳ ಮಧ್ಯೆ ಹಾಯ್ದು ನಡುವೆ ಸಿಕ್ಕ ಟೊಮೆಟೋ ತೋಟ, ಕಬ್ಬಿನ ಬೆಳೆ ಹಾಗೂ ಬಾಳೆ ಗಿಡಗಳನ್ನು ಧ್ವಂಸಗೊಳಿಸಿ ನಂತರ ತಮಗೆ ಬೇಕಾದ ಆಹಾರ ತಿಂದು ಹಾಕಿವೆ. ಬಲ್ಲಹಳ್ಳಿ ಸಮೀಪದ ಆಸುಪಾಸಿನಲ್ಲಿರುವ ಸೀತಹಳ್ಳಿ ಫಾರ್ಮ ಹೌಸ್ ಒಂದರ ಬಳಿ ಇರುವ ಮಾವಿನ ಫಸಲನ್ನು ತಿಂದು ಹಾಕಿದೆ. ರಾತ್ರಿ 10.30ರಲ್ಲಿ ಕೊಂಡಶೆಟ್ಟಹಳ್ಳಿ ಸಮೀಪದ ತೋಟ ಮನೆಯ ರೈತ ತಮ್ಮ ಹೊಲದಲ್ಲಿ ನೀರನ್ನು ಹಾಯಿಸಲು ಸ್ಥಳಕ್ಕೆ ಹೋದಾಗ ಆನೆಗಳ ಹಿಂಡು ನೋಡಿ ಭಯಭೀತನಾಗಿದ್ದಾನೆ.
ಶಾಸಕರ ಭೇಟಿ: ಇನ್ನು ವಿಶೇಷವೆಂದರೆ ಆನೆಗಳ ಹಿಂಡನ್ನು ನೋಡಲು ಗುರುವಾರ ಮುಂಜಾನೆ ಟೇಕಲ್ ಹೋಬಳಿಯ ಬಲ್ಲಹಳ್ಳಿ ಗ್ರಾಮದ ನೀಲಗಿರಿ ತೋಪಿಗೆ ಶಾಸಕ ಕೆ.ವೈ.ನಂಜೇಗೌಡರು ಭೇಟಿ ನೀಡಿದ್ದರು. ಇದೇ ವೇಳೆ ಮಾತನಾಡಿ, ಕಾಡಾನೆ ಗಳನ್ನು ಓಡಿಸಲು ಅರಣ್ಯ ಇಲಾಖೆ ಅಧಿಕಾರಿ, ಸಿಬ್ಬಂದಿ ಕಾರ್ಯನಿರತರಾಗಿದ್ದಾರೆ. ರಾತ್ರಿ ವೇಳೆ ಅವು ಹೆಚ್ಚು ಓಡಾಟ ಮಾಡಲಿದ್ದು, ಸಾರ್ವಜನಿಕರು ಎಚ್ಚರದಿಂದ ಇರಬೇಕು. ಅರಣ್ಯ ಇಲಾಖೆ ಸಿಬ್ಬಂದಿಗೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಕಾಡಾನೆಗಳು ಗುರುವಾರ ದಿನವಿಡೀ ಬಲ್ಲಹಳ್ಳಿಯ ನೀಲಗಿರಿ ತೋಪಿನಲ್ಲೇ ಬೀಡು ಬಿಟ್ಟಿದ್ದು, ಅವುಗಳನ್ನು ನೋಡಲು ಅಪಾರ ಸಂಖ್ಯೆಯಲ್ಲಿ ಜನರು ಬಂದಿದ್ದರು. ಅವರನ್ನು ನಿಯಂತ್ರಿಸುವುದೇ ಅರಣ್ಯ ಸಿಬ್ಬಂದಿಗೆ ಸವಾಲಾಗಿದೆ. ಸಂಜೆ ನಂತರ ಆನೆಗಳನ್ನು ತಮಿಳುನಾಡಿನ ಮೂತನೂರು ಅರಣ್ಯ ಪ್ರದೇಶಕ್ಕೆ ಓಡಿಸಲು ಅರಣ್ಯ ಇಲಾಖೆಯ ಸಿಬ್ಬಂದಿ ಕಾರ್ಯಾಚರಣೆಗೆ ಮುಂದಾಗಿದ್ದರು.
Advertisement
ಟೇಕಲ್ ಹೋಬಳಿ ವ್ಯಾಪ್ತಿಯ ಬಲ್ಲಹಳ್ಳಿಯ ಕೃಷ್ಣಪ್ಪನವರ ನೀಲಗಿರಿ ತೋಪಿಗೆ ಬಂದ ಆನೆಗಳು, ಗುರುವಾರ ಮುಂಜಾನೆ 7 ಗಂಟೆಗೆ ಪ್ರತ್ಯಕ್ಷಗೊಂಡಿದೆ. ಬುಧವಾರ ಕಾಟೇರಿ, ಸೊಣ್ಣಹಳ್ಳಿ ವ್ಯಾಪ್ತಿಯಲ್ಲಿ ಕಾಣಿಸಿಕೊಂಡಿದ್ದ ಕಾಡಾನೆಗಳ ಹಾವಳಿಯಿಂದ ಸಾರ್ವಜನಿಕರಲ್ಲಿ ನೆಮ್ಮದಿ ಇಲ್ಲದಂತಾಗಿದೆ. ಆನೆ ನೋಡಲು ಬಂದ ಓರ್ವ ಗಾಯಗೊಂಡಿದ್ದ.
Related Articles
Advertisement