ಕಾರವಾರ: ಕಳೆದ ಒಂದು ವರ್ಷದಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಅಭಿವೃದ್ಧಿ ಕಾರ್ಯಗಳು ನಡೆದಿವೆ. ಜಿಲ್ಲೆಗೆ ಕೋಟಿ ಕೋಟಿ ಅನುದಾನ ಬಂದಿದೆ. ಕಳೆದ ಸರ್ಕಾರದಲ್ಲಿ ಮಂಜೂರಾದ ಕಾಮಗಾರಿಗಳಿಗೆ ಅನುದಾನ ಬಿಡುಗಡೆಯಾಗಿದ್ದು, ಕಾಮಗಾರಿ ಆರಂಭವಾಗಿವೆ. ಹೊಸದಾಗಿ ಮಂಜೂರಾದ ಕಾಮಗಾರಿಗಳು ಇನ್ನೂ ಟೆಂಡರ್ ಹಂತದಲ್ಲಿವೆ.
ಕಂದಾಯ ಸಚಿವರು ಅನೇಕ ಎನ್‌ಜಿಓಗಳಿಂದ ಸಿಎಸ್‌ಆರ್ ನಿಧಿಯಲ್ಲಿ ಅಂಗನವಾಡಿಗಳನ್ನು, ಪ್ರಯಾಣಿಕರ ಬಸ್ ತಂಗುದಾಣಗಳನ್ನು ಮಾಡಿಸುತ್ತಿದ್ದು, ಅನೇಕ ಯೋಜನೆಗಳ ಫಲವನ್ನು ಕ್ಷೇತ್ರಕ್ಕೆ ನೀಡಿದ್ದಾರೆ. ಕಾರಣ 40 ವರ್ಷಗಳ ರಾಜಕೀಯ ಅನುಭವ ಹಾಗೂ ಆಡಳಿತ ಪಕ್ಷದಲ್ಲಿ ಸಚಿವರಾಗಿ ರುವುದು ಎಂಬುದನ್ನು ಬಿಡಿಸಿ ಹೇಳಬೇಕಿಲ್ಲ.
Advertisement
ರಾಜ್ಯದ ಕಂದಾಯ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ. ದೇಶಪಾಂಡೆ ಅವರ ಹಳಿಯಾಳ ಜೋಯಿಡಾ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳು ನಡೆಯುತ್ತಿರುವುದು ಕಾಣುತ್ತಿದ್ದರೆ, ಬಿಜೆಪಿ ಶಾಸಕರ ಕ್ಷೇತ್ರಗಳಲ್ಲಿ ನಡೆಯುತ್ತಿರುವ ಕಾಮಗಾರಿಗಳ ಕೆಲಸ ಕುಂಟುತ್ತಾ ಸಾಗಿದೆ. ಅದರಲ್ಲೂ ಕಾರವಾರ ವಿಧಾನಸಭಾ ಕ್ಷೇತ್ರದಲ್ಲಿ ಹಲವು ಕಾಮಗಾರಿಗಳು ನಿರ್ಮಾಣ ಹಂತದಲ್ಲೇ ನಾನಾ ಕಾರಣಗಳಿಗೆ ನಿಂತು ಹೋಗಿವೆ. ಶಾಸಕರಾಗಿ ಎರಡನೇ ಅವಧಿಯಲ್ಲಿರುವ ದಿನಕರ ಶೆಟ್ಟಿ ಅವರು ವಿಧಾನಸೌಧದಲ್ಲಿ ಸುತ್ತಿ ಕ್ಷೇತ್ರದ ಅಭಿವೃದ್ಧಿಗೆ ಅನುದಾನ ತರುತ್ತಿದ್ದರೆ, ಸುನೀಲ್ ನಾಯ್ಕ, ಶಾಸಕಿ ರೂಪಾಲಿ ನಾಯ್ಕ ಅನುದಾನ ತರುವಲ್ಲಿ ಅಂಬೆಗಾಲು ಇಡುತ್ತಿದ್ದಾರೆ. ಆದರೂ ಭಟ್ಕಳ ಮತ್ತು ಕಾರವಾರದಲ್ಲಿ ಕಾಣುವಂತಹ ಕೆಲಸಗಳಾಗುತ್ತಿವೆ. ಶಾಸಕ ಕಾಗೇರಿ, ಶಿವರಾಮ ಹೆಬ್ಟಾರರು ಕ್ಷೇತ್ರ ಅಭಿವೃದ್ಧಿಯಲ್ಲಿ ಒಂದೇ ವೇಗ ಕಂಡು ಕೊಂಡಿದ್ದಾರೆ.
Related Articles
Advertisement
ಹಳಿಯಾಳದಲ್ಲಿ ಈಜುಕೊಳ ನಿರ್ಮಾಣಕ್ಕೆ 60 ಲಕ್ಷ ರೂ.ಗಳನ್ನು ರಾಜಕೀಯ ಸ್ನೇಹಿತರು ಹಾಗೂ ರಾಜ್ಯಸಭಾ ಸದಸ್ಯರ ನಿಧಿಯಿಂದ ತಂದಿರುವುದು ವಿಶೇಷ. ಹಳಿಯಾಳದ ತಾನಾಜಿ ನಗರ, ದಾಂಡೇಲಿಯ ಆಜಾದ್ ನಗರದಲ್ಲಿ ಹೈಟೆಕ್ ಅಂಗನವಾಡಿ ನಿರ್ಮಾಣಕ್ಕೆ 40 ಲಕ್ಷ ರೂ. ಅನುದಾನ ತಂದಿರುವುದು ವಿಶೇಷ.
ಶಿರಸಿ ವಿಧಾನಸಭಾ ಕ್ಷೇತ್ರ: ಅನುಭವಿ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿ ಕೆಲಸ ಮಾಡಿದವರು. ವಿಧಾನಸೌಧದಲ್ಲಿ ಸಾಕಷ್ಟು ಹಿಡಿತ ಹೊಂದಿರುವ ಅವರು ಶಿರಸಿ ಸಿದ್ದಾಪುರದಲ್ಲಿ ಹಲವು ಅಭಿವೃದ್ಧಿ ಕೆಲಸಗಳಾಗುವಂತೆ ನೋಡಿಕೊಂಡಿದ್ದಾರೆ. ಕಳೆದ ಒಂದು ವರ್ಷದಲ್ಲಿ ನಬಾರ್ಡ್‌ನಿಂದ 2 ಕೋಟಿ ರಸ್ತೆ ಅಭಿವೃದ್ಧಿಗೆ ತಂದಿದ್ದಾರೆ. ಸಾಲಕಣಿ ಮಣದೂರು ರಸ್ತೆಗೆ 1 ಕೋಟಿ ಮೀಸಲಿಟ್ಟಿದ್ದಾರೆ. ಶಿರಸಿ ಹಳೇ ಬಸ್ ನಿಲ್ದಾಣ ಅಭಿವೃದ್ಧಿಗೆ ಪಣ ತೊಟ್ಟಿದ್ದಾರೆ. 55 ಲಕ್ಷ ದಲ್ಲಿ ಶಿರಸಿ ಮಾರಿಕಾಂಬಾ ಪಪೂ ಕಾಲೇಜು ಕಟ್ಟಡ ಕೆಲಸ ನಡೆಯುತ್ತಿದೆ. ಸಿದ್ದಾಪುರದಲ್ಲಿ 8 ಕೋಟಿ ವೆಚ್ಚದ ಮಿನಿವಿಧಾನಸೌಧ ನಿರ್ಮಾಣಕ್ಕೆ ಮೀಸಲಿದೆ. 4 ಕೋಟಿ ವೆಚ್ಚದ ಸಿದ್ದಾಪುರ ಬಸ್ ನಿಲ್ದಾಣ ಕಾಮಗಾರಿ ಪ್ರಗತಿಯಲ್ಲಿದೆ.
ಕಾರವಾರ ವಿಧಾನಸಭಾ ಕ್ಷೇತ್ರ: ಕಾರವಾರದಲ್ಲಿ ನಗರೋತ್ಥಾನದಲ್ಲಿ 18 ಕೋಟಿ ರಸ್ತೆ ಕಾಮಗಾರಿಗಳಾಗಿದ್ದಾರೆ. ಇನ್ನು 10 ಕೋಟಿ ರೂ. ಕೆಲಸಗಳು ಬಾಕಿ ಇವೆ. ಐಡಿಎಸ್‌ಎಮ್‌ಟಿ ನಿಯ ವಾಣಿಜ್ಯ ಸಂಕೀರ್ಣ ನಿರ್ಮಾಣ ನನೆಗುದಿಗೆ ಬಿದ್ದಿದೆ. 30 ಕೋಟಿ ವೆಚ್ಚದ ಕೆರವಡಿ ಉಳಗಾ ಸೇತುವೆ ನಿರ್ಮಾಣ ಹಂತದಲ್ಲಿದೆ. ಹಿಂದಿನ ಸರ್ಕಾರದಲ್ಲಿ ಮಂಜೂರಾದ ಕಾಮಗಾರಿಗಳಾಗಿದ್ದು, ಅನುಷ್ಠಾನ ರೂಪಾಲಿ ನಾಯ್ಕ ಅವಧಿಯಲ್ಲಿ ಕುಂಟುತ್ತಾ ನಡೆದಿವೆ. ಶಾಸಕರ ನಿಧಿ ಇದೀಗ ಬಂದಿದ್ದು, ವಿವಿಧ ಕಾಮಗಾರಿಗಳನ್ನು ಆಯ್ಕೆ ಮಾಡಿ ಶಾಸಕರು 2 ಲಕ್ಷದಿಂದ 5 ಲಕ್ಷದ ವರೆಗೆ ಕೆಲಸಗಳನ್ನು ಮಾಡಲು ವಿವಿಧ ಇಲಾಖೆಗಳಿಗೆ ಸೂಚಿಸಿದ್ದಾರೆ. ಅಂಕೋಲಾದಲ್ಲಿ 3.35 ಕೋಟಿ ವೆಚ್ಚದ ಬಸ್ ನಿಲ್ದಾಣ ಕಾಮಗಾರಿ ಕುಂಟುತ್ತಾ ನಡೆದಿದೆ. ಗಂಗಾವಳಿ ನದಿಗೆ ಸೇತುವೆ ನಿರ್ಮಾಣ ಕೆಲಸ ಶೇ.1 ರಷ್ಟು ಆಗಿದೆ. ಇದು ಸಹ 30 ಕೋಟಿ ವೆಚ್ಚದ ಕಾಮಗಾರಿ.
ಕಾರವಾರಕ್ಕೆ ಮೆಡಿಕಲ್ ಕಾಲೇಜಿಗೆ ಹೊಂದಿಕೊಂಡಂತೆ 450 ಹಾಸಿಗೆ ಸಾಮರ್ಥ್ಯದ ನೂತನ ಕಟ್ಟಡ, ಎಂಬಿಬಿಎಸ್ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ನಿರ್ಮಾಣ ಸೇರಿದಂತೆ 150 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. ಆಸ್ಪತ್ರೆ ನಿರ್ಮಾಣಕ್ಕೆ ಜಿಲ್ಲಾ ಕೇಂದ್ರ ಕಾರಾಗೃಹದ ಜಾಗ ಬಿಟ್ಟುಕೊಡದ ಕಾರಣ ಕಾಮಗಾರಿಗೆ ಟೆಂಡರ್ ಕರೆಯಲು ಸಾಧ್ಯವಾಗುತ್ತಿಲ್ಲ. ಟ್ರಾಮಾ ಕೇಂದ್ರ ಸ್ಥಾಪನೆಯನ್ನು ನೂತನ ಆಸ್ಪತ್ರೆಯಲ್ಲಿ ಮಾಡಬೇಕಾಗಿರುವ ಕಾರಣ ಆ ಯೋಜನೆಯೂ ನನೆಗುದಿಗೆ ಬಿದ್ದಿದೆ. ಜಿಲ್ಲಾ ಕೇಂದ್ರ ಕಾರಾಗೃಹಕ್ಕೆ ಅಂಕೋಲಾದ ಹಿಚ್ಕಡ ಬಳಿ ಕಂದಾಯ ಭೂಮಿ ನೀಡಿದ್ದರೂ, ಕಾರಾಗೃಹ ಇಲಾಖೆ ಅಲ್ಲಿ ಹೊಸ ಜೈಲು ನಿರ್ಮಿಸಲು ಹಿಂದೇಟು ಹಾಕುತ್ತಿದೆ.
ಗಂಗಾವಳಿ ನದಿಗೆ ಕಿಂಡಿ ಅಣೆಕಟ್ಟು ನಿರ್ಮಿಸುವ 135 ಕೋಟಿ ರೂ. ವೆಚ್ಚದ ಯೋಜನೆ ಸಚಿವ ಸಂಪುಟದ ಅನುಮೋದನೆ ಸಿಕ್ಕಿದೆ. ಅರಣ್ಯ ಇಲಾಖೆಗೆ ಜಿಲ್ಲಾಡಳಿತ ವಶಪಡಿಸಿಕೊಂಡ ದೇವಕಾರು ಗ್ರಾಮದ 169 ಎಕರೆ ಕಂದಾಯ ಭೂಮಿ ಪೈಕಿ 88 ಎಕರೆಯನ್ನು ಪಡೆದುಕೊಂಡು, ಗಂಗಾವಳಿಗೆ ಬ್ಯಾರೇಜ್ ಸಹಿತ ಕಿಂಡಿ ಅಣೆಕಟ್ಟು ನಿರ್ಮಿಸಲು 35 ಹೆಕ್ಟೇರ್ ಅರಣ್ಯ ಭೂಮಿ ಬಿಟ್ಟುಕೊಡಲು ಕೇಳಿದೆ. ನಗರ ನೀರು ಸರಬರಾಜು ಮಂಡಳಿಯ ಅಧಿಕಾರಿ ವರ್ಗದ ಆಮೆಗತಿ ಕಾರಣ. ಆ ಯೋಜನೆ ಅನುಷ್ಠಾನ ಮುಂದಕ್ಕೆ ಹೋಗಿದೆ. ನ್ಯೂ ಕೆಎಚ್ಬಿ ಕಾಲೊನಿಯಲ್ಲಿ 2 ಕೋಟಿ ವೆಚ್ಚದ ಚರಂಡಿ ನಿರ್ಮಾಣಕ್ಕೆ ಟೆಂಡರ್ ಆಗಿದ್ದರೂ, ಕಾಮಗಾರಿ ನಾನಾ ಕಾರಣಗಳಿಂದ ಆರಂಭವಾಗಿಲ್ಲ. ಸರ್ಕಾರದಿಂದ ಅನುದಾನ ಬಂದಿದ್ದರೂ, ವಿರೋಧ ಪಕ್ಷದ ಶಾಸಕಿ ಇರುವ ಕಾರಣವಾಗಿಯೋ ಏನೋ ಕಾಮಗಾರಿಗಳಿಗೆ ನೂರೆಂಟು ವಿಘ್ನಗಳು ಎದುರಾಗಿವೆ.
ಭಟ್ಕಳ ವಿಧಾನಸಭಾ ಕ್ಷೇತ್ರ: ಮುರ್ಡೇಶ್ವರದಲ್ಲಿ 50 ಲಕ್ಷ ವೆಚ್ಚದ ಬಸ್ ನಿಲ್ದಾಣ ಕಾಮಗಾರಿ, ಭಟ್ಕಳದಲ್ಲಿ 85 ಲಕ್ಷದ ಬಸ್ ನಿಲ್ದಾಣ ಕಾಮಗಾರಿ ಚಾಲ್ತಿಯಲ್ಲಿವೆ. ಶಾಲಾ ಸಂಪರ್ಕ ಸೇತುವೆ, ಕಾಲು ಸಂಕಕ್ಕೆ 169 ಲಕ್ಷ ಮಂಜೂರಾಗಿದೆ. 3 ಕೋಟಿ ರೂ. ಅಲ್ಪಸಂಖ್ಯಾತರ ಅಭಿವೃದ್ಧಿಗೆ ಮಂಜೂರಾಗಿದೆ.
ಯಲ್ಲಾಪುರ ವಿಧಾನಸಭಾ ಕ್ಷೇತ್ರ: ಯಲ್ಲಾಪುರದಲ್ಲಿ ಬಸ್ ನಿಲ್ದಾಣ ಕಾಮಗಾರಿ ಮುಕ್ತಾಯ ಹಂತದಲ್ಲಿದೆ. ಮುಂಡಗೋಡದಲ್ಲಿ ಕೆರೆಗಳಿಗೆ ನೀರು ತುಂಬಿಸುವ 40 ಕೋಟಿ ರೂ.ಗಳ ಬೃಹತ್ ಯೋಜನೆಗೆ ಹಣ ಬಿಡುಗಡೆಯಾಗಿದೆ. ಕಾಮಗಾರಿ ಮಳೆಗಾಲದ ನಂತರ ಪ್ರಾರಂಭವಾಗುವ ಲಕ್ಷಣಗಳಿವೆ. ಬನವಾಸಿ ಭಾಗದಲ್ಲಿ ಸಹ 25 ಕೋಟಿಗೂ ಮಿಕ್ಕಿದ ಏತನೀರಾವರಿ ಯೋಜನೆಗೆ ಅಡಿಗಲ್ಲು ಹಾಕಲಾಗಿದೆ. ವಾಯುವ್ಯ ಕರ್ನಾಟಕ ಸಾರಿಗೆ ಅಧ್ಯಕ್ಷರಾದ ಕಾರಣ ತಾಲೂಕಿಗೆ ಹಾಗೂ ಜಿಲ್ಲೆಗೆ ಹೊಸ ಬಸ್‌ಗಳನ್ನು ತರುವ ಕಾರ್ಯ ಚಾಲನೆಯಲ್ಲಿದೆ.
ಕುಮಟಾ ವಿಧಾನಸಭಾ ಕ್ಷೇತ್ರ: ಕುಮಟಾ ವಿಧಾನಸಭಾ ಕ್ಷೇತ್ರದ ಶಾಸಕರ ಅನುಭವ ಸಹ ಅಭಿವೃದ್ಧಿಯಲ್ಲಿ ಕೆಲಸ ಮಾಡಿದೆ. ಹಿಂದಿನ ಶಾಸಕಿ ಶಾರದಾ ಶೆಟ್ಟಿ ಮಂಜೂರಾದ ಕೊಡ್ಕಣಿ-ಐಗಳ ಕುರ್ವೆ ನಡುವಿನ ಸೇತುವೆ ನಿರ್ಮಾಣ ಕಾರ್ಯ ಚಾಲನೆಯಲ್ಲಿದೆ. ಇದನ್ನು ಹೊರತುಪಡಿಸಿ ಶರಾವತಿ ನದಿಯಿಂದ ಹೊನ್ನಾವರ ಪಟ್ಟಣ ಮತ್ತು ಮಾರ್ಗ ಮಧ್ಯದ 9 ಪಂಚಾಯತ್‌ಗಳ 34 ಗ್ರಾಮಗಳಿಗೆ ಕುಡಿಯುವ ನೀರಿನ ಯೋಜನೆಗೆ ರಾಜ್ಯ ಸರ್ಕಾರದಿಂದ ಶಾಸಕ ದಿನಕರ ಶೆಟ್ಟರು ಅನುಮೋದನೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ಯೋಜನೆ 122.76 ಕೋಟಿ ವೆಚ್ಚದ್ದು. ಈ ಯೋಜನೆಗೆ ಮೊದಲ ಹಂತದಲ್ಲಿ ಗ್ರಾಮೀಣ ಅಭಿವೃದ್ಧಿ ಪಂಚಾಯತ್ ಇಲಾಖೆಯ ಪಾಲು 56.41 ಕೋಟಿ ರೂ.ಗಳನ್ನು ನೀಡಲು ಸಮ್ಮತಿಸಿದ್ದು, ಈ ಸಂಬಂಧ ಪತ್ರವನ್ನು ನಗರಾಭಿವೃದ್ಧಿ ಇಲಾಖೆಗೆ ಕಳುಹಿಸಿದೆ. ಹೊನ್ನಾವರ ಸರ್ಕಾರಿ ಪದವಿ ಕಾಲೇಜು ಕಟ್ಟಡಕ್ಕೆ 5.75 ಕೋಟಿ, ಕುಮಟಾದಿಂದ ಬೊಗರಿಬೈಲ್ ರಸ್ತೆ ನಿರ್ಮಾಣಕ್ಕೆ 7 ಕೋಟಿ ರೂ. ಹಣ ಮಂಜೂರಾಗಿದೆ. ಕಾಮಗಾರಿ ಆರಂಭವಾಗಬೇಕಿದೆ.
123 ಕೋಟಿ ರೂ.ಗಳ ಕೆರೆಗೆ ನೀರು ತುಂಬಿಸುವ ಯೋಜನೆ:
ಸಚಿವ ದೇಶಪಾಂಡೆ ಅವರ ಕ್ಷೇತ್ರದಲ್ಲಿ 43 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಕಾಮಗಾರಿ ಚಾಲನೆಯಲ್ಲಿದೆ. ಈ ಬೃಹತ್‌ಮೊತ್ತದ ಕಾಮಗಾರಿಗೆ ಪೈಪ್‌ಲೈನ್ ಹಾಕುವ ಕೆಲಸ ನಡೆದಿದೆ. ಕಳೆದ ವರ್ಷ ದಾಂಡೇಲಿ ನೂತನ ತಾಲೂಕು ಎಂದು ಘೋಷಣೆಯಾದ ಬಳಿಕ ಅಲ್ಲಿ ಮಿನಿ ವಿಧಾನಸೌಧ ನಿರ್ಮಾಣಕ್ಕೆ 10 ಕೋಟಿ ಮಂಜೂರಾಗಿದೆ. ಆರ್‌ಡಿಪಿಆರ್ ಯೋಜನೆಯಲ್ಲಿ ಗ್ರಾಮೀಣ ರಸ್ತೆಗೆ 10 ಕೋಟಿ, ನಬಾರ್ಡ್ ಅಡಿ ರಸ್ತೆ ಸೇತುವೆ ನಿರ್ಮಾಣಕ್ಕೆ 4 ಕೋಟಿ ರೂ. ಬಂದಿದೆ. ಜೋಯಿಡಾದ ವಿವಿಧೆಡೆ ರಸ್ತೆ ಸೇತುವೆ ನಿರ್ಮಾಣಕ್ಕೆ 35 ಕೋಟಿ ರೂ. ಮಂಜೂರಾಗಿದೆ. ಈ ಯೋಜನೆಗಳ ಅನುಷ್ಠಾನಕ್ಕೆ ಮುನ್ನ ಟೆಂಡರ್ ಹಂತದಲ್ಲಿವೆ. ಕಾಮಗಾರಿಗಳಿಗೆ ಮಳೆಗಾಲದ ನಂತರ ಚಾಲನೆ ಸಿಗಲಿದೆ.
•ನಾಗರಾಜ ಹರಪನಹಳ್ಳಿ