ವಾಷಿಂಗ್ಟನ್ : ಈ ತಿಂಗಳ ಆದಿಯಲ್ಲಿ ಉತ್ತರ ಕೊರಿಯ ನಾಯಕ ಕಿಮ್ ಜೋಂಗ್ ಉನ್ ಜತೆ ನಡೆದಿದ್ದ ಯಶಸ್ವೀ ಐತಿಹಾಸಿಕ ಶೃಂಗದ ಹೊರತಾಗಿಯೂ ಉತ್ತರ ಕೊರಿಯದ ವಿರುದ್ಧದ ನಿಷೇಧಗಳನ್ನು ಮುಂದುವರಿಸುವುದಕ್ಕೆ “ವಿಲಕ್ಷಣಕಾರಿ ಮತ್ತು ಅಸಾಮಾನ್ಯ ಅಣ್ವಸ್ತ್ರ ಬೆದರಿಕೆ ಇದೆ’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿರುವುದು ವಿಶ್ವದ ಅಚ್ಚರಿಗೆ ಕಾರಣವಾಗಿದೆ.
ಕಳೆದ ವಾರ ಉತ್ತರ ಕೊರಿಯದೊಂದಿಗಿನ ಐತಿಹಾಸಿಕ ಯಶಸ್ವೀ ಶೃಂಗ ಮುಗಿಸಿ ವಾಷ್ಟಿಂಗ್ಟನ್‌ಗೆ ಮರಳಿದ ಟ್ರಂಪ್ ಅವರು ಜೂನ್ 13ರಂದು “ಈಗಿನ್ನು ಉತ್ತರ ಕೊರಿಯದಿಂದ ಯಾವುದೇ ಅಣ್ವಸ್ತ್ರ ಬೆದರಿಕೆಗಳು ಇಲ್ಲ; ಇವತ್ತು ರಾತ್ರಿ ನಿಶ್ಚಿಂತೆಯಿಂದ ನಿದ್ರೆ ಮಾಡಿ’ ಎಂದು ಟ್ವೀಟ್ ಮಾಡಿದ್ದರು.
ಅದಾಗಿ ಟ್ರಂಪ್ ಅವರು ಇದೀಗ ಎಲ್ಲರ ಅಚ್ಚರಿಗೆ ಕಾರಣವಾಗುವ ರೀತಿಯಲ್ಲಿ , ‘ಅಮೆರಿಕದ ಮಾಜಿ ಅಧ್ಯಕ್ಷ ಜಾರ್ಜ್ ಡಬ್ಲ್ಯು ಬುಶ್ ಅವರು ಉತ್ತರ ಕೊರಿಯದ ವಿರುದ್ದ ಹೇರಿದ್ದ ಕಠಿನ ಆರ್ಥಿಕ ನಿಷೇಧಗಳನ್ನು ಮುಂದುವರಿಸುವ ಅಗತ್ಯ ಇದೆ’ ಎಂಬುದನ್ನು ವಿವರಿಸುವ ವಿಭಿನ್ನ ಧ್ವನಿಯ ಘೋಷಣೆಗಳನ್ನು ಕಾಂಗ್ರೆಸ್‌ಗೆ ಕಳುಹಿಸಿದ್ದಾರೆ.
“ಕೊರಿಯ ದ್ವೀಪಕಲ್ಪದಲ್ಲಿ ಅಣ್ವಸ್ತ್ರ ಪ್ರಸರಣದ ಅಪಾಯ ಈಗಲೂ ಅಂತೆಯೇ ಉಳಿದಿದೆ; ಉತ್ತರ ಕೊರಿಯ ಸರಕಾರದ ಕೃತ್ಯಗಳು ಮತ್ತು ನೀತಿಗಳು ಅಮೆರಿಕದ ರಾಷ್ಟ್ರೀಯ ಭದ್ರತೆಗೆ, ವಿದೇಶ ನೀತಿಗೆ ಮತ್ತು ಆರ್ಥಿಕತೆಗೆ ವಿಲಕ್ಷಣಕಾರಿ ಮತ್ತು ಅಸಾಮಾನ್ಯ ಬೆದರಿಕೆಗಳಾಗಿ ಈ ಹಿಂದೆ ಇರುವಂತೆ ಈಗಲೂ ಮುಂದುವರಿದಿದೆ; ಆದುದರಿಂದ ಇನ್ನೂ ಒಂದ ವರ್ಷದ ಮಟ್ಟಿಗೆ ನಾನು, ಉತ್ತರ ಕೊರಿಯವನ್ನು ದೃಷ್ಟಿಯಲ್ಲಿರಿಸಿಕೊಂಡು, ರಾಷ್ಟ್ರೀಯ ತುರ್ತು ಪರಿಸ್ಥಿತಿಯನ್ನು ಮುಂದುವರಿಸುತ್ತೇನೆ’ ಎಂದು ಟ್ರಂಪ್ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದರು.